Babri Mosque-Style Mosque Foundation Laid in Bengal: High Alert in Murshidabad, Saudi Clerics to Attend
x

ಬಾಬರಿ ಮಸೀದಿ

ಬಂಗಾಳದಲ್ಲಿ ಬಾಬರಿ ಮಸೀದಿ ಮಾದರಿ ನಿರ್ಮಾಣಕ್ಕೆ ಚಾಲನೆ: ಹೈ ಅಲರ್ಟ್, ಸೌದಿ ಧರ್ಮಗುರುಗಳ ಭೇಟಿ

ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಹುಮಾಯೂನ್ ಕಬೀರ್ ಈ ಮಸೀದಿ ನಿರ್ಮಾಣದ ನೇತೃತ್ವ ವಹಿಸಿದ್ದು, ಕಾರ್ಯಕ್ರಮಕ್ಕೆ ಸುಮಾರು 3 ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.


Click the Play button to hear this message in audio format

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸೀದಿಯ ಶಂಕುಸ್ಥಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಭಾರೀ ಭದ್ರತೆಯನ್ನು ಒದಗಿಸಲಾಗಿದೆ. ಡಿಸೆಂಬರ್ 6 ರಂದು, ಅಂದರೆ ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವದಂದೇ ಈ ಕಾರ್ಯಕ್ರಮ ನಿಗದಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಪಡೆಗಳು ಪಥಸಂಚಲನ ನಡೆಸಿವೆ. ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಹುಮಾಯೂನ್ ಕಬೀರ್ ಈ ಮಸೀದಿ ನಿರ್ಮಾಣದ ನೇತೃತ್ವ ವಹಿಸಿದ್ದು, ಕಾರ್ಯಕ್ರಮಕ್ಕೆ ಸುಮಾರು 3 ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್

ಈ ಪ್ರದೇಶವನ್ನು "ಹೈ ಸೆಕ್ಯುರಿಟಿ" ವಲಯ ಎಂದು ಘೋಷಿಸಲಾಗಿದ್ದು, ಸ್ಥಳೀಯ ಪೊಲೀಸರ ಜೊತೆಗೆ ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಮತ್ತು ಬಿಎಸ್‌ಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ. ಉದ್ದೇಶಿತ ಮಸೀದಿ ನಿರ್ಮಾಣದ ಸ್ಥಳದ ಸುತ್ತಮುತ್ತ ಕೇಂದ್ರ ಪಡೆಗಳು ಈಗಾಗಲೇ ಪಥಸಂಚಲನ ನಡೆಸಿವೆ. ಕಲ್ಕತ್ತಾ ಹೈಕೋರ್ಟ್ ನಿರ್ದೇಶನದ ಮೇರೆಗೆ, ರಾಷ್ಟ್ರೀಯ ಹೆದ್ದಾರಿ-12ರಲ್ಲಿ ಸಂಚಾರಕ್ಕೆ ಅಡಚಣೆಯಾಗದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ಅಧಿಕಾರಿಗಳು ಕಬೀರ್ ಅವರ ತಂಡದೊಂದಿಗೆ ಚರ್ಚೆ ನಡೆಸಿದ್ದಾರೆ. ಬೆಲ್ದಂಗಾ ಮತ್ತು ರಾಣಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 3,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸೌದಿ ಅತಿಥಿಗಳು ಮತ್ತು ಭರ್ಜರಿ ಭೋಜನ

ಕಾರ್ಯಕ್ರಮದ ಆಕರ್ಷಣೆಯಾಗಿ ಸೌದಿ ಅರೇಬಿಯಾದಿಂದ ಇಬ್ಬರು ಧರ್ಮಗುರುಗಳು ವಿಶೇಷ ಬೆಂಗಾವಲು ಪಡೆಯೊಂದಿಗೆ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಆಗಮಿಸುವ ನಿರೀಕ್ಷೆಯಿದೆ. ಸಮಾವೇಶಕ್ಕೆ ಬರುವ ಜನರಿಗಾಗಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಶಾಹಿ ಬಿರಿಯಾನಿ ತಯಾರಿಸಲು ಏಳು ಕೇಟರಿಂಗ್ ಏಜೆನ್ಸಿಗಳಿಗೆ ಗುತ್ತಿಗೆ ನೀಡಲಾಗಿದೆ. ಸುಮಾರು 40,000 ಪ್ಯಾಕೆಟ್ ಊಟ ಅತಿಥಿಗಳಿಗಾಗಿ ಮತ್ತು 20,000 ಪ್ಯಾಕೆಟ್ ಸ್ಥಳೀಯರಿಗಾಗಿ ಸಿದ್ಧಪಡಿಸಲಾಗುತ್ತಿದೆ. ಅಂದಾಜು 60-70 ಲಕ್ಷ ರೂ. ವೆಚ್ಚದಲ್ಲಿ ಈ ಸಮಾರಂಭ ಆಯೋಜಿಸಲಾಗಿದ್ದು, 150 ಅಡಿ ಉದ್ದದ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ.

ರಾಜಕೀಯ ಸಂಘರ್ಷ ಮತ್ತು ಅನುಮತಿ ಗೊಂದಲ

ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯಿಂದ ಇನ್ನೂ ಅಧಿಕೃತ ಅನುಮತಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಕೋಮು ರಾಜಕಾರಣ"ದಲ್ಲಿ ತೊಡಗಿದ್ದಾರೆ ಎಂಬ ಕಾರಣಕ್ಕೆ ತೃಣಮೂಲ ಕಾಂಗ್ರೆಸ್ ಗುರುವಾರವಷ್ಟೇ ಕಬೀರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಇದರ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷ ಕಟ್ಟುವುದಾಗಿ ಕಬೀರ್ ಘೋಷಿಸಿದ್ದಾರೆ. ಎಷ್ಟೇ ಅಡೆತಡೆಗಳಿದ್ದರೂ, ಭದ್ರತಾ ಕೋಟೆಗಳ ನಡುವೆಯೂ ಈ ಐತಿಹಾಸಿಕ ಕಾರ್ಯಕ್ರಮ ನಡೆದೇ ತೀರುತ್ತದೆ ಎಂದು ಕಬೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read More
Next Story