ಭಾರತದ ಹೈಕಮಿಷನರ್ ವಾಪಸ್ ಕರೆಸಿಕೊಂಡ ಬಾಂಗ್ಲಾ

ರಾಯಭಾರಿಗಳು ತಕ್ಷಣ ತಮ್ಮ ಜವಾಬ್ದಾರಿಯನ್ನು ಹಸ್ತಾಂತರಿಸುವಂತೆ ಮತ್ತು ಬಾಂಗ್ಲಾ ದೇಶಕ್ಕೆ ಹಿಂತಿರುಗುವಂತೆ ಕೇಳಲಾಗಿದೆ.

Update: 2024-10-03 08:12 GMT

ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತದ ಹೈಕಮಿಷನರ್ ಸೇರಿದಂತೆ ಐವರು ರಾಯಭಾರಿಗಳನ್ನು ವಾಪಸ್‌ ಕರೆಸಿಕೊಂಡಿದೆ.

ಭಾರತದಲ್ಲಿರುವ ಬಾಂಗ್ಲಾ ದೇಶದ ಹೈಕಮಿಷನರ್ ಮುಸ್ತಫಿಜುರ್ ರೆಹಮಾನ್, ವಿಶ್ವಸಂಸ್ಥೆಗೆ ಬಾಂಗ್ಲಾದೇಶದ ಖಾಯಂ ಪ್ರತಿನಿಧಿ, ಬೆಲ್ಜಿಯಂ, ಪೋರ್ಚುಗಲ್ ಮತ್ತು ಆಸ್ಟ್ರೇಲಿಯದ ರಾಯಭಾರಿಗಳನ್ನು ತಕ್ಷಣ  ದೇಶಕ್ಕೆ ಮರಳಲು ಹೇಳಲಾಗಿದೆ. ಮಧ್ಯಂತರ ಸರ್ಕಾರವು ಇತ್ತೀಚೆಗೆ ಬ್ರಿಟನ್ನಿನ ತನ್ನ ಹೈಕಮಿಷನರ್‌ರನ್ನು ಹಿಂದಕ್ಕೆ ಕರೆಸಿಕೊಂಡಿತ್ತು. 

ರೆಹಮಾನ್ ಸೇರಿದಂತೆ ಹಿಂದಕ್ಕೆ ಕರೆಸಿಕೊಂಡ ಕೆಲವು ರಾಯಭಾರಿಗಳ ಅಧಿಕಾರಾವಧಿ ಒಂದೆರಡು ತಿಂಗಳಿನಲ್ಲಿ ಕೊನೆಗೊಳ್ಳಲಿತ್ತು. 

ರಾಜಕೀಯ ನೇಮಕಗಳಲ್ಲ: ಹಿಂದಕ್ಕೆ ಕರೆಸಿಕೊಂಡವರಲ್ಲಿ ಹೆಚ್ಚಿನವರು ರಾಜಕೀಯ ನೇಮಕವಲ್ಲ; ವೃತ್ತಿಪರರು. ರಾಜತಾಂತ್ರಿಕರಾದ ರೆಹಮಾನ್ ಅವರನ್ನು ಜುಲೈ 2022 ರಲ್ಲಿ ಭಾರತಕ್ಕೆ ಹೈಕಮಿಷನರ್ ಆಗಿ ನೇಮಿಸಲಾಯಿತು. ಭಾರತ ಮತ್ತು ಬಾಂಗ್ಲಾದ ನಡುವಿನ ಸಂಬಂಧ ಮತ್ತು ಸಹಕಾರವನ್ನು ಸುಧಾರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. 

ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿ ನಂತರ ಎರಡು ದೇಶಗಳ ನಡುವಿನ ಸಂಬಂಧ ಸೌಹಾರ್ದಯುತವಾಗಿಲ್ಲ. ಮಧ್ಯಂತರ ಸರ್ಕಾರದ ವಿಶೇಷ ಸಲಹೆಗಾರ ಮೊಹಮ್ಮದ್ ಯೂನಸ್ ಅವರು ಭಾರತವನ್ನು ಟೀಕಿಸಿದ್ದು, ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಕೋರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

ಏತನ್ಮಧ್ಯೆ, ಬಾಂಗ್ಲಾದೇಶದಲ್ಲಿರುವ ಭಾರತದ ಹೈಕಮಿಷನರ್ ಪ್ರಣಯ್ ವರ್ಮಾ ಅವರು ಹಂಗಾಮಿ ವಿದೇಶಾಂಗ ಸಚಿವ ತೌಹಿದ್ ಹೊಸೈನ್ ಅವರನ್ನು ಬುಧವಾರ (ಅಕ್ಟೋಬರ್ 2) ಢಾಕಾದಲ್ಲಿ ಭೇಟಿಯಾಗಿ, ಚರ್ಚಿಸಿದರು ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯ ಹೇಳಿದೆ.

Tags:    

Similar News