
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಯೋಜನಾ ಆಯೋಗ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು.
ಅನುದಾನ ಹಂಚಿಕೆ ತಾರತಮ್ಯ| ದಕ್ಷಿಣ ಭಾರತದ ರಾಜ್ಯಗಳು ಒಂದಾಗಿ ದನಿ ಎತ್ತಲಿ: ಬಿ.ಆರ್. ಪಾಟೀಲ್
ಕೇಂದ್ರ ಸರ್ಕಾರವು ಆಡಳಿತಕ್ಕೆ ಬರಲು ಏನಾಬೇಕಾದರು ಮಾಡಲಿದೆ. ಆಳಂದ ಕ್ಷೇತ್ರದಲ್ಲಿ ಆರು ಸಾವಿರ ಮತಗಳವು ಆಗಿದೆ. ಸೂಕ್ತ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಎಚ್ಚೆತ್ತು ಹಗರಣವನ್ನು ಬಯಲು ಮಾಡಿದರು ಎಂದು ಬಿ.ಆರ್. ಪಾಟೀಲ್ ತಿಳಿಸಿದರು.
ಕೇಂದ್ರ ಸರ್ಕಾರವು ಆಡಳಿತಕ್ಕೆ ಬರಲು ಏನಾಬೇಕಾದರೂ ಮಾಡಲಿದ್ದು, ಆಳಂದ ಕ್ಷೇತ್ರದಲ್ಲಿ ಆರು ಸಾವಿರ ಮತಗಳವು ಆಗಿವೆ. ಸೂಕ್ತ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಚ್ಚೆತ್ತು ಹಗರಣವನ್ನು ಬಯಲು ಮಾಡಿದರು. ದೇಶದ ಹಲವು ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಬಿಜೆಪಿ ಸಣ್ಣ ರಾಜಕೀಯ ಮಾಡುತ್ತಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ತಿಳಿಸಿದರು.
ಮಂಗಳವಾರ(ಜ.20) ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ದಕ್ಷಿಣ ಭಾರತ ಸಮಾಜವಾದಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, "ಮಾಧ್ಯಮಗಳು ಜನರ ದನಿಯಾಗಿ ಕೆಲಸ ಮಾಡದೆ ಉಳ್ಳವರ ದನಿಯಾಗಿವೆ. ಅನುದಾನ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತದೆ. ಪಾರದರ್ಶಕ ಅನುದಾನ ನೀಡುತ್ತಿಲ್ಲ. ಕರ್ನಾಟಕಕ್ಕೆ 3,750 ಕೋಟಿ ರೂ. ನೀಡಿದರೆ ಉತ್ತರಪ್ರದೇಶಕ್ಕೆ 18 ಸಾವಿರ ಕೋಟಿ ರೂ. ನೀಡಿದೆ. ಈ ತಾರತಮ್ಯದ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಒಂದಾಗಿ ದನಿ ಎತ್ತಬೇಕಾಗಿದೆ ಎಂದರು.
ಉತ್ತರ ಭಾರತದ ಎಂಪಿಗಳ ಸಂಖ್ಯೆ ಹೆಚ್ಚಳ
ಇತ್ತೀಚೆಗೆ(ಜ.16) ಕಾರ್ಯಕ್ರಮವೊಂದರಲ್ಲಿ ಜನಸಂಖ್ಯೆ ಕುರಿತು ಮಾತನಾಡಿದ್ದ ಬಿ.ಆರ್. ಪಾಟೀಲ್, ಮುಂಬರುವ ಜನಗಣತಿಯಲ್ಲಿ ಉತ್ತರ ಭಾರತದ ಜನಸಂಖ್ಯೆ ಅಧಿಕವಾಗಲಿದ್ದು, ದಕ್ಷಿಣ ಭಾರತದ ಜನಸಂಖ್ಯೆ ಕಡಿಮೆಯಾಗಲಿದೆ. ಇದರಿಂದ ನಮ್ಮನ್ನು ಪ್ರತಿನಿಧಿಸುವ ಸಂಸತ್ ಸದಸ್ಯರು ಕಡಿಮೆಯಾಗಲಿದ್ದು, ಜನಸಂಖ್ಯೆ ನಿಯಂತ್ರಣವೇ ನಮಗೆ ಮುಳುವಾಗಲಿದೆ. ಲೋಕಸಭೆ ಪ್ರತಿನಿಧಿಗಳ ಸಂಖ್ಯೆ ಉತ್ತರ ಭಾರತದಲ್ಲಿ ಜಾಸ್ತಿ ಆಗಬಹುದು, ದಕ್ಷಿಣ ಭಾರತದಲ್ಲಿ ಲೋಕಸಭೆ ಪ್ರತಿನಿಧಿಗಳ ಸಂಖ್ಯೆ ಕಡಿಮೆ ಆಗಬಹುದು ಎಂಬ ಆತಂಕವಿದೆ. ಇದಕ್ಕಾಗಿ ನಾವು ಸಮಾಜವಾದಿ ಸಮಾಗಮ ಹಾಗೂ ಅಧ್ಯಯನ ಕೇಂದ್ರದಿಂದ ಚರ್ಚೆ ಆಯೋಜನೆ ಮಾಡಿದ್ದೇವೆ. ಎಲ್ಲ ರಾಜ್ಯಗಳೂ ಒಪ್ಪುವ ಸೂತ್ರವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದರು.
ಕೇಂದ್ರ-ರಾಜ್ಯಗಳ ಸಂಬಂಧ ಹಾಳು
ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ. ಅಲ್ಲಿನ ಎಂಪಿಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಬಹುದು, ನಮ್ಮ ದಕ್ಷಿಣ ಭಾರತದ ಜನಸಂಖ್ಯೆ ಕಡಿಮೆ ಇರುವುದರಿಂದ ಎಂಪಿಗಳ ಸಂಖ್ಯೆ ಕಡಿಮೆ ಆಗಬಹುದು, ಇದರಿಂದ ಕೇಂದ್ರ ಸರ್ಕಾರ ದಕ್ಷಿಣ ಭಾರತದ ಕಡೆ ಅಸಡ್ಡೆಯಿಂದ ನೋಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದ ಅವರು, ಕೇಂದ್ರ ಸರ್ಕಾರ ಬೇಕಾಬಿಟ್ಟಿ ಕಾರ್ಯಕ್ರಮ ರೂಪಿಸಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧವನ್ನು ಹಾಳು ಮಾಡುತ್ತಿದೆ. ಮನರೇಗಾ ಯೋಜನೆ ಕೈ ಬಿಟ್ಟು ನೂತನವಾಗಿ ಜಾರಿಗೆ ತಂದಿರುವ ವಿಬಿಜಿ ರಾಮ್ ಜಿ ಕಾಯ್ದೆಗೆ ರಾಷ್ಟ್ರಪತಿಗಳು ಸಹಿ ಹಾಕಬಾರದು ಎಂದು ಹೇಳಿದ್ದರು.
ರಾಜ್ಯಗಳ ಮೇಲೆ ಕೇಂದ್ರ ಸವಾರಿ
ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡುತ್ತಿದೆ, ರಾಜ್ಯ ಸರ್ಕಾರಗಳ ನೋವನ್ನು ಕೇಂದ್ರ ಸರ್ಕಾರ ಕೇಳುತ್ತಿಲ್ಲ. ತಾಳ್ಮೆಯಿಂದ ರಾಜ್ಯಗಳ ನೋವನ್ನು ಕೇಂದ್ರ ಕೇಳಬೇಕು. ಈ ಹಿಂದೆ ದಕ್ಷಿಣ ಭಾರತ ಬೇರೆಯಾಗಬೇಕು ಎಂಬ ಕೂಗಿತ್ತು, ಆದರೆ ಅದನ್ನು ಮಾಡುವುದು ಸರಿಯಲ್ಲ. ಜನಸಂಖ್ಯೆ ವಿಚಾರವಾಗಿ ದಕ್ಷಿಣ ಭಾರತದಲ್ಲಿ ಜಾಗೃತಿ ಇದೆ. ಆದರೆ ಉತ್ತರ ಭಾರತದಲ್ಲಿ ಜಾಗೃತಿ ಇಲ್ಲ ಎಂದಿದ್ದರು.

