6 ಬಾರಿ ಡಿಸಿಎಂ, 8 ಬಾರಿ ಶಾಸಕ: ಸಿಎಂ ಕನಸು ಕಾಣುತ್ತಲೇ  ಅಜಿತ್ ಪವಾರ್ ಅಸ್ತಂಗತ
x

ದಿವಗಂತ ಅಜಿತ್‌ ಪವಾರ್‌

6 ಬಾರಿ ಡಿಸಿಎಂ, 8 ಬಾರಿ ಶಾಸಕ: 'ಸಿಎಂ' ಕನಸು ಕಾಣುತ್ತಲೇ ಅಜಿತ್ ಪವಾರ್ ಅಸ್ತಂಗತ

ಮುಖ್ಯಮಂತ್ರಿ ಗಾದಿಯನ್ನೇರುವ ಅಜಿತ್ ಪವಾರ್ ಅವರ ಕನಸು ನನಸಾಗದೆಯೇ ಉಳಿಯಿತು. ಬುಧವಾರ ಅವರ ತವರು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದೊಂದಿಗೆ ಅವರ ಆಕರ್ಷಕ ರಾಜಕೀಯ ಜೀವನಕ್ಕೆ ತೆರೆಬಿದ್ದಿದೆ.


Click the Play button to hear this message in audio format

ಮಹಾರಾಷ್ಟ್ರದ ರಾಜಕಾರಣದಲ್ಲಿ 'ಅಜಿತ್ ದಾದಾ' ಎಂದೇ ಖ್ಯಾತರಾಗಿದ್ದ ಅಜಿತ್ ಪವಾರ್ (66) ಅವರಿಗೆ ಮುಖ್ಯಮಂತ್ರಿಯಾಗಬೇಕೆಂಬ ಹಂಬಲ ಎಷ್ಟಿತ್ತೆಂದರೆ ಅವರು ಅದನ್ನು ಎಂದಿಗೂ ಮುಚ್ಚಿಟ್ಟುಕೊಂಡಿರಲಿಲ್ಲ. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ದಾಖಲೆಯ ಆರು ಬಾರಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ (ಡಿಸಿಎಂ) ಸೇವೆ ಸಲ್ಲಿಸಿದರೂ, ಮುಖ್ಯಮಂತ್ರಿ ಗಾದಿಯನ್ನೇರುವ ಅವರ ಕನಸು ನನಸಾಗದೆಯೇ ಉಳಿಯಿತು. ಬುಧವಾರ ಅವರ ತವರು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದೊಂದಿಗೆ ಅವರ ಆಕರ್ಷಕ ರಾಜಕೀಯ ಜೀವನಕ್ಕೆ ತೆರೆಬಿದ್ದಿದೆ.

ಸಿಎಂ ಕುರ್ಚಿಯ ಸನಿಹವಿದ್ದರೂ...

ಅಜಿತ್ ಪವಾರ್ ಅವರ ರಾಜಕೀಯ ಜೀವನವನ್ನು "ಎಂದಿಗೂ ಮದುಮಗಳಾಗದ, ಆದರೆ ಮದುಮಗಳ ಸಖಿಯಾಗಿಯೇ ಉಳಿದ" ಸ್ಥಿತಿಗೆ ಹೋಲಿಸಲಾಗುತ್ತಿದೆ. ಕಾಂಗ್ರೆಸ್, ಶಿವಸೇನೆ ಮತ್ತು ಬಿಜೆಪಿ, ಹೀಗೆ ಮೂರು ಭಿನ್ನ ಪಕ್ಷಗಳ ನೇತೃತ್ವದ ಸರ್ಕಾರಗಳಲ್ಲಿಯೂ ಅವರು ಉಪಮುಖ್ಯಮಂತ್ರಿಯಾಗಿದ್ದರು. 2019ರ ನವೆಂಬರ್‌ನಲ್ಲಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಸೇರಿ ರಚಿಸಿದ ಸರ್ಕಾರ ಕೇವಲ ಎರಡು ದಿನಗಳ ಕಾಲವಷ್ಟೇ ಉಳಿದಿತ್ತು. ಜುಲೈ 2023 ರಲ್ಲಿ ಶಿಂಧೆ-ಫಡ್ನವಿಸ್ ಸರ್ಕಾರವನ್ನು ಸೇರಿದ ನಂತರವೂ ಅವರು ಡಿಸಿಎಂ ಆಗಿಯೇ ಮುಂದುವರಿದಿದ್ದರು.

ವಿವಾದಗಳು ಮತ್ತು 'ದಾದಾ' ಶೈಲಿ

ಅಜಿತ್ ಪವಾರ್ ಒಬ್ಬ 'ಕೆಲಸಗಾರ' ರಾಜಕಾರಣಿ. ಇತರ ರಾಜಕಾರಣಿಗಳಂತೆ ವಿಳಂಬ ಧೋರಣೆ ತೋರದೆ, ಸಮಯಪ್ರಜ್ಞೆಗೆ ಅವರು ಹೆಸರಾಗಿದ್ದರು. ಗ್ರಾಮೀಣ ಭಾಗದ ಜನರಿಂದ ಪ್ರೀತಿಯಿಂದ 'ದಾದಾ' (ಅಣ್ಣ) ಎಂದು ಕರೆಸಿಕೊಳ್ಳುತ್ತಿದ್ದ ಅವರು, ತಮ್ಮ ನೇರ ಮಾತುಗಳಿಗೆ ಹೆಸರುವಾಸಿಯಾಗಿದ್ದರು. 2013ರಲ್ಲಿ ರಾಜ್ಯದಲ್ಲಿ ಉಂಟಾದ ತೀವ್ರ ಬರಗಾಲದ ಸಂದರ್ಭದಲ್ಲಿ, ಸೋಲಾಪುರದ ರೈತರು ನೀರಿಗಾಗಿ ಉಪವಾಸ ಮಾಡುತ್ತಿದ್ದಾಗ, "ಅಣೆಕಟ್ಟಿನಲ್ಲಿ ನೀರಿಲ್ಲದಿದ್ದರೆ ನಾವೇನು ಮೂತ್ರ ವಿಸರ್ಜಿಸಬೇಕೇ?" ಎಂದು ಹೇಳುವ ಮೂಲಕ ಭಾರಿ ವಿವಾದ ಸೃಷ್ಟಿಸಿದ್ದರು. ನಂತರ ಇದಕ್ಕಾಗಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕಾಯಿತು.

70,000 ಕೋಟಿ ರೂ.ಗಳ ನೀರಾವರಿ ಹಗರಣ ಮತ್ತು ಪುಣೆಯಲ್ಲಿ ಮಗ ಪಾರ್ಥ್ ಪವಾರ್ ಹೆಸರಿನಲ್ಲಿ ನಡೆದ ಭೂ ವ್ಯವಹಾರದ ಆರೋಪಗಳಿದ್ದರೂ, ಅವರು ರಾಜಕೀಯವಾಗಿ ಸದಾ ಮೇಲುಗೈ ಸಾಧಿಸುತ್ತಲೇ ಬಂದಿದ್ದರು.

ಚಾಣಾಕ್ಷ ರಾಜಕಾರಣಿ

ಜುಲೈ 2023 ರಲ್ಲಿ ತಮ್ಮ ಚಿಕ್ಕಪ್ಪ ಮತ್ತು ರಾಜಕೀಯ ಗುರು ಶರದ್ ಪವಾರ್ ವಿರುದ್ಧ ಬಂಡಾಯವೆದ್ದು, ಪಕ್ಷದ ಹೆಸರು ಮತ್ತು ಚಿಹ್ನೆಯೊಂದಿಗೆ ಹೊರಬಂದಿದ್ದು ಅವರ ರಾಜಕೀಯ ಜೀವನದ ದೊಡ್ಡ ತಿರುವು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕೇವಲ ಒಂದು ಸ್ಥಾನ ಗೆದ್ದಾಗ ಟೀಕೆಗೊಳಗಾಗಿದ್ದ ಅಜಿತ್, ಕೇವಲ ಐದು ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ 41 ಸ್ಥಾನಗಳನ್ನು ಗೆಲ್ಲುವ ಮೂಲಕ ತಮ್ಮ ತಾಕತ್ತು ಪ್ರದರ್ಶಿಸಿದ್ದರು. ಬಿಜೆಪಿಯೊಂದಿಗಿನ ಮೈತ್ರಿಯ ನಡುವೆಯೂ ತಾವು ಪ್ರಗತಿಪರ ಸಿದ್ಧಾಂತದಿಂದ ಸರಿದಿಲ್ಲ ಎಂದು ಅವರು ಪ್ರತಿಪಾದಿಸುತ್ತಿದ್ದರು.

ಅಂತ್ಯಗೊಂಡ ಬಜೆಟ್ ಮಂಡನೆಯ ಕನಸು

ಹಣಕಾಸು ಮತ್ತು ಯೋಜನಾ ಸಚಿವರಾಗಿದ್ದ ಅಜಿತ್ ಪವಾರ್, ಫೆಬ್ರವರಿ 23 ರಂದು ಮುಂಬೈನಲ್ಲಿ ನಡೆಯಲಿರುವ ಅಧಿವೇಶನದಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಬೇಕಿತ್ತು. ಆದರೆ ಅದಕ್ಕೂ ಮುನ್ನವೇ ವಿಧಿ ಅವರನ್ನು ಕರೆಸಿಕೊಂಡಿದೆ. 1991 ರಿಂದ ಸತತ ಎಂಟು ಬಾರಿ ಬಾರಾಮತಿ ಶಾಸಕರಾಗಿದ್ದ ಅಜಿತ್ ಪವಾರ್ ಅಗಲಿಕೆಯೊಂದಿಗೆ, ಎನ್‌ಸಿಪಿ ಬಣಗಳ ಭವಿಷ್ಯ ಏನಾಗಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

Read More
Next Story