
'ಶ್ರೀಮದ್ ಭಗವದ್ಗೀತೆ'ಯ ರಷ್ಯನ್ ಆವೃತ್ತಿಯನ್ನು ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ನೀಡಿದರು.
ಪುಟಿನ್‌ಗೆ ಭಗವದ್ಗೀತೆ, ಅಸ್ಸಾಂ ಚಹಾ, ಬೆಳ್ಳಿ ಕುದುರೆ ಉಡುಗೊರೆ ನೀಡಿದ ಪ್ರಧಾನಿ ಮೋದಿ
ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ನೀಡಿದ ಕರ್ತವ್ಯ ಮತ್ತು ಅಧ್ಯಾತ್ಮದ ಬೋಧನೆಯುಳ್ಳ 'ಶ್ರೀಮದ್ ಭಗವದ್ಗೀತೆ'ಯ ರಷ್ಯನ್ ಆವೃತ್ತಿಯನ್ನು ಮೋದಿ ಅವರು ಪುಟಿನ್ ಅವರಿಗೆ ನೀಡುವ ಮೂಲಕ ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಹಂಚಿಕೊಂಡಿದ್ದಾರೆ.
ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಭಾರತದ ಶ್ರೀಮಂತ ಪರಂಪರೆ ಮತ್ತು ಕರಕುಶಲತೆಯನ್ನು ಬಿಂಬಿಸುವ ಅತ್ಯಮೂಲ್ಯ ಉಡುಗೊರೆಗಳನ್ನು ನೀಡಿದ್ದಾರೆ.
ಪ್ರಮುಖವಾಗಿ, ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ನೀಡಿದ ಕರ್ತವ್ಯ ಮತ್ತು ಅಧ್ಯಾತ್ಮದ ಬೋಧನೆಯುಳ್ಳ 'ಶ್ರೀಮದ್ ಭಗವದ್ಗೀತೆ'ಯ ರಷ್ಯನ್ ಆವೃತ್ತಿಯನ್ನು ಮೋದಿ ಅವರು ಪುಟಿನ್ ಅವರಿಗೆ ನೀಡುವ ಮೂಲಕ ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಹಂಚಿಕೊಂಡಿದ್ದಾರೆ.
ಭಾರತದ ಕರಕುಶಲ ವೈಭವವನ್ನು ಪರಿಚಯಿಸುವ ಸಲುವಾಗಿ ಮಹಾರಾಷ್ಟ್ರದ ಕುಶಲಕರ್ಮಿಗಳು ಸಿದ್ಧಪಡಿಸಿದ, ಸೂಕ್ಷ್ಮ ಕೆತ್ತನೆಗಳನ್ನು ಹೊಂದಿರುವ ಬೆಳ್ಳಿಯ ಕುದುರೆ ಮೂರ್ತಿಯನ್ನು ನೀಡಲಾಗಿದ್ದು, ಇದು ಉಭಯ ದೇಶಗಳ ಬಾಂಧವ್ಯದ ವೇಗ ಮತ್ತು ಪ್ರಗತಿಯನ್ನು ಸಂಕೇತಿಸುತ್ತದೆ. ಇದರೊಂದಿಗೆ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಕಲಾವಂತಿಕೆಯನ್ನು ತೋರುವ ಸುಂದರವಾದ ಬೆಳ್ಳಿಯ ಟೀ ಸೆಟ್ ಮತ್ತು ಆಗ್ರಾದ ಪ್ರಸಿದ್ಧ ಕಲ್ಲು ಕೆತ್ತನೆ ಕಲೆಯನ್ನು ಬಿಂಬಿಸುವ ಅಮೃತಶಿಲೆಯ (ಮಾರ್ಬಲ್) ಚೆಸ್ ಸೆಟ್ ಅನ್ನು ಸಹ ನೀಡಲಾಗಿದೆ. ಈ ಚೆಸ್ ಸೆಟ್ 'ಒಂದು ಜಿಲ್ಲೆ ಒಂದು ಉತ್ಪನ್ನ' (ODOP) ಯೋಜನೆಯಡಿ ತಯಾರಾದ ವಿಶೇಷ ವಸ್ತುವಾಗಿದೆ.
ಅಸ್ಸಾಂ ಚಹಾ
ಭಾರತದ ವಿಶಿಷ್ಟ ರುಚಿ ಮತ್ತು ಸೊಗಡನ್ನು ರಷ್ಯಾಕ್ಕೆ ಪರಿಚಯಿಸುವ ಉದ್ದೇಶದಿಂದ, ಬ್ರಹ್ಮಪುತ್ರ ಕಣಿವೆಯ ಫಲವತ್ತಾದ ಮಣ್ಣಿನಲ್ಲಿ ಬೆಳೆದ ಮತ್ತು ಜಿಐ (GI) ಟ್ಯಾಗ್ ಮಾನ್ಯತೆ ಹೊಂದಿರುವ ಅಸ್ಸಾಂನ ವಿಶೇಷ 'ಬ್ಲ್ಯಾಕ್ ಟೀ'ಯನ್ನು ಪ್ರಧಾನಿಗಳು ಉಡುಗೊರೆಯಾಗಿ ನೀಡಿದ್ದಾರೆ. ಇದಲ್ಲದೆ, ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಬೆಳೆಯುವ, ತನ್ನ ವಿಶಿಷ್ಟ ಸುಗಂಧ ಮತ್ತು ಬಣ್ಣಕ್ಕೆ ಜಗತ್ತಿನಲ್ಲೇ ಪ್ರಖ್ಯಾತವಾಗಿರುವ 'ಕಾಶ್ಮೀರಿ ಕೇಸರಿ'ಯನ್ನು (ಜಾಫ್ರಾನ್) ಕೂಡ ಮೋದಿ ಅವರು ಪುಟಿನ್ ಅವರಿಗೆ ನೀಡುವ ಮೂಲಕ ಭಾರತದ ಕೃಷಿ ವೈವಿಧ್ಯತೆಯನ್ನು ಅನಾವರಣಗೊಳಿಸಿದ್ದಾರೆ.

