Will population control sink South India? B.R. Patil worries
x

ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌. ಪಾಟೀಲ್‌

ದಕ್ಷಿಣ ಭಾರತಕ್ಕೆ ಮುಳುವಾಗಲಿದೆ ಜನಸಂಖ್ಯೆ ನಿಯಂತ್ರಣ: ಬಿ.ಆರ್. ಪಾಟೀಲ್ ಕಳವಳ

ಬಿಹಾರ, ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ. ಅಲ್ಲಿನ ಎಂಪಿಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಬಹುದು, ನಮ್ಮ ದಕ್ಷಿಣ ಭಾರತದ ಜನಸಂಖ್ಯೆ ಕಡಿಮೆ ಇರುವುದರಿಂದ ಎಂಪಿಗಳ ಸಂಖ್ಯೆ ಕಡಿಮೆ ಆಗಬಹುದು ಎಂದು ಬಿ.ಆರ್. ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಮುಂಬರುವ ಜನಗಣತಿಯಲ್ಲಿ ಉತ್ತರ ಭಾರತದ ಜನಸಂಖ್ಯೆ ಅಧಿಕವಾಗಲಿದ್ದು, ದಕ್ಷಿಣ ಭಾರತದ ಜನಸಂಖ್ಯೆ ಕಡಿಮೆಯಾಗಲಿದೆ. ಇದರಿಂದ ನಮ್ಮನ್ನು ಪ್ರತಿನಿಧಿಸುವ ಸಂಸತ್‌ ಸದಸ್ಯರು ಕಡಿಮೆಯಾಗಲಿದ್ದು, ಜನಸಂಖ್ಯೆ ನಿಯಂತ್ರಣವೇ ನಮಗೆ ಮುಳುವಾಗಲಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಬಿ. ಆರ್. ಪಾಟೀಲ್ ತಿಳಿಸಿದರು.

ಶುಕ್ರವಾರ(ಜ.16) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಪ್ರತಿನಿಧಿಗಳ ಸಂಖ್ಯೆ ಉತ್ತರ ಭಾರತದಲ್ಲಿ ಜಾಸ್ತಿ ಆಗಬಹುದು, ದಕ್ಷಿಣ ಭಾರತದಲ್ಲಿ ಲೋಕಸಭೆ ಪ್ರತಿನಿಧಿಗಳ ಸಂಖ್ಯೆ ಕಡಿಮೆ ಆಗಬಹುದು ಎಂಬ ಆತಂಕವಿದೆ. ಇದಕ್ಕಾಗಿ ನಾವು ಸಮಾಜವಾದಿ ಸಮಾಗಮ ಹಾಗೂ ಅಧ್ಯಯನ ಕೇಂದ್ರದಿಂದ ಚರ್ಚೆ ಆಯೋಜನೆ ಮಾಡಿದ್ದೇವೆ. ಎಲ್ಲ ರಾಜ್ಯಗಳೂ ಒಪ್ಪುವ ಸೂತ್ರವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಬಿಹಾರ ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ. ಅಲ್ಲಿನ ಎಂಪಿಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಬಹುದು, ನಮ್ಮ ದಕ್ಷಿಣ ಭಾರತದ ಜನಸಂಖ್ಯೆ ಕಡಿಮೆ ಇರುವುದರಿಂದ ಎಂಪಿಗಳ ಸಂಖ್ಯೆ ಕಡಿಮೆ ಆಗಬಹುದು, ಇದರಿಂದ ಕೇಂದ್ರ ಸರ್ಕಾರ ದಕ್ಷಿಣ ಭಾರತದ ಕಡೆ ಅಸಡ್ಡೆಯಿಂದ ನೋಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಬೇಕಾಬಿಟ್ಟಿ ಕಾರ್ಯಕ್ರಮ ರೂಪಿಸಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧವನ್ನು ಹಾಳು ಮಾಡುತ್ತಿದೆ. ಮನರೇಗಾ ಯೋಜನೆ ಕೈ ಬಿಟ್ಟು ನೂತನವಾಗಿ ಜಾರಿಗೆ ತಂದಿರುವ ವಿಬಿಜಿ ರಾಮ್ ಜಿ ಕಾಯ್ದೆಗೆ ರಾಷ್ಟ್ರಪತಿಗಳು ಸಹಿ ಹಾಕಬಾರದು ಎಂದು ಹೇಳಿದರು.

ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡುತ್ತಿದೆ, ರಾಜ್ಯ ಸರ್ಕಾರಗಳ‌ ನೋವನ್ನು ಕೇಂದ್ರ ಸರ್ಕಾರ ಕೇಳುತ್ತಿಲ್ಲ. ತಾಳ್ಮೆಯಿಂದ ರಾಜ್ಯಗಳ ನೋವನ್ನು ಕೇಂದ್ರ ಕೇಳಬೇಕು. ಈ ಹಿಂದೆ ದಕ್ಷಿಣ ಭಾರತ ಬೇರೆಯಾಗಬೇಕು ಎಂಬ ಕೂಗಿತ್ತು, ಆದರೆ ಅದನ್ನು ‌ಮಾಡುವುದು ಸರಿಯಲ್ಲ. ಜನಸಂಖ್ಯೆ ವಿಚಾರವಾಗಿ ದಕ್ಷಿಣ ಭಾರತದಲ್ಲಿ ಜಾಗೃತಿ ಇದೆ. ಆದರೆ ಉತ್ತರ ಭಾರತದಲ್ಲಿ ಜಾಗೃತಿ ಇಲ್ಲ ಎಂದರು.

ಪ್ರಸ್ತುತ ಭಾರತದ ಜನಸಂಖ್ಯೆ ಎಷ್ಟು ?

ಪ್ರತೀ ಹತ್ತು ವರ್ಷಕೊಮ್ಮೆ ಭಾರತದಲ್ಲಿ ಜನಗಣತಿ ನಡೆಯುತ್ತಿದ್ದು 2011ರಲ್ಲಿ ಜನಗಣತಿಯಾಗಿತ್ತು. 2021 ರ ಜನಗಣತಿಗೆ ಕೊರೊನಾ ಮಹಾಮಾರಿ ಅಡ್ಡಿಯಾಗಿದ್ದರಿಂದ ಇದುವರೆಗೂ ಜನಗಣತಿ ನಡೆದಿಲ್ಲ. ವಿಶ್ವಸಂಸ್ಥೆ ಹಾಗೂ ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 2025ರ ಅಂತ್ಯಕ್ಕೆ 142 ಕೋಟಿ ತಲುಪಿದೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಉತ್ತರ ಭಾರತದ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್ ರಾಜ್ಯಗಳ ಜನಸಂಖ್ಯೆ ಸುಮಾರು 65 ಕೋಟಿ ಎಂದು ಅಂದಾಜಿಸಲಾಗಿದ್ದು, ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿಗಳಲ್ಲಿನ ಜನಸಂಖ್ಯೆ 30 ಕೋಟಿ ಎಂದು ಅಂದಾಜಿಸಲಾಗಿದೆ.

Read More
Next Story