ಮೋದಿ ಒತ್ತಡಕ್ಕೆ ಮಣಿಯುವವರಲ್ಲ; ಭಾರತ-ರಷ್ಯಾ ಮೈತ್ರಿ ಯಾರ ವಿರುದ್ಧವೂ ಅಲ್ಲ: ಪುಟಿನ್ ಸ್ಪಷ್ಟನೆ
x

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 

ಮೋದಿ ಒತ್ತಡಕ್ಕೆ ಮಣಿಯುವವರಲ್ಲ; ಭಾರತ-ರಷ್ಯಾ ಮೈತ್ರಿ ಯಾರ ವಿರುದ್ಧವೂ ಅಲ್ಲ: ಪುಟಿನ್ ಸ್ಪಷ್ಟನೆ

ಇಂಧನ ಕ್ಷೇತ್ರದಲ್ಲಿನ ಭಾರತ-ರಷ್ಯಾ ಬಾಂಧವ್ಯದ ಕುರಿತು ಮಾತನಾಡಿದ ರಷ್ಯಾ ಅಧ್ಯಕ್ಷರು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಬೆಳವಣಿಗೆಯನ್ನು ಕೆಲವರು ಇಷ್ಟಪಡುತ್ತಿಲ್ಲ ಎಂದು ಪರೋಕ್ಷವಾಗಿ ಅಮೆರಿಕದತ್ತ ಬೊಟ್ಟು ಮಾಡಿದರು.


Click the Play button to hear this message in audio format

ಭಾರತ ಮತ್ತು ರಷ್ಯಾ ನಡುವಿನ ಸಹಕಾರವು ಯಾವುದೇ ಮೂರನೇ ದೇಶದ ವಿರುದ್ಧವಲ್ಲ. ಇದು ಕೇವಲ ಆಯಾ ರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾಪಾಡುವ ಗುರಿಯನ್ನು ಹೊಂದಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ಪಷ್ಟಪಡಿಸಿದ್ದಾರೆ. ಎರಡು ದಿನಗಳ ಭೇಟಿಗಾಗಿ ಗುರುವಾರ ಸಂಜೆ ನವದೆಹಲಿಗೆ ಆಗಮಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಭಾರತದ ದೃಢ ನಿಲುವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಗುರುವಾರ ಬಿಡುಗಡೆಯಾದ 'ಇಂಡಿಯಾ ಟುಡೆ' ಸಂದರ್ಶನದಲ್ಲಿ ಮಾತನಾಡಿದ ಪುಟಿನ್, ಜಾಗತಿಕವಾಗಿ, ವಿಶೇಷವಾಗಿ ವಾಷಿಂಗ್ಟನ್‌ನಿಂದ ಎದುರಾಗುತ್ತಿರುವ ಆಕ್ರಮಣಕಾರಿ ಧೋರಣೆಯ ಕುರಿತು ಮಾತನಾಡಿದರು. "ಬಾಹ್ಯ ಒತ್ತಡಗಳ ಹೊರತಾಗಿಯೂ, ನಾನು ಅಥವಾ ಪ್ರಧಾನಿ ಮೋದಿ ಅವರು ನಮ್ಮ ಸಹಕಾರವನ್ನು ಬೇರೊಬ್ಬರ ವಿರುದ್ಧ ಕೆಲಸ ಮಾಡಲು ಬಳಸಿಕೊಂಡಿಲ್ಲ," ಎಂದು ಅವರು ಹೇಳಿದರು.

ಭಾರತದ ಪ್ರಭಾವ ತಡೆಯಲು 'ಕೃತಕ ಅಡೆತಡೆ'

ಇಂಧನ ಕ್ಷೇತ್ರದಲ್ಲಿನ ಭಾರತ-ರಷ್ಯಾ ಬಾಂಧವ್ಯದ ಕುರಿತು ಮಾತನಾಡಿದ ರಷ್ಯಾ ಅಧ್ಯಕ್ಷರು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಬೆಳವಣಿಗೆಯನ್ನು ಕೆಲವರು ಇಷ್ಟಪಡುತ್ತಿಲ್ಲ ಎಂದು ಪರೋಕ್ಷವಾಗಿ ಅಮೆರಿಕದತ್ತ ಬೊಟ್ಟು ಮಾಡಿದರು. ಈ 'ಶಕ್ತಿಗಳು' ರಾಜಕೀಯ ಕಾರಣಗಳಿಗಾಗಿ ಕೃತಕ ಅಡೆತಡೆಗಳನ್ನು (Artificial Obstacles) ಒಡ್ಡುವ ಮೂಲಕ ಭಾರತದ ಪ್ರಭಾವವನ್ನು ತಡೆಯಲು ಪ್ರಯತ್ನಿಸುತ್ತಿವೆ. ಆದರೆ ಪಾಶ್ಚಿಮಾತ್ಯ ನಿರ್ಬಂಧಗಳ ಹೊರತಾಗಿಯೂ ನಮ್ಮ ಇಂಧನ ಸಹಕಾರವು ಸಾಂಗವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಗ್ಗೆಯೂ ಪುಟಿನ್ ಮಾತನಾಡಿದರು. "ಟ್ರಂಪ್ ಅವರು ತಮ್ಮದೇ ಆದ ಅಜೆಂಡಾ ಮತ್ತು ಗುರಿಗಳನ್ನು ಹೊಂದಿದ್ದಾರೆ. ನಾವು ನಮ್ಮ ಗುರಿಗಳತ್ತ ಗಮನಹರಿಸುತ್ತೇವೆ. ಇದು ಯಾರ ವಿರುದ್ಧವೂ ಅಲ್ಲ, ಬದಲಿಗೆ ಭಾರತ ಮತ್ತು ರಷ್ಯಾದ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿದೆ," ಎಂದು ಅವರು ಹೇಳಿದರು.

ಮೋದಿ ಬಗ್ಗೆ ಪುಟಿನ್ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವವನ್ನು ಬಣ್ಣಿಸಿದ ಪುಟಿನ್, ಭಾರತವನ್ನು ದಶಕಗಳ ಹಿಂದಿನಂತೆ ನಡೆಸಿಕೊಳ್ಳಲು ಸಾಧ್ಯವಿಲ್ಲ ಎಂದರು. "ಪ್ರಧಾನಿ ಮೋದಿ ಅವರು ಸುಲಭವಾಗಿ ಒತ್ತಡಕ್ಕೆ ಮಣಿಯುವ ವ್ಯಕ್ತಿಯಲ್ಲ. ಭಾರತೀಯ ಜನರು ತಮ್ಮ ನಾಯಕನ ಬಗ್ಗೆ ಹೆಮ್ಮೆ ಪಡಬಹುದು. ಇದು ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಅವರ ನಿಲುವು ಅಚಲ ಮತ್ತು ನೇರವಾಗಿರುತ್ತದೆ, ಆದರೆ ಅದು ಸಂಘರ್ಷಮಯವಾಗಿರುವುದಿಲ್ಲ. ನಮ್ಮ ಗುರಿ ಸಂಘರ್ಷವನ್ನು ಪ್ರಚೋದಿಸುವುದಲ್ಲ, ಬದಲಿಗೆ ನಮ್ಮ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸುವುದಾಗಿದೆ. ಭಾರತವೂ ಇದನ್ನೇ ಮಾಡುತ್ತಿದೆ," ಎಂದು ಪುಟಿನ್ ಹೇಳಿದರು.

ಉಕ್ರೇನ್ ಮತ್ತು ವ್ಯಾಪಾರ

ಉಕ್ರೇನ್ ಸಂಘರ್ಷದ ವಿಷಯದಲ್ಲಿ ಅಮೆರಿಕ ಶಾಂತಿಯುತ ಪರಿಹಾರವನ್ನು ಬಯಸುತ್ತಿದೆ ಎಂದು ಪುಟಿನ್ ವಿಶ್ವಾಸ ವ್ಯಕ್ತಪಡಿಸಿದರು. "ಟ್ರಂಪ್ ಅವರು ಪ್ರಾಮಾಣಿಕವಾಗಿ ಹಗೆತನವನ್ನು ಕೊನೆಗಾಣಿಸಲು ಮತ್ತು ಪ್ರಾಣಹಾನಿಯನ್ನು ತಡೆಯಲು ಬಯಸುತ್ತಾರೆ ಎಂಬ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ," ಎಂದು ಅವರು ಹೇಳಿದರು. ಇದೇ ವೇಳೆ ದ್ವಿಪಕ್ಷೀಯ ವ್ಯಾಪಾರದ ಬಗ್ಗೆ ಮಾಹಿತಿ ನೀಡಿದ ಅವರು, ಶೇ. 90ಕ್ಕೂ ಹೆಚ್ಚು ವಹಿವಾಟುಗಳು ಈಗಾಗಲೇ ರಾಷ್ಟ್ರೀಯ ಕರೆನ್ಸಿಗಳಲ್ಲಿ ನಡೆಯುತ್ತಿವೆ. ಮಧ್ಯವರ್ತಿಗಳ ಹಾವಳಿಯಿಂದ ಕೆಲವು ತೊಡಕುಗಳಿದ್ದರೂ ಅದಕ್ಕೆ ಪರಿಹಾರಗಳಿವೆ ಎಂದು ತಿಳಿಸಿದರು.

Read More
Next Story