Malayalam Language Bill will not cause injustice to Kannadigas: Pinarayi Vijayan clarifies
x

ಸಿಎಂ ಸಿದ್ದರಾಮಯ್ಯ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್‌

ಮಲಯಾಳಂ ಭಾಷಾ ಮಸೂದೆಯಿಂದ ಕನ್ನಡಿಗರಿಗೆ ಅನ್ಯಾಯವಾಗಲ್ಲ: ಪಿಣರಾಯಿ ವಿಜಯನ್ ಸ್ಪಷ್ಟನೆ

ಮಲಯಾಳಂ ಮಾತೃಭಾಷೆ ಅಲ್ಲದ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮದ ಅಡಿಯಲ್ಲಿ ತಮಗೆ ಲಭ್ಯವಿರುವ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.


Click the Play button to hear this message in audio format

ಕೇರಳ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಮಲಯಾಳಂ ಭಾಷಾ ಮಸೂದೆ-2025’ ರ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿರುವ ಕಾಳಜಿಗಳು ವಾಸ್ತವಕ್ಕೆ ದೂರವಾಗಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಮಸೂದೆಯು ಎಲ್ಲರನ್ನೂ ಒಳಗೊಳ್ಳುವ ಮನೋಭಾವವನ್ನು ಹೊಂದಿದ್ದು, ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವಲ್ಲಿ ಕೇರಳ ಸರ್ಕಾರ ಎಂದಿಗೂ ಬದ್ಧವಾಗಿದೆ ಎಂದು ಅವರು ಶನಿವಾರ ಅಧಿಕೃತ ಹೇಳಿಕೆ ನೀಡಿದ್ದಾರೆ. ಈ ಮೂಲಕ ಗಡಿ ಭಾಗದ ಕನ್ನಡಿಗರ ಮೇಲೆ ಮಲಯಾಳಂ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.

ಶುಕ್ರವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು, ಮಸೂದೆಯು ಜಾರಿಯಾದರೆ ಗಡಿ ಭಾಗದ ಕನ್ನಡಿಗರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಎಚ್ಚರಿಸಿದ್ದರು. ಒಂದು ವೇಳೆ ಮಸೂದೆಯು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸಿದರೆ ಸಾಂವಿಧಾನಿಕವಾಗಿ ಅದನ್ನು ವಿರೋಧಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದರು. ಈ ಆತಂಕಗಳಿಗೆ ಉತ್ತರಿಸಿರುವ ಪಿಣರಾಯಿ ವಿಜಯನ್, ಮಸೂದೆಯ ಆಶಯವು ಸಮಾನತೆ ಮತ್ತು ಸಹೋದರತ್ವದ ತತ್ವಗಳ ಮೇಲೆ ನಿಂತಿದೆ ಎಂದು ಪ್ರತಿಪಾದಿಸಿದ್ದಾರೆ. ಕೇರಳದ ಪ್ರಗತಿಯು ಸಾಂವಿಧಾನಿಕ ಮೌಲ್ಯಗಳಾದ ಜಾತ್ಯತೀತತೆ ಮತ್ತು ಬಹುತ್ವದ ಆಧಾರದ ಮೇಲೆ ರೂಪಿತವಾಗಿದ್ದು, ಯಾವುದೇ ಸಮುದಾಯದ ಸಾಂಸ್ಕೃತಿಕ ಗುರುತಿಗೆ ಧಕ್ಕೆ ತರುವುದು ಸರ್ಕಾರದ ಉದ್ದೇಶವಲ್ಲ ಎಂದು ಅವರು ಮರುಪತ್ರದ ಸಾರಾಂಶದಲ್ಲಿ ವಿವರಿಸಿದ್ದಾರೆ.

ಭಾಷಾ ಅಲ್ಪಸಂಖ್ಯಾತರಿಗಾಗಿ ವಿಶೇಷ ರಕ್ಷಣೆ

ಈ ಮಸೂದೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಯ್ದಿರಿಸಲು ‘ನಾನ್-ಅಬ್ಸ್ಟಾಂಟೆ ಕ್ಲಾಸ್’ (Non-obstante clause) ಎಂಬ ವಿಶೇಷ ಕಾನೂನು ಕಲಂ ಸೇರಿಸಲಾಗಿದೆ ಎಂದು ಪಿಣರಾಯಿ ವಿಜಯನ್ ವಿವರಿಸಿದ್ದಾರೆ. ಇದರ ಅನ್ವಯ, ಕನ್ನಡ ಮತ್ತು ತಮಿಳು ಮಾತನಾಡುವ ಜನರು ಅಧಿಸೂಚಿತ ಪ್ರದೇಶಗಳಲ್ಲಿ ತಮ್ಮ ಮಾತೃಭಾಷೆಯಲ್ಲೇ ಸರ್ಕಾರಿ ವ್ಯವಹಾರಗಳನ್ನು ನಡೆಸಲು ಅವಕಾಶವಿರುತ್ತದೆ. ಸಚಿವಾಲಯ, ಇಲಾಖಾ ಮುಖ್ಯಸ್ಥರು ಮತ್ತು ಸ್ಥಳೀಯ ಕಚೇರಿಗಳೊಂದಿಗೆ ಕನ್ನಡದಲ್ಲೇ ಪತ್ರವ್ಯವಹಾರ ನಡೆಸಬಹುದಾಗಿದ್ದು, ಸರ್ಕಾರದಿಂದ ಬರುವ ಉತ್ತರಗಳೂ ಕೂಡ ಅದೇ ಭಾಷೆಯಲ್ಲಿರುತ್ತವೆ ಎಂದು ಅವರು ಭರವಸೆ ನೀಡಿದ್ದಾರೆ. ಈ ಮೂಲಕ ಆಡಳಿತಾತ್ಮಕವಾಗಿ ಯಾವುದೇ ಭಾಷೆಯ ಹೇರಿಕೆ ಮಾಡಲಾಗುವುದಿಲ್ಲ ಎಂಬುದು ಅವರ ಸ್ಪಷ್ಟ ನಿಲುವಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಚೌಕಟ್ಟು

ಶಾಲಾ ಶಿಕ್ಷಣದಲ್ಲಿ ಮಲಯಾಳಂ ಕಡ್ಡಾಯಗೊಳಿಸುವ ವಿಚಾರವಾಗಿಯೂ ಸ್ಪಷ್ಟನೆ ನೀಡಿರುವ ಕೇರಳ ಸಿಎಂ, ಮಲಯಾಳಂ ಮಾತೃಭಾಷೆ ಅಲ್ಲದ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮದ ಅಡಿಯಲ್ಲಿ ತಮಗೆ ಲಭ್ಯವಿರುವ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ಹೇಳಿದ್ದಾರೆ. ಇತರ ರಾಜ್ಯಗಳಿಂದ ಬಂದ ಅಥವಾ ವಿದೇಶಿ ವಿದ್ಯಾರ್ಥಿಗಳು 9ನೇ ತರಗತಿ, ಎಸ್‌ಎಸ್‌ಎಲ್‌ಸಿ ಅಥವಾ ಹೈಯರ್ ಸೆಕೆಂಡರಿ ಮಟ್ಟದಲ್ಲಿ ಮಲಯಾಳಂ ಪರೀಕ್ಷೆಗಳನ್ನು ಬರೆಯುವಂತೆ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೇರಳದ ಈ ಭಾಷಾ ನೀತಿಯು ಭಾರತದ ಸಂವಿಧಾನದ 346 ಮತ್ತು 347 ನೇ ವಿಧಿಗಳಿಗೆ ಹಾಗೂ ಅಧಿಕೃತ ಭಾಷಾ ಕಾಯ್ದೆ-1963 ಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಒಕ್ಕೂಟ ವ್ಯವಸ್ಥೆಯ ಗೌರವ ಮತ್ತು ಸಾಂಸ್ಕೃತಿಕ ಅಸ್ಮಿತೆ

ಭಾರತದ ವೈವಿಧ್ಯತೆಯನ್ನು ಸಂಭ್ರಮಿಸಬೇಕೇ ಹೊರತು ಅದನ್ನು ಒಂದೇ ಚೌಕಟ್ಟಿಗೆ ತುರುಕಬಾರದು ಎಂದು ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟಿದ್ದಾರೆ. ಕೇರಳ ಮಾದರಿಯ ಆಡಳಿತವು ಪಾರದರ್ಶಕತೆ ಮತ್ತು ಜನರ ಪಾಲ್ಗೊಳ್ಳುವಿಕೆಯನ್ನು ಆಧರಿಸಿದ್ದು, ಒಕ್ಕೂಟ ವ್ಯವಸ್ಥೆಯ ಹಕ್ಕುಗಳ ರಕ್ಷಣೆಗೆ ತಮ್ಮ ಸರ್ಕಾರ ಸದಾ ಸಿದ್ಧವಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಗಡಿನಾಡ ಕನ್ನಡಿಗರು ಮತ್ತು ತಮಿಳು ಭಾಷಿಕರ ಭಾಷಾ ಅಸ್ಮಿತೆಯನ್ನು ಗೌರವಿಸುವುದು ಮತ್ತು ಅವರ ಹಕ್ಕುಗಳನ್ನು ಕಾಪಾಡುವುದು ತಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸುವ ಮೂಲಕ ಭರವಸೆ ನೀಡಿದ್ದಾರೆ.

Read More
Next Story