The Bidriware Vase of Bidar, in faraway Ghana, is world famous.
x

ಘಾನಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಬಿದರಿ ಹೂದಾನಿ ಉಡುಗೊರೆ ನೀಡಿದರು. 

ದೂರದ ಘಾನಾದಲ್ಲಿ ಬೀದರ್‌ನ ʼಬಿದ್ರಿವೇರ್‌ ಹೂದಾನಿʼ ವಿಶ್ವಪ್ರಸಿದ್ದಿ

ಸುಮಾರು 500 ವರ್ಷಗಳಷ್ಟು ಪ್ರಾಚೀನ ಕರಕುಶಲ ಕಲೆಯಲ್ಲಿ ಅರಳಿದ ಜಿಂಕ್‌, ತಾಮ್ರ ಹಾಗೂ ಬೆಳ್ಳಿ ಸೊಬಗುಳ್ಳ ʼಬಿದ್ರಿವೇರ್ ಹೂದಾನಿʼಯನ್ನು ಪ್ರಧಾನಿ ಮೋದಿ ಘಾನಾ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿದ್ದಾರೆ.


ಆಫ್ರಿಕಾದ ದಕ್ಷಿಣ ರಾಷ್ಟ್ರಗಳಲ್ಲಿ ಒಂದಾದ ಘಾನಾದಲ್ಲಿ ಕರ್ನಾಟಕದ ಬೀದರ್‌ನ ಕರಕುಶಲತೆಯುಳ್ಳ ʼಬಿದ್ರಿವೇರ್‌ ಹೂದಾನಿʼ ಗಮನಸೆಳೆದಿದ್ದು ಕರುನಾಡಿನ ಕರಕುಶಲತೆ ಇದೀಗ ವಿಶ್ವ ಪ್ರಸಿದ್ದಿಯಾಗಿದೆ.

ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದ ದಕ್ಷಿಣ ರಾಷ್ಟ್ರಗಳಿಗೆ ದೀರ್ಘ ಪ್ರವಾಸ ಕೈಗೊಂಡಿದ್ದಾರೆ. ಇದರ ಭಾಗವಾಗಿ ಘಾನಾಕ್ಕೆ ಭೇಟಿ ನೀಡಿದ್ದು ಅಧ್ಯಕ್ಷ ಜಾನ್ ಮಹಾಮಾ ಅವರಿಗೆ ಬೀದರಿನಲ್ಲಿ ಸಿದ್ಧವಾದ ʼಬಿದ್ರಿವೇರ್‌ ಹೂದಾನಿʼಯನ್ನೇ ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿದೆ.

ಮೂವತ್ತು ವರ್ಷಗಳ ಬಳಿಕ ಭಾರತದ ಪ್ರಧಾನಿ ಘಾನಾ ಪ್ರವಾಸ ಕೈಗೊಂಡ ಸವಿನೆನಪಿಗೆ ಭಾರತ ಮತ್ತು ಘಾನಾ ದೇಶಗಳ ಸಾಂಸ್ಕೃತಿಕ ಸಂಬಂಧ ಬೆಸೆಯುವ ಪ್ರತೀಕವಾಗಿ ಸುಮಾರು 500 ವರ್ಷಗಳಷ್ಟು ಪ್ರಾಚೀನ ಕರಕುಶಲ ಕಲೆಯಲ್ಲಿ ಅರಳಿದ ಜಿಂಕ್‌, ತಾಮ್ರ ಹಾಗೂ ಬೆಳ್ಳಿ ಸೊಬಗುಳ್ಳ ʼಬಿದ್ರಿವೇರ್ ಹೂದಾನಿʼ(ಹೂ ಕುಂಡ) ನೀಡಿ ಭಾರತದ ಪ್ರಾಚೀನತೆ ಜತೆಗೆ ಕರ್ನಾಟಕದ ಕೌಶಲ್ಯಸಿರಿಯನ್ನು ಪಸರಿಸಿದ್ದಾರೆ.

500 ವರ್ಷಗಳ ಇತಿಹಾಸ

ಬೀದರ್‌ನಲ್ಲಿ ಸುಮಾರು 500 ವರ್ಷಗಳಷ್ಟು ಹಳೆಯದಾದ ಪರ್ಷಿಯನ್ ಪ್ರಭಾವಿತ ತಂತ್ರಜ್ಞಾನದೊಂದಿಗೆ ಈ ʼಬಿದ್ರಿವೇರ್ ಹೂದಾನಿʼ ತಯಾರಾಗಿದೆ. ಜಿಂಕ್,ತಾಮ್ರ ಮಿಶ್ರಲೋಹದೊಂದಿಗೆ ಬೆಳ್ಳಿಯನ್ನು ಸಹ ಬಳಸಿ ಸೊಗಸಾದ ಕರಕುಶಲತೆಯಲ್ಲಿ ತಯಾರಿಸಿದ್ದಾಗಿದ್ದು, ಈ ವಿಶಿಷ್ಟ ಕಾಣಿಕೆಯನ್ನು ಘಾನಾ ಅಧ್ಯಕ್ಷ ದಂಪತಿಗೆ ನೀಡಿದ್ದಾರೆ.

ಬೀದರ್‌ ಕೀರ್ತಿ ಘಾನಾವರೆಗೆ

ಪ್ರಧಾನಿ ನರೇಂದ್ರ ಮೋದಿ ಪ್ರತಿ ಬಾರಿ ವಿದೇಶ ಪ್ರವಾಸ ಕೈಗೊಂಡ ವೇಳೆ ವಿದೇಶಿ ಗಣ್ಯರಿಗೆ ಭಾರತವನ್ನು ವಿಭಿನ್ನವಾಗಿಯೇ ಪರಿಚಯಿಸುವ ವಿಶಿಷ್ಠ ಉಡುಗೊರೆ ನೀಡುವುದರ ಜತೆಗೆ ಭಾರತದ ವೈವಿಧ್ಯ ಹಾಗೂ ವೈಶಿಷ್ಟ್ಯತೆಗಳನ್ನು ವಿಶ್ವಪ್ರಸಿದ್ಧಗೊಳಿಸುತ್ತಲೇ ಬಂದಿದ್ದಾರೆ. ಅದೇ ರೀತಿ ಈಗ ಘಾನಾ ಅಧ್ಯಕ್ಷರಿಗೆ ವಿಶಿಷ್ಟ ಕಲಾಕೃತಿಯ ʼಬಿದ್ರಿವೇರ್ ಹೂದಾನಿʼ ನೀಡುವ ಮೂಲಕ ಬೀದರ್‌ ಕೀರ್ತಿಯನ್ನು ಜಾಗತಿಕಗೊಳಿಸಿದ್ದಾರೆ.

ʼಬಿದ್ರಿವೇರ್ ಹೂದಾನಿʼ ಕಪ್ಪು ವರ್ಣರಂಜಿತವಾಗಿದ್ದು, ಬೆಳ್ಳಿಯ ಕುಸುರಿ ಕೂಡ ಹೊಂದಿದ್ದು, ಭಾರತದ ಪ್ರಸಿದ್ಧ ಲೋಹದ ಕರಕುಶಲತೆಯನ್ನು ಪ್ರದರ್ಶಿಸುತ್ತದೆ. ಶತಮಾನಗಳಷ್ಟು ಹಳೆಯದಾದರೂ ವಿಶಿಷ್ಟ ತಾಂತ್ರಿಕತೆ, ಕುಶಲಕರ್ಮಿಗಳ ಆಕರ್ಷಕ ಕೌಶಲ್ಯ ಅಡಕವಾಗಿದೆ. ಸೌಂದರ್ಯ - ಸಮೃದ್ಧಿಯನ್ನು ಸಂಕೇತಿಸುವ ಹೂವಿನ ವಿನ್ಯಾಸದಿಂದ ಕೆತ್ತಲಾಗಿದೆ.

ಬಿದರಿ ಕಲೆ ಇತಿಹಾಸ

ಬೀದರ್‌ನ ಕರಕುಶಲ ವಸ್ತುಗಳ ಇತಿಹಾಸವು 14 ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಅಭಿವೃದ್ಧಿಪಡಿಸಲಾಯಿತು. ಇದು ಮುಖ್ಯವಾಗಿ "ಬಿದ್ರಿವೇರ್" ಎಂಬ ಲೋಹದ ಕರಕುಶಲ ವಸ್ತುವಿನಿಂದ ತಯಾರಿಸಲಾಗುತ್ತದೆ. ಈ ಕಲೆ ಪರ್ಷಿಯನ್ ಮತ್ತು ಅರೇಬಿಕ್ ಪ್ರಭಾವಗಳನ್ನು ಹೊಂದಿದ್ದು, ಬೀದರ್‌ನ ಸ್ಥಳೀಯ ಶೈಲಿ ಮತ್ತು ಸಂಸ್ಕೃತಿಯೊಂದಿಗೆ ಬೆರೆತುಹೋಗಿದೆ. ಬೀದರ್ ನಗರವು ಈ ಕಲಾ ಪ್ರಕಾರದ ಮುಖ್ಯ ಕೇಂದ್ರವಾಗಿದೆ. ಅದರ ಎದ್ದುಕಾಣುವ ಕೆತ್ತನೆಯ ಕಲಾಕೃತಿಯಿಂದಾಗಿ, ಬಿದ್ರಿವೇರ್ ಭಾರತದ ಪ್ರಮುಖ ರಫ್ತು ಕರಕುಶಲ ವಸ್ತುವಾಗಿದ್ದು ಸಂಪತ್ತಿನ ಸಂಕೇತವಾಗಿ ಗೌರವಿಸಲಾಗುತ್ತದೆ.

ಕುಸಿಯುತ್ತಿರುವ ಕಲೆ

ಆಧುನಿಕ ಕಾಲದಲ್ಲಿ ಬಿದರಿ ಕಲೆ ಕ್ಷೀಣಿಸುತ್ತಿದೆ, ಸೂಕ್ಷ್ಮ ಕೆಲಸಕ್ಕೆ ತಗಲುವ ಸಮಯ, ಕಡಿಮೆ ಆದಾಯ, ಯಂತ್ರೋತ್ಪಾದಿತ ವಸ್ತುಗಳ ಸ್ಪರ್ಧೆ ಮತ್ತು ಮಾರುಕಟ್ಟೆ ಕೊರತೆಯಿಂದಾಗಿ ಬಿದರಿ ಕಲೆ ಇಂದಿನ ದಿನಗಳಲ್ಲಿ ಕುಸಿಯುವ ಭೀತಿ ಎದುರಾಗಿದೆ. ಬಿದ್ರಿವೇರ್ ಅನ್ನು ಹೂಜಿ, ಬಟ್ಟಲು, ಆಭರಣ ಪೆಟ್ಟಿಗೆಗಳು, ಸಿಗರೇಟ್ ಡಬ್ಬಿಗಳು ಮತ್ತು ಇತರ ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ಬಿದರಿ ಉತ್ಪನ್ನಗಳನ್ನು ಬೀದರ್ ಮತ್ತು ಹೈದರಾಬಾದ್‌ನಲ್ಲಿ ಕಾಣಬಹುದಾಗಿದ್ದು ಸಾಲಾರ್ ಜಂಗ್ ಮ್ಯೂಸಿಯಂನಲ್ಲಿ ಹೆಚ್ಚಿನ ಸಂಗ್ರಹವಿದ್ದು ಪ್ರವಾಸಿಗರು ವೀಕ್ಷಿಸಬಹುದಾಗಿದೆ.


Read More
Next Story