ಮಹಾರಾಷ್ಟ್ರದಲ್ಲಿ ಮತ್ತೆ ಒಂದಾದ ʻಪವಾರ್‌ʼಫುಲ್‌ ಫ್ಯಾಮಿಲಿ; ಅಜಿತ್-ಶರದ್ ಪವಾರ್ ದಿಢೀರ್ ಮೈತ್ರಿ
x
ಮೈತ್ರಿ ಘೋಷಿಸಿದ ಶರದ್‌ ಪವಾರ್‌ ಮತ್ತು ಅಜಿತ್‌ ಪವಾರ್‌

ಮಹಾರಾಷ್ಟ್ರದಲ್ಲಿ ಮತ್ತೆ ಒಂದಾದ ʻಪವಾರ್‌ʼಫುಲ್‌ ಫ್ಯಾಮಿಲಿ; ಅಜಿತ್-ಶರದ್ ಪವಾರ್ ದಿಢೀರ್ ಮೈತ್ರಿ

ಎರಡು ವರ್ಷಗಳ ವಿಭಜನೆಯ ನಂತರ ಪವಾರ್ ಕುಟುಂಬ ಮತ್ತೆ ಒಂದಾಗಿದೆ. ಪುಣೆ ಮತ್ತು ಪಿಂಪ್ರಿ-ಚಿಂಚವಾಡ ಮಹಾನಗರ ಪಾಲಿಕೆ ಚುನಾವಣೆಗಾಗಿ ಅಜಿತ್ ಮತ್ತು ಶರದ್ ಪವಾರ್ ಮೈತ್ರಿ ಮಾಡಿಕೊಂಡಿದ್ದಾರೆ.


Click the Play button to hear this message in audio format

ಮಹಾರಾಷ್ಟ್ರ ರಾಜಕಾರಣದಲ್ಲಿ ದಿನಕ್ಕೊಂದು ಸಂಚಲನ ಸೃಷ್ಟಿಯಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಉದ್ಧವ್‌ ಠಾಕ್ರೆ ಮತ್ತು ರಾಜ್‌ ಠಾಕ್ರೆ ಒಗ್ಗಟ್ಟು ಪ್ರದರ್ಶಿಸಿ ಮುಂಬರುವ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಸೇರಿದಂತೆ ರಾಜ್ಯದ 29 ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಉಭಯ ಪಕ್ಷಗಳು ಒಟ್ಟಾಗಿ ಸ್ಪರ್ಧಿಸುತ್ತಿರುವ ಬಗ್ಗೆ ಘೋಷಿಸಿದ್ದರು. ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ (NCP) ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್ಪಿ) ಮುಂಬರುವ ಪುಣೆ ಮಹಾನಗರ ಪಾಲಿಕೆ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿವೆ. ಈ ಮೂಲಕ ಎರಡು ವರ್ಷಗಳ ಹಿಂದೆ ಸೃಷ್ಟಿಯಾಗಿದ್ದ ಕೌಟುಂಬಿಕ ಬಿರುಕು ಈಗ ಚುನಾವಣಾ ಅಖಾಡದಲ್ಲಿ ಮರೆಯಾದಂತಾಗಿದೆ.

'ಪರಿವಾರ' ಒಂದಾಗಿದೆ ಎಂದ ಅಜಿತ್ ಪವಾರ್

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಜಿತ್ ಪವಾರ್, "ಪಿಂಪ್ರಿ-ಚಿಂಚವಾಡ ಮಹಾನಗರ ಪಾಲಿಕೆ ಚುನಾವಣೆಯ ಹಿತದೃಷ್ಟಿಯಿಂದ 'ಗಡಿಯಾರ' (ಅಜಿತ್ ಪವಾರ್ ಬಣದ ಗುರುತು) ಮತ್ತು 'ತುತಾರಿ' (ಶರದ್ ಪವಾರ್ ಬಣದ ಗುರುತು) ಒಂದಾಗಿವೆ. ಪವಾರ್ ಪರಿವಾರ ಈಗ ಮತ್ತೆ ಒಂದಾಗಿದೆ," ಎಂದು ಅಧಿಕೃತವಾಗಿ ಘೋಷಿಸಿದರು.

2023 ರಲ್ಲಿ ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ವಿರುದ್ಧ ಬಂಡಾಯವೆದ್ದು ಬಿಜೆಪಿಯೊಂದಿಗೆ ಕೈಜೋಡಿಸಿದಾಗ ಎನ್‌ಸಿಪಿ ಪಕ್ಷವು ಇಭ್ಭಾಗವಾಗಿತ್ತು. ಅಜಿತ್ ಪವಾರ್ ಅವರಿಗೆ ಪಕ್ಷದ ಹೆಸರು ಮತ್ತು 'ಗಡಿಯಾರ' ಗುರುತನ್ನು ಚುನಾವಣಾ ಆಯೋಗ ನೀಡಿತ್ತು. ಶರದ್ ಪವಾರ್ ಅವರು ಹೊಸ ಬಣವನ್ನು ಕಟ್ಟಿದರು. ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿದ ನಂತರ, ಉಭಯ ನಾಯಕರು ಒಂದಾಗಬೇಕು ಎಂಬ ಒತ್ತಡ ಕೇಳಿಬಂದಿತ್ತು.

ಚುನಾವಣಾ ವೇಳಾಪಟ್ಟಿ

ಪಿಂಪ್ರಿ-ಚಿಂಚವಾಡ ಮತ್ತು ಪುಣೆ ಸೇರಿದಂತೆ ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳಿಗೆ ಜನವರಿ 15 ರಂದು ಚುನಾವಣೆ ನಡೆಯಲಿದೆ. ಮರುದಿನವೇ ಅಂದರೆ ಜನವರಿ 16 ರಂದು ಮತ ಎಣಿಕೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಡಿಸೆಂಬರ್ 30 ಕೊನೆಯ ದಿನವಾಗಿದೆ.

ಬಿಜೆಪಿ ನಾಯಕರ ಪ್ರತಿಕ್ರಿಯೆ

ಪವಾರ್‌ ಕುಟುಂಬದ ಒಗ್ಗಟ್ಟು ಪ್ರದರ್ಶನದ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. “ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಆದೇಶದ ಮೇರೆಗೇ ಈ ಹಿಂದೆ ಬಿಜೆಪಿಗೆ ಬಂದಿದ್ದರು. ಈಗ ಅವರು ಒಂದಾಗುತ್ತಿರುವುದು ನಮಗೆ ಅಚ್ಚರಿಯೇನಲ್ಲ. ಶರದ್ ಪವಾರ್ ಕೂಡ ಶೀಘ್ರದಲ್ಲೇ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಲಿದ್ದಾರೆ ಎಂದು ಭಾವಿಸುತ್ತೇನೆ” ಎಂದು ಬಿಜೆಪಿ ನಾಯಕಿ ನವನೀತ್ ರಾಣಾ ತಿಳಿಸಿದ್ದಾರೆ.

ಶಿವಸೇನೆ (ಏಕನಾಥ್ ಶಿಂದೆ ಬಣ) ಟೀಕೆ:

ಈ ಮೈತ್ರಿಯನ್ನು ಶಿವಸೇನೆ ಟೀಕಿಸಿದೆ. "ಪವಾರ್ ಕುಟುಂಬ ಒಂದಾಗಬಹುದು, ಆದರೆ ಜನರು ಬರಿ 'ಸರ್‌ನೇಮ್' (ಮನೆತನದ ಹೆಸರು) ನೋಡಿ ಮತ ಹಾಕುವುದಿಲ್ಲ. ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ವಂಶಪಾರಂಪರ್ಯ ರಾಜಕಾರಣ ನಡೆಯುವುದಿಲ್ಲ," ಎಂದು ನಾಯಕಿ ಶೈನಾ ಎನ್‌ಸಿ ಕಿಡಿಕಾರಿದ್ದಾರೆ.

ರಾಜಕೀಯ ಲೆಕ್ಕಾಚಾರ ಸಂಪೂರ್ಣ ಬದಲು?

ಪವಾರ್ ಕುಟುಂಬದ ಈ ದಿಢೀರ್ ಮೈತ್ರಿಯು ಮಹಾರಾಷ್ಟ್ರದ ರಾಜಕೀಯ ಸಮೀಕರಣಗಳನ್ನು ಸಂಪೂರ್ಣವಾಗಿ ಬದಲಿಸುವ ಮುನ್ಸೂಚನೆ ನೀಡಿದೆ. ಮಹಾಯುತಿ ಮತ್ತು ಮಹಾವಿಕಾಸ್ ಅಘಾಡಿ (MVA) ಮೈತ್ರಿಕೂಟಗಳ ಮೇಲೆ ಇದು ಬೀರಲಿರುವ ಪರಿಣಾಮಗಳ ವಿಶ್ಲೇಷಣೆ ಇಲ್ಲಿದೆ:

1. ಮಹಾಯುತಿ (BJP-Sena-NCP) ಮೇಲಾಗುವ ಪರಿಣಾಮ:

ಬಿಜೆಪಿಗೆ ಸವಾಲು: ಅಜಿತ್ ಪವಾರ್ ಅವರು ಈಗಾಗಲೇ ಮಹಾಯುತಿಯ ಭಾಗವಾಗಿದ್ದಾರೆ. ಈಗ ಅವರು ಶರದ್ ಪವಾರ್ ಅವರೊಂದಿಗೆ ಕೈಜೋಡಿಸಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಪುಣೆ ಮತ್ತು ಪಿಂಪ್ರಿ-ಚಿಂಚವಾಡದಲ್ಲಿ ಬಿಜೆಪಿಯ ಪ್ರಭಾವವನ್ನು ಕುಗ್ಗಿಸಲು ಪವಾರ್ ಕುಟುಂಬದ ಈ 'ಒಗ್ಗಟ್ಟು' ಕಾರಣವಾಗಬಹುದು.

ಶಿಂಧೆ ಸೇನೆಯ ಅಸಮಾಧಾನ: ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಈ ಮೈತ್ರಿಯನ್ನು ಈಗಾಗಲೇ ಟೀಕಿಸಿದೆ. ಕುಟುಂಬ ರಾಜಕಾರಣದ ಹೆಸರಿನಲ್ಲಿ ಪವಾರ್ ಬಣಗಳು ಒಂದಾದರೆ, ಅದು ಶಿಂಧೆ ಬಣದ ಅಸ್ತಿತ್ವಕ್ಕೆ ಧಕ್ಕೆ ತರಬಹುದು ಎಂಬ ಆತಂಕ ಅವರಲ್ಲಿದೆ.

2. ಮಹಾವಿಕಾಸ್ ಅಘಾಡಿ (MVA) ಮೇಲಾಗುವ ಪರಿಣಾಮ

ಶಿವಸೇನೆ (UBT) ಮತ್ತು ಕಾಂಗ್ರೆಸ್ ಗೊಂದಲ: ಶರದ್ ಪವಾರ್ ಅವರು ಎಂವಿಎ ಮೈತ್ರಿಕೂಟದ ಪ್ರಮುಖ ನಾಯಕರು. ಈಗ ಅವರು ಮಹಾಯುತಿಯಲ್ಲಿರುವ ಅಜಿತ್ ಪವಾರ್ ಜೊತೆ ಸ್ಥಳೀಯ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿರುವುದು ಉದ್ದವ್ ಠಾಕ್ರೆ ಮತ್ತು ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡಿದೆ. ಇದು ರಾಜ್ಯ ಮಟ್ಟದಲ್ಲಿ ಎಂವಿಎ ಮೈತ್ರಿಕೂಟದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ.

ಮತಗಳ ವಿಭಜನೆ ತಡೆ: ಪುಣೆ ಪವಾರ್ ಕುಟುಂಬದ ಭದ್ರಕೋಟೆ. ಇಲ್ಲಿ ಎರಡೂ ಬಣಗಳು ಬೇರೆ ಬೇರೆಯಾಗಿ ಸ್ಪರ್ಧಿಸಿದರೆ ಅದರ ಲಾಭ ಬಿಜೆಪಿಗೆ ಆಗುತ್ತಿತ್ತು. ಈಗ ಇಬ್ಬರೂ ಒಂದಾಗಿರುವುದರಿಂದ ವಿರೋಧ ಪಕ್ಷದ ಮತಗಳು ಚದುರುವುದನ್ನು ತಡೆಯಲು ಶರದ್ ಪವಾರ್ ಈ ತಂತ್ರ ಹೂಡಿದ್ದಾರೆ ಎನ್ನಲಾಗುತ್ತಿದೆ.

3. 'ಮಹಾ' ರಾಜಕೀಯದ ಭವಿಷ್ಯ

ನವನೀತ್ ರಾಣಾ ಅವರಂತಹ ಬಿಜೆಪಿ ನಾಯಕರು ಹೇಳುವಂತೆ, ಶರದ್ ಪವಾರ್ ಅವರು ಶೀಘ್ರದಲ್ಲೇ ಎನ್‌ಡಿಎ (NDA) ಸೇರಲಿದ್ದಾರೆ ಎಂಬ ಮಾತುಗಳು ನಿಜವಾದರೆ, ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ವಿರೋಧ ಪಕ್ಷವೇ ಇಲ್ಲದಂತಾಗುತ್ತದೆ. ಇದು ಪವಾರ್ ಕುಟುಂಬವು ತನ್ನ ರಾಜಕೀಯ ಅಧಿಪತ್ಯವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ 'ಮಾಸ್ಟರ್ ಪ್ಲಾನ್' ಎಂದೇ ವಿಶ್ಲೇಷಿಸಲಾಗುತ್ತಿದೆ.

Read More
Next Story