
ಸಾಂದರ್ಭಿಕ ಚಿತ್ರ
ಕಾನ್ಪುರದಲ್ಲಿ ಘೋರ ಕೃತ್ಯ: ಮದ್ಯದ ಅಮಲಿನಲ್ಲಿ ಪತಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಮಹಿಳೆ
ದಾಳಿಯ ನಂತರ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪತಿಯನ್ನು ಆಸ್ಪತ್ರೆಗೆ ಸೇರಿಸುವ ಬದಲು, ಆರೋಪಿ ಮಹಿಳೆಯು ನೆಲದ ಮೇಲಿದ್ದ ರಕ್ತದ ಕಲೆಗಳನ್ನು ಒರೆಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾಳೆ.
ಉತ್ತರ ಪ್ರದೇಶದ ಕಾನ್ಪುರದ ಟಿಕ್ರಾ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ದಂಪತಿಗಳ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ, ಮದ್ಯದ ಅಮಲಿನಲ್ಲಿದ್ದ ಪತ್ನಿಯೇ ತನ್ನ ಪತಿಯ ತಲೆಗೆ ಕೊಡಲಿಯಿಂದ ಹತ್ತಕ್ಕೂ ಹೆಚ್ಚು ಬಾರಿ ಏಟು ನೀಡಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ.
ಮೃತನನ್ನು 45 ವರ್ಷದ ಪಪ್ಪು ಎಂದು ಗುರುತಿಸಲಾಗಿದೆ. ಈತ ಟೈಲ್ಸ್ ಮತ್ತು ಕಲ್ಲು ಹಾಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬುಧವಾರ ಸಂಜೆ ಪಪ್ಪು ಹಾಗೂ ಆತನ ಪತ್ನಿ ವೀರಾಂಗನಾ ಇಬ್ಬರೂ ಕುಳಿತು ಮದ್ಯ ಸೇವಿಸುತ್ತಿದ್ದಾಗ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಈ ಜಗಳ ಸುಮಾರು ಎರಡು ಗಂಟೆಗಳ ಕಾಲ ಮುಂದುವರಿದಿದೆ. ಆಕ್ರೋಶಗೊಂಡ ವೀರಾಂಗನಾ, ಮನೆಯಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಪತಿಯ ತಲೆಗೆ ಮನಬಂದಂತೆ ಹೊಡೆದಿದ್ದಾಳೆ.
ಸಾಕ್ಷ್ಯ ನಾಶಕ್ಕೆ ಯತ್ನ
ದಾಳಿಯ ನಂತರ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪತಿಯನ್ನು ಆಸ್ಪತ್ರೆಗೆ ಸೇರಿಸುವ ಬದಲು, ಆರೋಪಿ ಮಹಿಳೆಯು ನೆಲದ ಮೇಲಿದ್ದ ರಕ್ತದ ಕಲೆಗಳನ್ನು ಒರೆಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾಳೆ. ಅಷ್ಟೇ ಅಲ್ಲದೆ, ಪತಿಗೆ ಆದ ಗಾಯಗಳ ಬಗ್ಗೆ ಮನೆಯವರಿಗೆ ಸುಳ್ಳು ಹೇಳಿ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾಳೆ. ಆದರೆ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದಾಗ, ಇದು ಹರಿತವಾದ ಆಯುಧದಿಂದ ನಡೆದ ದಾಳಿ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಪಪ್ಪು ಮೃತಪಟ್ಟಿದ್ದಾನೆ.
ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಸತ್ಯ
ಪೊಲೀಸರು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ವಿಷಯಗಳು ಹೊರಬಂದಿವೆ. ಮೃತನ ತಲೆಯ ಮೇಲೆ 10ಕ್ಕೂ ಹೆಚ್ಚು ಆಳವಾದ ಗಾಯಗಳಾಗಿವೆ. ಕೇವಲ ಕೊಡಲಿ ಮಾತ್ರವಲ್ಲದೆ, ದಾಳಿ ಮಾಡಲು ಮನೆಯಲ್ಲಿದ್ದ ಲಟ್ಟಣಿಗೆ ಹಾಗೂ ಮಸಾಲೆ ಅರೆಯುವ ಕಲ್ಲನ್ನು ಬಳಸಲಾಗಿದೆ ಎಂದು ವರದಿ ತಿಳಿಸಿದೆ.
ಘಟನೆಯ ನಂತರ ಪರಾರಿಯಾಗಿದ್ದ ವೀರಾಂಗನಾಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಕಾನ್ಪುರದ ಡಿಸಿಪಿ ದಿನೇಶ್ ತ್ರಿಪಾಠಿ, "ದಂಪತಿಗಳಿಬ್ಬರೂ ಮದ್ಯ ಸೇವಿಸಿದ್ದರು. ಪತ್ನಿಯು ಕೊಲ್ಲುವ ಉದ್ದೇಶದಿಂದಲೇ ಪತಿಯ ಮೇಲೆ ಅಮಾನವೀಯವಾಗಿ ದಾಳಿ ಮಾಡಿದ್ದಾಳೆ. ಇದು ಪೂರ್ವನಿಯೋಜಿತ ಕೃತ್ಯವೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ," ಎಂದು ತಿಳಿಸಿದ್ದಾರೆ.
ಮೃತನ ಕುಟುಂಬಸ್ಥರು ವೀರಾಂಗನಾ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಪಪ್ಪುನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದಾಗಲೂ ಆಕೆ ಅಡ್ಡಿಪಡಿಸಿ ಹಿಂಸಾತ್ಮಕವಾಗಿ ನಡೆದುಕೊಂಡಿದ್ದಳು ಎಂದು ದೂರಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

