Wayanad landslide: ಸಂತ್ರಸ್ತರ, ಬದುಕುಳಿದವರ ಸಾಲ ಮನ್ನಾಕ್ಕೆ  ಸಿಎಂ ಮನವಿ
x

Wayanad landslide: ಸಂತ್ರಸ್ತರ, ಬದುಕುಳಿದವರ ಸಾಲ ಮನ್ನಾಕ್ಕೆ ಸಿಎಂ ಮನವಿ

ವಯನಾಡ್ ಭೂಕುಸಿತ ಸಂತ್ರಸ್ತರ ಸಾಲವನ್ನು ಮನ್ನಾ ಮಾಡುವುದರಿಂದ ಬ್ಯಾಂಕ್‌ಗಳ ಮೇಲೆ ಅಸಹನೀಯ ಹೊರೆ ಬೀಳುವುದಿಲ್ಲ. ಆದ್ದರಿಂದ ಸಾಲ ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ.


ತಿರುವನಂತಪುರಂ: ವಯನಾಡು ಭೂಕುಸಿತದ ಸಂತ್ರಸ್ತರು ಮತ್ತು ಬದುಕುಳಿದವರ ಖಾತೆಗಳಿಂದ ಸಾಲದ ಮಾಸಿಕ ಕಂತುಗಳನ್ನು ಕಡಿತಗೊಳಿಸುತ್ತಿರುವ ಬ್ಯಾಂಕ್‌ಗಳ ಬಗ್ಗೆ ಕೇರಳ ಸರ್ಕಾರ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಮತ್ತು ಸಾಲ ಸಂಪೂರ್ಣವಾಗಿ ಮನ್ನಾ ಮಾಡುವಂತೆ ಒತ್ತಾಯಿಸಿದೆ.

ಸಾಲ ಮನ್ನಾದಿಂದ ಬ್ಯಾಂಕ್‌ಗಳ ಮೇಲೆ ಅಸಹನೀಯ ಹೊರೆ ಬೀಳುವುದಿಲ್ಲ. ಹಾಗಾಗಿ, ಸಾಲ ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಹೇಳಿದರು. ವಯನಾಡಿನ ಬದುಕುಳಿದವರ ಖಾತೆಗಳಿಂದ ಮಾಸಿಕ ಕಂತು ಕಡಿತಗೊಳಿಸಿರುವ ಕೇರಳ ಗ್ರಾಮೀಣ ಬ್ಯಾಂಕ್ ವಿರುದ್ಧ ತೀವ್ರ ಪ್ರತಿಭಟನೆ ನಡುವೆ ವಿಜಯನ್ ಅವರ ಪ್ರತಿಕ್ರಿಯೆ ಬಂದಿದೆ.

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಸಭೆಯಲ್ಲಿ ಮಾತನಾಡಿ, ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಬಡ್ಡಿ ಮೊತ್ತದಲ್ಲಿ ಕಡಿತ ಅಥವಾ ಮಾಸಿಕ ಕಂತುಗಳ ಪಾವತಿ ಸಮಯ ವಿಸ್ತರಣೆ ಪರಿಹಾರ ಆಗುವುದಿಲ್ಲ. ಸಾಲ ಪಡೆದವರಲ್ಲಿ ಹಲವರು ಮೃತಪಟ್ಟಿದ್ದು, ಅವರ ಜಮೀನು ನಿರುಪಯುಕ್ತವಾಗಿದೆ. ನಾವು ಮಾಡಬಹುದಾದ ಏಕೈಕ ಕೆಲಸವೆಂದರೆ, ಭೂಕುಸಿತ ಪೀಡಿತ ಪ್ರದೇಶಗಳ ಜನರು ತೆಗೆದುಕೊಂಡ ಸಾಲ ಸಂಪೂರ್ಣ ಮನ್ನಾ ಮಾಡುವುದು,ʼ ಎಂದು ಸಿಎಂ ಹೇಳಿದರು.

ಬ್ಯಾಂಕ್‌ಗಳು ಬದುಕುಳಿದವರ ಖಾತೆಗಳಿಂದ ಮಾಸಿಕ ಕಂತು ಕಡಿತಗೊಳಿಸುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಎಸ್‌ಎಲ್‌ಬಿಸಿ (ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ) ಈ ಸಂಬಂಧ ಅನುಕೂಲಕರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ʻವಯನಾಡಿನಲ್ಲಿ ಹೆಚ್ಚಿನ ಸಂತ್ರಸ್ತರು ಅಥವಾ ಬದುಕುಳಿದವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದುರಂತದಿಂದ ಕೃಷಿ ಭೂಮಿ ನಿರುಪಯುಕ್ತವಾಗಿವೆ. ಈ ಪ್ರದೇಶಗಳಲ್ಲಿ ಯಾವುದೇ ಕೃಷಿ ಅಥವಾ ವಸತಿ ನಿರ್ಮಾಣ ಸಾಧ್ಯವಿಲ್ಲ. ಈ ಭಾಗದ ಬಹುತೇಕ ರೈತರು ಸಾಲ ಮಾಡಿದ್ದಾರೆ; ಮನೆ ಕಟ್ಟಲು ಸಾಲ ಮಾಡಿದವರು ಮನೆಯನ್ನೇ ಕಳೆದುಕೊಂಡಿದ್ದಾರೆ. ಈಗ ಕಂತು ಕಟ್ಟುವ ಸ್ಥಿತಿಯಲ್ಲಿಲ್ಲ,ʼ ಎಂದರು.

ʻಸಾಲ ಮನ್ನಾ ಮಾಡಿದ ನಂತರ ಬ್ಯಾಂಕ್‌ಗಳು ಈ ಮೊತ್ತವನ್ನು ಸರ್ಕಾರ ಭರಿಸಬೇಕೆಂದು ನಿರೀಕ್ಷಿಸುತ್ತವೆ. ಈ ವಿಷಯದಲ್ಲಿ ನೀವು ಅಂತಹ ನಿಲುವು ತೆಗೆದುಕೊಳ್ಳಬಾರದು ಎಂಬುದು ನನ್ನ ಸಲಹೆʼ ಎಂದರು.

ಪ್ರತಿಭಟನೆ: ಕಲ್ಪೆಟ್ಟಾದಲ್ಲಿರುವ ಬ್ಯಾಂಕ್‌ ಶಾಖೆ ಎದುರು ವಿವಿಧ ರಾಜಕೀಯ ಪಕ್ಷಗಳು ಸೋಮವಾರ ಪ್ರತಿಭಟನೆ ನಡೆಸಿದವು. ಇನ್ನು ಮುಂದೆ ಯಾವುದೇ ಇಎಂಐ ಕಡಿತಗೊಳಿಸುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಲಿಖಿತ ಹೇಳಿಕೆ ನೀಡಿದ್ದರಿಂದ ಧರಣಿಯನ್ನು ಅಂತ್ಯಗೊಳಿಸಲಾಯಿತು.

Read More
Next Story