
ಅಲಿಗಢ ಮುಸ್ಲಿಂ ವಿವಿ ಕ್ಯಾಂಪಸ್‌ನಲ್ಲಿ ಶಾಲಾ ಶಿಕ್ಷಕನ ಗುಂಡಿಕ್ಕಿ ಹತ್ಯೆ
ಘಟನೆಯ ದೃಶ್ಯಾವಳಿಗಳು ಕ್ಯಾಂಟೀನ್ ಬಳಿಯಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆದರೆ, ರಾತ್ರಿಯ ಕತ್ತಲು ಮತ್ತು ದಟ್ಟ ಮಂಜು ಕವಿದಿದ್ದ ಕಾರಣ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ವಿವಿಯ ಪ್ರಾಕ್ಟರ್ ತಿಳಿಸಿದ್ದಾರೆ.
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದಲ್ಲಿ ಕ್ರಿಸ್‌ಮಸ್ ಹಬ್ಬದ ಮುನ್ನಾದಿನದಂದು (ಡಿಸೆಂಬರ್ 24) ಮುಸುಕುಧಾರಿಗಳ ಗುಂಪೊಂದು ಶಾಲಾ ಶಿಕ್ಷಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ರಾವ್ ದಾನಿಶ್ ಅಲಿ ಎಂದು ಗುರುತಿಸಲಾಗಿದ್ದು, ಇವರು ಎಎಂಯು ಅಧೀನದಲ್ಲಿರುವ ಎಬಿಕೆ ಯೂನಿಯನ್ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ವಿಶ್ವವಿದ್ಯಾಲಯದ ಪ್ರಾಕ್ಟರ್ ಮೊಹಮ್ಮದ್ ವಸೀಮ್ ಅಲಿ ಅವರು ನೀಡಿರುವ ಮಾಹಿತಿಯ ಪ್ರಕಾರ, ಬುಧವಾರ ರಾತ್ರಿ 9 ಗಂಟೆಯ ಸುಮಾರಿಗೆ ದಾನಿಶ್ ಅಲಿ ಅವರು ತಮ್ಮ ಇಬ್ಬರು ಸಹೋದ್ಯೋಗಿಗಳೊಂದಿಗೆ ವಿವಿಯ ಕೆನಡಿ ಆಡಿಟೋರಿಯಂ ಬಳಿ ನಡೆದುಕೊಂಡು ಹೋಗುತ್ತಿದ್ದರು. ತಮ್ಮ ದಿನಚರಿಯಂತೆ ಟೀ ಕುಡಿಯಲು ಅವರು ಕ್ಯಾಂಟೀನ್‌ಗೆ ತೆರಳಿದ್ದರು.
ಈ ವೇಳೆ ಅಲ್ಲಿಗೆ ಬಂದ ಮುಸುಕುಧಾರಿ ದುಷ್ಕರ್ಮಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. ಅಲಿ ಅವರೊಂದಿಗೆ ಕೆಲಕಾಲ ಮಾತನಾಡಿದ ದುಷ್ಕರ್ಮಿಗಳು, ಬಳಿಕ ಅತ್ಯಂತ ಸಮೀಪದಿಂದ ಅವರ ಮೇಲೆ ಗುಂಡು ಹಾರಿಸಿದ್ದಾರೆ. ರಕ್ತದ ಮಡುವಿನಲ್ಲಿ ಕುಸಿದುಬಿದ್ದ ಅಲಿ ಅವರನ್ನು ತಕ್ಷಣವೇ ಎಎಂಯುನ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ದಾರಿಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಸಿಸಿಟಿವಿಯಲ್ಲಿ ಸೆರೆ, ಆದರೆ ದೃಶ್ಯ ಅಸ್ಪಷ್ಟ:
ಘಟನೆಯ ದೃಶ್ಯಾವಳಿಗಳು ಕ್ಯಾಂಟೀನ್ ಬಳಿಯಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆದರೆ, ರಾತ್ರಿಯ ಕತ್ತಲು ಮತ್ತು ದಟ್ಟ ಮಂಜು ಕವಿದಿದ್ದ ಕಾರಣ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಪ್ರಾಕ್ಟರ್ ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಅಲಿಗಢ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ನೀರಜ್ ಕುಮಾರ್ ಮತ್ತು ತಂಡ ಸ್ಥಳಕ್ಕೆ ದೌಡಾಯಿಸಿದ್ದು, ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ಹತ್ಯೆಗೆ ನಿಖರವಾದ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಮೃತರ ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಮಾತನಾಡಿ ಮಾಹಿತಿ ಕಲೆಹಾಕುತ್ತಿದ್ದಾರೆ. ಅಲ್ಲದೆ, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಆರೋಪಿಗಳ ಚಲನವಲನ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

