
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್
ಕೃತಕ ಬುದ್ಧಿಮತ್ತೆ ಸಂಗೀತಗಾರರನ್ನು ಹೆಚ್ಚು ಸೃಜನಶೀಲರನ್ನಾಗಿಸುತ್ತದೆ: ಎ.ಆರ್. ರೆಹಮಾನ್
ಜನರಿಗೆ ಉದ್ಯೋಗಗಳನ್ನು ಕಳೆದುಕೊಳ್ಳಲು ಮಾಡಬೇಡಿ. ಬದಲಿಗೆ ಪೀಳಿಗೆಯ ಬಡತನ, ತಪ್ಪು ಮಾಹಿತಿ ಮತ್ತು ಸೃಷ್ಟಿಗೆ ಬೇಕಾದ ಸಾಧನಗಳ ಕೊರತೆ ಎಂಬ ಶಾಪಗಳನ್ನು ತೆಗೆದುಹಾಕಲು ಜನರಿಗೆ ಅಧಿಕಾರ ನೀಡಿ ಎಂದು ಎ.ಆರ್. ರೆಹಮಾನ್ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸುತ್ತಿರುವ ಸಂದರ್ಭದಲ್ಲಿ, ಪ್ರಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರು ಈ ಕುರಿತು ತಮ್ಮ ಸ್ಪಷ್ಟ ಮತ್ತು ಮಹತ್ವದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಉದ್ಯಮಿ ನಿಖಿಲ್ ಕಾಮತ್ ಅವರ ಜನಪ್ರಿಯ 'ಪೀಪಲ್ ಬೈ ಡಬ್ಲ್ಯುಟಿಎಫ್' ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಐ ತಂತ್ರಜ್ಞಾನವು ಸಂಗೀತಗಾರರಿಗೆ ಸವಾಲಾಗುವ ಬದಲು, ಅವರನ್ನು ಇನ್ನಷ್ಟು ಸೃಜನಾತ್ಮಕತೆಯತ್ತ ಕೊಂಡೊಯ್ಯಬಲ್ಲದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಮಾರು 1 ಗಂಟೆ 48 ನಿಮಿಷಗಳ ಕಾಲ ನಡೆದ ಈ ಸುದೀರ್ಘ ಸಂವಾದದಲ್ಲಿ, ರೆಹಮಾನ್ ಅವರು ಸೃಜನಶೀಲತೆಯ ಭವಿಷ್ಯದ ಬಗ್ಗೆ ಬೆಳಕು ಚೆಲ್ಲಿದರು. ಮುಖ್ಯವಾಗಿ ಯುವ ಮತ್ತು ನವ ಕಲಾವಿದರಿಗೆ ಸಲಹೆ ನೀಡಿದ ಅವರು, ತಂತ್ರಜ್ಞಾನದ 'ಭವಿಷ್ಯಸೂಚಕ ಮಾದರಿಗಳು' (Predictive Models) ಏನನ್ನು ಸೂಚಿಸುತ್ತವೆಯೋ, ಅದಕ್ಕೆ ತದ್ವಿರುದ್ಧವಾಗಿ ಯೋಚಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದರು. ಎಐ ನೀಡುವ ಮಾದರಿಗಳನ್ನು ಯಥಾವತ್ತಾಗಿ ನಕಲಿಸುವುದರಿಂದ ಕಲೆ ಉಳಿಯುವುದಿಲ್ಲ. ಬದಲಿಗೆ, ಎಐ ತಂತ್ರಜ್ಞಾನವು ಕಲಾವಿದರನ್ನು ತಮ್ಮತನವನ್ನು ಉಳಿಸಿಕೊಳ್ಳಲು ಮತ್ತು ಅತ್ಯಂತ ವಿಶಿಷ್ಟವಾಗಿ ಆಲೋಚಿಸಲು ಪ್ರೇರೇಪಿಸುವ ಸಾಧನವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಉದ್ಯೋಗ ಕಸಿದುಕೊಳ್ಳುವಂತಿರಬಾರದು
ಕೇವಲ ಸಂಗೀತವಲ್ಲದೆ, ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುತ್ತಿರುವ ತಂತ್ರಜ್ಞರಿಗೂ ರೆಹಮಾನ್ ಒಂದು ಖಡಕ್ ಸಂದೇಶವನ್ನು ರವಾನಿಸಿದ್ದಾರೆ. ಯಾವುದೇ ತಂತ್ರಜ್ಞಾನವು ಜನರ ಉದ್ಯೋಗಗಳನ್ನು ಕಸಿದುಕೊಳ್ಳುವಂತಿರಬಾರದು. ಬದಲಿಗೆ, ತಲೆಮಾರುಗಳಿಂದ ಕಾಡುತ್ತಿರುವ ಬಡತನವನ್ನು ನಿರ್ಮೂಲನೆ ಮಾಡಲು, ಸಮಾಜದಲ್ಲಿ ಹರಡುವ ತಪ್ಪು ಮಾಹಿತಿಯನ್ನು ತಡೆಯಲು ಮತ್ತು ಸೃಜನಶೀಲತೆಗೆ ಅಗತ್ಯವಿರುವ ಸಾಧನಗಳ ಕೊರತೆಯನ್ನು ನೀಗಿಸಲು ಎಐ ಬಳಕೆಯಾಗಬೇಕು. ಅಂದರೆ, ಜನರಿಗೆ ತಂತ್ರಜ್ಞಾನವು ಅಧಿಕಾರ ಮತ್ತು ಶಕ್ತಿಯನ್ನು ನೀಡಬೇಕೇ ಹೊರತು, ಅವರನ್ನು ಅಸಹಾಯಕರನ್ನಾಗಿಸಬಾರದು ಎಂದು ಅವರು ಪ್ರತಿಪಾದಿಸಿದರು.
ಯಶಸ್ಸಿಗೆ ಅಗೆಯುತ್ತಲೇ ಇರಬೇಕು
ಸೃಜನಶೀಲ ಪ್ರಕ್ರಿಯೆಯಲ್ಲಿ ತಾಳ್ಮೆ ಮತ್ತು ಸ್ಥಿರತೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಲು ರೆಹಮಾನ್ ಅವರು ಸುಂದರವಾದ ರೂಪಕವೊಂದನ್ನು ಬಳಸಿದರು. ಯಾವುದೇ ಸಾಧನೆ ಸುಲಭವಾಗಿ ದಕ್ಕುವುದಿಲ್ಲ ಎಂಬುದನ್ನು ವಿವರಿಸಿದ ಅವರು, "ನಾವು ಅಗೆಯಲು ಪ್ರಾರಂಭಿಸಿದಾಗ ಮೊದಲು ಕೆಸರು ಸಿಗುತ್ತದೆ, ನಂತರ ನೀರು ದೊರೆಯುತ್ತದೆ, ಆನಂತರ ಪೆಟ್ರೋಲ್ ಸಿಗಬಹುದು ಮತ್ತು ಅಂತಿಮವಾಗಿ ಚಿನ್ನ ಸಿಗುತ್ತದೆ. ಆದರೆ ಚಿನ್ನ ಸಿಗುವವರೆಗೂ ನೀವು ಅಗೆಯುವುದನ್ನು ಮುಂದುವರಿಸಬೇಕು," ಎಂದು ಹೇಳುವ ಮೂಲಕ ಕಠಿಣ ಪರಿಶ್ರಮದ ಮಹತ್ವವನ್ನು ವಿವರಿಸಿದರು.

