
ಸಹಕಾರಿ ಕ್ಷೇತ್ರದಿಂದ ದಾಖಲೆಯ ಡಿಸಿಎಂ ಹುದ್ದೆ ; ಮಹಾರಾಷ್ಟ್ರ ರಾಜಕೀಯದ 'ಚಾಣಕ್ಯ' ಅಜಿತ್ ಪವಾರ್
ಮಹಾರಾಷ್ಟ್ರದ ರಾಜಕೀಯ ಇತಿಹಾಸದಲ್ಲಿ ಅಜಿತ್ ಪವಾರ್ ಅವರಷ್ಟು ಬಾರಿ ಉಪಮುಖ್ಯಮಂತ್ರಿಯಾದವರು ಯಾರೂ ಇಲ್ಲ. ಎಲ್ಲ ಮೈತ್ರಿ ಸರ್ಕಾರಗಳಲ್ಲಿ 2ನೇ ಸ್ಥಾನ ಅವರದ್ದೇ ಆಗಿತ್ತು.
ಮಹಾರಾಷ್ಟ್ರದ ರಾಜಕೀಯದಲ್ಲಿ ಅಧಿಕಾರ ಯಾರದ್ದೇ ಇರಲಿ, ಅದರ 'ರಿಮೋಟ್ ಕಂಟ್ರೋಲ್' ತಮ್ಮ ಬಳಿಯೇ ಇಟ್ಟುಕೊಂಡಿದ್ದ ಮತ್ತು ದಶಕಗಳ ಕಾಲ ರಾಜ್ಯದ ರಾಜಕಾರಣವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದ 'ಮರಾಠಾ ಪ್ರಬಲ ನಾಯಕ' ಅಜಿತ್ ಪವಾರ್ (66) ವಿಧಿವಶರಾಗಿದ್ದಾರೆ. ಬುಧವಾರ ಬೆಳಿಗ್ಗೆ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಧಿವಶರಾಗಿದ್ದು, ಮರಾಠರ ನಾಡು ಶೋಕಸಾಗರದಲ್ಲಿ ಮುಳುಗಿದೆ.
ತಮ್ಮದೇ ತವರು ಕ್ಷೇತ್ರ ಬಾರಾಮತಿಗೆ ಸಭೆಯೊಂದಕ್ಕಾಗಿ ತೆರಳುತ್ತಿದ್ದಾಗ, ವಿಧಿಯಾಟ ಬೇರೆಯೇ ಆಗಿತ್ತು. ಮುಂಬೈನಿಂದ ಹೊರಟಿದ್ದ ಚಾರ್ಟರ್ಡ್ ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ತಾಂತ್ರಿಕ ದೋಷಕ್ಕೀಡಾಗಿತ್ತು. ಬಳಿಕ ವಿಮಾನ ರನ್-ವೇ ಪಕ್ಕದಲ್ಲೇ ಪತನಗೊಂಡಿದೆ. ಈ ದುರಂತದಲ್ಲಿ ಪವಾರ್ ಅವರೊಂದಿಗೆ ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಅಂಗರಕ್ಷಕರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಹಕಾರಿ ರಂಗದಿಂದ ವಿಧಾನಸೌಧದ ಮೆಟ್ಟಿಲವರೆಗೆ...
1959 ರ ಜುಲೈ 22ರಂದು ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ದೇವಲಾಲಿ ಪ್ರವರದಲ್ಲಿ ಜನಿಸಿದ ಅಜಿತ್ ಅನಂತರಾವ್ ಪವಾರ್, ಕೇವಲ ಶರದ್ ಪವಾರ್ ಅವರ ಸೋದರ ಸಂಬಂಧಿ ಎಂಬ ಹಣೆಪಟ್ಟಿಯಿಂದಲೇ ಮೇಲೆ ಬಂದವರಲ್ಲ. ಅವರ ರಾಜಕೀಯ ಜೀವನದ ಅಡಿಪಾಯವೇ ಸಹಕಾರಿ ಕ್ಷೇತ್ರ. ಸಕ್ಕರೆ ಕಾರ್ಖಾನೆಗಳು, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಮತ್ತು ಹಾಲು ಒಕ್ಕೂಟಗಳ ಮೂಲಕ ರೈತರೊಂದಿಗೆ ನೇರ ಸಂಪರ್ಕ ಸಾಧಿಸಿದ್ದ ಅಜಿತ್, ತಳಮಟ್ಟದ ಸಂಘಟನೆಯಲ್ಲಿ ಪಳಗಿದವರು. ಜತೆಗೆ ತಮ್ಮ ಚಿಕ್ಕಪ್ಪ ಶರದ್ ಅವರ ಆಶೀರ್ವಾದವೂ ಅವರಿಗಿತ್ತು.
1991ರಲ್ಲಿ ಬಾರಾಮತಿ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರಾದರೂ, ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರಿಗಾಗಿ ಆ ಸ್ಥಾನ ತ್ಯಾಗ ಮಾಡಿದ್ದರು. ನಂತರ ಮಹಾರಾಷ್ಟ್ರ ವಿಧಾನಸಭೆಗೆ ಕಾಲಿಟ್ಟ ಅವರು, ಅಂದಿನಿಂದ ಇಂದಿನವರೆಗೂ ಬಾರಾಮತಿ ಕ್ಷೇತ್ರದ ಅಜೇಯ ಸರದಾರ. 1991ರಿಂದ ಸತತವಾಗಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಅವರ ಜನಪ್ರಿಯತೆಗೆ ಸಾಕ್ಷಿ.
ಅತಿ ಹೆಚ್ಚು ಬಾರಿ ಡಿಸಿಎಂ
ಮಹಾರಾಷ್ಟ್ರದ ರಾಜಕೀಯ ಇತಿಹಾಸದಲ್ಲಿ ಅಜಿತ್ ಪವಾರ್ ಅವರಷ್ಟು ಬಾರಿ ಉಪಮುಖ್ಯಮಂತ್ರಿಯಾದವರು ಯಾರೂ ಇಲ್ಲ. 2010ರಲ್ಲಿ ಮೊದಲ ಬಾರಿಗೆ ಡಿಸಿಎಂ ಆದ ಅವರು, ನಂತರ ಪೃಥ್ವಿರಾಜ್ ಚವ್ಹಾಣ್, ದೇವೇಂದ್ರ ಫಡ್ನವಿಸ್, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ - ಹೀಗೆ ಎಲ್ಲ ಬಗೆಯ ಮೈತ್ರಿ ಸರ್ಕಾರಗಳಲ್ಲಿಯೂ 'ನಂಬರ್ 2' ಸ್ಥಾನ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ಹಣಕಾಸು ಖಾತೆಯ ಮೇಲೆ ಅವರಿಗಿದ್ದ ಹಿಡಿತ ಅಸಾಧಾರಣ ಎಂಬ ಮಾತಿದೆ. ಅಧಿಕಾರಿಗಳಷ್ಟೇ ನಿಖರವಾಗಿ ಬಜೆಟ್ ಅಂಕಿಅಂಶಗಳನ್ನು ನೆನಪಿಟ್ಟುಕೊಳ್ಳುತ್ತಿದ್ದ ಅಜಿತ್ ಪವಾರ್, ಆಡಳಿತಾತ್ಮಕವಾಗಿ ಅತ್ಯಂತ ಕಠಿಣ ಮತ್ತು ಶಿಸ್ತಿನ ನಾಯಕ ಎಂದು ಹೆಸರಾಗಿದ್ದರು. ಬೆಳಿಗ್ಗೆ 6 ಗಂಟೆಗೆಲ್ಲಾ ಅಧಿಕಾರಿಗಳ ಸಭೆ ನಡೆಸಿ, ಕಡತಗಳನ್ನು ವಿಲೇವಾರಿ ಮಾಡುವ ಅವರ ಕಾರ್ಯವೈಖರಿ 'ದಾದಾ ಸ್ಟೈಲ್' ಎಂದೇ ಪ್ರಸಿದ್ಧಿ.
ಆಗಾಗ ಬಂಡಾಯ
ಅಜಿತ್ ಪವಾರ್ ಅವರ ರಾಜಕೀಯ ಜೀವನ ಎಂದಿಗೂ ಸರಳ ರೇಖೆಯಾಗಿರಲಿಲ್ಲ. ಅದು ತಿರುವುಗಳಿಂದ ಕೂಡಿದ್ದ ರೋಚಕ ಕಥೆ. 2019ರ ನವೆಂಬರ್‌ನಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಸೇರಿ ಬೆಳಗಿನ ಜಾವ ಪ್ರಮಾಣವಚನ ಸ್ವೀಕರಿಸಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಆ ಸರ್ಕಾರ ಕೇವಲ 80 ಗಂಟೆಗಳಲ್ಲಿ ಬಿದ್ದು ಹೋದರೂ, ಅಜಿತ್ ಪವಾರ್ ಅವರ ಓಡಾಟ ನಿಲ್ಲಲಿಲ್ಲ.
2023ರಲ್ಲಿ ತಮ್ಮದೇ ಚಿಕ್ಕಪ್ಪ ಶರದ್ ಪವಾರ್ ಅವರ ವಿರುದ್ಧ ಬಂಡಾಯವೆದ್ದು, ಎನ್‌ಸಿಪಿ ಪಕ್ಷವನ್ನು ಇಬ್ಭಾಗ ಮಾಡಿ, ಬಿಜೆಪಿಯೊಂದಿಗೆ ಕೈಜೋಡಿಸಿದ್ದು ಮಹಾರಾಷ್ಟ್ರ ರಾಜಕಾರಣದ ದೊಡ್ಡ ಪಲ್ಲಟವಾಗಿತ್ತು. "ನಾನು ಭಾವನಾತ್ಮಕ ರಾಜಕಾರಣಿಯಲ್ಲ, ನಾನು ಪ್ರಾಕ್ಟಿಕಲ್ ಲೀಡರ್" ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು.
ವಿವಾದಗಳ ಸುಳಿ
ನೀರಾವರಿ ಹಗರಣ ಸೇರಿದಂತೆ 70,000 ಕೋಟಿ ರೂ.ಗಳ ಹಗರಣದ ಆರೋಪಗಳು ಅವರ ಬೆನ್ನಿಗಿದ್ದವು. ತಮ್ಮ ಆಕ್ಷೇಪಾರ್ಹ ಹೇಳಿಕೆಗಳಿಂದ ಹಲವು ಬಾರಿ ವಿವಾದವನ್ನೂ ಮೈಮೇಲೆ ಎಳೆದುಕೊಂಡಿದ್ದರು. ಆದರೂ, ಜನಸಾಮಾನ್ಯರ ಕೆಲಸ ಮಾಡಿಕೊಡುವಲ್ಲಿ ಅವರು ಎಂದಿಗೂ ಹಿಂದೆ ಬಿದ್ದಿರಲಿಲ್ಲ ಎಂಬುದು ಅವರ ಅಭಿಮಾನಿಗಳ ಮಾತು.
ಅಜಿತ್ ಪವಾರ್ ಅವರು ಪತ್ನಿ ಸುನೇತ್ರಾ ಪವಾರ್ ಮತ್ತು ಇಬ್ಬರು ಗಂಡು ಮಕ್ಕಳಾದ ಪಾರ್ಥ್ ಮತ್ತು ಜಯ್ ಅವರನ್ನು ಅಗಲಿದ್ದಾರೆ. ಶರದ್ ಪವಾರ್ ಅವರ ನೆರಳು ಮತ್ತು ಪ್ರತಿಸ್ಪರ್ಧಿಯಂತಿದ್ದ ಅಜಿತ್ ಅವರ ಅಗಲಿಕೆ, ಪವಾರ್ ಕುಟುಂಬದಲ್ಲಿ ಮಾತ್ರವಲ್ಲದೆ, ಇಡೀ ರಾಜ್ಯದ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ.

