
ನಟ ಅಲ್ಲು ಅರ್ಜುನ್
ಪುಷ್ಪ 2' ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್ ಸೇರಿ 23 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
ಹೈದರಾಬಾದ್ ಪೊಲೀಸರು ಸಲ್ಲಿಸಿರುವ ಈ ಚಾರ್ಜ್‌ಶೀಟ್‌ನಲ್ಲಿ ಪ್ರಕರಣದ ಒಟ್ಟು 23 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಇದರಲ್ಲಿ ಘಟನೆ ನಡೆದ ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದ ಆಡಳಿತ ಮಂಡಳಿಯನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.
ತೆಲುಗು ಚಿತ್ರರಂಗದ 'ಪುಷ್ಪ 2' ಸಿನಿಮಾದ ಪ್ರೀಮಿಯರ್ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತ ಮತ್ತು ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸೇರಿದಂತೆ ಒಟ್ಟು 23 ಜನರ ವಿರುದ್ಧ ಸ್ಥಳೀಯ ನ್ಯಾಯಾಲಯಕ್ಕೆ ಸುದೀರ್ಘವಾದ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಹೈದರಾಬಾದ್ ಪೊಲೀಸರು ಸಲ್ಲಿಸಿರುವ ಈ ಚಾರ್ಜ್‌ಶೀಟ್‌ನಲ್ಲಿ ಪ್ರಕರಣದ ಒಟ್ಟು 23 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಇದರಲ್ಲಿ ಘಟನೆ ನಡೆದ ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದ ಆಡಳಿತ ಮಂಡಳಿಯನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಮತ್ತು ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ನಟ ಅಲ್ಲು ಅರ್ಜುನ್ ಅವರನ್ನು ಈ ಪ್ರಕರಣದಲ್ಲಿ 11ನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಅವರ ವೈಯಕ್ತಿಕ ಭದ್ರತಾ ತಂಡದ ಸದಸ್ಯರನ್ನು ಸಹ ಇದರಲ್ಲಿ ಸೇರಿಸಲಾಗಿದ್ದು, ಜನದಟ್ಟಣೆಯ ಸಂದರ್ಭದಲ್ಲಿ ಅವರ ವರ್ತನೆಯೂ ಕಾಲ್ತುಳಿತಕ್ಕೆ ಪ್ರೇರೇಪಿಸಿತು ಎಂದು ಪೊಲೀಸರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ದುರಂತದ ಹಿನ್ನೆಲೆ, ಸಾವು-ನೋವು
ಕಳೆದ ವರ್ಷ ಅಂದರೆ 2024ರ ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ 'ಪುಷ್ಪ 2' ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅವರು ಚಿತ್ರಮಂದಿರಕ್ಕೆ ಭೇಟಿ ನೀಡುವ ಮಾಹಿತಿ ತಿಳಿದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಅಲ್ಲಿ ಜಮಾಯಿಸಿದ್ದರು. ನಟನನ್ನು ಹತ್ತಿರದಿಂದ ನೋಡಲು ಅಭಿಮಾನಿಗಳು ಮುಗಿಬಿದ್ದಾಗ ಭೀಕರ ಕಾಲ್ತುಳಿತ ಉಂಟಾಗಿತ್ತು. ಈ ದುರ್ಘಟನೆಯಲ್ಲಿ 35 ವರ್ಷದ ಮಹಿಳೆಯೊಬ್ಬರು ಉಸಿರುಗಟ್ಟಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಅವರ ಎಂಟು ವರ್ಷದ ಪುತ್ರ ಗಂಭೀರವಾಗಿ ಗಾಯಗೊಂಡಿದ್ದ. ಈ ಘಟನೆಯು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಅಲ್ಲು ಅರ್ಜುನ್ ಬಂಧನ
ಮೃತ ಮಹಿಳೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಚಿತ್ರಮಂದಿರದ ಮ್ಯಾನೇಜ್‌ಮೆಂಟ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಮುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ಭಾಗವಾಗಿ 2024ರ ಡಿಸೆಂಬರ್ 13ರಂದು ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ತೆಲಂಗಾಣ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದ್ದರಿಂದ ಅವರು ಬಿಡುಗಡೆಯಾಗಿದ್ದರು. ಈಗ ತನಿಖಾಧಿಕಾರಿಗಳು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಾಕ್ಷಿಗಳ ಹೇಳಿಕೆಯನ್ನು ಆಧರಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ ಮಾನವೀಯ ನೆರವು
ದುರಂತ ಸಂಭವಿಸಿದ ನಂತರ ನಟ ಅಲ್ಲು ಅರ್ಜುನ್ ಮತ್ತು ಪುಷ್ಪ 2 ಚಿತ್ರತಂಡವು ಮಾನವೀಯ ನೆಲೆಯಲ್ಲಿ ಮೃತ ಮಹಿಳೆಯ ಕುಟುಂಬಕ್ಕೆ ಮತ್ತು ಗಾಯಗೊಂಡ ಬಾಲಕನ ಚಿಕಿತ್ಸೆಗೆ ಆರ್ಥಿಕ ನೆರವು ಘೋಷಿಸಿದ್ದವು. ಅದೇ ರೀತಿ ತೆಲಂಗಾಣ ಸರ್ಕಾರವು ಸಹ ಸಂತ್ರಸ್ತ ಕುಟುಂಬಕ್ಕೆ ಪರಿಹಾರವನ್ನು ಒದಗಿಸಿತ್ತು. ಆದಾಗ್ಯೂ, ಕಾನೂನಾತ್ಮಕವಾಗಿ ಸುರಕ್ಷತಾ ಲೋಪಗಳ ಹೊಣೆಗಾರಿಕೆಯನ್ನು ನಿರ್ಧರಿಸಲು ಪೊಲೀಸರು ಈ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ.

