
ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್
ಐಪಿಎಲ್ 2026: ಕಾಲ್ತುಳಿತ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಪಂದ್ಯ: ಆರ್‌ಸಿಬಿ ನಕಾರ?
ಪಂದ್ಯಗಳು ಸುಗಮವಾಗಿ ನಡೆಯಲು ಆರ್‌ಸಿಬಿ ಆಡಳಿತ ಮಂಡಳಿಯು ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ ಮಾತುಕತೆ ನಡೆಸಬೇಕು. ಇಲ್ಲಿಯವರೆಗೆ ಕೇವಲ ನಾವು ಮಾತ್ರ ಪ್ರಯತ್ನಿಸುತ್ತಿದ್ದೇವೆ ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದರು.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬರುವ ಐಪಿಎಲ್ 2026ರ ಪಂದ್ಯಗಳನ್ನು ಆಯೋಜಿಸುವ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮಹತ್ವದ ಹೇಳಿಕೆ ನೀಡಿದೆ.
"ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡುವುದು ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಿರ್ಧಾರಕ್ಕೆ ಬಿಟ್ಟಿದ್ದು, ಚೆಂಡು ಈಗ ಅವರ ಅಂಗಳದಲ್ಲಿದೆ" ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ (ಜ.21) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತವರಿನ ಪಂದ್ಯಗಳನ್ನು ಆಡುವ ಸಂಬಂಧ ಆರ್‌ಸಿಬಿ ನೇರವಾಗಿ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕಿದೆ ಎಂದು ತಿಳಿಸಿದರು.
ಹಿನ್ನೆಲೆ ಏನು?
ಕಳೆದ ವರ್ಷ (2025) ಆರ್‌ಸಿಬಿ ತಂಡದ ಐಪಿಎಲ್ ಗೆಲುವಿನ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದರು. ಈ ದಾರುಣ ಘಟನೆಯ ನಂತರ, ಕ್ರೀಡಾಂಗಣದಲ್ಲಿ ಐಪಿಎಲ್ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳನ್ನು ನಡೆಸದಂತೆ ನಿಷೇಧ ಹೇರಲಾಗಿತ್ತು. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರವು ಕೆಲವು ಷರತ್ತುಗಳೊಂದಿಗೆ ಪಂದ್ಯಗಳನ್ನು ನಡೆಸಲು ಮರುಅನುಮತಿ ನೀಡಿದೆ.
"ಪಂದ್ಯಗಳು ಸುಗಮವಾಗಿ ನಡೆಯಲು ಆರ್‌ಸಿಬಿ ಆಡಳಿತ ಮಂಡಳಿಯು ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ ಮಾತುಕತೆ ನಡೆಸಬೇಕು. ಇಲ್ಲಿಯವರೆಗೆ ಕೇವಲ ನಾವು ಮಾತ್ರ ಪ್ರಯತ್ನಿಸುತ್ತಿದ್ದೇವೆ (ಒನ್-ಸೈಡೆಡ್ ಆಗಿದೆ). ಆರ್‌ಸಿಬಿ ಕೂಡ ಇದರಲ್ಲಿ ತೊಡಗಿಸಿಕೊಳ್ಳಬೇಕು" ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ಬೆಂಗಳೂರಿನಿಂದ ಪಂದ್ಯಗಳನ್ನು ಸ್ಥಳಾಂತರಿಸುವ ಬದಲು, ಇಲ್ಲೇ ಬಂದು ಆಡುವುದು ಅವರ ಜವಾಬ್ದಾರಿ. ಬೆಂಗಳೂರಿನ ಅಭಿಮಾನಿಗಳ ಬೆಂಬಲದಿಂದಲೇ ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ" ಎಂದು ಅವರು ಆರ್ಸಿಬಿಗೆ ಕಿವಿಮಾತು ಹೇಳಿದರು.
ಸರ್ಕಾರ ಸೂಚಿಸಿರುವ ಸುರಕ್ಷತಾ ಬದಲಾವಣೆಗಳನ್ನು ಕ್ರೀಡಾಂಗಣದಲ್ಲಿ ಮಾಡಲಾಗುತ್ತಿದೆ. ಫೆಬ್ರವರಿ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸರ್ಕಾರದಿಂದ 'ಷರತ್ತು ರಹಿತ' ಅನುಮತಿ ಪತ್ರ ಸಿಗುವ ವಿಶ್ವಾಸವಿದೆ ಎಂದು ಪ್ರಸಾದ್ ತಿಳಿಸಿದರು.
ಆರ್‌ಸಿಬಿ ತನ್ನ ಉದ್ಘಾಟನಾ ಪಂದ್ಯ ಸೇರಿದಂತೆ ಎಲ್ಲಾ ತವರಿನ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಲಿದೆ ಎಂದು ನಾವು ಆಶಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ ಎಂದು ಅವರು ಹೇಳಿದ್ದಾರೆ.

