
ಶಿವಸೇನೆ(ಏಕನಾಥ್ ಶಿಂಧೆ ಬಣ) ಹಾಗೂ ಎನ್‌ಸಿಪಿ (ಅಜಿತ್ ಪವಾರ್ ಬಣ) ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಿದರು.
ಮಹಾರಾಷ್ಟ್ರ ರಾಜಕೀಯದಲ್ಲಿ ಅಚ್ಚರಿ: ಅಂಬರನಾಥ್ ನಗರಸಭೆ ಅಧಿಕಾರಕ್ಕಾಗಿ ಬಿಜೆಪಿಯನ್ನು ಹೊರಗಿಟ್ಟ ಶಿವಸೇನೆ ಮತ್ತು ಎನ್‍ಸಿಪಿ
ಅಂಬರನಾಥ್ ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಹೂಡಿದ್ದ ತಂತ್ರಗಾರಿಕೆಗೆ ಈಗ ಸ್ವಪಕ್ಷದ ಮಿತ್ರರೇ ತಿರುಗೇಟು ನೀಡಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದ 12 ಮಂದಿ ನಗರಸಭಾ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದಲ್ಲಿ ಬಿರುಕು ಮೂಡಿರುವ ಮುನ್ಸೂಚನೆ ಸಿಕ್ಕಿದ್ದು, ಅಂಬರನಾಥ್ ನಗರಸಭೆಯ ಅಧಿಕಾರ ಹಿಡಿಯುವ ವಿಚಾರದಲ್ಲಿ ಮೈತ್ರಿ ಪಕ್ಷಗಳಾದ ಶಿವಸೇನೆ (ಏಕನಾಥ್ ಶಿಂದೆ ಬಣ) ಮತ್ತು ಎನ್‍ಸಿಪಿ (ಅಜಿತ್ ಪವಾರ್ ಬಣ) ಬಿಜೆಪಿಯನ್ನು ಪಕ್ಕಕ್ಕಿಟ್ಟು ಒಂದಾಗಿವೆ. ರಾಜ್ಯ ಮಟ್ಟದಲ್ಲಿ ಮಿತ್ರಪಕ್ಷಗಳಾಗಿದ್ದರೂ, ಸ್ಥಳೀಯ ಮಟ್ಟದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ಎರಡೂ ಪಕ್ಷಗಳು ಸ್ವತಂತ್ರ ಅಭ್ಯರ್ಥಿಯೊಂದಿಗೆ ಕೈಜೋಡಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಂಬರನಾಥ್ ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಹೂಡಿದ್ದ ತಂತ್ರಗಾರಿಕೆಗೆ ಈಗ ಸ್ವಪಕ್ಷದ ಮಿತ್ರರೇ ತಿರುಗೇಟು ನೀಡಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದ 12 ಮಂದಿ ನಗರಸಭಾ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದರಿಂದ ಸಂಖ್ಯಾಬಲ ಹೆಚ್ಚಿಸಿಕೊಂಡು ಅಧಿಕಾರ ಹಿಡಿಯಬಹುದು ಎಂಬ ಬಿಜೆಪಿಯ ಆಸೆಗೆ ಶಿಂದೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‍ಸಿಪಿ ತಣ್ಣೀರು ಎರಚಿವೆ. ಈ ಎರಡೂ ಪಕ್ಷಗಳು ಒಬ್ಬ ಸ್ವತಂತ್ರ ಸದಸ್ಯನ ಬೆಂಬಲದೊಂದಿಗೆ ಹೊಸ ಗುಂಪನ್ನು ರಚಿಸಿಕೊಂಡು, ನಗರಸಭೆಯ ಮೇಲೆ ಹಕ್ಕು ಮಂಡಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಸಲ್ಲಿಸಿವೆ.
ಚುನಾವಣೋತ್ತರ ಮೈತ್ರಿಯ ಏರಿಳಿತಗಳು
ಡಿಸೆಂಬರ್ 20ರಂದು ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಿವಸೇನೆ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಅಧಿಕಾರ ಹಿಡಿಯಲು ಬಿಜೆಪಿ (14 ಸ್ಥಾನ) ತನ್ನ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್ (12 ಸ್ಥಾನ) ಮತ್ತು ಎನ್‍ಸಿಪಿ (4 ಸ್ಥಾನ) ಜೊತೆಗೂಡಿ 'ಅಂಬರನಾಥ್ ವಿಕಾಸ್ ಅಘಾಡಿ' (AVA) ಎಂಬ ಮೈತ್ರಿಕೂಟ ರಚಿಸಿಕೊಂಡಿತ್ತು. ಈ ಬೆಳವಣಿಗೆಯಿಂದ ಕುಪಿತಗೊಂಡಿದ್ದ ಕಾಂಗ್ರೆಸ್ ಹೈಕಮಾಂಡ್ ತನ್ನ 12 ಸದಸ್ಯರನ್ನು ಅಮಾನತುಗೊಳಿಸಿತ್ತು. ನಂತರ ಆ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಸಂಖ್ಯಾಬಲದ ಬಲಾಬಲ
60 ಸದಸ್ಯ ಬಲದ ಅಂಬರನಾಥ್ ನಗರಸಭೆಯಲ್ಲಿ ಬಹುಮತಕ್ಕೆ 31 ಸದಸ್ಯರ ಬೆಂಬಲ ಬೇಕು. ಸದ್ಯದ ಬೆಳವಣಿಗೆಯ ಪ್ರಕಾರ ಶಿವಸೇನೆ (27) + ಎನ್‍ಸಿಪಿ (4) + ಸ್ವತಂತ್ರ (1) ಸೇರಿದರೆ ಒಟ್ಟು 32 ಸದಸ್ಯರಾಗುತ್ತಾರೆ. ಈ ಮೈತ್ರಿಯು ಬಹುಮತದ ಗಡಿಯನ್ನು ದಾಟಿರುವುದರಿಂದ ಬಿಜೆಪಿ ಈಗ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದೆ. ರಾಜ್ಯದಲ್ಲಿ ಅಧಿಕಾರ ಹಂಚಿಕೊಂಡಿರುವ ಮಿತ್ರಪಕ್ಷಗಳೇ ಸ್ಥಳೀಯವಾಗಿ ಬಿಜೆಪಿಯನ್ನು ಮೂಲೆಗುಂಪು ಮಾಡಿರುವುದು ಮುಂಬರುವ ಮಹಾರಾಷ್ಟ್ರದ ಇತರ ಸ್ಥಳೀಯ ಚುನಾವಣೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

