ಗಗನಯಾತ್ರಿ ಶುಭಾಂಶು ಶುಕ್ಲಾ ಕುಟುಂಬದೊಂದಿಗೆ ಪುನರ್ಮಿಲನ; ಖುಷಿ ವ್ಯಕ್ತಪಡಿಸಿದ ಪತ್ನಿ

ಶುಭಾಂಶು ಅವರಿಗಾಗಿ ಮನೆಯ ಊಟ, ಕುಟುಂಬ ಸಮಯ ಮತ್ತು ಒಟ್ಟಾಗಿ ಇರುವ ವಾತಾವರಣವನ್ನು ಯೋಜಿಸಿರುವುದಾಗಿ ಪತ್ನಿ ಕಾಮನಾ ತಿಳಿಸಿದ್ದಾರೆ. ಅವರಿಗೆ ಇಷ್ಟದ ತಿಂಡಿಗಳನ್ನು ಮಾಡಿದ್ದಾರೆ.;

Update: 2025-07-17 05:14 GMT

ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಪತ್ನಿ ಕಾಮನಾ

ಭಾರತದ ಎರಡನೇ ಗಗನಯಾತ್ರಿ ಎಂಬ ಖ್ಯಾತಿ ಪಡೆದ ಶುಭಾಂಶು ಶುಕ್ಲಾ ಅವರು 18 ದಿನಗಳ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ಜುಲೈ 15ರಂದು ಭೂಮಿಗೆ ಮರಳಿದ್ದಾರೆ. ಪ್ರಸ್ತುತ ಹ್ಯೂಸ್ಟನ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ಶುಭಾಂಶು ಅವರೊಂದಿಗೆ ಅವರ ಪತ್ನಿ ಕಾಮನಾ ಶುಕ್ಲಾ ಮತ್ತು ಆರು ವರ್ಷದ ಮಗ ಕಿಯಾಶ್ ಇದ್ದಾರೆ.

ತಮ್ಮ ಪತಿಯ ಆಗಮನದ ಕುರಿತು ಪಿಟಿಐಗೆ ಮಾಹಿತಿ ನೀಡಿದ ಕಾಮನಾ, ಶುಭಾಂಶು ಅವರಿಗಾಗಿ ಮನೆಯ ಊಟ, ಕುಟುಂಬ ಸಮಯ ಮತ್ತು ಒಟ್ಟಾಗಿ ಇರುವ ವಾತಾವರಣವನ್ನು ಯೋಜಿಸಿರುವುದಾಗಿ ತಿಳಿಸಿದ್ದಾರೆ. "ಶುಭಾಂಶು ಸುರಕ್ಷಿತವಾಗಿ ಮರಳಿದ್ದಾರೆ. ಈಗ ನಮ್ಮ ಮುಖ್ಯ ಗುರಿ ಅವರ ಪುನರ್ವಸತಿ ಮತ್ತು ಭೂಮಿಯ ಜೀವನಕ್ಕೆ ಮತ್ತೆ ಹೊಂದಿಕೊಳ್ಳುವುದು. ಈ ಅದ್ಭುತ ಪ್ರಯಾಣದ ನಂತರ ನಾವು ಮತ್ತೆ ಒಟ್ಟಾಗಿರುವುದು ನಮಗೆ ಒಂದು ಸಂತೋಷದ ಸಂಗತಿ," ಎಂದು ಕಾಮನಾ ಹರ್ಷ ವ್ಯಕ್ತಪಡಿಸಿದ್ದಾರೆ.

ಬಾಹ್ಯಾಕಾಶದಲ್ಲಿ ಮನೆಯ ಊಟದ ಕೊರತೆಯನ್ನು ಶುಭಾಂಶು ಎಷ್ಟು ಅನುಭವಿಸಿದ್ದಾರೆ ಎಂಬುದನ್ನು ಅರಿತಿರುವ ಕಾಮನಾ, ಅವರ ನೆಚ್ಚಿನ ತಿಂಡಿಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಶುಭಾಂಶು ಅವರು ಜುಲೈ 23ರವರೆಗೆ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ, ಆದರೂ ಹತ್ತಿರದ ಕುಟುಂಬ ಸದಸ್ಯರಿಗೆ ನಿಯಂತ್ರಿತ ಭೇಟಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜುಲೈ 16ರ ರಾತ್ರಿ ಶುಭಾಂಶು ಅವರು ತಮ್ಮ ಪತ್ನಿ ಮತ್ತು ಮಗನೊಂದಿಗೆ ಭಾವನಾತ್ಮಕ ಕ್ಷಣಗಳ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. "ಭೂಮಿಗೆ ಮರಳಿ ತಮ್ಮ ಕುಟುಂಬದ ಸದಸದ್ಯರನ್ನು ತಬ್ಬಿಕೊಳ್ಳುವುದು ಮನೆಯಲ್ಲಿರುವ ಅನುಭವ ನೀಡಿತು. ಮಾನವನ ಬಾಹ್ಯಾಕಾಶ ಯಾತ್ರೆಯು ರಮಣೀಯವಾಗಿದ್ದರೂ, ದೀರ್ಘಕಾಲದ ನಂತರ ಪ್ರೀತಿಪಾತ್ರರನ್ನು ಭೇಟಿಯಾಗುವುದು ಅದೇ ರೀತಿ ಅದ್ಭುತ," ಎಂದು ಅವರು ಬರೆದಿದ್ದಾರೆ.

ಬಾಲ್ಯದ ಗೆಳತಿಯನ್ನೇ ವರಿಸಿದ್ದ ಶುಭಾಂಶು

ಶುಭಾಂಶು ಮತ್ತು ಕಾಮನಾ 2009ರಲ್ಲಿ ವಿವಾಹವಾಗಿದ್ದು ಅವರಿಬ್ಬರೂ ಲಕ್ನೋದ ಸಿಟಿ ಮಾಂಟೆಸ್ಸೋರಿ ಶಾಲೆಯಲ್ಲಿ 3ನೇ ತರಗತಿಯಿಂದಲೇ ಪರಸ್ಪರ ಪರಿಚಿತರು. ಬಾಹ್ಯಾಕಾಶ ನಿಲ್ದಾಣದಿಂದ ಶುಭಾಂಶು ಅವರ ಕರೆಗಳು ಕಾಮನಾಗೆ ಅತ್ಯಂತ ಸಂತೋಷದಾಯಕ ಅನುಭವವಾಗಿದ್ದವು. "ಡಾಕಿಂಗ್ ನಂತರ ಅವರ ಕರೆ ಬಂದಾಗ ಅದು ಅನಿರೀಕ್ಷಿತ ಸುರಕ್ಷಿತ ಸುದ್ದಿಯಾಗಿತ್ತು. ದಿನಕ್ಕೊಂದು ಬಾರಿ ಆ ಫೋನ್ ಕರೆಗಳು ನನ್ನ ದಿನದ ಪ್ರಮುಖ ಭಾಗವಾಗಿದ್ದವು," ಎಂದು ಕಾಮನಾ ನೆನಪಿಸಿಕೊಂಡಿದ್ದಾರೆ.

ಲಕ್ನೋದ ತ್ರಿವೇಣಿ ನಗರದಲ್ಲಿರುವ ಶುಭಾಂಶು ಅವರ ಮನೆ ಪೋಸ್ಟರ್‌ಗಳಿಂದ ತುಂಬಿದ್ದು, ಅವರು ಸ್ಥಳೀಯ ಪ್ರದೇಶಗಳಲ್ಲಿ ಸೆಲೆಬ್ರಿಟಿಯಾಗಿದ್ದಾರೆ. "ದೇಶವು ಅವರ ಸಾಧನೆಯನ್ನು ಆಚರಿಸುತ್ತಿದ್ದರೂ, ನಮ್ಮ ಕುಟುಂಬ ಒಗ್ಗಟ್ಟಿನ ಕ್ಷಣಗಳನ್ನು ಆನಂದಿಸಲಿದೆ," ಎಂದು ಕಾಮನಾ ಹೇಳಿದ್ದರು. ದೀರ್ಘಕಾಲದ ಪ್ರತ್ಯೇಕತೆಯು ನೋವು ತಂದಿದ್ದರೂ, ಅದು ತಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಶುಭಾಂಶು ಅವರು 2027ರಲ್ಲಿ ಇಸ್ರೋದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯ ಭಾಗವಾಗಲಿದ್ದಾರೆ. ತಮ್ಮ ಸಾಧನೆಯ ಮೂಲಕ ಅವರು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತಿದ್ದಾರೆ. "ಅವರ ಯಾತ್ರೆಯು ವೈಯಕ್ತಿಕ ಬೆಳವಣಿಗೆಯ ಶಕ್ತಿಯನ್ನು ತೋರಿಸುತ್ತದೆ," ಎಂದು ಕಾಮನಾ ಹೆಮ್ಮೆಯಿಂದ ಹೇಳಿದ್ದಾರೆ.

Tags:    

Similar News