ಶಬರಿಮಲೆಯಲ್ಲಿ ಕನ್ನಡಿಗರಿಗೆ ಜಯ; ಯಾತ್ರೆಗೆ ವಿಧಿಸಿದ್ದ ನಿರ್ಬಂಧ ತೆರವು
x
ಅಯ್ಯಪ್ಪ ಭಕ್ತರ ಪ್ರತಿಭಟನೆ

ಶಬರಿಮಲೆಯಲ್ಲಿ ಕನ್ನಡಿಗರಿಗೆ ಜಯ; ಯಾತ್ರೆಗೆ ವಿಧಿಸಿದ್ದ ನಿರ್ಬಂಧ ತೆರವು

ಶಬರಿಮಲೆ ಮಕರ ಜ್ಯೋತಿ ದರ್ಶನದ ವೇಳೆ ಕರ್ನಾಟಕದ ಭಕ್ತರಿಗೆ ವಿಧಿಸಿದ್ದ ವಾಹನ ನಿರ್ಬಂಧವನ್ನು ಕೇರಳ ಸರ್ಕಾರ ತೆರವುಗೊಳಿಸಿದೆ. ಎರುಮೇಲಿಯಲ್ಲಿ ನಡೆದ ಪ್ರತಿಭಟನೆ ಮತ್ತು ಮಾಧ್ಯಮಗಳ ವರದಿಗೆ ಪಿಣರಾಯಿ ವಿಜಯನ್ ಸರ್ಕಾರ ಮಣಿದಿದೆ.


ಮಕರ ಜ್ಯೋತಿ ದರ್ಶನಕ್ಕೆಂದು ಶಬರಿಮಲೆಗೆ ತೆರಳುತ್ತಿದ್ದ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳಿಗೆ ಎದುರಾಗಿದ್ದ ದೊಡ್ಡ ವಿಘ್ನವೊಂದು ಕೊನೆಗೂ ನಿವಾರಣೆಯಾಗಿದೆ. ಕೇರಳ ಪೊಲೀಸರ ಹಠಮಾರಿ ಧೋರಣೆಯ ವಿರುದ್ಧ ಕನ್ನಡಿಗರು ನಡೆಸಿದ ಹೋರಾಟd ಫಲವಾಗಿ, ಪಿಣರಾಯಿ ವಿಜಯನ್ ಸರ್ಕಾರವು ಕನ್ನಡಿಗರಿಗೆ ಯಾತ್ರೆ ಮುಂದುವರಿಸಲು ಅನುವು ಮಾಡಿಕೊಟ್ಟಿದೆ.

ಏನಿದು ವಿವಾದ?

ಮಂಗಳವಾರ ಬೆಳಗ್ಗೆ ಕೇರಳದ ಎರುಮೇಲಿ ಬಳಿ ಕರ್ನಾಟಕ ನೋಂದಣಿಯ ವಾಹನಗಳನ್ನು ಕೇರಳ ಪೊಲೀಸರು ತಡೆದಿದ್ದರು. "ಇಲ್ಲಿಂದ ಮುಂದೆ 60 ಕಿಲೋ ಮೀಟರ್ ದೂರದವರೆಗೆ ಖಾಸಗಿ ವಾಹನಗಳಿಗೆ ಅವಕಾಶವಿಲ್ಲ, ಕೇವಲ ಕೇರಳ ರಾಜ್ಯ ಸಾರಿಗೆ ಬಸ್‌ಗಳಲ್ಲೇ ತೆರಳಬೇಕು" ಎಂದು ಪೊಲೀಸರು ತಾಕೀತು ಮಾಡಿದ್ದರು. ಆದರೆ, ಕೇರಳದ ಸ್ಥಳೀಯ ವಾಹನಗಳಿಗೆ ಮಾತ್ರ ಮುಕ್ತ ಪ್ರವೇಶ ನೀಡಿ, ಕನ್ನಡಿಗರ ವಾಹನಗಳನ್ನು ತಡೆದದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

ರಸ್ತೆಯಲ್ಲೇ ಭಜನೆ ಮಾಡಿ ಪ್ರತಿಭಟಿಸಿದ ಭಕ್ತರು

ಪೊಲೀಸರ ಈ ತಾರತಮ್ಯದ ವಿರುದ್ಧ ಕೆರಳಿದ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳು ಎರುಮೇಲಿಯಲ್ಲೇ ರಸ್ತೆ ತಡೆ ನಡೆಸಿದರು. ರಸ್ತೆಯಲ್ಲೇ ಕುಳಿತು 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಭಜನೆ ಮಾಡುತ್ತಾ, ಕೇರಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಕರ ಜ್ಯೋತಿ ದರ್ಶನದ ಆತುರದಲ್ಲಿದ್ದ ಭಕ್ತರಿಗೆ ಈ ನಿರ್ಬಂಧ ದೊಡ್ಡ ತಲೆನೋವಾಗಿತ್ತು.

ಭಕ್ತರ ಆಕ್ರೋಶಕ್ಕೆ ಮಣಿದ ಕೇರಳ ಸರ್ಕಾರ

ಈ ಘಟನೆಯ ಕುರಿತು ಕರ್ನಾಟಕ ಸುದ್ದಿ ಮಾಧ್ಯಮಗಳು ಸ್ಥಳದಿಂದಲೇ ನಿರಂತರವಾಗಿ ವರದಿ ಬಿತ್ತರಿಸಿತ್ತು. ಸಮಸ್ಯೆಯ ತೀವ್ರತೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದ ಗಮನಕ್ಕೆ ತಂದ ಬೆನ್ನಲ್ಲೇ ಎಚ್ಚೆತ್ತ ಕೇರಳ ಸರ್ಕಾರ, ತಕ್ಷಣವೇ ತನ್ನ ನಿರ್ಧಾರವನ್ನು ಹಿಂಪಡೆಯಿತು. ಕನ್ನಡಿಗರ ವಾಹನಗಳಿಗೆ ಶಬರಿಮಲೆಗೆ ತೆರಳಲು ಗ್ರೀನ್ ಸಿಗ್ನಲ್ ನೀಡಿತು.

ಇಂದು ಮಕರ ಜ್ಯೋತಿ

ಶಬರಿಮಲೆಗೆ ಅತಿ ಹೆಚ್ಚು ಭಕ್ತರು ಕರ್ನಾಟಕದಿಂದಲೇ ತೆರಳುತ್ತಿದ್ದು, ಮಕರ ಸಂಕ್ರಾಂತಿಯ ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಈ ಜಯ ಭಕ್ತರಲ್ಲಿ ಸಂತಸ ತಂದಿದೆ. ದರ್ಶನದ ಸಮಯ: ಇಂದು (ಜನವರಿ 14, ಬುಧವಾರ) ಸಂಜೆ 6:30 ರಿಂದ 6:45ರ ಸುಮಾರಿಗೆ ಪೊನ್ನಂಬಲಮೇಡು ಬೆಟ್ಟದ ಮೇಲೆ ಮಕರ ಜ್ಯೋತಿಯ ದರ್ಶನವಾಗುವ ನಿರೀಕ್ಷೆಯಿದೆ.

ತಿರುವಾಭರಣ ಆಗಮನ: ಪಂದಳದಿಂದ ಹೊರಟಿರುವ ಪವಿತ್ರ 'ತಿರುವಾಭರಣ' ಮೆರವಣಿಗೆ ಈಗಾಗಲೇ ಸನ್ನಿಧಾನದ ಹತ್ತಿರ ತಲುಪಿದೆ. ಸಂಜೆ 6 ಗಂಟೆಯ ಸುಮಾರಿಗೆ ಅಯ್ಯಪ್ಪ ಸ್ವಾಮಿಗೆ ಈ ಆಭರಣಗಳ ಅಲಂಕಾರ ಮಾಡಿ ಮಹಾಪೂಜೆ ನಡೆಯಲಿದೆ. ಸನ್ನಿಧಾನ, ಪಂಪಾ, ಮತ್ತು ಎರುಮೇಲಿಯಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತರು ಜಮಾಯಿಸಿದ್ದು, 'ಸ್ವಾಮಿಯೇ ಶರಣಂ ಅಯ್ಯಪ್ಪ' ಘೋಷಣೆಗಳು ಮೊಳಗುತ್ತಿವೆ.

Read More
Next Story