ಇಸ್ತಾಂಬುಲ್​ನಲ್ಲಿ 24 ಗಂಟೆಯಿಂದ ಸಿಲುಕಿ ಹಾಕಿಕೊಂಡ ಇಂಡಿಗೊ ವಿಮಾನದ 400 ಪ್ರಯಾಣಿಕರು

ಇಂಡಿಗೊ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಟರ್ಕಿಶ್ ಏರ್​ಲೈನ್ಸ್​ ಸಿಬ್ಬಂದಿಯಿಂದ ಮಾಹಿತಿ ಬಂದಿದೆ ಎಂದು ಪ್ರಯಾಣಿಕರು ಹೇಳಿಕೊಂಡಿದ್ದು ಪರಿಸ್ಥಿತಿ ಗೊಂದಲಮಯವಾಗಿದೆ.

Update: 2024-12-13 06:28 GMT
ಇಂಡಿಗೊ ವಿಮಾನ ಪ್ರಾತಿನಿಧಿಕ ಚಿತ್ರ.

ನವದೆಹಲಿ ಮತ್ತು ಮುಂಬೈ ಮತ್ತು ಟರ್ಕಿ ನಡುವೆ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯರು ಕಳೆದ 24 ಗಂಟೆಗಳ ಕಾಲ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಆರಂಭದಲ್ಲಿ ವಿಮಾನ ಹಾರಟ ವಿಳಂಬ ಎಂಬ ಮಾಹಿತಿ ನೀಡಲಾಗಿದೆ. ಬಳಿಕ ವಿಮಾನ ಸಂಚಾರವನ್ನೇ ರದ್ದು ಮಾಡಲಾಗಿದೆ. ವಿಮಾನಯಾನ ಸಂಸ್ಥೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ. ಪ್ರಯಾಣಿಕರೆಲ್ಲರೂ ಅರ್ಧದಲ್ಲಿಯೇ ಸಿಲುಕಿಕೊಂಡಿದ್ದಾರೆ ಎಂದು ಮಾಹಿತಿ ಬಂದಿದೆ.

ಪ್ರಯಾಣಿಕರಿಗೆ ಯಾವುದೇ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಅದೇ ರೀತಿ ವಿಮಾನ ನಿಲ್ದಾಣದಲ್ಲಿ ಇಂಡಿಗೊ ಪ್ರತಿನಿಧಿಯೂ ಅವರನ್ನು ಸಂಪರ್ಕಿಸಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಪ್ರಯಾಣಿಕರೊಬ್ಬರು ಹೋಟೆಲ್​ ರೂಮ್​ಗೆ ಹೋಗಲು ವಾಹನ ಸೌಕರ್ಯವನ್ನೂ ನೀಡಿಲ್ಲ ಎಂದು ಆರೋಪಿಸಿದ್ದಾರ.

ಇಂಡಿಗೊ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಟರ್ಕಿಶ್ ಏರ್​ಲೈನ್ಸ್​ ಸಿಬ್ಬಂದಿಯಿಂದ ಮಾಹಿತಿ ಬಂದಿದೆ ಎಂದು ಪ್ರಯಾಣಿಕರು ಹೇಳಿಕೊಂಡಿದ್ದು ಪರಿಸ್ಥಿತಿ ಗೊಂದಲಮಯವಾಗಿದೆ.

ಪ್ರಯಾಣಿಕರೊಬ್ಬರು ಇಂಡಿಗೊ ಸಂಸ್ಥೆಯ "ಗ್ರಾಹಕ ಸೇವೆಯ ಸಂಪೂರ್ಣ ವೈಫಲ್ಯ" ವನ್ನು ಖಂಡಿಸಿದ್ದಾರೆ. ಸಂಸ್ಥೆಯು ಪ್ರಯಾಣಿಕರ ಕ್ಷಮೆಯಾಚಿಸಬೇಕು ಮತ್ತು ಅವರಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸೋಶಿಯಲ್​ ಮೀಡಿಯಾಗಳಾದ ಎಕ್ಸ್ ಮತ್ತು ಲಿಂಕ್ಡ್​ ಇನ್​ನಲ್ಲಿ ಪ್ರಯಾಣಿಕರು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ವಿಮಾನವು ಮೊದಲು ಹೊಡಲು ವಿಳಂಬ ಎಂದು ಹೇಳಲಾಯಿತು. ನಂತರ ಸೂಚನೆಯಿಲ್ಲದೆ ರದ್ದುಪಡಿಸಲಾಯಿತು ಎಂದು ಹೇಳಿದ್ದಾರೆ. ಸುಮಾರು 400 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಸಿಲುಕಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ವಿಮಾನವು ಎರಡು ಬಾರಿ ಒಂದು ಗಂಟೆ ವಿಳಂಬ ಎಂದು ಹೇಳಲಾಯಿತು. ನಂತರ ರದ್ದುಪಡಿಸಲಾಯಿತು ಮತ್ತು ಅಂತಿಮವಾಗಿ 12 ಗಂಟೆಗಳ ನಂತರ ಮರು ನಿಗದಿಪಡಿಸಲಾಯಿತು ಎಂದು ಪ್ರಯಾಣಿಕರಾದ ಅನುಶ್ರೀ ಬನ್ಸಾಲಿ ಎಂಬುವರು ಹೇಳಿದ್ದಾರೆ. ತಮಗೆ ಜ್ವರ ಹಾಗೂ ಸುಸ್ತು ಇದ್ದು ಪ್ರಯಾಣ ರದ್ದಾಗಿರುವ ಕಾರಣ ಸಮಸ್ಯೆ ಉಂಟಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಬೆಳಿಗ್ಗೆ 6.40 ರ ವಿಮಾನ ರದ್ದುಗೊಳಿಸಲಾಗಿದೆ. ವಿಮಾನಯಾನ ಸಂಸ್ಥೆ ಕಲ್ಪಿಸಿರುವ ಹೋಟೆಲ್​ಗಳಿಗೆ ಹೋಗಲು ವಾಹನಗಳೇ ಇಲ್ಲ. ಚಳಿಯಲ್ಲಿ ಹೊರಗೆ ಹೋಗುವುದಕ್ಕೆ ಕಷ್ಟವಾಯಿತು ಎಂದು ಪ್ರಯಾಣಿಕ ರೋಹನ್ ರಾಜಾ ಎಂಬುವರು ಹೇಳಿದ್ದಾರೆ.

ಸಣ್ಣ ಲಾಂಜ್ ಪ್ರವೇಶ

ಮುಂಬೈಗೆ ಹೊರಟಿದ್ದ ಪ್ರಯಾಣಿಕರಾದ ಪಾರ್ಶ್ವ ಮೆಹ್ತಾ ಅವರು ತಮ್ಮ ಪೋಸ್ಟ್​​ನಲ್ಲಿ ರಾತ್ರಿ 8.15ಕ್ಕೆ ವಿಮಾನವನ್ನು ರಾತ್ರಿ 11ಕ್ಕೆ ಮುಂದೂಡಲಾಯಿತು. ಮರುದಿನ ಬೆಳಿಗ್ಗೆ 10ಕ್ಕೆ ಎಂದು ಮತ್ತೆ ಘೋಷಿಸಲಾಯಿತು ಎಂದು ಬರೆದಿದ್ದಾರೆ.

ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಅವರಿಗೆ ಲಾಂಜ್ ಪ್ರವೇಶ ಒದಗಿಸಲಾಗುತ್ತಿದೆ ಎಂದು ಅವರಿಗೆ ತಿಳಿಸಲಾಗಿದೆ ಎಂದು ಮೆಹ್ತಾ ಎಕ್ಸ್ ನಲ್ಲಿ ತಮ್ಮ ಪೋಸ್ಟ್​​ನಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ದೊಡ್ಡ ಸಂಖ್ಯೆಯ ಸಿಕ್ಕಿಬಿದ್ದ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು ಲಾಂಜ್ ತುಂಬಾ ಚಿಕ್ಕದಾಗಿತ್ತು ಎಂದು ಅವರು ಹೇಳಿದ್ದಾರೆ.

"ನಮ್ಮಲ್ಲಿ ಅನೇಕರು ಸರಿಯಾದ ಸೌಲಭ್ಯಗಳಿಲ್ಲದೆ ಗಂಟೆಗಟ್ಟಲೆ ನಿಂತಿದ್ದರು. ಯಾವುದೇ ಪರ್ಯಾಯ ವಿಮಾನಗಳನ್ನು ನೀಡಲಿಲ್ಲ, ಸರಿಯಾದ ಸಂವಹನವನ್ನು ಮಾಡಲಿಲ್ಲ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪರಿಹಾರಕ್ಕಾಗಿ ಯಾವುದೇ ಯೋಜನೆಗಳನ್ನು ಹಂಚಿಕೊಳ್ಳಲಾಗಿಲ್ಲ" ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಲಾಗಿದೆ. 

Tags:    

Similar News