‘ಮನದ ಕಡಲು’ ಚಿತ್ರ ವಿಮರ್ಶೆ; ಪ್ರೇಮಕಥೆಗೊಂದು ತಾತ್ವಿಕ ಸ್ಪರ್ಶ

ಕ್ಲೈಮ್ಯಾಕ್ಸ್ ನ 10 ನಿಮಿಷಗಳ ಜೊತೆಗೆ ಉಳಿದ ಎರಡೂವರೆ ತಾಸಿನ ಬಗ್ಗೆ ಅವರು ಹೆಚ್ಚು ಗಮನಹರಿಸಿದ್ದರೆ, ‘ಮನದ ಕಡಲು’ ಮರೆಯಲಾಗದ ಚಿತ್ರವಾಗುತ್ತಿತ್ತು. ಚಿತ್ರದಲ್ಲಿ ಸಾಕಷ್ಟು ವಿಷಯಗಳಿವೆಯಾದರೂ, ಅದು ಪ್ರೇಕ್ಷಕರನ್ನು ಗಾಢವಾಗಿ ತಟ್ಟದೆ ಸುಮ್ಮನೆ ಸಾಗುತ್ತಿರುತ್ತದೆ.;

Update: 2025-03-30 02:30 GMT

ಯೋಗರಾಜ್‍ ಭಟ್‍ ತಮ್ಮ ನಿರ್ದೇಶನದ ಹಲವು ಚಿತ್ರಗಳಲ್ಲಿ ಪ್ರೇಮಕಥೆಗಳನ್ನು ಹೇಳಿದ್ದಾರೆ. ಈ ಬಾರಿ ಅವರು ಪ್ರೇಮಕಥೆಗೊಂದು ತಾತ್ವಿಕ ಸ್ಪರ್ಶ ನೀಡಿದ್ದಾರೆ. ತಮ್ಮ ‘ಮನದ ಕಡಲು’ ಚಿತ್ರದಲ್ಲಿ ಪ್ರೀತಿಗಿಂತ ಜೀವನ ಮುಖ್ಯ ಎಂದು ಯುವಜನತೆಗೆ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ.

ಕಾರಣಾಂತರಗಳಿಂದ ಎಂ.ಬಿ.ಬಿ.ಎಸ್‍ ಅರ್ಧಕ್ಕೇ ನಿಲ್ಲಿಸುವ ಸುಮುಖನಿಗೆ (ಸುಮುಖ), ರಾಶಿಕಾ ಎಂಬ ಯುವತಿಯನ್ನು ನೋಡಿದ ತಕ್ಷಣ ಮೊದಲ ನೋಟದಲ್ಲೇ ಪ್ರೀತಿ ಹುಟ್ಟುತ್ತದೆ. ತನ್ನ ಕನಸು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಅವಳು ಆರು ತಿಂಗಳು ಗಡುವು ಕೇಳುತ್ತಾಳೆ. ಆರು ತಿಂಗಳ ನಂತರ ಅತ್ತ ಅವಳ ಕನಸೂ ನನಸಾಗಿಲ್ಲ, ಅವಳೂ ನಾಪತ್ತೆಯಾಗಿರುತ್ತಾಳೆ. ಅವಳನ್ನು ಹುಡುಕಿಕೊಂಡು ಹೋಗುವ ಸುಮುಖನಿಗೆ, ಅವಳು ದೂರದೊಂದು ದ್ವೀಪದಲ್ಲಿ ತನ್ನ ಗೆಳತಿಯೊಂದಿಗೆ ಇದ್ದಾಳೆ ಎಂಬ ವಿಷಯ ಗೊತ್ತಾಗುತ್ತದೆ. ಆಕೆ ಅಲ್ಲಿಗೆ ಯಾಕೆ ಹೋದಳು, ಆ ದ್ವೀಪದ ಹಿನ್ನೆಲೆ ಏನು, ಮುಂದೇನಾಗುತ್ತದೆ ಎಂಬುದು ಗೊತ್ತಾಗಬೇಕಿದ್ದರೆ ‘ಮನದ ಕಡಲ’ ಆಳಕ್ಕೆ ಇಳಿಯಬೇಕು.

ಮೊದಲೇ ಹೇಳಿದಂತೆ ಯೋಗರಾಜ್‍ ಭಟ್ ಅವರಿಗೆ ಪ್ರೇಮಕಥೆಗಳು ಹೊಸದಲ್ಲ. ಆದರೆ, ಈ ಚಿತ್ರದಲ್ಲಿ ಅವರು ಜೀವನದ ಆಳಕ್ಕೆ ಇಳಿದಿದ್ದಾರೆ. ಜೀವನವನ್ನು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ನೋಡುವ ಪ್ರಯತ್ನವನ್ನು ಮಾಡಿದ್ದಾರೆ. ಕಮರ್ಷಿಯಲ್‍ ಅಂಶಗಳ ಜೊತೆಗೆ ಜೀವನದ ಮೌಲ್ಯಗಳನ್ನು, ಸಾವು, ಬದುಕು, ಕನಸು, ಗುರಿ, ಪ್ರೀತಿ … ಇವೆಲ್ಲವನ್ನೂ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಜೊತೆಗೆ ಈ ಚಿತ್ರಕ್ಕೊಂದು ಐತಿಹಾಸಿಕ ಸ್ಪರ್ಶ ಸಹ ಇದೆ. ಕೆಲವು ಶತಮಾನಗಳ ಹಿಂದೆ ಇದ್ದ ಎನ್ನಲಾದ ಪಶ್ಚಿಮರಾಜ ಎಂಬ ರಾಜನ ಮತ್ತು ಅವನ ಇಬ್ಬರು ಮಡದಿಯರ ಕಥೆಯನ್ನೂ ಹೇಳುವ ಪ್ರಯತ್ನ ಮಾಡಿದ್ದಾರೆ.


ಆ ನಿಟ್ಟಿನಲ್ಲಿ ‘ಮನದ ಕಡಲು’, ಭಟ್‍ ಅವರ ಚಿತ್ರಜೀವನದಲ್ಲೇ ಒಂದು ವಿಭಿನ್ನವಾದ ಚಿತ್ರ. ಆದರೆ, ಇವೆಲ್ಲವನ್ನೂ ಹೇಳುವ ಭರದಲ್ಲಿ ಅವರು ತಮ್ಮ ಹಳೆಯ ಚಿತ್ರಗಳನ್ನು ಮತ್ತು ಅದರಲ್ಲಿನ ಪಾತ್ರಗಳನ್ನು ನೆನಪಿಸುತ್ತಾ ಹೋಗುತ್ತಾರೆ. ಚಿತ್ರದ ಸಾರ ಅಥವಾ ಆತ್ಮವೇನಿದ್ದರೂ ಕೊನೆಗೆ ಬರುವ 10 ನಿಮಿಷಗಳಲ್ಲಿ ಮಾತ್ರ ಇದೆ. ಈ ಸಮಯದಲ್ಲಿ ಅವರು ಒಂದು ಅದ್ಭುತವಾದ ಸಂದೇಶವನ್ನು ಕೊಡುತ್ತಾರೆ. ಪ್ರೀತಿಗಾಗಿ ಜೀವನವನ್ನು ಹಾಳು ಮಾಡಿಕೊಳ್ಳುವವರ ಮತ್ತು ಅಂಥವರೇ ಕುರಿತು ಹೆಚ್ಚು ಚಿತ್ರಗಳಾಗುತ್ತಿರುವ ಈ ಸಂದರ್ಭದಲ್ಲಿ ಪ್ರೀತಿಗಿಂತ ಜೀವನ ಮುಖ್ಯ ಎಂಬುದನ್ನು ಅರ್ಥ ಮಾಡಿಸುತ್ತಾರೆ.

ಕ್ಲೈಮ್ಯಾಕ್ಸ್ ನ 10 ನಿಮಿಷಗಳ ಜೊತೆಗೆ ಉಳಿದ ಎರಡೂವರೆ ತಾಸಿನ ಬಗ್ಗೆ ಅವರು ಹೆಚ್ಚು ಗಮನಹರಿಸಿದ್ದರೆ, ‘ಮನದ ಕಡಲು’ ಮರೆಯಲಾಗದ ಚಿತ್ರವಾಗುತ್ತಿತ್ತು. ಚಿತ್ರದಲ್ಲಿ ಸಾಕಷ್ಟು ವಿಷಯಗಳಿವೆಯಾದರೂ, ಅದು ಪ್ರೇಕ್ಷಕರನ್ನು ಗಾಢವಾಗಿ ತಟ್ಟದೆ ಸುಮ್ಮನೆ ಸಾಗುತ್ತಿರುತ್ತದೆ. ಪ್ರೇಕ್ಷಕರನ್ನು ಹಿಡಿದು ಕೂರಿಸುವಂತಹ ವಿಶೇಷವಾದ ಅಂಶಗಳಾಗಲೀ, ಭಾವನಾತ್ಮಕವಾಗಿ ಕನೆಕ್ಟ್ ಆಗುವ ದೃಶ್ಯಗಳು ಇಲ್ಲಿಲ್ಲ. ಇನ್ನು, ಚಿತ್ರದ ಉದ್ಧಳತೆ ಸಹ ಸ್ವಲ್ಪ ಹೆಚ್ಚಾಗಿದೆ. ಚಿತ್ರವನ್ನು ಇನ್ನೊಂದಿಷ್ಟು ಕತ್ತರಿಸುವ, ಚುರುಕಾಗಿಸುವ ಅವಕಾಶವಿತ್ತು. ಆದರೆ, ಭಟ್‍ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಈ ಚಿತ್ರ ಪರವಾಗಿಲ್ಲ ಎಂದನಿಸಿದರೂ, ಒಟ್ಟಾರೆ ಸಾಕಷ್ಟು ಸಾಧ್ಯತೆಗಳಿದ್ದ ಮತ್ತು ಬೇರೆ ಮಟ್ಟಕ್ಕೆ ತಲುಪಬಹುದಾಗಿದ್ದ ಒಂದು ಚಿತ್ರವನ್ನು ಭಟ್ ಕೈಚೆಲ್ಲಿದ್ದಾರೆ ಎಂದನಿಸಿದರೂ ಆಶ್ಚರ್ಯವಿಲ್ಲ.

ಸುಮುಖ, ರಾಶಿಕಾ ಮತ್ತು ಅಂಜಲಿ ಮೂವರೂ ಲವಲವಿಕೆಯಿಂದ ನಟಿಸಿದ್ದಾರೆ. ಸುಮುಖನ ಪಾತ್ರ ವಿಲಕ್ಷಣವಾಗಿದ್ದು, ಭಟ್‍ ಅವರ ಹಿಂದಿನ ಚಿತ್ರಗಳ ಪಾತ್ರಗಳನ್ನು ನೆನಪಿಸುತ್ತದೆ. ರಾಶಿಕಾ ಸಮಚಿತ್ತವಾಗಿ ಕಂಡರೆ, ಅಂಜಲಿ ಮಾದಕವಾಗಿ ಕಂಗೊಳಿಸುತ್ತಾರೆ. ರಂಗಾಯಣ ರಘು ಪಾತ್ರ ಚಿತ್ರದುದ್ದಕ್ಕೂ ಇದ್ದರೂ, ಅವರಿಗೆ ನಟಿಸುವುದಕ್ಕೆ ಅವಕಾಶ ಕಡಿಮೆಯೇ. ಇನ್ನು, ಅವರಿಗೊಂದು ವಿಶೇಷವಾದ ಭಾಷೆಯನ್ನು ಸೃಷ್ಟಿಸಲಾಗಿದೆ. ಅದು ಖುಷಿಕೊಡುವುದಕ್ಕಿಂತ ಕಿರಿಕಿರಿಯಾಗುವುದೇ ಹೆಚ್ಚು. ದತ್ತಣ್ಣ ತಮ್ಮ ಪಾತ್ರವನ್ನು ತೂಕವಾಗಿ ನಿಭಾಯಿಸಿದ್ದಾರೆ.

ಚಿತ್ರ ಇಷ್ಟವಾಗುವುದು ತಾಂತ್ರಿಕ ಕಾರಣಗಳಿಂದ. ಸಂತೋಷ್‍ ರೈ ಪಾತಾಜೆ ಛಾಯಾಗ್ರಹಣ ಶಿವಕುಮಾರ್‍ ಅವರ ಕಲಾ ನಿರ್ದೇಶನ ಇವೆಲ್ಲವೂ ಚಿತ್ರದ ಪ್ಲಸ್‍ಗಳು. ಅದರಲ್ಲೂ ಸಂತೋಷ್‍ ರೈ ಚಿತ್ರದ ಇಡೀ ಪರಿಸರವನ್ನು ಬಹಳ ಸುಂದರವಾಗಿ ಹಿಡಿದಿಟ್ಟಿದ್ದಾರೆ. ವಿ. ಹರಿಕೃಷ್ಣ ಹಾಡುಗಳಲ್ಲಿ ಎರಡು ಹಾಡುಗಳು ಕೇಳಲು ಇಂಪಾಗಿವೆ. ಕಥೆಯ ಓಟವೇ ನಿಧಾನವಾಗಿರುವುದರಿಂದ ಕೆ.ಎಂ. ಪ್ರಕಾಶ್‍ ಮೇಲೆ ತಪ್ಪು ಹೊರಿಸುವುದು ತಪ್ಪಾಗುತ್ತದೆ.

ಯೋಗರಾಜ್‍ ಭಟ್‍ ಅವರ ಚಿತ್ರಗಳನ್ನು ಇಷ್ಟಪಡುವವರು ಈ ಚಿತ್ರವನ್ನೊಮ್ಮೆ ನೋಡಬಹುದು.

Tags:    

Similar News