Parliament Heated Over “Vote Theft” Fears: Is SIR a Backdoor NRC Push?
x

ಸಂಸತ್‌ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.

'ಮತ ಕಳ್ಳತನ'ದ ಭೀತಿ ನಡುವೆ ಸಂಸತ್​​ನಲ್ಲಿ ಕಾವೇರಿದ ವಾತಾವರಣ; ಎಸ್‌ಐಆರ್‌ ಹಿಂದೆ ಎನ್‌ಆರ್‌ಸಿ ಗುಮ್ಮ?

ಕೇವಲ ಮತದಾನದ ಹಕ್ಕಷ್ಟೇ ಅಲ್ಲ, ಮತದಾರರ ಪಟ್ಟಿಯಿಂದ ಹೆಸರು ಹೋದರೆ ಬಡವರು ಸರ್ಕಾರದ ಕಲ್ಯಾಣ ಯೋಜನೆಗಳಿಂದಲೂ ವಂಚಿತರಾಗುವ ಅಪಾಯವಿದೆ.


Click the Play button to hear this message in audio format

ಕಳೆದ ಕೆಲವು ತಿಂಗಳುಗಳಿಂದ ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ವಿಷಯವು ಇದೀಗ ಸಂಸತ್ತಿನ ಅಂಗಳಕ್ಕೆ ಬಂದು ತಲುಪಿದೆ. ಪ್ರತಿಪಕ್ಷಗಳ ಪಟ್ಟುಬಿಡದ ಒತ್ತಾಯಕ್ಕೆ ಮಣಿದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಡಿಸೆಂಬರ್ 9ರಂದು (ಇಂದು) ಚುನಾವಣಾ ಸುಧಾರಣೆಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಒಪ್ಪಿಗೆ ಸೂಚಿಸಿದೆ.

ಸರ್ಕಾರವು ಇದನ್ನು ಒಟ್ಟಾರೆ 'ಚುನಾವಣಾ ಸುಧಾರಣೆ'ಗಳ ಚರ್ಚೆ ಎಂದು ಕರೆದಿದ್ದರೂ, ವಿರೋಧ ಪಕ್ಷಗಳು ಮಾತ್ರ ಪ್ರಸ್ತುತ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಸಜ್ಜಾಗಿವೆ. ದೇಶದ ಗಮನವಿದಗ ಸಂಸತ್ತಿನತ್ತ ನೆಟ್ಟಿದ್ದು, ಈ ಚರ್ಚೆಯು ಚುನಾವಣಾ ಆಯೋಗದ ಕಳೆಗುಂದಿರುವ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಬಲ್ಲದೇ ಎಂಬ ಪ್ರಶ್ನೆ ಮೂಡಿದೆ.

ವಿಪಕ್ಷಗಳ ಆತಂಕವೇನು?

ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಸೇರಿದಂತೆ ವಿರೋಧ ಪಕ್ಷಗಳು ಎಸ್‌ಐಆರ್‌ ಕುರಿತು ಸಂಸತ್ತಿನಲ್ಲಿ ಚರ್ಚೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದವು. ರಾಜ್ಯಸಭೆಯ ನೂತನ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರ ಅಧಿಕಾರ ಸ್ವೀಕಾರದ ಬೆನ್ನಲ್ಲೇ ಈ ವಿಷಯ ಪ್ರಸ್ತಾಪವಾಗಿತ್ತು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಚುನಾವಣಾ ಸುಧಾರಣೆಗಳ ಅಡಿಯಲ್ಲಿ ಚರ್ಚೆಗೆ ಭರವಸೆ ನೀಡಿದ್ದಾರೆ ಎಂದು ಟಿಎಂಸಿ ಸಂಸದ ಡೆರೆಕ್ ಓಬ್ರೇನ್ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಪಿಐ(ಎಂ)ನ ಜಾನ್ ಬ್ರಿಟ್ಟಾಸ್ ಕೂಡ ಇದಕ್ಕೆ ದನಿಗೂಡಿಸಿದ್ದಾರೆ.

ನವೆಂಬರ್ 2025ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ವಿರೋಧ ಪಕ್ಷಗಳಲ್ಲಿ 'ಮತ ಕಳ್ಳತನ ಅಥವಾ ಜನಾದೇಶದ ಕಳ್ಳತನದ ಭೀತಿ ಹೆಚ್ಚಾಗಿದೆ. ಇದರೊಂದಿಗೆ, ಎಸ್‌ಐಆರ್ ಕೆಲಸದ ಒತ್ತಡ ತಾಳಲಾರದೆ ಹಲವು ರಾಜ್ಯಗಳಲ್ಲಿ ಬ್ಲಾಕ್ ಮಟ್ಟದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಕೂಡ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

ಹಿಂಬಾಗಿಲ ಎನ್‌ಆರ್‌ಸಿ ಎಂಬ ಅನುಮಾನ

ಎಸ್‌ಐಆರ್ ಪ್ರಕ್ರಿಯೆಯು ಪರೋಕ್ಷವಾಗಿ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಜಾರಿಯ ಹುನ್ನಾರ ಎಂಬುದು ವಿರೋಧ ಪಕ್ಷಗಳ ಪ್ರಬಲ ಆರೋಪವಾಗಿದೆ. ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ನೆಪದಲ್ಲಿ ಅಲ್ಪಸಂಖ್ಯಾತರು ಮತ್ತು ಸಾಮಾಜಿಕವಾಗಿ ಹಿಂದುಳಿದವರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ಆತಂಕವನ್ನು ಬಂಗಾಳ, ತಮಿಳುನಾಡು ಮತ್ತು ಕೇರಳದಂತಹ ಚುನಾವಣಾ ರಾಜ್ಯಗಳ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.

ಬಾಂಗ್ಲಾದೇಶದ ಗಡಿ ಹಂಚಿಕೊಂಡಿರುವ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಮೂಲಕ ಅತಿ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಟಿಎಂಸಿ ಆರೋಪಿಸಿದೆ. ಇತ್ತ ತಮಿಳುನಾಡಿನಲ್ಲಿಯೂ ಸಂಸದ ರವಿಕುಮಾರ್ ಅವರು ಎಸ್‌ಐಆರ್‌ಗೂ ಎನ್‌ಆರ್‌ಸಿಗೂ ನೇರ ಸಂಪರ್ಕವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಪ್ರಕ್ರಿಯೆಗೆ ಬೇಕಾದ ದಾಖಲೆಗಳ ಷರತ್ತುಗಳು ಎನ್‌ಆರ್‌ಸಿಯನ್ನೇ ಹೋಲುತ್ತಿವೆ ಎಂಬುದು ವಿಮರ್ಶಕರ ವಾದವಾಗಿದೆ.

ಜೀವನಾಧಾರ ಕಳೆದುಕೊಳ್ಳುವ ಭೀತಿ

ಕೇವಲ ಮತದಾನದ ಹಕ್ಕಷ್ಟೇ ಅಲ್ಲ, ಮತದಾರರ ಪಟ್ಟಿಯಿಂದ ಹೆಸರು ಹೋದರೆ ಬಡವರು ಸರ್ಕಾರದ ಕಲ್ಯಾಣ ಯೋಜನೆಗಳಿಂದಲೂ ವಂಚಿತರಾಗುವ ಅಪಾಯವಿದೆ. ಈಗಾಗಲೇ ಅಧಿಕಾರಶಾಹಿ ಮತ್ತು ತಾಂತ್ರಿಕ ತೊಡಕುಗಳಿಂದ ಬಳಲುತ್ತಿರುವ ಬಡವರಿಗೆ, ಪೌರತ್ವದ ಮೇಲೆಯೇ ಪ್ರಶ್ನೆ ಎದ್ದರೆ ಅವರು ಸರ್ಕಾರದ ಸವಲತ್ತುಗಳನ್ನು ಪಡೆಯಲು ಬೇಕಾದ ದಾಖಲೆಗಳನ್ನು ಒದಗಿಸುವುದು ಕಷ್ಟಸಾಧ್ಯವಾಗಲಿದೆ.

ಸರ್ಕಾರದ ರಕ್ಷಣಾ ತಂತ್ರವೇನು?

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭರ್ಜರಿ ಜಯವು ಮೋದಿ ಸರ್ಕಾರಕ್ಕೆ ದೊಡ್ಡ ರಕ್ಷಾಕವಚವಾಗಿ ಪರಿಣಮಿಸಿದೆ. ಎಸ್‌ಐಆರ್ ಎಂಬುದು ಚುನಾವಣಾ ಆಯೋಗದ ಸ್ವಾಯತ್ತ ಆಡಳಿತಾತ್ಮಕ ಪ್ರಕ್ರಿಯೆ ಎಂದು ವಾದಿಸುತ್ತಲೇ ಬಂದಿರುವ ಸರ್ಕಾರ, ಈಗ ವಿಪಕ್ಷಗಳ ಆರೋಪವನ್ನು 'ಸೋಲಿನ ಹತಾಶೆ' ಎಂದು ಬಿಂಬಿಸಲು ಮುಂದಾಗಿದೆ. ಸಂಸತ್ತಿನಲ್ಲಿ ವಿಪಕ್ಷಗಳು ಗದ್ದಲ ಎಬ್ಬಿಸಿದರೆ, ತಾವು ಮೊದಲೇ ಹೇಳಿದಂತೆ ವಿಪಕ್ಷಗಳು 'ಡ್ರಾಮಾ' ಮಾಡುತ್ತಿವೆ ಎಂದು ಸಾಬೀತುಪಡಿಸಲು ಪ್ರಧಾನಿ ಮೋದಿ ಅವರಿಗೆ ಅವಕಾಶ ಸಿಕ್ಕಂತಾಗುತ್ತದೆ.

Read More
Next Story