
ತೆಲಂಗಾಣಕ್ಕೆ ಐದು ಹುಲಿಗಳ ಲಗ್ಗೆಯಿಟ್ಟ ಕಾರಣಕ್ಕೆ ಕವಲ್ ಅಭಯಾರಣ್ಯದಲ್ಲಿ ತೀವ್ರ ನಿಗಾವಹಿಸಲಾಗಿದೆ. (ಸಾಂದರ್ಭಿಕ ಚಿತ್ರ)
ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ಐದು ಹುಲಿಗಳ ಲಗ್ಗೆ: ಕವಲ್ ಅಭಯಾರಣ್ಯದಲ್ಲಿ ತೀವ್ರ ನಿಗಾ
ಹುಲಿಗಳ ಸಂಚಾರ ಹೆಚ್ಚಾಗಿರುವ ಆದಿಲಾಬಾದ್, ಕರೀಂನಗರ, ಜಗತ್ಯಾಲ ಮತ್ತು ಪೆದ್ದಪಲ್ಲಿ ಜಿಲ್ಲೆಗಳ ರೈತರಿಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಹೊಲಗಳಿಗೆ ಅಥವಾ ಕಾಡಿನ ಸಮೀಪಕ್ಕೆ ಹೋಗುವಾಗ ಗುಂಪುಗಳಲ್ಲಿ ಹೋಗಲು ಸೂಚನೆ ನೀಡಲಾಗಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಅಲ್ಲಿನ ವನ್ಯಜೀವಿಗಳು ಈಗ ತೆಲಂಗಾಣದ ಕಾಡುಗಳತ್ತ ಮುಖ ಮಾಡಿವೆ. ಮಹಾರಾಷ್ಟ್ರದ ತಡೋಬಾ ಮತ್ತು ತಿಪ್ಪೇಶ್ವರ್ ಮೀಸಲು ಅರಣ್ಯಗಳಿಂದ ಸುಮಾರು ಐದು ಹುಲಿಗಳು ಗೋದಾವರಿ ಮತ್ತು ಪೆನ್ ಗಂಗಾ ನದಿಗಳನ್ನು ದಾಟಿ ತೆಲಂಗಾಣದ ಗಡಿಯೊಳಗೆ ಪ್ರವೇಶಿಸಿವೆ. ಈ ಬೆಳವಣಿಗೆಯಿಂದಾಗಿ ತೆಲಂಗಾಣದ ಅರಣ್ಯ ಇಲಾಖೆ ಹೈಅಲರ್ಟ್ ಘೋಷಿಸಿದ್ದು, ಗಡಿ ಜಿಲ್ಲೆಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಿದೆ.
ಮಹಾರಾಷ್ಟ್ರದ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಅವುಗಳ ನಡುವೆ ಪ್ರದೇಶಕ್ಕಾಗಿ ಸಂಘರ್ಷ ಏರ್ಪಡುತ್ತಿದೆ. ವಾಸಸ್ಥಳದ ಕೊರತೆ ಮತ್ತು ಆಹಾರದ ಹುಡುಕಾಟದಲ್ಲಿ ಈ ಹುಲಿಗಳು ತೆಲಂಗಾಣದ ಕವಲ್ ಹುಲಿ ಸಂರಕ್ಷಿತ ಪ್ರದೇಶದತ್ತ ವಲಸೆ ಬರುತ್ತಿವೆ. ಇತ್ತೀಚೆಗೆ ಮಂಚೇರಿಯಲ್, ಚೆನ್ನೂರ್ ಮತ್ತು ಸಿಂಗರೇಣಿ ಗಣಿ ಪ್ರದೇಶಗಳಲ್ಲಿ ಹುಲಿಗಳ ಸಂಚಾರ ದೃಢಪಟ್ಟಿದೆ ಎಂದು ವನ್ಯಜೀವಿ ವಿಭಾಗದ ಅಧಿಕಾರಿ ಅಂಜನೇಯಲು ತಿಳಿಸಿದ್ದಾರೆ.
ಗ್ರಾಮಸ್ಥರಲ್ಲಿ ಆತಂಕ ಮತ್ತು ಮುನ್ನೆಚ್ಚರಿಕೆ ಕ್ರಮಗಳು
ಹುಲಿಗಳ ಸಂಚಾರ ಹೆಚ್ಚಾಗಿರುವ ಆದಿಲಾಬಾದ್, ಕರೀಂನಗರ, ಜಗತ್ಯಾಲ ಮತ್ತು ಪೆದ್ದಪಲ್ಲಿ ಜಿಲ್ಲೆಗಳ ರೈತರಿಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಹೊಲಗಳಿಗೆ ಅಥವಾ ಕಾಡಿನ ಸಮೀಪಕ್ಕೆ ಹೋಗುವಾಗ ಗುಂಪುಗಳಲ್ಲಿ ಹೋಗಲು ಸೂಚನೆ ನೀಡಲಾಗಿದೆ. ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸದಂತೆ ಮತ್ತು ರಾತ್ರಿ ವೇಳೆ ಸಂಚರಿಸದಂತೆ ಸಲಹೆ ನೀಡಲಾಗಿದೆ. ಕಾಡು ಪ್ರಾಣಿಗಳನ್ನು ಹಿಡಿಯಲು ವಿದ್ಯುತ್ ತಂತಿ ಬೇಲಿ ಅಥವಾ ವಿಷ ಇಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಸಿದೆ.
ಹಿಂದೆ 2020 ಮತ್ತು 2024ರಲ್ಲಿ ಈ ಭಾಗದಲ್ಲಿ ಹುಲಿ ದಾಳಿಗೆ ಸಿಲುಕಿ ಮೂವರು ಮೃತಪಟ್ಟ ಘಟನೆಗಳು ನಡೆದಿರುವುದರಿಂದ ಸ್ಥಳೀಯರಲ್ಲಿ ಭೀತಿ ಮನೆಮಾಡಿದೆ.
ಕ್ಯಾಮೆರಾ ಟ್ರ್ಯಾಪಿಂಗ್ ಮತ್ತು ತಂತ್ರಜ್ಞಾನದ ಬಳಕೆ
ಹುಲಿಗಳ ಚಲನವಲನವನ್ನು ಗಮನಿಸಲು 'ಟೈಗರ್ ಸೆಲ್' ಮೂಲಕ ಇ-ಸರ್ವೆಲೆನ್ಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಅರಣ್ಯದಾದ್ಯಂತ ಅಳವಡಿಸಲಾಗಿರುವ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಹೈದರಾಬಾದ್‌ನ ನಿಯಂತ್ರಣ ಕೊಠಡಿಗೆ ಸಂಪರ್ಕಿಸಲಾಗಿದ್ದು, ಹುಲಿಗಳ ಪ್ರತಿ ಹೆಜ್ಜೆಯನ್ನೂ ಅಧಿಕಾರಿಗಳು ಗಮನಿಸುತ್ತಿದ್ದಾರೆ. ಇದರೊಂದಿಗೆ ಹುಲಿಗಳಿಗೆ ಪೂರಕವಾದ ಪರಿಸರ ನಿರ್ಮಿಸಲು ಈಗಾಗಲೇ ಕವಲ್ ಅರಣ್ಯದ ಒಳವಲಯದಲ್ಲಿದ್ದ ಕೆಲವು ಹಳ್ಳಿಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿದೆ.
ಜನವರಿ 19ರಿಂದ ಹುಲಿ ಗಣತಿ
ವಿಶೇಷವೆಂದರೆ, ರಾಷ್ಟ್ರಮಟ್ಟದ ಹುಲಿ ಗಣತಿಯ ಭಾಗವಾಗಿ ಜನವರಿ 19 ರಿಂದ 26 ರವರೆಗೆ ಕವಲ್ ಮೀಸಲು ಅರಣ್ಯದಲ್ಲಿ ವನ್ಯಜೀವಿಗಳ ಎಣಿಕೆ ಕಾರ್ಯ ನಡೆಯಲಿದೆ. ಮೊದಲ ಮೂರು ದಿನ ಮಾಂಸಾಹಾರಿ ಪ್ರಾಣಿಗಳ ಗಣತಿ ನಡೆಯಲಿದ್ದು, ನಂತರ ಸಸ್ಯಹಾರಿ ಪ್ರಾಣಿಗಳ ಎಣಿಕೆ ನಡೆಯಲಿದೆ. ಇದಕ್ಕಾಗಿ ಪಗ್‌ಮಾರ್ಕ್ (ಹೆಜ್ಜೆಗುರುತು), ಲದ್ದಿ ಮತ್ತು ಕ್ಯಾಮೆರಾ ಟ್ರ್ಯಾಪ್‌ಗಳ ದತ್ತಾಂಶವನ್ನು ಬಳಸಿಕೊಳ್ಳಲಾಗುತ್ತಿದೆ.
ನೆರೆ ರಾಜ್ಯಗಳಿಂದ ಹುಲಿಗಳು ಆಗಮಿಸುತ್ತಿರುವುದು ಜೀವವೈವಿಧ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾದರೂ, ಮಾನವ-ವನ್ಯಜೀವಿ ಸಂಘರ್ಷ ತಡೆಯುವುದು ಈಗ ಅರಣ್ಯ ಇಲಾಖೆಯ ಮುಂದಿರುವ ಬಹುದೊಡ್ಡ ಸವಾಲಾಗಿದೆ.

