ಪುಣೆ ಅಭಿವೃದ್ಧಿ ಕುಂಠಿತಕ್ಕೆ ಬಿಜೆಪಿ ನೇರ ಹೊಣೆ: ಉಪಮುಖ್ಯಮಂತ್ರಿ ಅಜಿತ್ ಪವಾರ್ ವಾಗ್ದಾಳಿ
x

ಪುಣೆ ಅಭಿವೃದ್ಧಿ ಕುಂಠಿತಕ್ಕೆ ಬಿಜೆಪಿ ನೇರ ಹೊಣೆ: ಉಪಮುಖ್ಯಮಂತ್ರಿ ಅಜಿತ್ ಪವಾರ್ ವಾಗ್ದಾಳಿ

2017ರಿಂದ 2022ರವರೆಗೆ ಪುಣೆ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಗರದ ಅಭಿವೃದ್ಧಿ ಹಳಿ ತಪ್ಪಿದೆ ಎಂದು ದೂರಿದ ಅವರು, ಈ ಬಾರಿ ತಮ್ಮ ಪಕ್ಷಕ್ಕೆ ಅವಕಾಶ ನೀಡುವಂತೆ ಜನರಲ್ಲಿ ಮನವಿ ಮಾಡಿದರು.


Click the Play button to hear this message in audio format

ಮಹಾರಾಷ್ಟ್ರದ ಎರಡನೇ ದೊಡ್ಡ ನಗರವಾದ ಪುಣೆಯಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಅಭಿವೃದ್ಧಿ ಕುಂಠಿತಗೊಳ್ಳಲು ಬಿಜೆಪಿಯ ಸ್ಥಳೀಯ ನಾಯಕತ್ವವೇ ಕಾರಣ ಎಂದು ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಗಂಭೀರ ಆರೋಪ ಮಾಡಿದ್ದಾರೆ.

ಜನವರಿ 15ರಂದು ನಡೆಯಲಿರುವ ಪುಣೆ ಮಹಾನಗರ ಪಾಲಿಕೆ (ಪಿಎಂಸಿ) ಚುನಾವಣೆಯ ಪ್ರಚಾರದ ಅಂಗವಾಗಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪುಣೆ ಮಹಾನಗರ ಪಾಲಿಕೆಯಲ್ಲಿ ಸಾಕಷ್ಟು ಸಂಪನ್ಮೂಲಗಳಿದ್ದರೂ ನಾಗರಿಕರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ಆಡಳಿತ ವಿಫಲವಾಗಿದೆ ಎಂದು ಟೀಕಿಸಿದರು. 2017ರಿಂದ 2022ರವರೆಗೆ ಪುಣೆ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಗರದ ಅಭಿವೃದ್ಧಿ ಹಳಿ ತಪ್ಪಿದೆ ಎಂದು ದೂರಿದ ಅವರು, ಈ ಬಾರಿ ತಮ್ಮ ಪಕ್ಷಕ್ಕೆ ಅವಕಾಶ ನೀಡುವಂತೆ ಜನರಲ್ಲಿ ಮನವಿ ಮಾಡಿದರು.

ದಟ್ಟಣೆಯ ನಗರ ಎಂಬ ಅಪಖ್ಯಾತಿ

ನಗರದ ಪ್ರಮುಖ ಸಮಸ್ಯೆಯಾದ ಸಂಚಾರ ದಟ್ಟಣೆಯ ಕುರಿತು ಮಾತನಾಡಿದ ಅಜಿತ್ ಪವಾರ್, ಜಾಗತಿಕ ಸಂಚಾರ ಸಮೀಕ್ಷೆಯ ವರದಿಯನ್ನು ಉಲ್ಲೇಖಿಸಿ ಪುಣೆ ನಗರವು ವಿಶ್ವದ ಅತ್ಯಂತ ಕೆಟ್ಟ ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಬೊಟ್ಟು ಮಾಡಿದರು. ಪುಣೆಯಲ್ಲಿ ಕೇವಲ 10 ಕಿಲೋಮೀಟರ್ ದೂರ ಕ್ರಮಿಸಲು ಬರೋಬ್ಬರಿ 33 ನಿಮಿಷ ಬೇಕಾಗುತ್ತಿದ್ದು, ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಕೆಲವು ಕಡೆ ಫ್ಲೈಓವರ್‌ಗಳನ್ನು ಕೆಡವಬೇಕಾದ ಪರಿಸ್ಥಿತಿ ಬಂದಿದೆ ಎಂದು ಕಿಡಿಕಾರಿದರು. ಇದೇ ವೇಳೆ ಪಿಂಪ್ರಿ ಚಿಂಚ್ವಾಡ ಪಾಲಿಕೆಯ ಬಗ್ಗೆಯೂ ಮಾತನಾಡಿದ ಅವರು, ಈ ಹಿಂದೆ ಎನ್‌ಸಿಪಿ ಅಧಿಕಾರದಲ್ಲಿದ್ದಾಗ ಏಷ್ಯಾದಲ್ಲೇ ಶ್ರೀಮಂತ ಪಾಲಿಕೆಯಾಗಿದ್ದ ಸಂಸ್ಥೆಯು ಬಿಜೆಪಿ ಅವಧಿಯಲ್ಲಿ ತನ್ನ 8,000 ಕೋಟಿ ರೂಪಾಯಿಗಳ ಠೇವಣಿಯನ್ನು ಕಳೆದುಕೊಂಡಿದೆ ಎಂದು ಆಪಾದಿಸಿದರು.

ಗ್ಯಾಂಗ್​ಸ್ಟರ್​ಗೆ ಟಿಕೆಟ್​​

ಇನ್ನು ಬಂಧಿತ ಗ್ಯಾಂಗ್‌ಸ್ಟರ್ ಬಂದು ಅಂದೇಕರ್ ಅವರ ಕುಟುಂಬದವರಿಗೆ ಚುನಾವಣಾ ಟಿಕೆಟ್ ನೀಡಿರುವ ನಿರ್ಧಾರವನ್ನು ಅಜಿತ್ ಪವಾರ್ ಸಮರ್ಥಿಸಿಕೊಂಡರು. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯ ಪತ್ನಿ ಅಥವಾ ಕುಟುಂಬದವರು ಅದಕ್ಕೆ ಹೇಗೆ ಹೊಣೆಯಾಗುತ್ತಾರೆ ಎಂದು ಪ್ರಶ್ನಿಸಿದ ಅವರು, ತಾನು ಅಪರಾಧಿಗಳಿಗೆ ಟಿಕೆಟ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಅಜಿತ್ ಪವಾರ್ ಅವರ ಈ ಸರಣಿ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವಾಣ್, ಪವಾರ್ ಅವರು ಇತರರ ಮೇಲೆ ಬೆರಳು ಮಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಮಹಾರಾಷ್ಟ್ರದ ಆಡಳಿತಾರೂಢ 'ಮಹಾಯುತಿ' ಮೈತ್ರಿಯಲ್ಲಿದ್ದರೂ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್‌ಸಿಪಿ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

Read More
Next Story