Review: ಅದ್ದೂರಿ ‘ಕಾಂತಾರ’ದಲ್ಲಿ ದೈವಗಳ ದರ್ಶನ…
ಈಶ್ವರನ ಹೂದೋಟವನ್ನು ಕಾಪಾಡುವ ಬುಡಕಟ್ಟು ಜನಾಂಗದ ನಾಯಕ ಬೆರ್ಮೆಯಾಗಿ ರಿಷಭ್ ಕಾಣಿಸಿಕೊಂಡರೆ, ಬಾಂಗ್ರಾ ರಾಜ ಮನೆತನದ ಅರಸರಾಗಿ ರಾಜಶೇಖರ (ಜಯರಾಂ) ಮತ್ತು ಅವರ ಮಗನಾಗಿ ಕುಲಶೇಖರ (ಗುಲ್ಶನ್ ದೇವಯ್ಯ) ಕಾಣಿಸಿಕೊಂಡಿದ್ದಾರೆ.
ಚೇತನ್ ನಾಡಿಗೇರ್
ಚಿತ್ರ: ಕಾಂತಾರ – ಚಾಪ್ಟರ್ 1
ನಿರ್ಮಾಣ: ವಿಜಯ್ ಕಿರಗಂದೂರು
ನಿರ್ದೇಶನ: ರಿಷಭ್ ಶೆಟ್ಟಿ
ತಾರಾಗಣ: ರಿಷಭ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಂ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು, ನವೀನ್ ಡಿ. ಪಡೀಲ್ ಮುಂತಾದವರು
ಮೂರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಕಾಂತಾರ’ ಚಿತ್ರವು ದೊಡ್ಡ ಯಶಸ್ಸು ಪಡೆಯುವುದರ ಜೊತೆಗೆ, ಬೇರೆ ಭಾಷೆಗಳಿಗೂ ಡಬ್ ಆಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿತ್ತು. ಇದೀಗ ಚಿತ್ರದ ಪ್ರೀಕ್ವೆಲ್ ಆದ ‘ಕಾಂತಾರ – ಚಾಪ್ಟರ್ 1’ ಬಿಡುಗಡೆಯಾಗಿದೆ. ಇದು ಪ್ರೀಕ್ವೆಲ್ ಎನ್ನುವುದಕ್ಕಿಂತ ಇದೇ ಒಂದು ಪ್ರತ್ಯೇಕ ಚಿತ್ರ ಎಂದರೆ ತಪ್ಪಿಲ್ಲ. ಏಕೆಂದರೆ, ಹೆಸರಿನ ಹೊರತಾಗಿ, ಈ ಚಿತ್ರಕ್ಕೂ ಮತ್ತು ಮೊದಲ ಬಂದ ‘ಕಾಂತಾರ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ, ಸಂಬಂಧ ಕಲ್ಪಿಸುವ ಅವಶ್ಯಕತೆಯೂ ಇಲ್ಲ.
ಇದು ಕದಂಬರ ಕಾಲಘಟ್ಟದ ಕಥೆ. ಕದಂಬರ ಆಳ್ವಿಕೆಯ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಕಾಲ್ಪನಿಕ ಮತ್ತು ಮಾಯಾಲೋಕವನ್ನು ಸೃಷ್ಟಿಸಿದ್ದಾರೆ ರಿಷಭ್. ಈ ಚಿತ್ರವು ಕರಾವಳಿ ಕರ್ನಾಟಕದ ಕಾಡಿನ ಮಧ್ಯೆ ಇರುವ ಈಶ್ವರನ ಹೂದೋಟ ಎಂದೇ ಹೆಸರಾಗಿರುವ ಒಂದು ನಿಗೂಢ ಸ್ಥಳದ ಸುತ್ತ ಸುತ್ತುತ್ತದೆ. ಧರ್ಮ ಕಾಪಾಡಲಿಕ್ಕೆ ಈಶ್ವರನ ಗಣಗಳು ಬಂದು ನೆಲೆಸಿದ ಜಾಗವದು ಎಂಬ ದಂತಕಥೆ ಇರುವ ಸ್ಥಳವನ್ನು ತನ್ನ ವಶಕ್ಕೆ ಪಡೆಯಲು ರಾಜ ಪ್ರಯತ್ನಿಸಿದಾಗ ಏನೆಲ್ಲಾ ಆಗುತ್ತದೆ ಎಂಬ ಕಥೆಯ ಸುತ್ತ ಚಿತ್ರ ಸಾಗುತ್ತದೆ.
ಈಶ್ವರನ ಹೂದೋಟವನ್ನು ಕಾಪಾಡುವ ಬುಡಕಟ್ಟು ಜನಾಂಗದ ನಾಯಕ ಬೆರ್ಮೆಯಾಗಿ ರಿಷಭ್ ಕಾಣಿಸಿಕೊಂಡರೆ, ಬಾಂಗ್ರಾ ರಾಜ ಮನೆತನದ ಅರಸರಾಗಿ ರಾಜಶೇಖರ (ಜಯರಾಂ) ಮತ್ತು ಅವರ ಮಗನಾಗಿ ಕುಲಶೇಖರ (ಗುಲ್ಶನ್ ದೇವಯ್ಯ) ಕಾಣಿಸಿಕೊಂಡಿದ್ದಾರೆ. ಆ ಸಾಮಂತರು ಮತ್ತು ಬುಡಕಟ್ಟಿನವರ ನಡುವೆ ಸಂಘರ್ಷ ಏರ್ಪಟ್ಟಾಗ ಏನೆಲ್ಲಾ ಆಗುತ್ತದೆ? ಮತ್ತು ಇದರಲ್ಲಿ ದೈವಗಳ ಪಾತ್ರವೇನು? ಅದು ಯಾವ ರೀತಿಯಲ್ಲಿ ಕಾಡನ್ನು ಸಂರಕ್ಷಣೆ ಮಾಡಿಕೊಳ್ಳುತ್ತವೆ? ಎಂಬುದರ ಕುರಿತು ಚಿತ್ರ ಸಾಗುತ್ತದೆ.
ಪ್ರಮುಖವಾಗಿ, ‘ಕಾಂತಾರ’ ಚಿತ್ರದಲ್ಲಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷವಿತ್ತು. ಆದರೆ, ಇಲ್ಲಿ ಹಲವು ಸಂಘರ್ಷಗಳಿವೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷ ಮುಂದುವರೆಯುವುದರ ಜೊತೆಗೆ, ನಗರದ ಮತ್ತು ಬುಡಕಟ್ಟು ಜನರ, ದೈವ ಮತ್ತು ದುಷ್ಟಶಕ್ತಿಗಳ ನಡುವಿನ ಸಂಘರ್ಷವೂ ಇದೆ. ಚಿತ್ರದ ಮೊದಲಾರ್ಧದಲ್ಲಿ ಪಾತ್ರ ಮತ್ತು ಪರಿಸರವನ್ನು ಪರಿಚಯಿಸುವುದಕ್ಕೆ ಹೆಚ್ಚು ಸಮಯ ಮೀಸಲಿಟ್ಟಿದ್ದಾರೆ ರಿಷಭ್. ಇಲ್ಲಿ ಕೆಲವು ರೋಚಕವೆನ್ನುವಂತಹ ಸನ್ನಿವೇಶಗಳಿದ್ದರೂ, ಮೊದಲಾರ್ಧ ನಿಧಾನವಾಗಿ ಸಾಗುತ್ತದೆ. ದ್ವಿತೀಯಾರ್ಧ ವೇಗ ಪಡೆದುಕೊಳ್ಳುವುದರ ಜೊತೆಗೆ ಹಲವು ರೋಚಕ ತಿರುವುಗಳು ಸಿಗುತ್ತವೆ. ಇಲ್ಲಿ ಆ್ಯಕ್ಷನ್ ದೃಶ್ಯಗಳು ದೊಡ್ಡ ಪ್ರಮಾಣದಲ್ಲಿವೆ. ಪ್ರಮುಖವಾಗಿ, ಬಾಂಗ್ರಾ ಸೈನಿಕರು ಮತ್ತು ಆದಿವಾಸಿಗಳ ನಡುವೆ ಯುದ್ಧದ ಸನ್ನಿವೇಶಗಳು ರೋಮಾಂಚಕಾರಿಯಾಗಿದೆ. ಇನ್ನು, ‘ಕಾಂತಾರ’ದಲ್ಲಿ ನಾಯಕನ ಮೇಲೆ ದೈವ ಆವಾಹನೆಯಾಗುವಂತೆ, ಇಲ್ಲೂ ಇನ್ನೊಂದು ದೈವ ಆವಾಹನೆಯಾಗುತ್ತದೆ. ಚಿತ್ರದುದ್ದಕ್ಕೂ ಹಲವು ದೈವಗಳನ್ನು ಪರಿಚಯಿಸುವ ಮೂಲಕ ಕರಾವಳಿಯ ದೈವಗಳು, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪರಿಚಯಿಸಿದ್ದಾರೆ ರಿಷಭ್ ಶೆಟ್ಟಿ.
ಚಿತ್ರದ ಹೈಲೈಟ್ ಎಂದರೆ ಅದು ಮೇಕಿಂಗ್. ತಾಂತ್ರಿಕವಾಗಿ ಒಂದು ಶ್ರೀಮಂತ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ರಿಷಭ್ ಮತ್ತು ತಂಡದವರು. ಅರವಿಂದ್ ಕಶ್ಯಪ್ ಛಾಯಾಗ್ರಹಣ, ಧರಣಿ ಅವರ ಕಲಾನಿರ್ದೇಶನ ಮತ್ತು ಗ್ರಾಫಿಕ್ಸ್ ಕೆಲಸಗಳು ಎಷ್ಟು ಗಟ್ಟಿಯಾಗಿದೆ ಎಂದರೆ, ಅದರ ಮುಂದೆ ಚಿತ್ರಕಥೆ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು ಎಂದನಿಸುತ್ತದೆ. ಚಿತ್ರದಲ್ಲಿ overloaded ಎನಿಸುವಷ್ಟು ವಿಷಯಗಳಿವೆ. ಹಲವು ದೈವ, ಆಚರಣೆ, ಸಂಪ್ರದಾಯವನ್ನು ತೋರಿಸಲಾಗಿದೆ. ಅವೆಲ್ಲವನ್ನೂ ಕಡಿಮೆ ಮಾಡಿ, ಚಿತ್ರಕ್ಕೆ ಅಗತ್ಯವೆನಿಸುವಂತಹ ವಿಷಯಗಳನ್ನು ಮಾತ್ರ ಹೆಚ್ಚು ಬಳಸಿಕೊಂಡು, ಚಿತ್ರಕಥೆಯನ್ನು ಮತ್ತಷ್ಟು ಬಿಗಿಯಾಗಿ ಹೆಣೆಯುವ ಅವಕಾಶವಿತ್ತು. ಅಷ್ಟೆಲ್ಲಾ ಸಂಘರ್ಷಗಳು ನಡೆಯುತ್ತಿದ್ದರೂ, ಚಿತ್ರ ಭಾವನಾತ್ಮಕವಾಗಿ ಅಷ್ಟಾಗಿ ಸೆಳೆಯುವುದಿಲ್ಲ. ಮೇಕಿಂಗ್ ವಿಷಯದಲ್ಲಿ ನೀಡಿದ ಗಮನವನ್ನು ಚಿತ್ರಕಥೆ ಕಟ್ಟಿಕೊಡುವಲ್ಲೂ ವಹಿಸಿದ್ದರೆ, ಚಿತ್ರತಂಡದ ಶ್ರಮ ಇನ್ನಷ್ಟು ಸಾರ್ಥಕವಾಗುತ್ತಿತ್ತು.
ಇಲ್ಲೊಂದು ಊರನ್ನೇ ಸೃಷ್ಟಿ ಮಾಡಲಾಗಿದೆ. ಅರಮನೆ, ದರ್ಬಾರ್, ದೇವಸ್ಥಾನ, ಗುಹೆ, ಹಡಗು … ಹೀಗೆ ಹಲವು ಸೆಟ್‍ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ಅದ್ದೂರಿತನದ ಸ್ಪರ್ಶ ನೀಡಲಾಗಿದೆ. ಇದೆಲ್ಲವೂ ಒಂದು ಕಡೆಯಾದರೆ, ಈ ಚಿತ್ರದಲ್ಲಿ ಬಳಕೆಯಾಗಿರುವ ಗ್ರಾಫಿಕ್ಸ್ ಇನ್ನೊಂದು ಕಡೆ. ಹಾವು, ಹುಲಿ, ಕಾಡುಪಾಪ ಮುಂತಾದ ಪ್ರಾಣಿಗಳನ್ನು ನೈಜ ಎನ್ನುವಷ್ಟು ಪರಿಣಾಮಕಾರಿಯಾಗಿ ತಂಡ ಸೃಷ್ಟಿಸಿದೆ. ಹೊಂಬಾಳೆ ಫಿಲಂಸ್ ಬಹಳ ಉದಾರವಾಗಿಯೇ ಚಿತ್ರಕ್ಕೆ ಖರ್ಚು ಮಾಡಿರುವುದು ಕಾಣಿಸುತ್ತದೆ.
ರಿಷಭ್ ಶೆಟ್ಟಿ ಚಿತ್ರಕ್ಕೆ ಎಂಟ್ರಿ ಕೊಡುವುದು ಸ್ವಲ್ಪ ಸಮಯವಾದರೂ, ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಅವರ ಶ್ರಮ ಎದ್ದು ಕಾಣುವುದರ ಜೊತೆಗೆ ಬೆರ್ಮೆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಕೆಲವು ರಿಸ್ಕಿ ಎನ್ನುವ ದೃಶಗಳನ್ನು ರಿಷಭ್ ಚೆನ್ನಾಗಿ ನಿರ್ವಹಿಸಿದ್ದಾರೆ. ರುಕ್ಮಿಣಿ ವಸಂತ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಬರೀ ಸೌಂದರ್ಯವಷ್ಟೇ ಅಲ್ಲ, ಅಭಿನಯದಲ್ಲೂ ಪ್ರಬುದ್ಧವಾಗಿ ಕಾಣಿಸಿದ್ದಾರೆ. ಕುಲಶೇಖರ ಪಾತ್ರ ಮಾಡಿರುವ ಗುಲ್ಶನ್ ಅವಕಾಶವನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಮಿಕ್ಕಂತೆ ರಾಕೇಶ್ ಪೂಜಾರಿ, ಪ್ರಕಾಶ್ ತುಮಿನಾಡು, ಪ್ರಮೋದ್ ಶೆಟ್ಟಿ ನಗಿಸುವ ಪ್ರಯತ್ನ ಮಾಡಿದ್ದಾರೆ.
ಅರವಿಂದ್ ಕಶ್ಯಪ್ ಛಾಯಾಗ್ರಹಣವು ಚಿತ್ರದ ಸೌಂದರ್ಯವನ್ನು ಹೆಚ್ಚಿಸಿದೆ. ಪ್ರತಿ ದೃಶ್ಯವನ್ನು ಅರವಿಂದ್ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಕತ್ತಲು, ಬೆಳಕನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಊರಿನೊಳಗೆ ರಥ ಹರಿದು ಬರುವ ದೃಶ್ಯ, ಮದವೇರಿದ ಕುದುರೆ ಬೀಡಿಯಲ್ಲಿ ಓಡುವ ದೃಶ್ಯ, ಯುದ್ಧದ ದೃಶ್ಯಗಳು, ‘ಬ್ರಹ್ಮಕಳಶ …’ ಹಾಡನ್ನು ಸೆರೆಹಿಡಿಯುವುದು ಸುಲಭದ ಕೆಲಸವಲ್ಲ. ಧರಣಿ ಕಲಾ ನಿರ್ದೇಶನ, ಪ್ರಗತಿ ಶೆಟ್ಟಿ ವಸ್ತ್ರ ವಿನ್ಯಾಸವೂ ಚಿತ್ರದ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ. ‘ಕಾಂತಾರ’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದ ಎರಡು ಹಾಡುಗಳನ್ನು ಮರುಬಳಕೆ ಮಾಡಲಾಗಿದೆ. ಇದರ ಜೊತೆಗೆ ಎರಡು ಹಾಡುಗಳು ಮತ್ತು ಹಿನ್ನೆಲೆ ಸಂಗೀತದಿಂದ ಅವರು ಗಮನಸೆಳೆಯುತ್ತಾರೆ.
ತಮಗೆ ಕೊಟ್ಟ ಸೌಲಭ್ಯಗಳನ್ನು ರಿಷಭ್ ಮತ್ತು ತಂಡ ಚೆನ್ನಾಗಿ ಬಳಸಿಕೊಂಡು ಚಿತ್ರ ಕಟ್ಟಿಕೊಟ್ಟಿದೆ. ‘ಕಾಂತಾರ’ ಚಿತ್ರವನ್ನು ಬಹಳ ಭಕ್ತಿಯಿಂದ ಮಾಡಿದ್ದರು ರಿಷಭ್. ಇಲ್ಲಿ ಭಕ್ತಿಯ ಜೊತೆಗೆ ಯುಕ್ತಿಯೂ ಸೇರಿದೆ. ಅಲ್ಲಿನ ಜನಪ್ರಿಯ ಮತ್ತು ಅಂಶಗಳನ್ನು ಇಲ್ಲೂ ಬಳಸಿಕೊಂಡಿದ್ದಾರೆ. ಹಾಗಾಗಿ, ಚಿತ್ರ ದೊಡ್ಡದಾಗಿದೆ ಮತ್ತು ಅದ್ದೂರಿಯಾಗಿದೆ. ಕಥೆಯ ವಿಷಯದಲ್ಲಿ ಇನ್ನಷ್ಟು ಗಮನಹರಿಸಿದ್ದರೆ, ಚಿತ್ರ ಇನ್ನಷ್ಟು ಆಪ್ತವಾಗಿರುತ್ತಿತ್ತು.