
ಸಿಎಂ ಸಿದ್ದರಾಮಯ್ಯ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್
ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆ ಭೀತಿ: ಕೇಂದ್ರದ ವಿರುದ್ಧ ದಕ್ಷಿಣದ ರಾಜ್ಯಗಳ 'ಒಕ್ಕೂಟ ಸಮರ'ಕ್ಕೆ ಸಿದ್ದರಾಮಯ್ಯ ಸಾರಥ್ಯ?
ದಕ್ಷಿಣ ರಾಜ್ಯಗಳಿಂದ ಪ್ರಮುಖ ಸಮಾಜವಾದಿ ಚಿಂತಕರು, ಜನಪ್ರತಿನಿಧಿಗಳು, ನಿವೃತ್ತ ನ್ಯಾಯಮೂರ್ತಿಗಳು ಮತ್ತು ಕಾನೂನು ತಜ್ಞರು ಈ ಸಮಾವೇಶದಲ್ಲಿ ಭಾಗವಹಿಸುತ್ತಿರುವುದು ಹೋರಾಟದ ಗಂಭೀರತೆಯನ್ನು ಎತ್ತಿ ತೋರಿಸಿದೆ.
ಕೇಂದ್ರ ಸರ್ಕಾರದಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ನಿರಂತರ ಆರ್ಥಿಕ ತಾರತಮ್ಯ ಹಾಗೂ ಮುಂಬರುವ ಜನಸಂಖ್ಯೆ ಆಧಾರಿತ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ (Delimitation) ಪ್ರಸ್ತಾಪದ ವಿರುದ್ಧ ದಕ್ಷಿಣದ ರಾಜ್ಯಗಳು ಒಗ್ಗೂಡಿ ರಣಕಹಳೆ ಮೊಳಗಿಸಲು ಸಜ್ಜಾಗಿವೆ. ಇಷ್ಟು ದಿನ ಬಿಡಿಬಿಡಿಯಾಗಿ ಕೇಳಿಬರುತ್ತಿದ್ದ ಅಸಮಾಧಾನದ ದನಿಗಳನ್ನು ಒಂದುಗೂಡಿಸಿ, ಪ್ರಬಲ ಸಾಂವಿಧಾನಿಕ ಹೋರಾಟ ರೂಪಿಸಲು ಬೆಂಗಳೂರು ವೇದಿಕೆಯಾಗುತ್ತಿದ್ದು, ಈ ದಕ್ಷಿಣ ಭಾರತದ ಒಕ್ಕೂಟದ ಹೋರಾಟಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
ದಕ್ಷಿಣದ ರಾಜ್ಯಗಳ ಅಸ್ಮಿತೆ ಮತ್ತು ಹಕ್ಕುಗಳ ರಕ್ಷಣೆಗಾಗಿ ಸಮಾಜವಾದಿ ಸಮಾಗಮ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ಇದೇ ಜನವರಿ 20ರಂದು ಬೆಂಗಳೂರಿನಲ್ಲಿ ಮಹತ್ವದ ವಿಚಾರ ಸಂಕಿರಣ ಆಯೋಜನೆಗೊಂಡಿದೆ. ಈ ಕುರಿತು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರು ಮುಂಬರುವ ಹೋರಾಟದ ರೂಪುರೇಷೆಗಳನ್ನು ಬಿಚ್ಚಿಟ್ಟಿದ್ದಾರೆ.
ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಪುದುಚೇರಿಯಿಂದ ಪ್ರಮುಖ ಸಮಾಜವಾದಿ ಚಿಂತಕರು, ಜನಪ್ರತಿನಿಧಿಗಳು, ನಿವೃತ್ತ ನ್ಯಾಯಮೂರ್ತಿಗಳು ಮತ್ತು ಕಾನೂನು ತಜ್ಞರು ಈ ಸಮಾವೇಶದಲ್ಲಿ ಭಾಗವಹಿಸುತ್ತಿರುವುದು ಹೋರಾಟದ ಗಂಭೀರತೆಯನ್ನು ಎತ್ತಿ ತೋರಿಸಿದೆ.
ಕೇಂದ್ರದ ನೀತಿಗಳ ವಿರುದ್ಧ ಸಮರ
ಪ್ರಮುಖವಾಗಿ ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾಗಿರುವ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣದ ರಾಜ್ಯಗಳಿಗೆ, ಕೇಂದ್ರದ ನೀತಿಗಳಿಂದ ಶಿಕ್ಷೆ ಎದುರಾಗುತ್ತಿದೆ ಎಂಬುದು ಈ ಒಗ್ಗಟ್ಟಿಗೆ ಪ್ರಮುಖ ಕಾರಣವಾಗಿದೆ. ಮುಂಬರುವ ಜನಗಣತಿ ಆಧಾರದ ಮೇಲೆ ಲೋಕಸಭೆ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸುವ ಪ್ರಕ್ರಿಯೆ ಆರಂಭವಾದರೆ, ಉತ್ತರ ಭಾರತದ ರಾಜ್ಯಗಳ ಪ್ರಾಬಲ್ಯ ಹೆಚ್ಚಲಿದ್ದು, ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಕುಸಿಯಲಿದೆ ಎಂಬ ಆತಂಕ ತೀವ್ರವಾಗಿದೆ. ಕುಟುಂಬ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದಕ್ಕಾಗಿ ದಕ್ಷಿಣದ ರಾಜ್ಯಗಳಿಗೆ 'ರಾಜಕೀಯ ಶಿಕ್ಷೆ' ವಿಧಿಸಬಾರದು ಮತ್ತು ಜಿಎಸ್‌ಟಿ (GST) ಪಾಲು, ಹಣಕಾಸು ಆಯೋಗದ ಅನುದಾನ ಹಾಗೂ ನೀರಾವರಿ ಯೋಜನೆಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂಬುದು ಈ ಒಕ್ಕೂಟದ ಪ್ರಮುಖ ಆಗ್ರಹವಾಗಿದೆ.
ವಿಶೇಷವೆಂದರೆ, ದಕ್ಷಿಣದ ಈ ದನಿಯನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ತಲುಪಿಸಲು ಒಬ್ಬ ಪ್ರಬಲ ನಾಯಕನ ಅಗತ್ಯವಿದ್ದು, ಆ ಸ್ಥಾನಕ್ಕೆ ಸಿದ್ದರಾಮಯ್ಯ ಅವರೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಮಾಜವಾದಿ ಹಿನ್ನೆಲೆ, ದೀರ್ಘಕಾಲದ ರಾಜಕೀಯ ಅನುಭವ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಸದಾ ರಾಜಿಯಿಲ್ಲದೆ ದನಿ ಎತ್ತಿರುವ ಸಿದ್ದರಾಮಯ್ಯ ಅವರು ಈ ಹೋರಾಟದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಬಿ.ಆರ್. ಪಾಟೀಲ್ ಬಲವಾಗಿ ಪ್ರತಿಪಾದಿಸಿದ್ದಾರೆ. ವಿಚಾರ ಸಂಕಿರಣವನ್ನು ಉದ್ಘಾಟಿಸಲಿರುವ ಮುಖ್ಯಮಂತ್ರಿಗಳಿಗೆ, ಅಧಿಕೃತವಾಗಿ ಈ ಜವಾಬ್ದಾರಿ ವಹಿಸಿಕೊಳ್ಳುವಂತೆ ಒಕ್ಕೊರಲ ಮನವಿ ಸಲ್ಲಿಸಲು ವೇದಿಕೆ ಸಿದ್ಧವಾಗಿದೆ. ಅವರು ಒಪ್ಪಿಕೊಂಡರೆ ದಕ್ಷಿಣ ಭಾರತದ ಒಕ್ಕೂಟದ ಧ್ವನಿಗೆ ಆನೆ ಬಲ ಬಂದಂತಾಗಲಿದೆ ಎಂಬ ವಿಶ್ವಾಸವನ್ನು ಆಯೋಜಕರು ವ್ಯಕ್ತಪಡಿಸಿದ್ದಾರೆ.
ನ್ಯಾಯಮೂರ್ತಿಗಳ ಉಪಸ್ಥಿತಿ
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ದಿನವಿಡೀ ಚರ್ಚೆಯು ಕೇವಲ ಭಾಷಣಕ್ಕೆ ಸೀಮಿತವಾಗದೆ, ಅಂತಿಮವಾಗಿ ಒಂದು ವಿಸ್ತೃತ ವರದಿಯನ್ನು ಸಿದ್ಧಪಡಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸಲು ನಿರ್ಧರಿಸಲಾಗಿದೆ. ಇದು ಕೇವಲ ರಾಜಕೀಯ ಹೋರಾಟವಲ್ಲ, ಬದಲಿಗೆ ಇದೊಂದು ಸಾಂವಿಧಾನಿಕ ಹಕ್ಕಿನ ಹೋರಾಟ ಎಂದು ಬಿ.ಆರ್. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಅಗತ್ಯಬಿದ್ದರೆ ದಕ್ಷಿಣದ ಐದು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರಮುಖ ನಾಯಕರು ದೆಹಲಿಯಲ್ಲಿ ಜಂಟಿ ಪ್ರತಿಭಟನೆ ನಡೆಸುವುದು ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮೂಲಕ ಕಾನೂನಾತ್ಮಕ ಹೋರಾಟ ನಡೆಸುವುದು ಕೂಡ ಈ ಕಾರ್ಯತಂತ್ರದ ಭಾಗವಾಗಿದೆ. ಉತ್ತರ ಭಾರತದ ಸಮಾಜವಾದಿ ಮಿತ್ರರೂ ಈ ನ್ಯಾಯಯುತ ಹೋರಾಟಕ್ಕೆ ಕೈಜೋಡಿಸುತ್ತಿರುವುದು ವಿಶೇಷ ಬೆಳವಣಿಗೆ.
ಇದೇ ವೇಳೆ ರಾಜ್ಯ ರಾಜಕಾರಣದ ಬಗ್ಗೆಯೂ ಪ್ರಸ್ತಾಪಿಸಿದ ಬಿ.ಆರ್. ಪಾಟೀಲ್, ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅವರ ಆಡಳಿತ ವೈಖರಿ ಮತ್ತು ಸಾಮಾಜಿಕ ನ್ಯಾಯದ ಬದ್ಧತೆಯನ್ನು ಶ್ಲಾಘಿಸಿದ ಅವರು, ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಇನ್ನೆರಡು ಬಜೆಟ್ ಮಂಡಿಸುವ ಮೂಲಕ ಅತಿ ಹೆಚ್ಚು ಬಜೆಟ್ ಮಂಡಿಸಿದ ತಮ್ಮದೇ ದಾಖಲೆಯನ್ನು ಮುರಿಯಲಿ ಎಂದು ಆಶಯ ವ್ಯಕ್ತಪಡಿಸಿದರು. ಒಟ್ಟಾರೆಯಾಗಿ, ಜನವರಿ 20ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈ ಸಮಾವೇಶವು ದಕ್ಷಿಣ ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗುವ ಮತ್ತು ಕೇಂದ್ರ-ರಾಜ್ಯ ಸಂಬಂಧಗಳ ಮರು ವ್ಯಾಖ್ಯಾನಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.

