Sabarimala gold theft case: Main accused gets bail but faces jail
x

ಶಬರಿಮಲೆ ದೇವಾಲಯ

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು ಸಿಕ್ಕರೂ ಜೈಲೇ ಗತಿ

ಶಬರಿಮಲೆಯ ಶ್ರೀಕೋವಿಲ್ (ಗರ್ಭಗುಡಿ) ಬಾಗಿಲ ಚೌಕಟ್ಟುಗಳಿಂದ ಚಿನ್ನ ಕಾಣೆಯಾದ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (SIT) ನಿಗದಿತ 90 ದಿನಗಳೊಳಗೆ ದೋಷಾರೋಪ ಪಟ್ಟಿ (Chargesheet) ಸಲ್ಲಿಸಲು ವಿಫಲವಾಗಿತ್ತು.


Click the Play button to hear this message in audio format

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಚಿನ್ನದ ಬಾಗಿಲು ಮತ್ತು ವಿಗ್ರಹಗಳಿಂದ ಚಿನ್ನ ಕಣ್ಮರೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿಗೆ ಕೇರಳದ ವಿಜಿಲೆನ್ಸ್ ಕೋರ್ಟ್ ಬುಧವಾರ (ಜ.21) ಜಾಮೀನು ಮಂಜೂರು ಮಾಡಿದೆ. ಆದರೆ, ಮತ್ತೊಂದು ಪ್ರಕರಣ ಬಾಕಿ ಇರುವ ಕಾರಣ ಅವರು ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಬರಿಮಲೆಯ ಶ್ರೀಕೋವಿಲ್ (ಗರ್ಭಗುಡಿ) ಬಾಗಿಲ ಚೌಕಟ್ಟುಗಳಿಂದ ಚಿನ್ನ ಕಾಣೆಯಾದ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (SIT) ನಿಗದಿತ 90 ದಿನಗಳೊಳಗೆ ದೋಷಾರೋಪ ಪಟ್ಟಿ (Chargesheet) ಸಲ್ಲಿಸಲು ವಿಫಲವಾಗಿತ್ತು. ಈ ತಾಂತ್ರಿಕ ಕಾರಣವನ್ನಿಟ್ಟುಕೊಂಡು ಪೊಟ್ಟಿ ಪರ ವಕೀಲರು ವಾದ ಮಂಡಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ನೀಡಿದೆ.

ಆದರೆ, ದ್ವಾರಪಾಲಕರ ವಿಗ್ರಹಗಳ ಚಿನ್ನ ಕಣ್ಮರೆ ಪ್ರಕರಣದಲ್ಲಿಯೂ ಪೊಟ್ಟಿ ಆರೋಪಿಯಾಗಿರುವುದರಿಂದ ಮತ್ತು ಆ ಪ್ರಕರಣದಲ್ಲಿ ಜಾಮೀನು ಸಿಗದ ಕಾರಣ ಅವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಟ್ರಾವಂಕೂರ್ ದೇವಸ್ವಂ ಮಂಡಳಿಯ (TDB) ಇಬ್ಬರು ಮಾಜಿ ಅಧ್ಯಕ್ಷರು ಸೇರಿದಂತೆ ಒಟ್ಟು 12 ಜನರನ್ನು ಬಂಧಿಸಲಾಗಿದೆ.

ಮೂರು ರಾಜ್ಯಗಳಲ್ಲಿ ಇಡಿ (ED) ಭರ್ಜರಿ ಬೇಟೆ

ಜಾಮೀನು ಆದೇಶ ಬರುವ ಒಂದು ದಿನದ ಮೊದಲು, ಜಾರಿ ನಿರ್ದೇಶನಾಲಯ (ED) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ ಬರೋಬ್ಬರಿ 21 ಕಡೆಗಳಲ್ಲಿ ದಾಳಿ ನಡೆಸಿದೆ. ಬೆಂಗಳೂರಿನಲ್ಲಿರುವ ಉನ್ನಿಕೃಷ್ಣನ್ ಪೊಟ್ಟಿಗೆ ಸೇರಿದ ಸ್ಥಳಗಳು, ಕೇರಳದಲ್ಲಿ ಟಿಡಿಬಿ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರಿಗೆ ಸಂಬಂಧಿಸಿದ ಆಸ್ತಿಗಳು. ಹಲವು ಪ್ರಮುಖ ಚಿನ್ನದ ಆಭರಣ ಮಳಿಗೆಗಳ ಮೇಲೆ ದಾಳಿ ಮಾಡಲಾಗಿದೆ.

ದಾಳಿಯ ವೇಳೆ ಪೊಟ್ಟಿ ಅವರಿಗೆ ಸೇರಿದ ಭೂ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹಣಕಾಸಿನ ವಹಿವಾಟಿನ ಜಾಡು ಹಿಡಿದು ತನಿಖೆ ಮುಂದುವರಿಸಲಾಗಿದೆ.

ಏನಿದು ಹಗರಣ?

ಇಡಿ ಪ್ರಾಥಮಿಕ ತನಿಖೆಯ ಪ್ರಕಾರ, 2019 ರಿಂದ 2025ರ ನಡುವೆ ಶಬರಿಮಲೆ ದೇವಾಲಯದಲ್ಲಿದ್ದ ಚಿನ್ನ ಲೇಪಿತ ಪವಿತ್ರ ಆಭರಣಗಳು ಮತ್ತು ವಸ್ತುಗಳನ್ನು ಅಧಿಕೃತ ದಾಖಲೆಗಳಲ್ಲಿ 'ತಾಮ್ರದ ತಗಡುಗಳು' ಎಂದು ಸುಳ್ಳು ನಮೂದಿಸಿ ದೇವಾಲಯದಿಂದ ಹೊರಗೆ ಸಾಗಿಸಲಾಗಿದೆ.

ಹೀಗೆ ಸಾಗಿಸಲಾದ ವಸ್ತುಗಳನ್ನು ಚೆನ್ನೈ ಮತ್ತು ಕರ್ನಾಟಕದ ಕೆಲವು ಖಾಸಗಿ ಘಟಕಗಳಲ್ಲಿ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಿ, ಅದರಿಂದ ಚಿನ್ನವನ್ನು ಬೇರ್ಪಡಿಸಿ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪವಿದೆ. ಈ ಪ್ರಕರಣವು ಕೇರಳ ಹೈಕೋರ್ಟ್ ನಿಗಾವಣೆಯಲ್ಲಿ ತನಿಖೆಯಾಗುತ್ತಿದೆ.

Read More
Next Story