
ಬೆಂಗಳೂರಿನ ಒತ್ತುವರಿ ತೆರವಿಗೆ ಕೇರಳ ಸಿಎಂ ಕೋಮು ಬಣ್ಣ ಹಚ್ಚುತ್ತಿರುವುದೇಕೆ?
ಬೆಂಗಳೂರಿನ ಕೋಗಿಲು ಬಂಡೆ ಒತ್ತುವರಿ ತೆರವು ಕಾರ್ಯಾಚರಣೆ ಈಗ ರಾಜಕೀಯ ಸ್ವರೂಪ ಪಡೆದಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿ ಅನುಸರಿಸುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಿಡಿಕಾರಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ನಡೆದಂತಹ ಒತ್ತುವರಿ ತೆರವು ಕಾರ್ಯ ಅಂತರರಾಜ್ಯ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಯಲಹಂಕ ಸಮೀಪದ ಕೋಗಿಲು ಬಂಡೆ ಪ್ರದೇಶದಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಭೂಮಿಯನ್ನು ತೆರವುಗೊಳಿಸಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ವಶಕ್ಕೆ ಪಡೆದಿತ್ತು. ಕಾನೂನು ಬದ್ಧವಾಗಿಯೇ ನಡೆದಿರುವ ಈ ಒತ್ತುವರಿ ತೆರವು ಕಾರ್ಯದ ಬಗ್ಗೆ ನೆರೆಯ ರಾಜ್ಯ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕೆ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಘಟನೆಯ ಹಿನ್ನೆಲೆ
ಯಲಹಂಕ ಸಮೀಪದ ಕೋಗಿಲು ಬಂಡೆ ಪ್ರದೇಶದಲ್ಲಿ ಕಳೆದ ಶನಿವಾರ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಸಿಇಒ ಕರೀಗೌಡ ಅವರ ನೇತೃತ್ವದಲ್ಲಿ ಈ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿತ್ತು. 9 ಜೆಸಿಬಿಗಳು ಹಾಗೂ 9 ಟ್ರ್ಯಾಕ್ಟರ್‌ಗಳನ್ನು ಬಳಸಲಾಯಿತು. ಸುಮಾರು 200ಕ್ಕೂ ಅಧಿಕ ಸಿಬ್ಬಂದಿ ಮತ್ತು 70 ಮಾರ್ಷಲ್‌ಗಳು ಪೊಲೀಸ್ ಬಿಗಿ ಭದ್ರತೆಯೊಂದಿಗೆ ಪಾಲ್ಗೊಂಡಿದ್ದರು. ರಾಜಕಾಲುವೆ ಹಾಗೂ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಿದ್ದ 150ಕ್ಕೂ ಹೆಚ್ಚು ಅನಧಿಕೃತ ಶೆಡ್‌ಗಳು ಮತ್ತು ಮನೆಗಳನ್ನು ನೆಲಸಮಗೊಳಿಸಲಾಗಿತ್ತು. ವಶಕ್ಕೆ ಪಡೆದ 80 ಕೋಟಿ ರೂ. ಮೌಲ್ಯದ ಈ ಜಾಗವನ್ನು ಮುಂದಿನ ದಿನಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಯೋಜನೆಗಳಿಗೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಸ್ಥಳೀಯರ ಆಕ್ರೋಶ
ಒತ್ತುವರಿ ತೆರವು ಕಾರ್ಯಾಚರಣೆ ಯಶಸ್ವಿಯಾದರೂ, ಬಿಬಿಎಂಪಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕಟ್ಟಡಗಳು ನಿರ್ಮಾಣವಾಗುವ ಹಂತದಲ್ಲೇ ಅಧಿಕಾರಿಗಳು ಏನು ಮಾಡುತ್ತಿದ್ದರು? ಇಷ್ಟು ವರ್ಷಗಳ ಕಾಲ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡುವಾಗ ಇದು ಸರ್ಕಾರಿ ಜಾಗ ಎಂದು ತಿಳಿಯಲಿಲ್ಲವೇ?" ಎಂದು ಸಂತ್ರಸ್ತರು ಪ್ರಶ್ನಿಸಿದ್ದಾರೆ. ಬಡವರು ಕಷ್ಟಪಟ್ಟು ನಿರ್ಮಿಸಿಕೊಂಡಿದ್ದ ಮನೆಗಳನ್ನು ಏಕಾಏಕಿ ತೆರವುಗೊಳಿಸಿರುವುದು ನ್ಯಾಯಸಮ್ಮತವಲ್ಲ. ಇದಕ್ಕೆ ಕಾರಣರಾದ ಭ್ರಷ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಕೇರಳ ಸಿಎಂ ಎಕ್ಸ್ ಪೋಸ್ಟ್ ಭಾರೀ ವೈರಲ್
ಇನ್ನು ಬೆಂಗಳೂರಿನಲ್ಲಿ ಸರ್ವೇ ಸಾಮಾನ್ಯ ಎಂಬಂತೆ ನಡೆಯುವ ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಏಕಾಏಕಿ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದರು. ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣ 'X' ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, "ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಉತ್ತರ ಪ್ರದೇಶದ ಮಾದರಿಯ 'ಬುಲ್ಡೋಜರ್ ನೀತಿ'ಯನ್ನು ಅನುಸರಿಸುತ್ತಿದೆ.
ವರ್ಷಗಳಿಂದ ವಾಸವಿದ್ದ ಮುಸ್ಲಿಂ ಕುಟುಂಬಗಳನ್ನು ಈ ಕೊರೆಯುವ ಚಳಿಯಲ್ಲಿ ಬೀದಿಗೆ ಹಾಕಿರುವುದು ಮಾನವೀಯತೆಯ ವಿರೋಧಿ ಕ್ರಮ. ಕಾಂಗ್ರೆಸ್ ಈಗ ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನೇ ಮಾಡುತ್ತಿದೆ," ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಇಂತಹ ಪ್ರವೃತ್ತಿಯನ್ನು ವಿರೋಧಿಸಲು ಎಲ್ಲಾ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂದು ಕರೆ ನೀಡಿದ್ದಾರೆ.
ಕೋಮು ಬಣ್ಣ ಹಚ್ಚುವ ಯತ್ನ
ಪಿಣರಾಯಿ ಹೇಳಿಕೆ ಹಿಂದೆ ಇದೆಯೇ ರಾಜಕೀಯ ಉದ್ದೇಶ
ಪಿಣರಾಯಿ ವಿಜಯನ್ ಹೇಳಿಕೆ ರಾಜಕೀಯ ರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. ಕೋಗಿಲು ಬಂಡೆಯ ಈ 5 ಎಕರೆ ಜಾಗದಲ್ಲಿ ದಶಕಗಳಿಂದ ವಾಸವಿದ್ದವರಲ್ಲಿ ಹೆಚ್ಚಿನವರು ಕೇರಳ ಮೂಲದವರು. ಅಕ್ರಮ ಶೆಡ್‌ಗಳಲ್ಲಿ ವಾಸವಿದ್ದ ನೂರಾರು ಕಾರ್ಮಿಕರು ಕೇರಳದ ವಿವಿಧ ಭಾಗಗಳಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡಿದ್ದರು. ಏಕಾಏಕಿ ಅವರ ಮನೆಗಳನ್ನು ನೆಲಸಮ ಮಾಡಿರುವುದು ಕೇರಳದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಜಕೀಯ ಒತ್ತಡ
ಕೇರಳದ ವಿರೋಧ ಪಕ್ಷಗಳು ಈ ವಿಚಾರವನ್ನು ಮುಂದಿಟ್ಟುಕೊಂಡು, "ಬೆಂಗಳೂರಿನಲ್ಲಿ ಕನ್ನಡಿಗರು ಮತ್ತು ಮಲಯಾಳಿಗಳ ನಡುವೆ ಬಿರುಕು ಮೂಡುತ್ತಿದೆ, ನಮ್ಮ ಜನರಿಗೆ ರಕ್ಷಣೆ ಇಲ್ಲ" ಎಂದು ಆರೋಪಿಸಿ ಸಿಎಂ ಪಿಣರಾಯಿ ವಿಜಯನ್ ಮೇಲೆ ಒತ್ತಡ ಹೇರುತ್ತಿವೆ.
ಕೇರಳದಲ್ಲೂ ನಡೆದಿದೆ ಒತ್ತುವರಿ ತೆರವು ಕಾರ್ಯ
ಇನ್ನು ಇಷ್ಟೆಲ್ಲ ಕಳವಳ ವ್ಯಕ್ತಪಡಿಸುವ ಪಿಣರಾಯಿ ತಮ್ಮ ರಾಜ್ಯದಲ್ಲೇ ಹಲವು ಬಾರಿ ಒತ್ತುವರಿ ತೆರವು ಕಾರ್ಯ ಕೈಗೆತ್ತಿಕೊಂಡಿದ್ದರು. 2020ರಲ್ಲಿ ಕೇರಳದ ಕೊಚ್ಚಿಯ ಮರಡು ಎಂಬಲ್ಲಿ ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದ್ದ ನಾಲ್ಕು ಬೃಹತ್ ಅಪಾರ್ಟ್‌ಮೆಂಟ್‌ಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಸ್ಫೋಟದ ಮೂಲಕ ಇದೇ ಪಿಣರಾಯಿ ಸರ್ಕಾರ ನೆಲಸಮ ಮಾಡಿತ್ತು.
ಕೇರಳದ ಹಿನ್ನೀರು ಅಥವಾ 'ಕಾಯಲ್' ಪ್ರದೇಶಗಳನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಟ್ಟಡಗಳ ವಿರುದ್ಧವೂ ಪಿಣರಾಯಿ ವಿಜಯನ್ ಅವರ ಸರ್ಕಾರವು ಹಲವು ಬಾರಿ ಕಠಿಣ ಕ್ರಮ ಕೈಗೊಂಡಿದೆ. ಪರಿಸರ ಸಂರಕ್ಷಣೆಗಾಗಿ ಇಂತಹ ಅಕ್ರಮ ತೆರವು ಅನಿವಾರ್ಯ ಎಂದು ಸರ್ಕಾರ ಅಂದು ಪ್ರತಿಪಾದಿಸಿತ್ತು. ಹೀಗಿರುವಾಗ ಬೆಂಗಳೂರಿನಲ್ಲಿ ಕಾನೂನು ಬದ್ಧವಾಗಿಯೇ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯದ ಬಗ್ಗೆ ಅನಾವಶ್ಯಕವಾಗಿ ಪಿಣರಾಯಿ ವಿಜಯನ್ ಮೂಗು ತೂರಿಸುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ.

