
ಅಜಿತ್ ಪವಾರ್ ಅವರಿಂದ ಹಿಡಿದು ವೈಎಸ್‌ಆರ್ ತನಕ: ವೈಮಾನಿಕ ದುರಂತದಲ್ಲಿ ಮಡಿದ ಭಾರತದ 10 ರಾಜಕಾರಣಿಗಳು
ಘಟನೆಗಳು ಪ್ರಮುಖ ನಾಯಕರನ್ನು ಬಲಿಪಡೆದಿರುವುದು ಮಾತ್ರವಲ್ಲದೆ, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ.
ವಿಮಾನ ಮತ್ತು ಹೆಲಿಕಾಪ್ಟರ್ಗಳ ಪತನ ಭಾರತದ ರಾಜಕೀಯ ಇತಿಹಾಸದಲ್ಲಿ ಹಲವು ಕರಾಳ ಅಧ್ಯಾಯಗಳನ್ನು ಸೃಷ್ಟಿಸಿವೆ. ಹಲವು ಪ್ರಮುಖ ನಾಯಕರು ಈ ದುರಂತಗಳಲ್ಲಿ ಮಡಿದಿದ್ದಾರೆ. ಇದೀಗ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಈ ಘಟನೆಗಳು ಪ್ರಮುಖ ನಾಯಕರನ್ನು ಬಲಿಪಡೆದಿರುವುದು ಮಾತ್ರವಲ್ಲದೆ, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ. ಅದೇ ರೀತಿ ಕಳೆದ ಕೆಲವು ದಶಕಗಳಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ 10 ಪ್ರಮುಖ ಭಾರತೀಯ ನಾಯಕರ ವಿವರಗಳನ್ನು ಈ ಸುದ್ದಿಯಲ್ಲಿ ನೀಡಲಾಗಿದೆ.
1. ಅಜಿತ್ ಪವಾರ್ (2026)
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ (66) ಅವರು ಜನವರಿ 28ರಂದು ರಂದು ಬಾರಾಮತಿ ಬಳಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮುಂಬೈನಿಂದ ಬರುತ್ತಿದ್ದ ಲಿಯರ್‌ಜೆಟ್ 45 (Learjet 45) ವಿಮಾನವು ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೇ ಭೂಮಿಗೆ ಅಪ್ಪಳಿಸಿದೆ. ಈ ಘಟನೆಯಲ್ಲಿ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಸಾವು ಮಹಾರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಗೆ ಕಾರಣವಾಗಲಿದೆ.
2. ವಿಜಯ್ ರೂಪಾನಿ (2025)
ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಜೂನ್ 12 ರಂದು ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (AI-171) ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತ್ತು. ಘಟನೆಯಲ್ಲಿ ರೂಪಾನಿ ಅವರು ಸೇರಿದಂತೆ 241 ಮಂದಿ ಮಡಿದಿದ್ದರು.
3. ಜನರಲ್ ಬಿಪಿನ್ ರಾವತ್ (2021)
ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಜನರಲ್ ಬಿಪಿನ್ ರಾವತ್ ಅವರು ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ (Mi-17V5) ದುರಂತದಲ್ಲಿ ಹುತಾತ್ಮರಾಗಿದ್ದಾರೆ. ಈ ಘಟನೆಯಲ್ಲಿ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಅಸುನೀಗಿದ್ದಾರೆ. ಹವಾಮಾನ ವೈಪರೀತ್ಯವೇ ಪ್ರಮುಖ ಕಾರಣ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಹೆಲಿಕಾಪ್ಟರ್ನ ಪೈಲಟ್‌ಗೆ ದಿಕ್ಕು ತೋಚದಂತಾಗಿದ್ದು (spatial disorientation) ನಿಯಂತ್ರಣ ತಪ್ಪಿ ಧರೆಗೆ ಅಪ್ಪಳಿಸಿತ್ತು.
4. ದೋರ್ಜಿ ಖಂಡು (2011)
ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು ಅವರು ಏಪ್ರಿಲ್ 30ರಂದು ತವಾಂಗ್ ಜಿಲ್ಲೆಯ ದುರ್ಗಮ ಬೆಟ್ಟಗಳ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡು ದುರ್ಮರಣಕ್ಕೆ ಈಡಾಗಿದ್ದರು. ಪ್ರತಿಕೂಲ ಹವಾಮಾನದಿಂದಾಗಿ ಅವರು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿತ್ತು. ಆರಂಭದಲ್ಲಿ ಏನಾಯಿತು ಎಂಬುದು ಗೊತ್ತಾಗಿರಲಿಲ್ಲ. ಆದರೆ, ಹಲವು ದಿನಗಳ ಶೋಧ ಕಾರ್ಯಾಚರಣೆಯ ನಂತರ ಅವರ ಮೃತದೇಹ ಪತ್ತೆಯಾಗಿತ್ತು.
5. ವೈ.ಎಸ್. ರಾಜಶೇಖರ್ ರೆಡ್ಡಿ (2009)
ಆಂಧ್ರಪ್ರದೇಶ ಕಂಡಿದ್ದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ವೈಎಸ್‌ಆರ್ ಎಂದೇ ಕರೆಯಲ್ಪಡುತ್ತಿದ್ದ ರಾಜಶೇಖರ್ ರೆಡ್ಡಿ ಅವರು ಸೆಪ್ಟೆಂಬರ್ 2ರಂದು ಚಿತ್ತೂರು ಜಿಲ್ಲೆಗೆ ತೆರಳುವಾಗ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್ (Bell 430) ದುರಂತದಲ್ಲಿ ಮೃತಪಟ್ಟಿದ್ದಾರೆ. ಭಾರಿ ಮಳೆ ಮತ್ತು ಕೆಟ್ಟ ಹವಾಮಾನದಿಂದಾಗಿ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡು ಅರಣ್ಯ ಪ್ರದೇಶದ ಬೆಟ್ಟಕ್ಕೆ ಡಿಕ್ಕಿ ಹೊಡೆದಿತ್ತು. ಅವರ ಸಾವು ಆಂಧ್ರ ಪ್ರದೇಶದ ರಾಜಕೀಯದಲ್ಲಿ ದೊಡ್ಡ ಬದಲಾವಣೆ ತಂದಿತ್ತು.
6. ಓಂ ಪ್ರಕಾಶ್ ಜಿಂದಾಲ್ ಮತ್ತು ಸುರೇಂದರ್ ಸಿಂಗ್ (2005)
ಒಂದೇ ಹೆಲಿಕಾಪ್ಟರ್ ದುರಂತದಲ್ಲಿ ಹರಿಯಾಣದ ಇಬ್ಬರು ಪ್ರಬಲ ಸಚಿವರು ಪ್ರಾಣ ಕಳೆದುಕೊಂಡಿದ್ದು ದೊಡ್ಡ ದುರಂತವೇ ಎನಿಸಿತ್ತು. ಕೈಗಾರಿಕೋದ್ಯಮಿ ಹಾಗೂ ಹರಿಯಾಣದ ಇಂಧನ ಸಚಿವರಾಗಿದ್ದ ಓ.ಪಿ. ಜಿಂದಾಲ್ ಮತ್ತು ಕೃಷಿ ಸಚಿವ ಸುರೇಂದರ್ ಸಿಂಗ್ ಅವರು ಮಾರ್ಚ್ 2005ರಲ್ಲಿ ಉತ್ತರ ಪ್ರದೇಶದ ಸಹರಾನ್ಪುರ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ದುರ್ಮರಣಕ್ಕೆ ಈಡಾಗಿದ್ದರು. ತಾಂತ್ರಿಕ ದೋಷವೇ ಘಟನೆಗೆ ಕಾರಣ ಎಂದು ತನಿಖೆ ಬಳಿಕ ಖಚಿತವಾಗಿತ್ತು.
7. ಜಿ.ಎಂ.ಸಿ ಬಾಲಯೋಗಿ (2002)
ಲೋಕಸಭಾ ಸ್ಪೀಕರ್ ಆಗಿದ್ದ ಜಿ.ಎಂ.ಸಿ ಬಾಲಯೋಗಿ ಅವರು ಮಾರ್ಚ್ 3ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಬೆಲ್ 206 ಹೆಲಿಕಾಪ್ಟರ್ ಪತನಗೊಂಡು ಮೃತಪಟ್ಟಿದ್ದಾರೆ. ಕೆಟ್ಟ ಹವಾಮಾನ ಮತ್ತು ಕನಿಷ್ಠ ಗೋಚರತೆಯ ಕಾರಣಕ್ಕೆ ಈ ಘಟನೆ ಸಂಭವಿಸಿತ್ತು. ಅಧಿಕಾರಾವಧಿಯಲ್ಲಿ ಇರುವಾಗಲೇ ವೈಮಾನಿಕ ಅಪಘಾತದಲ್ಲಿ ಮಡಿದ ಮೊದಲ ಸ್ಪೀಕರ್ ಅವರು.
8. ಮಾಧವರಾವ್ ಸಿಂಧಿಯಾ (2001)
ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಾಧವರಾವ್ ಸಿಂಧಿಯಾ ಅವರು ಸೆಪ್ಟೆಂಬರ್ 30ರಂದು ಉತ್ತರ ಪ್ರದೇಶದ ಮೈನ್‌ಪುರಿ ಬಳಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದೆಹಲಿಯಿಂದ ಕಾನ್ಪುರಕ್ಕೆ ತೆರಳುತ್ತಿದ್ದ ಅವರ ಖಾಸಗಿ ವಿಮಾನವು (Beechcraft C90) ಪ್ರತಿಕೂಲ ಹವಾಮಾನದಿಂದಾಗಿ ಭೂಮಿಗೆ ಅಪ್ಪಳಿಸಿತ್ತು. ಅವರ ಪುತ್ರ ಜೋತಿರಾಧಿತ್ಯ ಸಿಂಧ್ಯಾ ಅವರು ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಸಚಿವರು.
9. ಸಂಜಯ್ ಗಾಂಧಿ (1980)
ಭಾರತದ ರಾಜಕಾರಣದಲ್ಲಿ ತಮ್ಮ ನೇರ ಹಾಗೂ ದಿಟ್ಟ ನಿರ್ಧಾರಗಳ ಮೂಲಕ ಸಂಚಲನ ಮೂಡಿಸಿದ್ದ ಸಂಜಯ್ ಗಾಂಧಿ ಅವರು ಜೂನ್ 23ರಂದು ದೆಹಲಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಾವೇ ಖುದ್ದು ಲಘು ವಿಮಾನವನ್ನು ಹಾರಾಟ ನಡೆಸುತ್ತಿದ್ದಾಗ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿತ್ತು. ಅವರ ಸಾವು ರಾಷ್ಟ್ರೀಯ ರಾಜಕಾರಣದ ದಿಕ್ಕನ್ನೇ ಬದಲಿಸಿದ್ದು ಇತಿಹಾಸ.

