
ಸಿಎಂ ಸಿದ್ದರಾಮಯ್ಯ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್
ಕಾಸರಗೋಡಿನಲ್ಲಿ ಕನ್ನಡ ಅಸ್ಮಿತೆಗೆ ಧಕ್ಕೆ: ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಪತ್ರ ಬರೆದ ಸಿದ್ದರಾಮಯ್ಯ
ಯಾವುದೇ ಒಂದು ಭಾಷೆಯನ್ನು ಕಡ್ಡಾಯಗೊಳಿಸುವುದು ಮಕ್ಕಳ ಮೇಲೆ ಅನಗತ್ಯ ಹೊರೆ ಹೇರುವುದಲ್ಲದೆ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಅಸ್ತಿತ್ವವನ್ನೇ ದುರ್ಬಲಗೊಳಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೇರಳ ಸರ್ಕಾರದ ಪ್ರಸ್ತಾಪಿತ 'ಮಲಯಾಳಂ ಭಾಷಾ ವಿಧೇಯಕ'ದ ಕುರಿತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಶುಕ್ರವಾರ (ಜನವರಿ9ರಂದು) ಸುದೀರ್ಘ ಪತ್ರ ಬರೆದಿರುವ ಅವರು, ಗಡಿ ಜಿಲ್ಲೆಯಾದ ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರು ಪತ್ರದಲ್ಲಿ ಹಲವಾರು ಕಾನೂನಾತ್ಮಕ ವಿಷಯಗಳನ್ನು ಉಲ್ಲೇಖಿಸಿ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇರಳ ಸರ್ಕಾರವು ತರಲು ಉದ್ದೇಶಿಸಿರುವ ಹೊಸ ಭಾಷಾ ವಿಧೇಯಕವು ಕಾಸರಗೋಡಿನಂತಹ ಗಡಿ ಜಿಲ್ಲೆಗಳಲ್ಲಿರುವ ಕನ್ನಡ ಮಾಧ್ಯಮದ ಶಾಲೆಗಳಲ್ಲೂ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುತ್ತದೆ. ಇದು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಕಾಸರಗೋಡಿನ ಬಹುಸಂಖ್ಯಾತ ಜನತೆ ದಶಕಗಳಿಂದ ಕನ್ನಡ ಶಿಕ್ಷಣವನ್ನು ಅವಲಂಬಿಸಿದ್ದಾರೆ. ಯಾವುದೇ ಒಂದು ಭಾಷೆಯನ್ನು ಕಡ್ಡಾಯಗೊಳಿಸುವುದು ಮಕ್ಕಳ ಮೇಲೆ ಅನಗತ್ಯ ಹೊರೆ ಹೇರುವುದಲ್ಲದೆ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಅಸ್ತಿತ್ವವನ್ನೇ ದುರ್ಬಲಗೊಳಿಸುತ್ತದೆ" ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ
ಕೇರಳದ ಈ ನಡೆಯು ಸಂವಿಧಾನ ನೀಡಿರುವ ರಕ್ಷಣೆಗೆ ವಿರುದ್ಧವಾಗಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಸಂವಿಧಾನದ 29 ಮತ್ತು 30ನೇ ವಿಧಿಯಡಿ ಭಾಷಾ ಅಲ್ಪಸಂಖ್ಯಾತರು ತಮ್ಮ ಭಾಷೆಯನ್ನು ಸಂರಕ್ಷಿಸುವ ಮತ್ತು ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಹಕ್ಕನ್ನು ಹೊಂದಿದ್ದಾರೆ. 350A ವಿಧಿಯಂತೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ರಾಜ್ಯದ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಅದೇ ರೀತಿ 350 ವಿಧಿಯಡಿ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ರಾಜ್ಯಕ್ಕೆ ವಹಿಸಲಾಗಿದೆ. ಶಾಸನವು ಕೇವಲ ಕಾನೂನುಬದ್ಧವಾಗಿರದೆ, 'ಸಾಂವಿಧಾನಿಕ ನೈತಿಕತೆ'ಯನ್ನು ಹೊಂದಿರಬೇಕು ಎಂದು ಅವರು ಪತ್ರದಲ್ಲಿ ಪಿಣರಾಯಿ ವಿಜಯನ್ ಅವರಿಗೆ ಸ್ಮರಿಸಿದ್ದಾರೆ.
ಬಹುತ್ವದ ಸಂಸ್ಕೃತಿಗೆ ಧಕ್ಕೆ
ಕಾಸರಗೋಡು ಪ್ರದೇಶವು ಮಲಯಾಳಂ, ಕನ್ನಡ, ತುಳು, ಬ್ಯಾರಿ ಸೇರಿದಂತೆ ಹಲವು ಭಾಷೆಗಳ ಸುಸಂಸ್ಕೃತ ಸಮ್ಮಿಲನ. ಇಂತಹ ಬಹುತ್ವದ ಸಂಸ್ಕೃತಿಯಲ್ಲಿ ಬಲವಂತದ ಹೇರಿಕೆ ಸರಿಯಲ್ಲ. "ಕನ್ನಡವು ಸಾಮಾಜಿಕ ಸುಧಾರಣೆ ಮತ್ತು ಸಮಾನತೆಯ ಭಾಷೆ. ನಾವು ಯಾವಾಗಲೂ ನಮ್ಮ ಭಾಷೆಯ ಪ್ರಚಾರವು ಇನ್ನೊಂದು ಭಾಷೆಯ ಹೇರಿಕೆಯಾಗಬಾರದು ಎಂಬ ತತ್ವವನ್ನು ಪಾಲಿಸುತ್ತಾ ಬಂದಿದ್ದೇವೆ" ಎಂದು ಕರ್ನಾಟಕದ ನಿಲುವನ್ನು ಅವರು ಕೇರಳದ ಮುಖ್ಯಮಂತ್ರಿಗೆ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಸರ್ಕಾರದ ಖಡಕ್ ಎಚ್ಚರಿಕೆ
ಕೇರಳ ಸರ್ಕಾರವು ಭಾಷಾ ಅಲ್ಪಸಂಖ್ಯಾತರು ಮತ್ತು ನೆರೆಯ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಒಂದು ವೇಳೆ ಈ ವಿಧೇಯಕವನ್ನು ಜಾರಿಗೊಳಿಸಿದರೆ, ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಕರ್ನಾಟಕವು ಲಭ್ಯವಿರುವ ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಬಳಸಿಕೊಂಡು ಅದನ್ನು ಪ್ರಬಲವಾಗಿ ವಿರೋಧಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. "ಈ ನಿಲುವು ಸಂಘರ್ಷಕ್ಕಾಗಿ ಅಲ್ಲ, ಬದಲಾಗಿ ಸಂವಿಧಾನ ಮತ್ತು ಜನರ ಧ್ವನಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ" ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

