
ಚಿತ್ರ ಕೃಪೆ - ಎಕ್ಸ್ ಪೋಸ್ಟ್
ಎಐ ವಾಯ್ಸ್ ಕ್ಲೋನಿಂಗ್ ವಂಚನೆ: ಸಂಬಂಧಿಯ ಧ್ವನಿಯನ್ನೇ ನಕಲು ಮಾಡಿ ಶಿಕ್ಷಕಿಗೆ ಲಕ್ಷಾಂತರ ರೂ. ನಾಮ!
ಹಣ ವರ್ಗಾವಣೆಯಾದ ಬಳಿಕ ಇದು ವಂಚನೆ ಎಂಬುದು ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರೂ, ಕಳೆದುಕೊಂಡ ಹಣದಲ್ಲಿ ಕೇವಲ ಅಲ್ಪ ಭಾಗವನ್ನು ಮಾತ್ರ ವಾಪಸ್ ಪಡೆಯಲು ಸಾಧ್ಯವಾಗಿದೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ವಂಚಕರ ಕೈಗೆ ಅಸ್ತ್ರವಾಗಿ ಸಿಕ್ಕರೆ ಏನಾಗಬಹುದು ಎಂಬುದಕ್ಕೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತನ್ನ ಸೋದರಸಂಬಂಧಿಯ ಧ್ವನಿಯನ್ನೇ ಹೋಲುವ 'ಎಐ ಕ್ಲೋನ್ಡ್' ಧ್ವನಿಯನ್ನು ನಂಬಿದ 43 ವರ್ಷದ ಶಾಲಾ ಶಿಕ್ಷಕಿಯೊಬ್ಬರು ಬರೋಬ್ಬರಿ 97,500 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ವರದಿಯಾದ ಮೊದಲ AI ವಾಯ್ಸ್ ಕ್ಲೋನಿಂಗ್ ವಂಚನೆ ಪ್ರಕರಣ ಇದಾಗಿದೆ.
ವಂಚಕರು ಮೊದಲು ಶಿಕ್ಷಕಿಯ ಸೋದರಸಂಬಂಧಿಯ ಧ್ವನಿಯನ್ನು ಎಐ ಮೂಲಕ ನಕಲು ಮಾಡಿದ್ದರು. ನಂತರ ಅವರಿಗೆ ಕರೆ ಮಾಡಿ, ತಾನೊಂದು ಗಂಭೀರವಾದ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿದ್ದು, ತಕ್ಷಣ ಹಣದ ಅವಶ್ಯಕತೆಯಿದೆ ಎಂದು ನಂಬಿಸಿದ್ದಾರೆ. ಸೋದರಸಂಬಂಧಿಯ ಧ್ವನಿಯೇ ಆದ ಕಾರಣ ಯಾವುದೇ ಅನುಮಾನ ಪಡದ ಶಿಕ್ಷಕಿ, ಯುಪಿಐ (UPI) ಮೂಲಕ ಹಣ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ಬಳಿಕ ಇದು ವಂಚನೆ ಎಂಬುದು ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರೂ, ಕಳೆದುಕೊಂಡ ಹಣದಲ್ಲಿ ಕೇವಲ ಅಲ್ಪ ಭಾಗವನ್ನು ಮಾತ್ರ ವಾಪಸ್ ಪಡೆಯಲು ಸಾಧ್ಯವಾಗಿದೆ.
ಮರಳಿ ಸಿಗುವುದೇ ಕಷ್ಟ
ಎನ್‌ಸಿಆರ್‌ಬಿ ದತ್ತಾಂಶಗಳ ಪ್ರಕಾರ, ಭಾರತದಲ್ಲಿ ಸೈಬರ್ ವಂಚನೆಗೊಳಗಾದ ಹಣದ ಪೈಕಿ ಶೇ. 1ಕ್ಕಿಂತ ಕಡಿಮೆ ಹಣ ಮಾತ್ರ ಮರಳಿ ಸಿಗುತ್ತಿದೆ. ಫೆಡರಲ್ ಟ್ರೇಡ್ ಕಮಿಷನ್ ವರದಿಗಳ ಪ್ರಕಾರ, 2025ರಲ್ಲಿ ಇಂತಹ ಎಐ ಆಧಾರಿತ ವಂಚನೆಗಳು ಜಾಗತಿಕವಾಗಿ ಶೇ. 300 ರಷ್ಟು ಹೆಚ್ಚಾಗಿವೆ. ಕೇವಲ ಧ್ವನಿಯನ್ನು ಕೇಳಿ ನಂಬುವ ಬದಲು, ಇಂತಹ ತುರ್ತು ಸಂದರ್ಭಗಳಲ್ಲಿ ಮರುಕರೆ ಮಾಡುವುದು ಅಥವಾ ಕುಟುಂಬದ ನಡುವೆ ಯಾವುದಾದರೂ 'ಸೀಕ್ರೆಟ್ ಕೋಡ್' ಇಟ್ಟುಕೊಳ್ಳುವುದು ಇಂದಿನ ಕಾಲಕ್ಕೆ ಅನಿವಾರ್ಯ.

