ಕಾಂತಾರ ಚಾಪ್ಟರ್ 1: ಕತೆಯಲ್ಲಿ ಹೊಸದೇನೂ ಇಲ್ಲ, ರಿಷಬ್ ಶೆಟ್ಟಿ ಪರಿಶ್ರಮವೇ ಎಲ್ಲ
ಈ ಹಿಂದೆ ತೆರೆಕಂಡ ಕಾಂತಾರಕ್ಕೂ ಈ ಚಿತ್ರಕ್ಕೂ ನೇರವಾದ ಸಂಬಂಧಗಳು ಇಲ್ಲ. ಆದರೆ ಹಿಂದಿನ ಚಿತ್ರದಲ್ಲಿನ ಪ್ರಮುಖ ಪಾತ್ರಧಾರಿಗಳನ್ನು ಇಲ್ಲಿ ಮತ್ತೊಮ್ಮೆ ಬೇರೆಯದೇ ಪಾತ್ರಗಳಲ್ಲಿ ಬಳಸಲಾಗಿದೆ.
ಚಿತ್ರ: ಕಾಂತಾರ -1
ನಿರ್ದೇಶನ: ರಿಷಬ್ ಶೆಟ್ಟಿ
ನಿರ್ಮಾಣ: ಹೊಂಬಾಳೆ ಫಿಲ್ಮ್ಸ್
ತಾರಾಗಣ: ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಜಯರಾಮ್ ಮೊದಲಾದವರು.
ಕಾಡುಬೆಟ್ಟು ಶಿವನ ಪುತ್ರ ತಂದೆ ಕಣ್ಮರೆಯಾದ ಬಗ್ಗೆ ಕೇಳುವ ಪ್ರಶ್ನೆಯಿಂದಲೇ ಚಿತ್ರ ಆರಂಭಗೊಳ್ಳುತ್ತದೆ. ಆದರೆ ಇಲ್ಲಿ ತಂದೆಯ ಕಥೆಯ ಬದಲಾಗಿ ಪೂರ್ವಿಕರ ಕಥೆಯನ್ನು ತೋರಿಸಲಾಗಿದೆ.
ತುಳುನಾಡಿನ ಕಾಡು ಪ್ರದೇಶ ಮತ್ತು ಅಲ್ಲಿರುವ ಈಶ್ವರನ ಶಕ್ತಿಯ ಬಗ್ಗೆ ಕಣ್ಣು ಹಾಕುವ ಬಾಂಗ್ರ ರಾಜನ ಕಥೆಯಿಂದ ಹೊಸ ಕಳೆ ಸೃಷ್ಟಿಯಾಗುತ್ತಾ ಹೋಗುತ್ತದೆ. ಅರಮನೆ ಮತ್ತು ಬುಡಕಟ್ಟು ಜನರ ತಿಕ್ಕಾಟವನ್ನು ಹೊಸ ರೀತಿಯಲ್ಲಿ ತೋರಿಸಲಾಗಿದೆ. ಇಲ್ಲಿ ಬುಡಕಟ್ಟು ವೀರನಿಗೆ ಅರಮನೆಯ ರಾಜಕುಮಾರಿ ಮನಸೋತ ಹಾಗೆ ಕಾಣುತ್ತದೆ. ಆದರೆ ಕಂಡದ್ದೆಲ್ಲ ನಿಜವಲ್ಲ ಎಂದು ಮಧ್ಯಂತರದ ಬಳಿಕ ಸಾಬೀತಾಗುತ್ತದೆ.
ಇಡೀ ಚಿತ್ರದಲ್ಲಿ ನಾಯಕ, ನಿರ್ದೇಶಕ ರಿಷಬ್ ಶೆಟ್ಟಿಯ ಪರಿಶ್ರಮ ಎದ್ದು ಕಾಣುತ್ತದೆ. ದಟ್ಟ ಕಾನನದಲ್ಲಿ ಸಾಹಸ ದೃಶ್ಯಗಳಲ್ಲಿ ಕಾಣಿಸಿರುವ ರಿಷಬ್ ತಮ್ಮ ಶ್ರಮವನ್ನು ಧಾರೆ ಎರೆದಿರುವುದಂತೂ ಸತ್ಯ. ಮತ್ತೊಂದೆಡೆ ಚಿತ್ರದ ನಾಯಕಿಯಾಗಿ ರಾಜಕುಮಾರಿ ಕನಕವತಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ಪ್ರೇಯಸಿಯ ಪಾತ್ರಕ್ಕೆ ಸೀಮಿತವಾಗಿಲ್ಲ. ಬಾಂಗ್ರ ರಾಜ ರಾಜಶೇಖರನ ಪಾತ್ರದಲ್ಲಿ ಜಯರಾಮ್ ಅದ್ಭುತ ಅಭಿನಯ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ರಾಜಕುಮಾರ ಕುಲಶೇಖರನಾಗಿ ಗುಲ್ಷನ್ ದೇವಯ್ಯ ವಿಭಿನ್ನ ರೀತಿಯ ಅಭಿನಯ ನೀಡಿದ್ದಾರೆ. ಅರಮನೆಯ ವಾತಾವರಣವೇ ಆದರೂ ಇಂದಿನ ಮಂಗಳೂರು ಭಾಗದ ಬೇವರ್ಸಿಯಂಥ ಬೈಗುಳಗಳನ್ನು ಬಳಸಲಾಗಿದೆ. ಮಂತ್ರಿ ಭೋಗೇಂದ್ರನಾಗಿ ಪ್ರಮೋದ್ ಶೆಟ್ಟಿ ಸೇರಿದಂತೆ ಪ್ರಕಾಶ್ ತೂಮಿನಾಡು ಪಾತ್ರಗಳು ನಗು ಮೂಡಿಸುವಲ್ಲಿ ಯಶಸ್ವಿಯಾಗಿವೆ. ಈ ಚಿತ್ರದೊಂದಿಗೆ ನಟನೆಯ ಪಯಣ ಕೊನೆಗೊಳಿಸಿರುವ ರಾಕೇಶ್ ಪೂಜಾರಿಯ ಪಾತ್ರ ಪರದೆಯ ಮೇಲೆಯೇ ಕಾಡುತ್ತದೆ. ಈ ಪಾತ್ರಕ್ಕೆ ತಂದೆಯಾಗಿ ಕಾಣಿಸಿರುವ ನವೀನ್ ಡಿ ಪಡೀಲ್ ಬೂಬನ ಪಾತ್ರದಲ್ಲಿ ಮತ್ತೊಮ್ಮೆ ಹಾಸ್ಯರಸವನ್ನು ಉಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೂಬ ಎನ್ನುವುದು ರಂಗಭೂಮಿಯಲ್ಲಿ ಅವರೇ ನಟಿಸಿ ಜನಪ್ರಿಯಗೊಳಿಸಿದ ಪಾತ್ರದ ಹೆಸರು ಎನ್ನುವುದು ಗಮನಾರ್ಹ. ಬಲರಾಜವಾಡಿ, ಮಂಗಳಾ ರಘು ಮೊದಲಾದ ರಂಗಭೂಮಿ ಕಲಾವಿದರು ಈ ಚಿತ್ರದ ಶಕ್ತಿ. ಅಚ್ಯುತ್ ಕುಮಾರ್ ಕೂಡ ಸಣ್ಣ ಪಾತ್ರವೊಂದರಲ್ಲಿ ಬಂದು ಹೋಗುವುದು ವಿಶೇಷ.
ಈ ಹಿಂದೆ ತೆರೆಕಂಡ ಕಾಂತಾರಕ್ಕೂ ಈ ಚಿತ್ರಕ್ಕೂ ನೇರವಾದ ಸಂಬಂಧಗಳು ಇಲ್ಲ. ಆದರೆ ಹಿಂದಿನ ಚಿತ್ರದಲ್ಲಿನ ಪ್ರಮುಖ ಪಾತ್ರಧಾರಿಗಳನ್ನು ಇಲ್ಲಿ ಮತ್ತೊಮ್ಮೆ ಬೇರೆಯದೇ ಪಾತ್ರಗಳಲ್ಲಿ ಬಳಸಲಾಗಿದೆ. ಅಲ್ಲಿ ಜನಪ್ರಿಯಗೊಂಡಿದ್ದ ಸಂಭಾಷಣೆಗಳನ್ನು ಇಲ್ಲಿ ಸಾಂದರ್ಭಿಕವಾಗಿ ಬಳಸಿ ಪ್ರೇಕ್ಷಕರಿಗೆ ಕಚಗುಳಿ ನೀಡಲಾಗಿದೆ. ಇದಕ್ಕೆ ಒಂದು ಉದಾಹರಣೆ ನೀಡುವುದಾದರೆ ಈ ಬಾರಿ ನಮ್ಮ ಕಾಡಲ್ಲಿ ಒಂದು ಸೊಪ್ಪು ಉಂಟು ಎನ್ನುವ ಸಂಭಾಷಣೆಯನ್ನು ರಿಷಬ್ ಹೇಳಿದ್ದಾರೆ. ಆದೆರೆ ಇದು ಗಾಂಜಾ ಮಾದರಿಯ ಗಿಡವನ್ನು ಕುರಿತಾಗಿ ಹೇಳಿರುವಂಥ ಸಂಭಾಷಣೆ. ಬಾಂಗ್ರಾದ ರಾಜರೊಂದಿಗೆ ವ್ಯವಹಾರ ನಡೆಸುವ ಸಂದರ್ಭದಲ್ಲಿ ಇಂಥದೊಂದು ಡೈಲಾಗ್ ಹೇಳಿಸಲಾಗಿದೆ.
ಈ ಬಾರಿ ಕಾಂತಾರದೊಳಗೆ 'ಈಶ್ವರನ ಹೋದೋಟ'ದ ಪ್ರಸ್ತಾಪವಿದೆ. ತುಳುನಾಡಿನ ಮಂದಿ ನಂಬುವ ವಿವಿಧ ಭೂತಗಣಗಳ ಸೂಚನೆ ಎನ್ನುವಂಥ ಪ್ರಾಣಿಗಳ ಇರವನ್ನು ಇಲ್ಲಿ ತೋರಿಸಲಾಗಿದೆ. ಮತ್ತು ಒಂದು ಹಂತದಲ್ಲಿ ನಾಯಕನಲ್ಲೇ ಈ ದೈವದ ಪ್ರವೇಶವಾಗುತ್ತದೆ. ಚಿತ್ರದ ನಾಯಕ ಬುಡಕಟ್ಟು ಜನಾಂಗದನೇ. ಬೆರ್ಮೆ ಎನ್ನುವುದು ಇವರ ಹೆಸರು. ಈತ ಕಾಡಿನಲ್ಲಿ ಅನಾಥವಾಗಿ ದೊರಕಿದಂಥ ಕಂದ. ಆದರೆ ಈತನೇ ಬೆಳೆದು ಬಾಂಗ್ರದ ಅರಸರನ್ನು ಬಗ್ಗು ಬಡಿಯುವಂತೆ ಬೆಳೆಯುತ್ತಾನೆ. ಮುಂದೇನು ಎನ್ನುವುದು ಬೆಳ್ಳಿ ಪರದೆಯ ಮೇಲೆ ಕಂಡರೇನೇ ಸೊಗಸು.
ಬುಡಕಟ್ಟು ಜನರ ರಕ್ಷಣೆಗೆ ಇರುವ ದೈವವೇ ಗುಳಿಗ. ಈಗಾಗಲೇ ಒಮ್ಮೆ ಬಾಂಗ್ರಾದ ರಾಜರನ್ನು ಇದೇ ಗುಳಿಗ ಬೆಂಕಿಯಾಗಿ ಬೇಟೆಯಾಡುತ್ತಾನೆ. ಹಾಗೆ ಬಾಂಗ್ರದವರು ಕಾಂತಾರದಿಂದ ದೂರವಾಗಿರುತ್ತಾರೆ. ಎರಡನೇ ಬಾರಿ ಒಂದಾಗುವುದೇಕೆ ಮತ್ತು ಆನಂತರದ ಯುದ್ಧದ ಅಬ್ಬರ ಹೇಗಿರುತ್ತದೆ ಎನ್ನುವುದನ್ನುಅರವಿಂದ್ ಕಶ್ಯಪ್ ತಮ್ಮ ಕ್ಯಾಮರಾದಲ್ಲಿಅದ್ಭುತ ಚಿತ್ರಣವಾಗಿ ಮೂಡಿಸಿದ್ದಾರೆ.
ರಿಷಬ್ ಈ ಚಿತ್ರದ ಮೂಲಕ ಭೂತಾರಾಧನೆಯ ಇತಿಹಾಸ ಹೇಳುತ್ತಾರೆ ಎಂದುಕೊಂಡವರಿಗೆ ನಿರಾಶೆಯಾಗುವುದು ಖಚಿತ. ಯಾಕೆಂದರೆ ಇಲ್ಲಿ ಅಂಥ ಇತಿಹಾಸವೇನೂ ಇಲ್ಲ. ಹಿಂದಿನ ಕಾಂತಾರದಲ್ಲಿದ್ದಂತೆ ನಾಯಕನ ಮೈಗೆ ದೈವದ ಪ್ರವೇಶವಾಗುವುದಷ್ಟೇ ಈ ಬಾರಿಗೂ ಆಕರ್ಷಣೆ ಎನ್ನುವಂತಾಗಿರುವುದು ವಿಪರ್ಯಾಸ. ಆದರೆ ಚಿತ್ರದ ಅದ್ಧೂರಿತನದ ಬಗ್ಗೆ ಮಾತ್ರ ಮೆಚ್ಚಲೇಬೇಕು. ಅದು ನೂರಾರು ಕಲಾವಿದರನ್ನು ಪಾಲ್ಗೊಳ್ಳಿಸಿರುವುದಕ್ಕೆ ಸೀಮಿತವಾಗಿಲ್ಲ. ಅಂದಿನ ಕಾಲದ ಅರಮನೆಯ ದೃಶ್ಯ ವೈಭವವನ್ನು ಕಟ್ಟಿ ಕೊಡುವಲ್ಲಿಯೂ ಸಾಬೀತಾಗಿದೆ.
ಕಳೆದ ಬಾರಿ ಚಿತ್ರಕ್ಕೆ ಅದ್ಭುತ ಹಾಡುಗಳನ್ನು ನೀಡಿರುವ ಅಜನೀಶ್ ಲೋಕನಾಥ್, ಈ ಬಾರಿ ತಮ್ಮ ಹಳೆಯ ಛಾಪು ಬಿಟ್ಟು ಹೊರಗೆ ಬರಲಾಗದೆ ಪರದಾಡಿದ್ದಾರೆ. ವರಾಹ ರೂಪಂನ ಅದೇ ಹಿನ್ನೆಲೆ ಸಂಗೀತದ ಹೊರತಾಗಿ ಇಲ್ಲಿ ಹೊಸ ಟ್ಯೂನ್ ವರ್ಕೌಟ್ ಆಗಿಲ್ಲ ಎನ್ನುವುದು ದುರಂತ.
ಐದನೇ ಶತಮಾನದ ಕಾಲಘಟ್ಟಕ್ಕೆ ಕಲಾನಿರ್ದೇಶನ ಸಾಥ್ ನೀಡಿದೆ. ಅದೇ ರೀತಿ ದೈವಗಳ ಶಕ್ತಿಯನ್ನು ತೋರಿಸುವ ಸಂದರ್ಭದಲ್ಲಿ ನೀಡಿರುವ ತಾಂತ್ರಿಕ ವೈಭವ ಕಣ್ಣರಳಿಸಿ ನೋಡುವಂತೆ. ಕೋತಿ, ಹುಲಿ, ಹಾವುಗಳನ್ನು ಪರದೆ ಮೇಲೆ ನೈಜವಾಗಿ ಮೂಡಿಸಿರುವ ರೀತಿ ಅನನ್ಯ.
ಚಿತ್ರದಲ್ಲಿ ದೈವದ ಅಥವಾ ತುಳುನಾಡಿನ ನೈಜ ಇತಿಹಾಸ ಇಲ್ಲವಾದರೂ ಗುಳಿಗ ದೈವದ ಶಕ್ತಿಯ ಕುರಿತಾದ ನಂಬಿಕೆ ಯಾವ ರೀತಿಯದ್ದು ಎನ್ನುವುದನ್ನು ಸಾರಲಾಗಿದೆ. ಮತ್ತೊಂದೆಡೆ ರಾಜರು ಬುಡಕಟ್ಟು ಅಥವಾ ಗಿರಿಜನರ ಸ್ಪರ್ಶವನ್ನು ಅಸಹ್ಯ ಪಡುವುದರ ವಿರುದ್ಧ ನಾಯಕನ ಮೂಲಕವೇ ಧ್ವನಿ ಎತ್ತಲಾಗಿದೆ. ಇದರಾಚೆ ಚಿತ್ರದಿಂದ ಹೊಸದಾಗಿ ದಕ್ಕುವಂಥ ವಿಚಾರಗಳೇನೂ ಇಲ್ಲ. ದೇಶವೇ ನಿರೀಕ್ಷಿಸಿದ ಕನ್ನಡ ಸಿನಿಮಾ ಎನ್ನುವುದರ ಹೊರತಾಗಿ ಕಾಂತಾರಕ್ಕೆ ಸದ್ಯದ ಮಟ್ಟಿಗೆ ಯಾವ ಹೆಗ್ಗಳಿಕೆಯೂ ಉಳಿದಿಲ್ಲ. ಆದರೆ ಈಗಾಗಲೇ ಅದ್ಭುತವಾಗಿ ಸ್ವೀಕರಿಸಿರುವ ಪ್ರೇಕ್ಷಕರ ಸಂಭ್ರಮ ಇದೇ ರೀತಿಯಲ್ಲಿ ಮುಂದುವರಿದರೆ ಚಿತ್ರದ ಯಶಸ್ಸಿನ ಬಗ್ಗೆ ಗೊಂದಲ ಇರುವುದಿಲ್ಲ. ಚಿತ್ರದ ಕೊನೆಯಲ್ಲಿ ಕಾಂತಾರ ಮೂರರ ಸುಳಿವು ನೀಡಿರುವ ರಿಷಬ್ ಮುಂದಿನ ಬಾರಿಯಾದರೂ ದೈವ ಶಕ್ತಿಯ ಜತೆಯಲ್ಲೇ ಕತೆಯಲ್ಲೂ ಹೊಸತನ ತರುವ ಪ್ರಯತ್ನ ಮಾಡಲೆಂದು ನಿರೀಕ್ಷಿಸೋಣ.