ಚಿನ್ನಸ್ವಾಮಿಯಲ್ಲಿಯೇ ನಡೆಯಲಿದೆ ಐಪಿಎಲ್; ಅಂತಾರಾಷ್ಟ್ರೀಯ ಪಂದ್ಯಗಳಿಗೆ ಗೃಹ ಇಲಾಖೆ ಗ್ರೀನ್ ಸಿಗ್ನಲ್
x

ಚಿನ್ನಸ್ವಾಮಿಯಲ್ಲಿಯೇ ನಡೆಯಲಿದೆ ಐಪಿಎಲ್; ಅಂತಾರಾಷ್ಟ್ರೀಯ ಪಂದ್ಯಗಳಿಗೆ ಗೃಹ ಇಲಾಖೆ ಗ್ರೀನ್ ಸಿಗ್ನಲ್

ಸರ್ಕಾರ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳು ವಿಧಿಸಿರುವ ನಿಗದಿತ ನಿಯಮಗಳು ಹಾಗೂ ಷರತ್ತುಗಳನ್ನು ಪೂರೈಸುವ ಷರತ್ತಿಗೆ ಒಳಪಟ್ಟು ಈ ಅನುಮತಿಯನ್ನು ನೀಡಲಾಗಿದೆ . ಅದರ ವಿವರಗಳು ಇಲ್ಲಿವೆ.


Click the Play button to hear this message in audio format

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಬೆಂಗಳೂರಿನ ಪ್ರತಿಷ್ಠಿತ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಐಪಿಎಲ್ ಪಂದ್ಯಾವಳಿಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ರಾಜ್ಯ ಸರ್ಕಾರದ ಗೃಹ ಇಲಾಖೆ ಅಧಿಕೃತವಾಗಿ ಅನುಮತಿ ನೀಡಿದೆ.

ಸರ್ಕಾರ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳು ವಿಧಿಸಿರುವ ನಿಗದಿತ ನಿಯಮಗಳು ಹಾಗೂ ಷರತ್ತುಗಳನ್ನು ಪೂರೈಸುವ ಷರತ್ತಿಗೆ ಒಳಪಟ್ಟು ಈ ಅನುಮತಿಯನ್ನು ನೀಡಲಾಗಿದೆ ಎಂದು ಕೆಎಸ್‌ಸಿಎ ಅಧಿಕೃತ ವಕ್ತಾರರಾದ ವಿನಯ್ ಮೃತ್ಯುಂಜಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರ ವಿಧಿಸಿರುವ ಎಲ್ಲ ಷರತ್ತುಗಳನ್ನು ಪೂರೈಸುವ ಸಂಪೂರ್ಣ ವಿಶ್ವಾಸವನ್ನು ಕೆಎಸ್‌ಸಿಎ ವ್ಯಕ್ತಪಡಿಸಿದೆ. ಕ್ರೀಡಾಂಗಣದ ಸುರಕ್ಷತೆ, ಭದ್ರತೆ ಮತ್ತು ಜನಸಂದಣಿ ನಿರ್ವಹಣೆಗೆ ಸಂಬಂಧಿಸಿದಂತೆ ತಜ್ಞರ ಪರಿಶೀಲನಾ ಸಮಿತಿಯ ಮುಂದೆ ಸಂಸ್ಥೆಯು ಈಗಾಗಲೇ ಸಮಗ್ರವಾದ ಅನುಸರಣಾ ಮಾರ್ಗಸೂಚಿಯನ್ನು ಮಂಡಿಸಿದೆ. ಸುರಕ್ಷತಾ ಕ್ರಮಗಳನ್ನು ಅಕ್ಷರಶಃ ಜಾರಿಗೆ ತರಲು ಸಂಸ್ಥೆ ಸಂಪೂರ್ಣ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.

ಶೀಘ್ರದಲ್ಲೇ ಅಧ್ಯಕ್ಷರಿಂದ ಸುದ್ದಿಗೋಷ್ಠಿ

ಈ ಮಹತ್ವದ ಬೆಳವಣಿಗೆಯ ಕುರಿತು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಶೀಘ್ರದಲ್ಲೇ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ. ರಾಜ್ಯ ಸರ್ಕಾರ, ತಜ್ಞರ ಸಮಿತಿ ಹಾಗೂ ಸಹಕರಿಸಿದ ಎಲ್ಲ ಸರ್ಕಾರಿ ಏಜೆನ್ಸಿಗಳಿಗೆ ಧನ್ಯವಾದ ಅರ್ಪಿಸಲು ಹಾಗೂ ಪಂದ್ಯಾವಳಿ ಆಯೋಜನೆಯ ಮುಂದಿನ ರೂಪರೇಷೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಳ್ಳಲು ಅವರು ಉದ್ದೇಶಿಸಿದ್ದಾರೆ.

ಸುದ್ದಿಗೋಷ್ಠಿಯ ದಿನಾಂಕ ಮತ್ತು ಸಮಯವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

ಸಂಭ್ರಮದ ನಡುವೆ ಸಂಭವಿಸಿದ ಶೋಕ

2025ರ ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಚಾಂಪಿಯನ್ ಪಟ್ಟಕ್ಕೇರಿದ ಸಂಭ್ರಮದಲ್ಲಿ ಸುಮಾರು 3 ಲಕ್ಷ ಅಭಿಮಾನಿಗಳು ಕ್ರೀಡಾಂಗಣದ ಬಳಿ ಜಮಾಯಿಸಿದ್ದರು. ಈ ವೇಳೆ ಕ್ರೀಡಾಂಗಣದ ಹೊರಭಾಗದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 11 ಅಮಾಯಕರು ಬಲಿಯಾಗಿದ್ದರು ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಯು ಕ್ರೀಡಾ ವಲಯದ ಭದ್ರತಾ ನಿರ್ವಹಣೆ ಮತ್ತು ಸರ್ಕಾರದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ರಂತದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿ, ಭದ್ರತಾ ಲೋಪದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಠಾಣೆಯ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು. ಘಟನೆಯ ಸಮಗ್ರ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಯಿತು. ಆರ್‌ಸಿಬಿ ಮ್ಯಾನೇಜ್‌ಮೆಂಟ್, ಕೆಎಸ್‌ಸಿಎ ಮತ್ತು ಭದ್ರತಾ ಸಂಸ್ಥೆಗಳ ನಡುವಿನ ಸಮನ್ವಯದ ಕೊರತೆಯೇ ಈ ದುರಂತಕ್ಕೆ ಮೂಲ ಕಾರಣ ಎಂದು ತನಿಖಾ ವರದಿ ಬೊಟ್ಟು ಮಾಡಿತ್ತು.

ಆಯೋಗದ ವರದಿ ಮತ್ತು ಆಡಳಿತಾತ್ಮಕ ಬದಲಾವಣೆ

ನ್ಯಾಯಮೂರ್ತಿ ಕುಣ್ಣಾ ಆಯೋಗವು ತನ್ನ ವರದಿಯಲ್ಲಿ ಕ್ರೀಡಾಂಗಣದ ವಿನ್ಯಾಸದಲ್ಲಿದ್ದ ಗಂಭೀರ ಲೋಪಗಳನ್ನು ಎತ್ತಿ ತೋರಿಸಿತ್ತು. ತುರ್ತು ನಿರ್ಗಮನ ದ್ವಾರಗಳ ಕೊರತೆ, ಅವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆ ಮತ್ತು ಪರಿಣಾಮಕಾರಿ ತುರ್ತು ತೆರವು ಯೋಜನೆ ಇಲ್ಲದಿರುವುದನ್ನು ವರದಿ ಕಟುವಾಗಿ ಟೀಕಿಸಿತು. ಈ ಪಾಠದಿಂದ ಎಚ್ಚೆತ್ತ ಕೆಎಸ್‌ಸಿಎ, ತನ್ನ ಆಡಳಿತ ಮಂಡಳಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿತು. ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಕ್ರೀಡಾಂಗಣದ ಸುರಕ್ಷತಾ ವಿನ್ಯಾಸವನ್ನು ಸಂಪೂರ್ಣವಾಗಿ ಪುನರ್ ರೂಪಿಸುವ ಯೋಜನೆಗೆ ಚಾಲನೆ ನೀಡಲಾಯಿತು.

ರಾಜ್ಯಕ್ಕೆ ನಷ್ಟ

ಸುರಕ್ಷತೆಯ ಕಾರಣ ನೀಡಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ರಮುಖ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ದುಲೀಪ್ ಟ್ರೋಫಿ, ದಕ್ಷಿಣ ಆಫ್ರಿಕಾ ‘ಎ’ ಸರಣಿ ಹಾಗೂ ಪ್ರತಿಷ್ಠಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯಗಳು ಕೈತಪ್ಪಿ ಹೋದದ್ದು ರಾಜ್ಯದ ಕ್ರೀಡಾ ಆರ್ಥಿಕತೆ ಮತ್ತು ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ನೀಡಿತ್ತು. ಬೆಂಗಳೂರು ತನ್ನ ಅಂತರರಾಷ್ಟ್ರೀಯ ಪಂದ್ಯ ಕೇಂದ್ರದ ಸ್ಥಾನಮಾನವನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳುವಂತಾಗಿತ್ತು.

17 ಷರತ್ತುಗಳಡಿ 'ಸ್ಮಾರ್ಟ್ ಸ್ಟೇಡಿಯಂ' ಮರುಜನ್ಮ

ಸರ್ಕಾರಿ ಪರಿಶೀಲನಾ ಸಮಿತಿಯ ಶಿಫಾರಸಿನಂತೆ 17 ಹೊಸ ಕಟ್ಟುನಿಟ್ಟಿನ ಷರತ್ತುಗಳ ಅಡಿಯಲ್ಲಿ ಈಗ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲಾಗಿದೆ. ಕೆಎಸ್‌ಸಿಎ ಕೈಗೊಂಡಿರುವ ಹೊಸ ಯೋಜನೆಯಡಿ ಕ್ರೀಡಾಂಗಣವು ಈಗ "ಸ್ಮಾರ್ಟ್ ಸ್ಟೇಡಿಯಂ" ಆಗಿ ರೂಪಾಂತರಗೊಳ್ಳುತ್ತಿದೆ. ಇದರಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಜನಸಂದಣಿ ನಿಯಂತ್ರಣ ವ್ಯವಸ್ಥೆ, ಅತ್ಯಾಧುನಿಕ ಸಿಸಿಟಿವಿ ತಂತ್ರಜ್ಞಾನ ಮತ್ತು ಸುಧಾರಿತ ತುರ್ತು ನಿರ್ಗಮನ ಮಾರ್ಗಗಳನ್ನು ಅಳವಡಿಸಲಾಗಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ನೀಡಲು ಕೆಎಸ್‌ಸಿಎ ಮುಂದಿನ ವಾರ ವಿಶೇಷ ಸುದ್ದಿಗೋಷ್ಠಿ ಹಮ್ಮಿಕೊಂಡಿದೆ.

Read More
Next Story