
ಸಾಂದರ್ಭಿಕ ಚಿತ್ರ
ಗಂಗಾಸ್ನಾನಕ್ಕೆ ತೆರಳಿದ್ದ ಯಾತ್ರಿಕರ ಬಸ್ ಅಪಘಾತ: 10 ಮಂದಿ ಸಾವು, 35 ಮಂದಿಗೆ ಗಾಯ
ಬಸ್‌ನಲ್ಲಿ ಒಟ್ಟು 45 ಪ್ರಯಾಣಿಕರಿದ್ದರು. ಅವರಲ್ಲಿ 35 ಮಂದಿ ಗಾಯಗೊಂಡಿದ್ದು, ಅವರನ್ನು ಬುರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಹತ್ತು ಮಂದಿ ಯಾತ್ರಿಕರು ಮೃತಪಟ್ಟು, 35 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಬುರ್ದ್ವಾನ್ ಪಟ್ಟಣದಲ್ಲಿ ಶುಕ್ರವಾರ ಸಂಭವಿಸಿದೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹರಿ ನಿವಾಸಿಗಳಾದ ಯಾತ್ರಿಕರು, ದಕ್ಷಿಣ 24 ಪರಗಣ ಜಿಲ್ಲೆಯ ಗಂಗಾಸಾಗರ ಪ್ರವಾಸ ನಂತರ ಮನೆಗೆ ತೆರಳುತ್ತಿದ್ದರು. ಪುರ್ಬಾ ಬರ್ಧಮಾನ್ ಜಿಲ್ಲೆಯ ಫಗುಯಿಪುರ ಬಳಿಯ ರಾಷ್ಟ್ರೀಯ ಹೆದ್ದಾರಿ -19 ರಲ್ಲಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್‌ನಲ್ಲಿ ಒಟ್ಟು 45 ಪ್ರಯಾಣಿಕರಿದ್ದರು. ಅವರಲ್ಲಿ 35 ಮಂದಿ ಗಾಯಗೊಂಡಿದ್ದು, ಅವರನ್ನು ಬುರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಬಸ್ ಯಾಂತ್ರಿಕ ಸಮಸ್ಯೆಗಳಿಂದ ನಿಯಂತ್ರಣ ಕಳೆದುಕೊಂಡಿದೆಯೇ ಅಥವಾ ವೇಗದ ಚಾಲನೆಯಿಂದಾಗಿ ಅಪಘಾತ ಸಂಭವಿಸಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಸ್ಥಳೀಯರ ಪ್ರಕಾರ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದಟ್ರಕ್‌ಗಳಿಂದ ಈ ಅಪಘಾತ ಸಂಭವಿಸಿದೆ. ಚಾಲಕ ನಿದ್ರಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಕೆಲವರು ಹೇಳಿದರೆ, ಹೆದ್ದಾರಿಯಲ್ಲಿ ಟ್ರಕ್‌ಗಳನ್ನು ನಿಲ್ಲಿಸುವುದನ್ನು ತಡೆಯಲು ಪೊಲೀಸರು ಮತ್ತು ಆಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜುಲೈ ತಿಂಗಳ ಆರಂಭದಲ್ಲಿ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ರಾಣಿಸರೈ ಎಂಬಲ್ಲಿ ಸ್ಕಾರ್ಪಿಯೋ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಪ್ರಾಣ ಕಳೆದುಕೊಂಡಿದ್ದರು. ಜೂನ್ 20 ರಂದು ಪುರುಲಿಯಾದ ನಾಮಶೋಲ್ ಗ್ರಾಮದ ಬಳಿ ಬೊಲೆರೊ ಎಸ್‌ಯುವಿ ಮತ್ತು ಟ್ರೇಲರ್ ಟ್ರಕ್ ನಡುವೆ ಡಿಕ್ಕಿಯಾಗಿ ಒಂಬತ್ತು ಮಂದಿ ಮೃತಪಟ್ಟಿದ್ದರು. ಈ ದುರಂತಕ್ಕೆ ಅತಿಯಾದ ವೇಗ ಮತ್ತು ಚಾಲಕನ ನಿರ್ಲಕ್ಷ್ಯ ಕಾರಣ ಎಂದು ಪೊಲೀಸರು ಶಂಕಿಸಿದ್ದರು.