
ಏರ್ ಇಂಡಿಯಾ ವಿಮಾನ ದುರಂತ: ಪ್ರಾಥಮಿಕ ವರದಿಯಲ್ಲಿ ಏನೆಲ್ಲ ವಿವರಗಳಿವೆ?
ವಿಮಾನದಲ್ಲಿ 54,200 ಕೆ.ಜಿ ಇಂಧನವಿತ್ತು ಮತ್ತು ಟೇಕ್‌ಆಫ್ ಸಮಯದಲ್ಲಿ 2,13,401 ಕೆ.ಜಿ ತೂಕವಿತ್ತು. ಇದು ಅನುಮತಿಸಲಾದ ತೂಕದ ಮಿತಿಯೊಳಗಿತ್ತು.
ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೊರಟಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನ (AI 171) ದುರಂತದ ಕುರಿತು ವಿಮಾನ ದುರಂತ ತನಿಖಾ ಬ್ಯೂರೋ (AAIB) ತನ್ನ ಪ್ರಾಥಮಿಕ ವರದಿಯನ್ನು ಪ್ರಕಟಿಸಿದೆ. ವಿಮಾನ ಟೇಕ್‌ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಲಯಕ್ಕೆ ಅಪ್ಪಳಿಸಿ, ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರೂ ಮೃತಪಟ್ಟಿದ್ದರು.
15 ಪುಟಗಳ ವರದಿಯು ದುರಂತದ ಬಗ್ಗೆ ಹತ್ತು ಪ್ರಮುಖ ಅಂಶಗಳನ್ನು ಗುರುತಿಸಿದೆ
1. ದುರಂತಕ್ಕೀಡಾದ ವಿಮಾನದಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿ ಒಟ್ಟು 242 ಜನರಿದ್ದರು. ಇವರಲ್ಲಿ 15 ಮಂದಿ ಬಿಸಿನೆಸ್ ಕ್ಲಾಸ್‌ನಲ್ಲಿ, ಉಳಿದ 215 ಮಂದಿ (ಎರಡು ಶಿಶುಗಳೂ ಸೇರಿದಂತೆ) ಇಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದರು.
2. ವಿಮಾನದಲ್ಲಿ 54,200 ಕೆ.ಜಿ ಇಂಧನವಿತ್ತು ಮತ್ತು ಟೇಕ್‌ಆಫ್ ಸಮಯದಲ್ಲಿ 2,13,401 ಕೆ.ಜಿ ತೂಕವಿತ್ತು. ಇದು ಅನುಮತಿಸಲಾದ ತೂಕದ ಮಿತಿಯೊಳಗಿತ್ತು. ವಿಮಾನದಲ್ಲಿ ಯಾವುದೇ 'ಅಪಾಯಕಾರಿ ವಸ್ತುಗಳು' ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.
3. ವಿಮಾನವು 08:08:39 UTC (ಭಾರತೀಯ ಕಾಲಮಾನ 13.08.39) ಕ್ಕೆ ಟೇಕ್‌ಆಫ್ ಆಗಿದ್ದು, ಟೇಕ್‌ಆಫ್ ಆದ ತಕ್ಷಣ, ಎಂಜಿನ್ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ಗಳನ್ನು ಒಂದು ಸೆಕೆಂಡ್ ಅಂತರದಲ್ಲಿ ಆಫ್ ಮಾಡಲಾಗಿತ್ತು. ನಂತರ ಈ ಸ್ವಿಚ್‌ಗಳನ್ನು ಪುನಃ ಆನ್ ಮಾಡಲಾಗಿತ್ತು.
4. 08:09:05 UTC (ಭಾರತೀಯ ಕಾಲಮಾನ 13:09:05) ಸಮಯದಲ್ಲಿ, ಪೈಲಟ್‌ಗಳಲ್ಲಿ ಒಬ್ಬರು 'ಮೇಡೇ ಮೇಡೇ ಮೇಡೇ' ಎಂದು ರೇಡಿಯೋ ಸಂದೇಶ ಕಳುಹಿಸಿದ್ದರು. ಏರ್ ಟ್ರಾಫಿಕ್ ಕಂಟ್ರೋಲರ್ ಕರೆ ಸೈನ್ ಕೇಳಿದಾಗ ಯಾವುದೇ ಪ್ರತಿಕ್ರಿಯೆ ಲಭ್ಯವಾಗದೆ, ವಿಮಾನವು ವಿಮಾನ ನಿಲ್ದಾಣದ ಹೊರಗಡೆ ದುರಂತಕ್ಕೀಡಾಯಿತು.
5. ದುರಂತ ಸ್ಥಳದ ಡ್ರೋನ್ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿ ಸೇರಿದಂತೆ ಭಗ್ನಾವಶೇಷ ಸಂಗ್ರಹ ಚಟುವಟಿಕೆಗಳು ಪೂರ್ಣಗೊಂಡಿವೆ. ಎಲ್ಲ ಭಗ್ನಾವಶೇಷಗಳನ್ನು ವಿಮಾನ ನಿಲ್ದಾಣದ ಸಮೀಪದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
6. ವಿಮಾನದ ಎರಡೂ ಎಂಜಿನ್ಗಳು ಪಡೆಯಲಾಗಿದೆ.
7. ವಿಮಾನಕ್ಕೆ ಇಂಧನ ತುಂಬಿಸಿದ ಬೌಸರ್‌ಗಳು ಮತ್ತು ಟ್ಯಾಂಕ್‌ಗಳಿಂದ ಸಂಗ್ರಹಿಸಿದ ಇಂಧನ ಮಾದರಿಗಳನ್ನು DGCA ಲ್ಯಾಬ್‌ನಲ್ಲಿ ಪರೀಕ್ಷಿಸಲಾಗಿದ್ದು, ಅವು ತೃಪ್ತಿಕರವಾಗಿವೆ.
8. ತನಿಖೆಯ ಈ ಹಂತದಲ್ಲಿ, B787-8 ಮತ್ತು/ಅಥವಾ GE GEnx-1B ಇಂಜಿನ್ ನಿರ್ವಾಹಕರಿಗೆ ಅಥವಾ ತಯಾರಕರಿಗೆ ಯಾವುದೇ ನಿರ್ದಿಷ್ಟ ಶಿಫಾರಸುಗಳನ್ನು ಮಾಡಲಾಗಿಲ್ಲ.
9. ಆರಂಭಿಕ ಸುಳಿವುಗಳ ಆಧಾರದ ಮೇಲೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.
10. ತನಿಖಾ ತಂಡವು ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಕ್ಷ್ಯಗಳು, ದಾಖಲೆಗಳು ಮತ್ತು ಪಾಲುದಾರರಿಂದ ಮಾಹಿತಿಯನ್ನು ಪರಿಶೀಲಿಸಲಿದೆ.