
ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್
ಉನ್ನಾವೋ ಅತ್ಯಾಚಾರ: ಸೆಂಗಾರ್‌ಗೆ ಶಾಕ್- ಶಿಕ್ಷೆ ಅಮಾನತು ನಿರಾಕರಿಸಿದ ದೆಹಲಿ ಹೈಕೋರ್ಟ್!
ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಉನ್ನಾವೋ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ಅಮಾನತು ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ಇಂದು (ಜ. 19) ದೆಹಲಿ ಹೈಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಈ ಪ್ರಕರಣದಲ್ಲಿ ತನಗೆ ವಿಧಿಸಲಾಗಿರುವ 10 ವರ್ಷಗಳ ಶಿಕ್ಷೆಯನ್ನು ಅಮಾನತುಗೊಳಿಸಬೇಕೆಂಬ ಸೆಂಗಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ ಮತ್ತು ಇಂದಿನ ತೀರ್ಪು
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ರವೀಂದರ್ ದುಡೇಜಾ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಸೆಂಗಾರ್ ಈಗಾಗಲೇ ಸುಮಾರು 7.5 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರೂ ಮತ್ತು ಆತನ ಮೇಲ್ಮನವಿ ವಿಚಾರಣೆ ವಿಳಂಬವಾಗುತ್ತಿದ್ದರೂ, ಆ ವಿಳಂಬಕ್ಕೆ ಸೆಂಗಾರ್ ಅವರೇ ಸಲ್ಲಿಸಿದ ಸರಣಿ ಅರ್ಜಿಗಳೂ ಒಂದು ಕಾರಣ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ, ಸದ್ಯಕ್ಕೆ ಶಿಕ್ಷೆ ಅಮಾನತುಗೊಳಿಸಲು ಸಾಧ್ಯವಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.
ಕಸ್ಟಡಿ ಸಾವು
2018ರ ಏಪ್ರಿಲ್‌ನಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಸುಳ್ಳು ಆರೋಪದ ಮೇಲೆ ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅವರು ತೀವ್ರ ಗಾಯಗೊಂಡು ಸಾವನ್ನಪ್ಪಿದ್ದರು. ಈ ಪಿತೂರಿಯಲ್ಲಿ ಸೆಂಗಾರ್ ಪಾತ್ರವಿದೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ, 2020ರ ಮಾರ್ಚ್‌ನಲ್ಲಿ ದೆಹಲಿಯ ವಿಶೇಷ ನ್ಯಾಯಾಲಯವು ಸೆಂಗಾರ್‌ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು.
ಸಂಕಷ್ಟದ ಮೇಲೆ ಸಂಕಷ್ಟ
ಸೆಂಗಾರ್‌ಗೆ ಇದೊಂದು ಸರಣಿ ಹಿನ್ನಡೆಯಾಗಿದೆ. ಕಳೆದ ತಿಂಗಳು (ಡಿಸೆಂಬರ್ 23, 2025) ಅತ್ಯಾಚಾರ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಆತನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿತ್ತು. ಆದರೆ, ಸಂತ್ರಸ್ತೆಯ ಕುಟುಂಬವು ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ, ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು. ಅಂದರೆ, ಅತ್ಯಾಚಾರ ಪ್ರಕರಣದಲ್ಲೂ ಆತ ಈಗ ಜೈಲಿನಲ್ಲೇ ಇರಬೇಕಾಗಿದೆ. ಇಂದು ಕಸ್ಟಡಿ ಸಾವು ಪ್ರಕರಣದಲ್ಲೂ ಜಾಮೀನು ಸಿಗದ ಕಾರಣ, ಸೆಂಗಾರ್‌ನ ಜೈಲು ವಾಸ ಮುಂದುವರಿಯಲಿದೆ.

