ಕೊನೆಗೂ RAM G ಮಸೂದೆ ಅಂಗೀಕಾರ; ಪ್ರತಿಪಕ್ಷಗಳ ಉಗ್ರ ಪ್ರತಿಭಟನೆ
x
ಸಂಸತ್‌ ಚಳಿಗಾಲದ ಅಧಿವೇಶನ

ಕೊನೆಗೂ RAM G ಮಸೂದೆ ಅಂಗೀಕಾರ; ಪ್ರತಿಪಕ್ಷಗಳ ಉಗ್ರ ಪ್ರತಿಭಟನೆ

ಲೋಕಸಭೆಯಲ್ಲಿ ನಡೆದ ವಿಬಿ-ಜಿ ರಾಮ್ ಜಿ ಮಸೂದೆ 2025 ಮೇಲಿನ ಚರ್ಚೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಉತ್ತರಿಸಿದರು.


Click the Play button to hear this message in audio format

ಬಹುಚರ್ಚಿತ ವಿಕಸಿತ್‌ ಭಾರತ ಗ್ಯಾರಂಟಿ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ 2025 ಇಂದು ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ಅಂಗೀಕಾರಗೊಂಡಿದೆ. ಇದಕ್ಕೂ ಮುನ್ನ, ಲೋಕಸಭೆಯಲ್ಲಿ ನಡೆದ ವಿಬಿ-ಜಿ ರಾಮ್ ಜಿ ಮಸೂದೆ 2025 ಮೇಲಿನ ಚರ್ಚೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಉತ್ತರಿಸಿದರು. ಅವರ ಭಾಷಣ ಶುರುವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕರು ಸದನದ ಬಾವಿಗಿಳಿದು ಭಾರೀ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಯೋಜನೆಯ ಹೆಸರು ಬದಲಾವಣೆಯನ್ನು ಸಮರ್ಥಿಸಿಕೊಂಡ ಚೌಹಾಣ್‌, ಬಿಜೆಪಿ ಗಾಂಧೀಜಿ ತೋರಿದ ಹಾದಿಯಲ್ಲಿ ನಡೆಯುತ್ತಿದೆ. ಈ ಮಸೂದೆ ಅವರ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಈ ಮಸೂದೆ ಜಾರಿಗೊಳಿಸುತ್ತಿರುವ ಉದ್ದೇಶ ಹಳ್ಳಿಗಳ ಅಭಿವೃದ್ಧಿ ಎಂದರು.

ಗ್ರಾಮಗಳ ಅಭಿವೃದ್ಧಿಯು ಸರ್ಕಾರದ ಕೇಂದ್ರ ಕಾರ್ಯಸೂಚಿಯಾಗಿದ. ಅಲ್ಲದೇ ಹಲವು ವರ್ಷಗಳಲ್ಲಿ ಹಲವಾರು ಯೋಜನೆಗಳನ್ನು ಇದಕ್ಕಾಗಿಯೇ ರೂಪಿಸಲಾಗಿದೆ ಎಂದು ಚೌಹಾಣ್ ಹೇಳಿದರು. "MNREGA ಯೋಜನೆಯ ಹೆಸರಿನಲ್ಲಿ ಮೊದಲಿಗೆ ಮಹಾತ್ಮ ಗಾಂಧಿ ಹೆಸರು ಸೇರಿಸಿರಲಿಲ್ಲ. ಚುನಾವಣೆಗಳು ಮತ್ತು ಮತಬ್ಯಾಂಕ್ ಅನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ 2009 ರ ಚುನಾವಣೆಗೆ ಮುಂಚಿತವಾಗಿ ಮಹಾತ್ಮ ಗಾಂಧಿಯವರ ಹೆಸರನ್ನು ಸೇರಿಸಿದರು. ಯುಪಿಎ ತನ್ನ ಅವಧಿಯಲ್ಲಿ NREGA ಗೆ ಕೇವಲ 2.13 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದೆ, ಆದರೆ ಮೋದಿ ಸರ್ಕಾರ 2014 ರಿಂದ ಅದಕ್ಕಾಗಿ 8.53 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಯುಪಿಎ ದಿನಗಳಲ್ಲಿ NREGA ಹಗರಣ ಮತ್ತು ಭ್ರಷ್ಟಾಚಾರದಿಂದ ಕೂಡಿತ್ತು. ಆದರೆ ಮೋದಿ ಸರ್ಕಾರ ಅದನ್ನು ಭ್ರಷ್ಟಾಚಾರ ಮುಕ್ತಗೊಳಿಸಿತು.

ಪ್ರಿಯಾಂಕಾ ವಿರುದ್ಧ ವಾಗ್ದಾಳಿ

"ಪ್ರಿಯಾಂಕಾ ಗಾಂಧಿ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವ ಬಗ್ಗೆ ಮಾತನಾಡುತ್ತಿದ್ದರು. ಅವರು (ಪ್ರಿಯಾಂಕಾ ಅವರ ಕುಟುಂಬ) ಗಾಂಧಿಗಳಲ್ಲ, ಆದರೆ ಅವರು ಗಾಂಧಿಯವರ ಹೆಸರನ್ನು ಕದ್ದಿದ್ದಾರೆ. ಅವರಿಗೆ ಹೆಸರಿನ ಗೀಳು ಇದೆ ಮತ್ತು ಅದಕ್ಕಾಗಿಯೇ ಅವರು ಎಲ್ಲದಕ್ಕೂ ನೆಹರು, ಇಂದಿರಾ ಮತ್ತು ರಾಜೀವ್ ಅವರ ಹೆಸರಿಟ್ಟರು. ಮೋದಿ ಸರ್ಕಾರವು ಹೆಸರುಗಳ ಗೀಳನ್ನು ಹೊಂದಿಲ್ಲ. ಬದಲಾಗಿ ಕೆಲಸದ ಗೀಳನ್ನು ಹೊಂದಿದೆ," ಎಂದು ಚೌಹಾಣ್ ತಿರುಗೇಟು ಕೊಟ್ಟರು.

"ಕಾಂಗ್ರೆಸ್‌ ಎಂದಿಗೂ ಗಾಂಧಿಯನ್ನು ಅನುಸರಿಸಲಿಲ್ಲ; ನಾವು ಅನುಸರಿಸುತ್ತೇವೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸಬೇಕೆಂದು ಗಾಂಧಿ ಬಯಸಿದ್ದರು, ಆದರೆ ನೆಹರೂ ಅಧಿಕಾರದ ಆಸೆಗೆ ಅದಕ್ಕೆ ಒಪ್ಪಲಿಲ್ಲ. ಅವರು ಕಾಂಗ್ರೆಸ್ ಅನ್ನು ವಿಸರ್ಜಿಸಲು ನಿರಾಕರಿಸಿದ ದಿನವೇ ಬಾಪು ಅವರನ್ನು ಕಾಂಗ್ರೆಸಿಗರು ಕೊಂದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ದಿನವೇ ಗಾಂಧೀಜಿಯನ್ನು ಕೊಂದರು” ಎಂದು ಕಿಡಿಕಾರಿದರು.

ಭ್ರಷ್ಟಾಚರದ ಕೂಪವಾಗಿತ್ತು NREGA

ಇನ್ನು ಯುಪಿಎ ಆಡಳಿತಾವಧಿಯಲ್ಲಿ ನರೇಗಾ ಯೋಜನೆ ಭ್ರಷ್ಟಾಚಾರದ ಕೂಪವಾಗಿತ್ತು ಎಂದಿರುವ ಚೌಹಾಣ್‌, NREGA ಅಡಿಯಲ್ಲಿ ಹಣವನ್ನು ಶೇಕಡಾ 60 ರಷ್ಟು ವೇತನ ಮಸೂದೆಗೆ ಮತ್ತು ಶೇಕಡಾ 40 ರಷ್ಟು ಸಾಮಗ್ರಿಗಳಿಗೆ ಖರ್ಚು ಮಾಡಬೇಕಾಗಿತ್ತು ಎಂದು ಆರೋಪಿಸಿದರು. ರಾಜ್ಯಗಳ ನಡುವಿನ ನಿಧಿ ಹಂಚಿಕೆ ಅಸಮಾನವಾಗಿತ್ತು. ಅದನ್ನು ತರ್ಕಬದ್ಧಗೊಳಿಸಬೇಕಾಗಿತ್ತು. ಕಾಂಗ್ರೆಸ್ NREGA ಗೆ ಬಜೆಟ್ ಹಂಚಿಕೆಯನ್ನು 40,000 ಕೋಟಿ ರೂ.ಗಳಿಂದ 33,000 ಕೋಟಿ ರೂ.ಗಳಿಗೆ ಮೋದಿ ಸರ್ಕಾರವು NREGA ಗೆ 1.11 ಲಕ್ಷ ಕೋಟಿಗಳನ್ನು ನಿಗದಿಪಡಿಸಿದ್ದು ಇದು ಉದ್ಯೋಗ ಮರುಸೃಷ್ಟಿಗೆ ಸಹಾಯ ಮಾಡಿತ್ತು ಎಂದರು.

ಸಂಸತ್‌ ಹೊರಗೆ ಕಾಂಗ್ರೆಸ್‌ ಉಗ್ರ ಪ್ರತಿಭಟನೆ

ಇನ್ನು RAM G ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ಸದನದಲ್ಲಿ ಭಾರೀ ಕೋಲಾಹಲವೇ ಸೃಷ್ಟಿಯಾಗಿತ್ತು. ಸಂಸತ್‌ನ ಹೊರಗೂ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಭಾರೀ ಪ್ರತಿಭಟನೆಯೇ ನಡೆಯಿತು. ಗುರುವಾರ (ಡಿಸೆಂಬರ್ 18) ದೆಹಲಿಯ ಸಂಸತ್ ಭವನದ ಸಂಕೀರ್ಣದೊಳಗೆ ಹಲವಾರು ವಿರೋಧ ಪಕ್ಷದ ಸಂಸದರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಂಸತ್ತಿನ ಒಳಗೆ ಮತ್ತು ಬೀದಿಗಳಲ್ಲಿ ಸರ್ಕಾರದ ಕ್ರಮವನ್ನು ಪ್ರಶ್ನಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಜ್ಞೆ ಮಾಡಿದರು. ತಕ್ಷಣ ಮಸೂದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್‌ ನಾಯಕರು 'ಮಹಾತ್ಮ ಗಾಂಧಿ NREGA' ಎಂದು ಬರೆದ ದೊಡ್ಡ ಬ್ಯಾನರ್ ಹಿಡಿದು ಗಾಂಧಿ ಪ್ರತಿಮೆಯ ಬಳಿಯಿಂದ ಮಕರ ದ್ವಾರದವರೆಗೆ ಮೆರವಣಿಗೆ ನಡೆಸಿದರು. ಸರ್ಕಾರದ ಕ್ರಮಗಳನ್ನು ಖಂಡಿಸಿ ಘೋಷಣೆಗಳನ್ನು ಸಂಸದರು ಕೂಗಿದರು. ಪ್ರತಿಭಟನೆಯಲ್ಲಿ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಡಿಎಂಕೆಯ ಕೆ. ಕನ್ಹಿಮೋಳಿ, ಟಿ.ಆರ್. ಬಲ್ಲು, ಎ. ರಾಜಾ, ಐಯುಎಂಎಲ್‌ನ ಇ.ಟಿ. ಮೊಹಮ್ಮದ್ ಬಶೀರ್, ಶಿವಸೇನೆ (ಯುಬಿಟಿ)ಯ ಅರವಿಂದ್ ಸಾವಂತ್ ಮತ್ತು ಆರ್‌ಎಸ್‌ಪಿಯ ಎನ್‌ಕೆ ಪ್ರೇಮಚಂದ್ರನ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

Read More
Next Story