ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತಕ್ಕೆ ಪೈಲಟ್‌ ಇಂಧನದ ಸ್ವಿಚ್ ಆಫ್ ಮಾಡಿದ್ದು ಕಾರಣವೇ?
x

ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತಕ್ಕೆ ಪೈಲಟ್‌ ಇಂಧನದ ಸ್ವಿಚ್ ಆಫ್' ಮಾಡಿದ್ದು ಕಾರಣವೇ?

ಎಎಐಬಿ ವರದಿಯ ಅತ್ಯಂತ ನಿರ್ಣಾಯಕ ಅಂಶವೆಂದರೆ, ವಿಮಾನವು ನೆಲದಿಂದ ಮೇಲಕ್ಕೆ ಏರಿದ ಕೆಲವೇ ಸೆಕೆಂಡುಗಳಲ್ಲಿ ಎರಡೂ ಇಂಜಿನ್‌ಗಳ ಇಂಧನ ನಿಯಂತ್ರಣ ಸ್ವಿಚ್‌ಗಳು 'ರನ್' ಸ್ಥಿತಿಯಿಂದ 'ಕಟ್‌ಆಫ್' ಸ್ಥಿತಿಗೆ ಕೇವಲ ಒಂದು ಸೆಕೆಂಡ್‌ನ ಅಂತರದಲ್ಲಿ ಬದಲಾಗಿವೆ.


ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತಕ್ಕೆ ಪೈಲಟ್‌ಗಳಲ್ಲಿ ಒಬ್ಬರು ಇಂಧನ ಸ್ವಿಚ್‌ಗಳನ್ನು ಆಫ್ ಮಾಡಿದ್ದು ಒಂದು ಪ್ರಮುಖ ಕಾರಣವೆಂದು ಪ್ರಾಥಮಿಕ ತನಿಖಾ ವರದಿಯು ಶಂಕಿಸಿದೆ. ಆದರೆ, ಈ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಮತ್ತು ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ನಡುವಿನ ಸಂಭಾಷಣೆಯು (ಒಬ್ಬರು. ಇಂಧನವನ್ನು ಏಕೆ ಕಡಿತಗೊಳಿಸಿದಿರಿ?" ಎಂದು ಕೇಳಿರುವುದು, ಇನ್ನೊಬ್ಬರು "ನಾನು ಮಾಡಿಲ್ಲ" ಎಂದು ಉತ್ತರಿಸಿದ್ದು) ಈ ಅನುಮಾನಕ್ಕೆ ಕಾರಣವಾಗಿದೆ.

ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI 171 (ಬೋಯಿಂಗ್ 787-8 ಡ್ರೀಮ್‌ಲೈನರ್ VT-ANB) ದುರಂತವು ಟೇಕ್‌ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ದುರಂತಕ್ಕೆ ಈಡಾಗಿತ್ತು. . ವಿಮಾನ ದುರಂತ ತನಿಖಾ ಬ್ಯೂರೋ (AAIB) ಪ್ರಕಟಿಸಿದ ಪ್ರಾಥಮಿಕ ವರದಿಯ ಪ್ರಕಾರ, ಇದು ಕಳೆದ ನಾಲ್ಕು ದಶಕಗಳಲ್ಲಿ ಭಾರತೀಯ ವಿಮಾನಯಾನ ಇತಿಹಾಸದಲ್ಲಿ ಅತ್ಯಂತ ಭೀಕರ ಘಟನೆಗಳಲ್ಲಿ ಒಂದಾಗಿದೆ. ಈ ಘಟನೆಯಲ್ಲಿ ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಮತ್ತು ನೆಲದ ಮೇಲಿದ್ದ 19 ಜನರು ಸೇರಿ ಒಟ್ಟು 260 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಇಂಧನ ಸ್ವಿಚ್‌ಗಳ ಸ್ಥಿತಿ ಬಗ್ಗೆ ಪೈಲಟ್‌ಗಳ ಸಂಭಾಷಣೆ

ಎಎಐಬಿ ವರದಿಯ ಅತ್ಯಂತ ನಿರ್ಣಾಯಕ ಅಂಶವೆಂದರೆ, ವಿಮಾನವು ನೆಲದಿಂದ ಮೇಲಕ್ಕೆ ಏರಿದ ಕೆಲವೇ ಸೆಕೆಂಡುಗಳಲ್ಲಿ ಎರಡೂ ಇಂಜಿನ್‌ಗಳ ಇಂಧನ ನಿಯಂತ್ರಣ ಸ್ವಿಚ್‌ಗಳು 'ರನ್' ಸ್ಥಿತಿಯಿಂದ 'ಕಟ್‌ಆಫ್' ಸ್ಥಿತಿಗೆ ಕೇವಲ ಒಂದು ಸೆಕೆಂಡ್‌ನ ಅಂತರದಲ್ಲಿ ಬದಲಾಗಿವೆ. ಇದೇ ಘಟನೆ ವಿಮಾನ ಪತನಕ್ಕೆ ಪ್ರಾಥಮಿಕ ಕಾರಣವಾಗಿರಬಹುದು ಎಂದು ತನಿಖಾ ಸಂಸ್ಥೆ ಶಂಕಿಸಿದೆ.

ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ನಿಂದ ಲಭ್ಯವಾದ ಮಾಹಿತಿಯು ಮತ್ತೊಂದು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್‌ಗೆ "ಇಂಧನವನ್ನು ಏಕೆ ಕಡಿತಗೊಳಿಸಿದಿರಿ?" ಎಂದು ಕೇಳಿದಾಗ, ಇನ್ನೊಬ್ಬ ಪೈಲಟ್ ಆಘಾತದಿಂದ "ನಾನು ಮಾಡಿಲ್ಲ" ಎಂದು ಉತ್ತರಿಸಿದ್ದಾರೆ. ಇದು ಇಂಧನ ಸ್ವಿಚ್‌ಗಳನ್ನು ಉದ್ದೇಶಪೂರ್ವಕವಾಗಿ ಆಫ್ ಮಾಡಲಾಗಿದೆಯೇ ಅಥವಾ ಬೇರೆ ಯಾವುದೇ ತಾಂತ್ರಿಕ ದೋಷ ಇದಕ್ಕೆ ಕಾರಣವೇ ಎಂಬ ಕುರಿತು ದೊಡ್ಡ ಗೊಂದಲವನ್ನು ಸೃಷ್ಟಿಸಿದೆ.

ವಿಮಾನಯಾನ ತಜ್ಞರ ಪ್ರಕಾರ, ಇಂಧನ ನಿಯಂತ್ರಣ ಸ್ವಿಚ್‌ಗಳು ಉದ್ದೇಶಪೂರ್ವಕವಾಗಿ ಇಲ್ಲದೆ ಚಲಿಸುವುದು ಅಸಾಧ್ಯ, ಏಕೆಂದರೆ ಈ ಸ್ವಿಚ್‌ಗಳಿಗೆ ಎರಡೂ ಬದಿಗಳಲ್ಲಿ ಬ್ರಾಕೆಟ್‌ಗಳು ಮತ್ತು ಸ್ಟಾಪ್ ಲಾಕ್ ಇದ್ದು, ಸ್ವಿಚ್ ಚಲಿಸಲು ಅದನ್ನು ಎತ್ತಬೇಕಾಗುತ್ತದೆ.

ದುರಂತಕ್ಕೀಡಾದ ವಿಮಾನದಲ್ಲಿ ಸಹಪೈಲಟ್ ಕ್ಲೈವ್ ಕುಂದಾರ್ 'ಪೈಲಟ್ ಫ್ಲೈಯಿಂಗ್' ಆಗಿದ್ದರೆ, ಪೈಲಟ್-ಇನ್-ಕಮಾಂಡ್ ಸುಮೀತ್ ಸಭರ್ವಾಲ್ 'ಪೈಲಟ್ ಮಾನಿಟರಿಂಗ್' ಆಗಿದ್ದರು. ಇಬ್ಬರೂ ಪೈಲಟ್‌ಗಳಿಗೆ ಸಾಕಷ್ಟು ಅನುಭವ ಮತ್ತು ವಿಶ್ರಾಂತಿ ಲಭಿಸಿತ್ತು. ಇಂಧನ ಸ್ವಿಚ್‌ಗಳು 'ಕಟ್‌ಆಫ್' ಸ್ಥಿತಿಯಲ್ಲಿದ್ದ ಕೆಲವೇ ಸೆಕೆಂಡುಗಳ ನಂತರ, ಇಂಜಿನ್‌ಗಳನ್ನು ಪುನರಾರಂಭಿಸಲು ಎರಡೂ ಸ್ವಿಚ್‌ಗಳನ್ನು ಮತ್ತೆ 'ರನ್' ಸ್ಥಿತಿಗೆ ಮರಳಿಸುವ ಪ್ರಯತ್ನ ನಡೆಸಲಾಗಿದೆ. ಆದರೆ, ವಿಮಾನವು ಟೇಕ್‌ಆಫ್ ಆದಾಗಿನಿಂದ ದುರಂತಕ್ಕೀಡಾಗುವವರೆಗೆ ಕೇವಲ 30 ಸೆಕೆಂಡುಗಳಷ್ಟು ಕಡಿಮೆ ಅಂತರದಲ್ಲಿದ್ದ ಕಾರಣ, ಇಂಜಿನ್‌ಗಳು ಸುರಕ್ಷಿತ ಮಟ್ಟಕ್ಕೆ ಥ್ರಸ್ಟ್ ಅನ್ನು ಮರಳಿ ಪಡೆಯಲು ಸಮಯ ಸಿಗಲಿಲ್ಲ.

ಇದು ಪ್ರಾಥಮಿಕ ವರದಿಯಾಗಿದ್ದು, ತನಿಖೆಯು ಇನ್ನೂ ಆರಂಭಿಕ ಹಂತದಲ್ಲಿದೆ. ಎಎಐಬಿ ಇನ್ನೂ ಕೆಲವೇ ತಿಂಗಳಲ್ಲಿ ಅಂತಿಮ ವರದಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. 2018ರಲ್ಲಿ FAA (ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್) ಇಂಧನ ನಿಯಂತ್ರಣ ಸ್ವಿಚ್ ಲಾಕಿಂಗ್ ಫೀಚರ್​ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಏರ್ ಇಂಡಿಯಾದಲ್ಲಿ ಇದಕ್ಕೆ ಕಡ್ಡಾಯ ತಪಾಸಣೆ ನಡೆದಿರಲಿಲ್ಲ ಎಂಬ ಅಂಶವೂ ವರದಿಯಲ್ಲಿ ಉಲ್ಲೇಖವಾಗಿದೆ. ದುರಂತಕ್ಕೆ ನಿಜವಾದ ಕಾರಣ ಏನು, ಮತ್ತು ಇಂಧನ ಸ್ವಿಚ್‌ಗಳನ್ನು ಯಾರು ಚಲಿಸಿದರು ಎಂಬುದು ಅಂತಿಮ ತನಿಖೆಯಿಂದಷ್ಟೇ ಸ್ಪಷ್ಟವಾಗಲಿದೆ.

Read More
Next Story