
ಸಾಂದರ್ಭಿಕ ಚಿತ್ರ
ಹುಲಿಯ AI ವಿಡಿಯೊ ಸೃಷ್ಟಿ| ಸುಳ್ಳುಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ; ಅರಣ್ಯ ಇಲಾಖೆ ಎಚ್ಚರಿಕೆ
ಹುಲಿಯ ಶೋಧ ಕಾರ್ಯಕ್ಕಿಳಿದ ಅರಣ್ಯ ಇಲಾಖೆಯು ಶಾಕಿಂಗ್ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಬಹುತೇಕರು ಹಂಚಿಕೊಂಡ ಈ ವಿಡಿಯೊಗಳು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿ ಮಾಡಲಾಗಿದೆ ಎಂದು ದೃಢಪಟ್ಟಿದೆ.
ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿಯಿಂದ ಜನಜೀವನ ತೀವ್ರ ಆತಂಕಗೊಂಡಿದೆ. ಹೊಲಗಳಿಗೆ ಹೋಗುವ ರೈತರು ಮತ್ತು ಅರಣ್ಯದಲ್ಲಿ ಮೇಯಲು ಹೋಗುವ ಜಾನುವಾರುಗಳ ಮೇಲೆ ವನ್ಯಜೀವಿಗಳು ನಿರಂತರ ದಾಳಿ ನಡೆಸುತ್ತಿವೆ. ಅದರಲ್ಲೂ ಹುಲಿ ದಾಳಿಗಳು ಪದೇ ಪದೇ ಸಂಭವಿಸುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಈ ಮಧ್ಯೆ, 'ಹುಲಿ ಪ್ರತ್ಯಕ್ಷ' ಎಂಬ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಶೋಧಕ್ಕಿಳಿದ ಅರಣ್ಯ ಇಲಾಖೆಗೆ ಅಸಲಿ ಸತ್ಯ ತಿಳಿದು ಬಂದಿದೆ. ಬಹುತೇಕರು ಹಂಚಿಕೊಂಡಿರುವ ಈ ವಿಡಿಯೊಗಳು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿ ಮಾಡಿರುವುದು ದೃಢಪಟ್ಟಿದೆ. ಎಐ ತಂತ್ರಜ್ಞಾನ ಆಧರಿಸಿ ಹುಲಿ ವಿಡಿಯೊ ಹಂಚಿಕೊಂಡವರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕಾನೂನು ಕ್ರಮದ ಎಚ್ಚರಿಕೆ
ಎಐ ತಂತ್ರಜ್ಞಾನದ ಮೂಲಕ ಹುಲಿಯ ವಿಡಿಯೊ ಸೃಷ್ಟಿಸಿ ಹರಿಬಿಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಅರಣ್ಯ ಇಲಾಖೆ ಸಮರ ಸಾರಿದೆ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ. ಹುಲಿ ಬಂತೆಂದು ಸುಳ್ಳು ವಿಡಿಯೊ ಮತ್ತು ಫೋಟೊ ಹಂಚಿಕೊಳ್ಳುವುದರಿಂದ ಜನ ಸಾಮಾನ್ಯರಲ್ಲಿ ಅನಗತ್ಯ ಭಯ ಸೃಷ್ಟಿಸಲಾಗುತ್ತಿದೆ. ಅಲ್ಲದೆ, ಇದು ಇಲಾಖೆಯ ಸಿಬ್ಬಂದಿಯ ಕಾರ್ಯನಿರ್ವಹಣೆಗೂ ಸಮಸ್ಯೆ ಉಂಟು ಮಾಡುತ್ತಿದೆ ಎಂದು ತಿಳಿಸಿದೆ.
ಈ ಹಿಂದೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಕಲ್ಲಹಳ್ಳಿಯಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಇತ್ತೀಚೆಗಷ್ಟೇ ತಾಯಿ ಹುಲಿ ಸೇರಿ ಬರೋಬ್ಬರಿ ನಾಲ್ಕು ಹುಲಿಗಳನ್ನು ಸೆರೆ ಹಿಡಿದಿದ್ದರು. ಇದರ ನಂತರವೂ ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ಓಡಾಟ ಮುಂದುವರಿದಿದೆ. ಮಂಚಹಳ್ಳಿ ಗ್ರಾಮದಲ್ಲಿ ಶಿವಣ್ಣ ಎಂಬುವರಿಗೆ ಸೇರಿದ ಎರಡು ಹಸುಗಳ ಮೇಲೆ ವ್ಯಾಘ್ರ ದಾಳಿ ನಡೆಸಿತ್ತು. ಜಮೀನಿನಲ್ಲಿ ಈ ದಾಳಿ ನಡೆದ ನಂತರ ಬಂಡೀಪುರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಘಟನೆಯಿಂದಾಗಿ ಮಂಚಹಳ್ಳಿ ಗ್ರಾಮದ ನಿವಾಸಿಗಳು ಆತಂಕಗೊಂಡಿದ್ದು, ಜಮೀನುಗಳಿಗೆ ತೆರಳಲು ಹೆದರುತ್ತಿದ್ದಾರೆ. ಕಾಡಂಚಿನ ಬಹುತೇಕ ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಇದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಹುಲಿ ಬಂತೆಂದು ಎಐ ವಿಡಿಯೊ, ಫೋಟೊಗಳನ್ನು ಕೆಲವು ಕಿಡಿಗೇಡಿಗಳು ಹರಿಬಿಡುತ್ತಿರುವುದು ಅರಣ್ಯ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದೆ.

