
ವಂದೇ ಮಾತರಂಗೆ ಜಿನ್ನಾ ವಿರೋಧವಿತ್ತು… ನೆಹರೂ ಅನುಸರಿಸಿದರು; ಪ್ರಧಾನಿ ಮೋದಿ
ಸಂಸತ್‌ನಲ್ಲಿ ಇಂದು ಆರಂಭಗೊಂಡ ವಂದೇ ಮಾತರಂ ಕುರಿತ ಚರ್ಚೆಗೆ ಚಾಲನೆ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸತ್‌ನಲ್ಲಿ ವಂದೇ ಮಾತರಂ ಕುರಿತ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇಂದಿರಾ ಗಾಂಧಿ ಅಧಿಕಾರಾವಧಿಯಲ್ಲಿ ದೇಶಾದ್ಯಂತ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿದ ಮೋದಿ, ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು. ಮೊಹಮ್ಮದ್ ಅಲಿ ಜಿನ್ನಾಗೆ ವಂದೇ ಮಾತರಂ ಬಗ್ಗೆಅಸಮಾಧಾನವಿತ್ತು. ಹೀಗಾಗಿ ಅವರು ಅದನ್ನು ವಿರೋಧಿಸುತ್ತಿದ್ದರು. ಅವರ ಮನಸ್ಥಿತಿಯನ್ನೇ ಜವಾಹರಲಾಲ್ ನೆಹರೂ ಕೂಡ ಅನುಸರಿಸಿದರು. ಏಕೆಂದರೆ ಅವರು ಮುಸ್ಲಿಮರನ್ನು ಓಲೈಕೆ ಮಾಡುವತ್ತ ಹೆಚ್ಚಿನ ಆಸಕ್ತಿ ಹೊಂದಿದ್ದರು ಎಂದು ಆರೋಪಿಸಿದರು.
'ವಂದೇ ಮಾತರಂ' ತನ್ನ 100ನೇ ವಾರ್ಷಿಕೋತ್ಸವವನ್ನು ಆಚರಿಸಿದಾಗ, ದೇಶವು ತುರ್ತು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿತ್ತು. ಅದು ತನ್ನ 100 ನೇ ವಾರ್ಷಿಕೋತ್ಸವವನ್ನು ಆಚರಿಸಿದಾಗ, ಸಂವಿಧಾನವನ್ನು ಕತ್ತು ಹಿಸುಕಲಾಯಿತು. ಈಗ, 150 ವರ್ಷಗಳಲ್ಲಿ, 1947 ರಲ್ಲಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟ 'ವಂದೇ ಮಾತರಂ' ನ ವೈಭವವನ್ನು ಪುನಃಸ್ಥಾಪಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ಪ್ರಧಾನಿ ಹೇಳಿದರು.
ನಾವು ಇತ್ತೀಚೆಗೆ ನಮ್ಮ ಸಂವಿಧಾನದ 75ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದೇವೆ. ದೇಶವು ಸರ್ದಾರ್ ವಲ್ಲಭ ಪಟೇಲ್ ಮತ್ತು ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯನ್ನು ಆಚರಿಸಿದೆ. ನಾವು ಗುರು ತೇಜ್ ಬಹದ್ದೂರ್ ಜಿ ಅವರ 350 ನೇ ಹುತಾತ್ಮ ದಿನವನ್ನೂ ಆಚರಿಸುತ್ತಿದ್ದೇವೆ. ಈಗ ನಾವು ವಂದೇ ಮಾತರಂನ 150 ವರ್ಷಗಳನ್ನು ಆಚರಿಸುತ್ತಿದ್ದೇವೆ ಎಂದರು.
ಈ ಚರ್ಚೆಯ ಪೂರ್ವಭಾವಿಯಾಗಿ ಬಿಜೆಪಿ 'ವಂದೇ ಮಾತರಂ' ಬಗ್ಗೆ ಕಾಂಗ್ರೆಸ್ ಅನ್ನು ಗುರಿಯಾಗಿಸಿ ವಾಗ್ದಾಳಿ ಆರಂಭಿಸಿದೆ. ವಂದೇ ಮಾತರಂನ ಮೂಲ ಕವಿತೆಯ ಎರಡು ಚರಣಗಳಲ್ಲಿ ಹಿಂದೂ ದೇವತೆಗಳ ಉಲ್ಲೇಖವಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಉದ್ದೇಶಪೂರ್ವಕವಾಗಿಯೇ ತೆಗೆದುಹಾಕಿದೆ. ಅದರಲ್ಲೂ ನೆಹರೂ ಪಾತ್ರ ಪ್ರಮುಖವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದು ದೇಶಭಕ್ತಿಗೀತೆಗೆ ತಂದಿರುವ ಅಗೌರವ ಮತ್ತು ಕಾಂಗ್ರೆಸ್‌ನ ಓಲೈಕೆ ರಾಜಕೀಯಕ್ಕೆ ಸಿಕ್ಕಿರುವ ಸಾಕ್ಷಿ ಎಂಬುದು ಬಿಜೆಪಿ ಅರೋಪ.
ಎರಡು ಚರಣಗಳನ್ನು ನೆಹರೂ ತೆಗೆದುಹಾಕಿಸಿದ್ದರೆ?
1937 ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಜವಾಹರಲಾಲ್ ನೆಹರೂ ಬರೆದ ಪತ್ರಗಳನ್ನು ಕಳೆದ ತಿಂಗಳು ಬಿಜೆಪಿ ವಕ್ತಾರ ಸಿಆರ್ ಕೇಶವನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಪತ್ರದದಲ್ಲಿ ವಂದೇ ಮಾತರಂನಲ್ಲಿ ಕೆಲವೊಂದು ಬದಲಾವಣೆ ತರುವ ಬಗ್ಗೆ ಪ್ರಸ್ತಾಪಿಸಿದ್ದರು. ಅದರಲ್ಲಿ ಹಿಂದೂ ದೇವತೆಗಳ ಪ್ರಸ್ತಾಪ ಇರುವುದು ಕಂಡು ಬಂದಿದೆ. ಹೀಗಾಗಿ ಆ ಚರಣಗಳನ್ನು ತೆಗೆದು ಹಾಕುವ ಬಗ್ಗೆ ಪ್ರಸ್ತಾಪಿಸಿದ್ದರು. ಈ ಪತ್ರಗಳು ಭಾರೀ ಸದ್ದು ಮಾಡಿತ್ತು ಹಾಗೂ ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು.
ಸಂಸತ್‌ನಲ್ಲಿ ಈಗ ಏಕೆ ಚರ್ಚೆ?
ಕಳೆದ ತಿಂಗಳು 'ವಂದೇ ಮಾತರಂ'ನ 150ನೇ ವರ್ಷಾಚರಣೆಗೆ ಚಾಲನೆ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, 'ವಂದೇ ಮಾತರಂ' ಹಾಡಿನ ಪ್ರಮುಖ ಚರಣವೊಂದನ್ನು 1937ರಲ್ಲಿ ಫೈಜಾಬಾದ್ ಸಭೆಯಲ್ಲಿ ತೆಗೆದು ಹಾಕಲಾಗಿತ್ತು. ಜನರ ಮನಸ್ಸಿನಲ್ಲಿ ದೇಶ ವಿಭಜನೆ ವಿಷ ಬೀಜ ಬಿತ್ತುವ ಉದ್ದೇಶದಿಂದ ಚರಣ ಕೈ ಬಿಡಲಾಗಿತ್ತು. ಇದಕ್ಕೆ ಕಾಂಗ್ರೆಸ್ ಮೂಲ ಕಾರಣ ಎಂದು ದೂರಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್, ಇದು ದೇಶ ವಿಭಜನೆಯ ಉದ್ದೇಶ ಇಟ್ಟುಕೊಂಡು ತೆಗೆದುಕೊಂಡ ನಿರ್ಧಾರವಲ್ಲ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸ್, ರಾಜೇಂದ್ರ ಪ್ರಸಾದ್, ಸರೋಜಿನಿ ನಾಯ್ಡು ಸೇರಿ ಹಲವು ಪ್ರಮುಖರಿದ್ದ ಕಾರ್ಯಕಾರಿ ಸಮಿತಿಯೇ 'ವಂದೇ ಮಾತರಂ' ಗೀತೆಯಲ್ಲಿ ಬದಲಾವಣೆ ತರಲು ಮುಂದಾಗಿತ್ತು. ಮೊದಲ ಎರಡು ಚರಣಗಳು ಮಾತ್ರ ರಾಷ್ಟ್ರೀಯತೆ ಸಾರುತ್ತವೆ. ಇತರೆ ಚರಣಗಳು ಧಾರ್ಮಿಕ ಚಿತ್ರಣ ಹೊಂದಿರುವ ಕಾರಣ ಕೆಲವು ನಾಗರಿಕರಿಂದ ವಿರೋಧ ವ್ಯಕ್ತವಾಗಿರುವುದು ಸಮಿತಿಯ ಗಮನಕ್ಕೆ ಬಂದಿತ್ತು. ಹೀಗಾಗಿ ಸಮಿತಿಯೇ ಆ ಚರಣಗಳನ್ನು ಕೈಬಿಡುವ ನಿರ್ಧಾರಕ್ಕೆ ಬಂದಿತ್ತು. ಪ್ರಧಾನಿ ಸುಖಾಸುಮ್ಮನೆ ಬೇಡದ ವಿಚಾರ ಚರ್ಚೆಗೆಳೆಯುತ್ತಿದ್ದಾರೆ ಎಂದು ಕಿಡಿಕಾರಿತ್ತು.
ದೇಶದಲ್ಲಿ ತಲೆದೋರಿರುವ ನಿರುದ್ಯೋಗ, ಅಸಮಾನತೆ, ವಿದೇಶಿ ನೀತಿ ಸವಾಲುಗಳು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಬದಲು ಪ್ರಧಾನಿ ಮೋದಿಯವರು ಭಾರತದ ಸ್ವಾತಂತ್ರ್ಯ ಹೋರಾಟ ಪರಂಪರೆಯ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ರಾಜಕೀಯ ವಾಕ್ಸಮರ ಇದೀಗ ಸಂಸತ್ ಅಂಗಳಕ್ಕೆ ಬರುವಂತಾಗಿದೆ.

