ಬನ್ನೇರುಘಟ್ಟದಲ್ಲಿ 231 ಕಡೆ ವನ್ಯಜೀವಿಗಳ ಸಾವಿನ ಸ್ಪಾಟ್;‌ ರಾಜ್ಯದ ಅರಣ್ಯಗಳಲ್ಲಿ ವಿದ್ಯುದಾಘಾತ ಸ್ಥಳಗಳ ಸಮೀಕ್ಷೆಗೆ ಸಿದ್ಧತೆ
x

ಬನ್ನೇರುಘಟ್ಟದಲ್ಲಿ 231 ಕಡೆ ವನ್ಯಜೀವಿಗಳ ಸಾವಿನ ಸ್ಪಾಟ್;‌ ರಾಜ್ಯದ ಅರಣ್ಯಗಳಲ್ಲಿ ವಿದ್ಯುದಾಘಾತ ಸ್ಥಳಗಳ ಸಮೀಕ್ಷೆಗೆ ಸಿದ್ಧತೆ

ಇದು ಕೇವಲ ತಾಂತ್ರಿಕ ಸಮಸ್ಯೆಯಲ್ಲ, ಬದಲಾಗಿ ಅರಣ್ಯ ಇಲಾಖೆ ಮತ್ತು ಕೆಪಿಟಿಸಿಎಲ್ ನಡುವಿನ ಸಮನ್ವಯದ ಕೊರತೆ ಹಾಗೂ ಆಡಳಿತ ವ್ಯವಸ್ಥೆಯ ಸಂವೇದನಾರಹಿತ ನಿಷ್ಕ್ರಿಯತೆಗೆ ಹಿಡಿದ ಕನ್ನಡಿಯಾಗಿದೆ.


ಸಿಲಿಕಾನ್‌ಸಿಟಿ ಬೆಂಗಳೂರಿನ ಸನಿಹದಲ್ಲೇ ಇರುವ, ಜೈವಿಕ ವೈವಿಧ್ಯತೆಯ ಕಿರೀಟ ಎಂದೇ ಖ್ಯಾತವಾಗಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂದು ಮಾನವ ನಿರ್ಮಿತ ಅಪಾಯಕ್ಕೆ ಮೂಕ ಪ್ರೇಕ್ಷಕವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯದ ಎದೆಯನ್ನು ಬಗೆದು ಹಾದುಹೋಗಿರುವ ಅಧಿಕ ಒತ್ತಡದ ವಿದ್ಯುತ್ ತಂತಿಗಳು, ಅಪಾಯಕಾರಿಯಾಗಿ ಕೆಳಕ್ಕೆ ಜೋತುಬೀಳುತ್ತಾ, ಇಲ್ಲಿನ ವನ್ಯಜೀವಿಗಳ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸಿವೆ.

ಇಲ್ಲಿನ ಪ್ರತಿ 1.1 ಚದರ ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿ ಕನಿಷ್ಠ ಒಂದು ಅಪಾಯಕಾರಿ ವಿದ್ಯುತ್ ತಂತಿ ಕೆಳಕ್ಕೆ ಜೋತುಬಿದ್ದಿದೆ ಎಂಬ ಆಘಾತಕಾರಿ ಸಂಗತಿಯಾಗಿದೆ..!

ಇಂತಹ ಭಯಾನಕ ಸತ್ಯಾಂಶವನ್ನು ರಾಜ್ಯ ಅರಣ್ಯ ಇಲಾಖೆ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) ನಡೆಸಿದ ಜಂಟಿ ಸಮೀಕ್ಷೆಯು ಬಯಲಿಗೆಳೆದಿದೆ. ಕಾಡಿನ ಮಕ್ಕಳಾದ ಮೂಕ ಪ್ರಾಣಿಗಳ ಪಾಲಿಗೆ ಮಾನವ ಒಡ್ಡುತ್ತಿರುವ ಸಾವಿನ ಜಾಲದ ಕರಾಳ ಚಿತ್ರಣವಾಗಿದೆ. ಕಳೆದ ವರ್ಷವಷ್ಟೇ ಇಂತಹ ವಿದ್ಯುದಾಘಾತಕ್ಕೆ ಎರಡು ಆನೆಗಳನ್ನು ಬಲಿ ತೆಗೆದುಕೊಂಡ ದುರಂತದ ಗಾಯ ಮಾಸುವ ಮುನ್ನವೇ, ಅದೇ ನಿರ್ಲಕ್ಷ್ಯ, ಅದೇ ಅಪಾಯ ಮತ್ತೆ ಕಣ್ಣೆದುರೇ ತಾಂಡವವಾಡುವಂತಾಗಿದ್ದು, ಮತ್ತಷ್ಟು ದುರಂತಗಳಿಗೆ ವೇದಿಕೆ ಸಿದ್ಧಪಡಿಸಿದಂತಾಗಿದೆ. ಇದು ಕೇವಲ ತಾಂತ್ರಿಕ ಸಮಸ್ಯೆಯಲ್ಲ, ಬದಲಾಗಿ ಅರಣ್ಯ ಇಲಾಖೆ ಮತ್ತು ಬೆಸ್ಕಾಂ ನಡುವಿನ ಸಮನ್ವಯದ ಕೊರತೆ ಹಾಗೂ ಆಡಳಿತ ವ್ಯವಸ್ಥೆಯ ಸಂವೇದನಾರಹಿತ ನಿಷ್ಕ್ರಿಯತೆಗೆ ಹಿಡಿದ ಕನ್ನಡಿಯಾಗಿದೆ.

ರಾಜ್ಯ ವ್ಯಾಪ್ತಿಯ ಇತರ ಅರಣ್ಯಗಳಲ್ಲೂ ಸಮೀಕ್ಷೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಒಟ್ಟು 260.51 ಚದರ ಕಿಲೋಮೀಟರ್ ವಿಸ್ತಾರವಾಗಿದೆ. ಈ ಅರಣ್ಯದಲ್ಲಿ ಬರೋಬ್ಬರಿ 231 ಸ್ಥಳಗಳಲ್ಲಿ ವಿದ್ಯುತ್ ತಂತಿಗಳು ವನ್ಯಜೀವಿಗಳಿಗೆ ಮಾರಕವಾಗುವ ರೀತಿಯಲ್ಲಿ ಕೆಳಗೆ ಜೋತು ಬಿದ್ದಿರುವುದನ್ನು ಸಮೀಕ್ಷಾ ತಂಡವು ಗುರುತಿಸಿದೆ. ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಜೋತುಬಿದ್ದ ವಿದ್ಯುತ್‌ ತಂತಿಗಳ ಮಾಹಿತಿ ಲಭ್ಯವಾಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆಯು ಇದೀಗ ರಾಜ್ಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ರಾಜ್ಯದಲ್ಲಿನ ಅರಣ್ಯ ಪ್ರದೇಶಗಳಲ್ಲಿ ವಿದ್ಯುತ್‌ ತಂತಿ ಜೋತು ಬಿದ್ದಿರುವ ಸಮೀಕ್ಷೆ ನಡೆಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ.

ಕಾಡಿನೊಳಗೆ ಚಲಿಸುವ ಯಾವುದೇ ಪ್ರಾಣಿ, ಅದರಲ್ಲೂ ವಿಶೇಷವಾಗಿ ಆನೆಯಂತಹ ದೈತ್ಯ ಜೀವಿಗಳು, ಪ್ರತಿ ಹೆಜ್ಜೆಗೂ ಸಾವಿನೊಂದಿಗೆ ಸರಸವಾಡುತ್ತಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬನ್ನೇರುಘಟ್ಟ ಅರಣ್ಯ ಪ್ರದೇಶ ಒಂದರಲ್ಲೇ 231 ಸ್ಥಳಗಳಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಗುರುತಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಯೊಬ್ಬರ ಪ್ರಕಾರ, ನವೆಂಬರ್ ಅಥವಾ ಡಿಸೆಂಬರ್‌ ತಿಂಗಳಲ್ಲಿ ಅಂತಿಮ ವರದಿ ಸಿದ್ಧವಾಗಲಿದೆ. ರಾಜ್ಯಾದ್ಯಂತ ಅರಣ್ಯಗಳಲ್ಲಿನ ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವ ಕುರಿತು ವಿದ್ಯುತ್ ಸರಬರಾಜು ಕಂಪನಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ.

ಬೆಳಗಾವಿ ದುರಂತದ ನಂತರ ಎಚ್ಚೆತ್ತ ಇಲಾಖೆ

ಬೆಳಗಾವಿ ಜಿಲ್ಲೆಯಲ್ಲಿ ಎರಡು ಆನೆಗಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಘಟನೆಯು ಈ ಸಮಸ್ಯೆಯ ಗಂಭೀರತೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಘಟನೆಯ ಬಳಿಕ ಅರಣ್ಯ ಇಲಾಖೆಯು ಎಲ್ಲಾ ಕಚೇರಿಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ತಮ್ಮ ವ್ಯಾಪ್ತಿಯಲ್ಲಿನ ಜೋತು ಬಿದ್ದ ತಂತಿಗಳನ್ನು ತಕ್ಷಣವೇ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಆದೇಶಿಸಲಾಗಿದೆ. ಸಿಬ್ಬಂದಿಯಿಂದ ಜೋತು ಬಿದ್ದ ತಂತಿಗಳ ಬಗ್ಗೆ ಪ್ರತಿನಿತ್ಯ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಈ ಮಾಹಿತಿಗಳ ಆಧಾರದ ಮೇಲೆ ವಿದ್ಯುತ್ ಸರಬರಾಜು ಕಂಪನಿಗಳೊಂದಿಗೆ ನಿಯಮಿತವಾಗಿ ಸಭೆಗಳನ್ನು ನಡೆಸಲಾಗುತ್ತಿದೆ. ವಿಶೇಷವಾಗಿ, ಪ್ರಾಣಿಗಳ ಚಲನವಲನ ಹೆಚ್ಚಾಗಿರುವ ಅರಣ್ಯದ ಅಂಚಿನ ಪ್ರದೇಶಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಲಾಗುತ್ತಿದೆ ಎಂಬುದು ಅರಣ್ಯ ಇಲಾಖೆಯ ಸಮಜಾಯಿಷಿಯಾಗಿದೆ.

ಜೋತು ಬಿದ್ದಿರುವ ವಿದ್ಯುತ್‌ ತಂತಿಗಳ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ವನ್ಯಜೀವಿ ತಜ್ಞ ಗಿರಿ ವಾಲ್ಮೀಕಿ, ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ 231 ಅಪಾಯಕಾರಿ ಸ್ಥಳಗಳು ಪತ್ತೆಯಾಗಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಬನ್ನೇರುಘಟ್ಟವು ಮೂಲತಃ ಕುರುಚಲು ಕಾಡಾಗಿದ್ದು, ಇಲ್ಲಿ ಮಳೆಯ ಪ್ರಮಾಣ ಕಡಿಮೆ. ಹೀಗಾಗಿ ವಿದ್ಯುತ್ ಕಂಬಗಳು ಭೂಮಿಯಲ್ಲಿ ಕುಸಿಯುವ ಸಾಧ್ಯತೆ ಕಡಿಮೆ. ಹೀಗಿರುವಾಗ 231 ಸ್ಥಳಗಳು ಪತ್ತೆಯಾಗಿವೆ ಎಂದರೆ, ಮಳೆ ಬೀಳುವ ಮಲೆನಾಡು ಮತ್ತು ಪಶ್ಚಿಮಘಟ್ಟದ ದಟ್ಟ ಕಾಡುಗಳಲ್ಲಿ ಪರಿಸ್ಥಿತಿ ಇನ್ನೆಷ್ಟು ಭೀಕರವಾಗಿರಬಹುದು ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ವಿದ್ಯುದಾಘಾತದಿಂದ ನಡೆಯವು ದುರ್ಘಟನೆಗಳನ್ನು ತಡೆಯಲು ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆಯ ಅರಣ್ಯ ಪಾಲಕರೊಬ್ಬರು ಹೇಳುವಂತೆ ಹಲವು ವರ್ಷಗಳ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯವು ಇಂದಿನ ಈ ದುಸ್ಥಿತಿಗೆ ಕಾರಣ. ಈಗ ಹೊಸ ದೃಷ್ಟಿಕೋನದೊಂದಿಗೆ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಹೇಗೆ ನಿಯಮಿತವಾಗಿ ಕಾಡಿನಲ್ಲಿ ಗಸ್ತು ತಿರುಗುತ್ತಾರೋ, ಅದೇ ರೀತಿ ವಿದ್ಯುತ್ ಕಂಪನಿಗಳ ಸಿಬ್ಬಂದಿಯೂ ತಮ್ಮ ತಂತಿ ಮಾರ್ಗಗಳಿರುವ ಅರಣ್ಯ ಪ್ರದೇಶಗಳಲ್ಲಿ ನಿಯಮಿತವಾಗಿ ತಪಾಸಣೆ ನಡೆಸುವ ಪರಿಪಾಠವನ್ನು ಕಡ್ಡಾಯಗೊಳಿಸಬೇಕು. ಇಲ್ಲವಾದರೆ, ವನ್ಯಜೀವಿಗಳು ವಿದ್ಯುದಾಘಾತದಿಂದ ಸಾಯುತ್ತಲೇ ಇರುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿದ್ಯುತ್‌ ತಂತಿಗಳು ಜೋತು ಬೀಳುವುದು ಗಂಭೀರ ವಿಷಯ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿನ ಹಕ್ಕಿಪಿಕ್ಕಿ ಕಾಲೋನಿ, ಕಾಡು ಜಾಕನಹಳ್ಳಿ ಮತ್ತು ಸುತ್ತಮುತ್ತಲಿನ ಆನೆ ಕಾರಿಡಾರ್‌ಗಳಲ್ಲಿ ಹಾದುಹೋಗುವ 11ಕೆವಿ ವಿದ್ಯುತ್ ಮಾರ್ಗಗಳು ಸಮಸ್ಯೆಯ ಕೇಂದ್ರಬಿಂದುವಾಗಿವೆ. ಭಾರತೀಯ ವಿದ್ಯುತ್ ನಿಯಮಗಳ ಪ್ರಕಾರ, ಇಂತಹ ಅಧಿಕ ಒತ್ತಡದ ತಂತಿಗಳು ನೆಲದಿಂದ ಕನಿಷ್ಠ 20 ಅಡಿಗಳಷ್ಟು ಎತ್ತರದಲ್ಲಿರಬೇಕು. ಆದರೆ, ಈ ಪ್ರದೇಶಗಳಲ್ಲಿನ ಹಲವು ಕಡೆಗಳಲ್ಲಿ ಈ ತಂತಿಗಳು ಕೇವಲ 10-12 ಅಡಿ ಎತ್ತರದಲ್ಲಿ ಅಪಾಯಕಾರಿಯಾಗಿ ಜೋತುಬಿದ್ದಿವೆ. ಆನೆಗಳಂತಹ ದೈತ್ಯ ಜೀವಿಗಳಿಗೆ ಇದು ನೇರ ಸಾವಿನ ಆಹ್ವಾನವಾಗಿರುತ್ತದೆ. ಸರಾಸರಿ 9-10 ಅಡಿ ಎತ್ತರವಿರುವ ಆನೆಗಳು, ತಮ್ಮ ಸೊಂಡಿಲನ್ನು ಎತ್ತಿದಾಗ ಅಥವಾ ಸಣ್ಣ ದಿಬ್ಬವನ್ನು ಏರಿದಾಗ ಸುಲಭವಾಗಿ ಈ ತಂತಿಗಳಿಗೆ ತಗುಲಿಕೊಳ್ಳುತ್ತವೆ. ಒಮ್ಮೆ ತಗುಲಿದರೆ, ಸಾವಿರಾರು ವೋಲ್ಟ್‌ಗಳ ವಿದ್ಯುತ್, ಶರೀರವನ್ನು ಪ್ರವೇಶಿಸಿ, ಕೆಲವೇ ಕ್ಷಣಗಳಲ್ಲಿ ದುರಂತಗಳು ನಡೆಯಬಹುದು. ಮಳೆಗಾಲದಲ್ಲಿ ಈ ಅಪಾಯ ನೂರು ಪಟ್ಟು ಹೆಚ್ಚಾಗುತ್ತದೆ. ನೆಲ ತೇವಗೊಂಡಿರುವುದರಿಂದ ಮತ್ತು ಮರಗಳ ಒದ್ದೆಯಾದ ಕೊಂಬೆಗಳು ತಂತಿಗಳಿಗೆ ತಾಗುವುದರಿಂದ, ವಿದ್ಯುತ್ ಪ್ರವಾಹವು ಸುತ್ತಮುತ್ತಲಿನ ಪ್ರದೇಶಕ್ಕೂ ಹರಡಿ, ಸಣ್ಣ ಪ್ರಾಣಿಗಳಾದ ಜಿಂಕೆ, ಕಾಡುಹಂದಿ, ಮತ್ತು ಇತರ ಜೀವಿಗಳೂ ಸಾವನ್ನಪ್ಪುವ ಸಾಧ್ಯತೆ ಅಧಿಕವಾಗಿರುತ್ತದೆ ಎಂದು ಹೇಳಲಾಗಿದೆ.

ಇಲಾಖೆಗಳ ನಡುವಿನ ಸಮನ್ವಯದ ಕೊರತೆ

ಈ ಸಮಸ್ಯೆಯು ಅರಣ್ಯ ಇಲಾಖೆ ಮತ್ತು ಬೆಸ್ಕಾಂ ನಡುವಿನ ಸಮನ್ವಯದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಅರಣ್ಯ ಇಲಾಖೆಯು ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಬೆಸ್ಕಾಂಗೆ ಮಾಹಿತಿ ನೀಡಬೇಕಾದರೆ, ಬೆಸ್ಕಾಂ ಕೂಡಲೇ ಕಾರ್ಯಪ್ರವೃತ್ತವಾಗಿ ತಂತಿಗಳನ್ನು ಸರಿಪಡಿಸುವ ಜವಾಬ್ದಾರಿ ಹೊರಬೇಕು. ಆದರೆ, ಈ ಪ್ರಕ್ರಿಯೆಯು ನಿಧಾನಗತಿಯಲ್ಲಿ ಸಾಗುತ್ತಿರುವುದು ವನ್ಯಜೀವಿಗಳ ಜೀವಕ್ಕೆ ಕುತ್ತು ತಂದಿದೆ. ಅರಣ್ಯ ಇಲಾಖೆ ತಮ್ಮ ವ್ಯಾಪ್ತಿಯಲ್ಲಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಅದರ ಗಂಭೀರತೆಯನ್ನು ಬೆಸ್ಕಾಂಗೆ ಮನವರಿಕೆ ಮಾಡಿಕೊಟ್ಟು, ನಿರಂತರವಾಗಿ ಬೆನ್ನತ್ತಿ ಕೆಲಸ ಮಾಡಿಸಿಕೊಳ್ಳುವುದು ಅರಣ್ಯ ಇಲಾಖೆಯ ಕರ್ತವ್ಯ. ಆದರೆ, ಕೇವಲ ಪತ್ರ ಬರೆದು ಕೈತೊಳೆದುಕೊಳ್ಳುವ ಜಾಯಮಾನದಿಂದಾಗಿ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಹೇಳಲಾಗಿದೆ.

ಅರಣ್ಯದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗಗಳನ್ನು ಅಳವಡಿಸುವಾಗ ಮತ್ತು ನಿರ್ವಹಿಸುವಾಗ ವಿಶೇಷ ಮುನ್ನೆಚ್ಚರಿಕೆಗಳನ್ನು ವಹಿಸುವುದು ಬೆಸ್ಕಾಂನ ಜವಾಬ್ದಾರಿ. ತಾಂತ್ರಿಕ ಪರಿಣತಿ ಹೊಂದಿರುವ ಈ ಇಲಾಖೆ, ಅರಣ್ಯ ಇಲಾಖೆಯ ಮನವಿಗೆ ತಕ್ಷಣ ಸ್ಪಂದಿಸಿ, ಅಪಾಯವನ್ನು ನಿವಾರಿಸಬೇಕು. ಆದರೆ, ಅನುದಾನದ ಕೊರತೆ, ಸಿಬ್ಬಂದಿ ಕೊರತೆ ಮತ್ತು ನಿರ್ಲಕ್ಷ್ಯದಂತಹ ಸಬೂಬುಗಳನ್ನು ಹೇಳಿ, ಕಾರ್ಯವಿಳಂಬ ಮಾಡುವುದು ಸಾಮಾನ್ಯವಾಗಿದೆ. ಈ ಎರಡು ಇಲಾಖೆಗಳ ನಡುವಿನ ಜವಾಬ್ದಾರಿಯ ಹಗ್ಗಜಗ್ಗಾಟದಲ್ಲಿ, ಬಲಿಯಾಗುತ್ತಿರುವುದು ಮಾತ್ರ ಅಮಾಯಕ ವನ್ಯಜೀವಿಗಳಾಗಿವೆ ಎನ್ನಲಾಗಿದೆ.

ಶಾಶ್ವತ ಪರಿಹಾರ ಅತ್ಯಗತ್ಯ

ಕೇವಲ ತಂತಿಗಳನ್ನು ಮೇಲಕ್ಕೆತ್ತುವುದು ತಾತ್ಕಾಲಿಕ ಪರಿಹಾರವಾಗಿದೆ. ಹೀಗಾಗಿ ಅರಣ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಭೂಗತ ಕೇಬಲ್‌ಗಳನ್ನು ಅಳವಡಿಸುವುದೇ ಇದಕ್ಕೆ ಶಾಶ್ವತ ಪರಿಹಾರ ಎಂಬುದು ವನ್ಯಜೀವಿ ತಜ್ಞರ ಅಭಿಪ್ರಾಯವಾಗಿದೆ. ಇದು ಆರಂಭದಲ್ಲಿ ದುಬಾರಿಯಾದರೂ, ದೀರ್ಘಾವಧಿಯಲ್ಲಿ ವನ್ಯಜೀವಿಗಳ ಅಮೂಲ್ಯ ಜೀವಗಳನ್ನು ಉಳಿಸಲು ಮತ್ತು ವಿದ್ಯುತ್ ಮಾರ್ಗಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

ಭೂಗತ ಕೇಬಲ್‌ಗಳ ಅಳವಡಿಕೆ:

ಅರಣ್ಯದ ಸೂಕ್ಷ್ಮ ಮತ್ತು ಆನೆ ಕಾರಿಡಾರ್‌ಗಳಂತಹ ಪ್ರಮುಖ ಪ್ರದೇಶಗಳಲ್ಲಿ ಭೂಗತ ಕೇಬಲ್‌ಗಳನ್ನು ಅಳವಡಿಸುವುದೇ ಅತ್ಯುತ್ತಮ ಪರಿಹಾರ. ಇದು ವಿದ್ಯುದಾಘಾತದ ಅಪಾಯವನ್ನು ಶೂನ್ಯಕ್ಕೆ ಇಳಿಸುತ್ತದೆ. ಮರಗಳು ಬಿದ್ದು ವಿದ್ಯುತ್ ವ್ಯತ್ಯಯವಾಗುವುದನ್ನು ತಪ್ಪಿಸುತ್ತದೆ ಮತ್ತು ಅರಣ್ಯದ ನೈಸರ್ಗಿಕ ಸೌಂದರ್ಯವನ್ನೂ ಕಾಪಾಡುತ್ತದೆ.

ಜಂಟಿ ಕಾರ್ಯಪಡೆ ರಚನೆ

ಅರಣ್ಯ ಮತ್ತು ಬೆಸ್ಕಾಂ ಅಧಿಕಾರಿಗಳನ್ನು ಒಳಗೊಂಡ ಒಂದು ಶಾಶ್ವತ ಜಂಟಿ ಕಾರ್ಯಪಡೆಯನ್ನು ರಚಿಸಬೇಕು. ಈ ಕಾರ್ಯಪಡೆಯು ಪ್ರತಿ ಮೂರು ತಿಂಗಳಿಗೊಮ್ಮೆ ಜಂಟಿ ಸಮೀಕ್ಷೆ ನಡೆಸಿ, ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಕಾಲಮಿತಿಯೊಳಗೆ ಅವುಗಳನ್ನು ಸರಿಪಡಿಸುವ ಜವಾಬ್ದಾರಿ ಹೊರಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವಿಳಂಬ ನೀತಿಯು ಬನ್ನೇರುಘಟ್ಟದ ​​ವನ್ಯಜೀವಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಮತ್ತೊಂದು ದುರಂತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು, ತೂಗಾಡುತ್ತಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಿ, ವನ್ಯಜೀವಿಗಳ ಸುರಕ್ಷತೆಯತ್ತ ಗಮನಹರಿಸಬೇಕಾಗಿದೆ.

Read More
Next Story