
ಸಿಡ್ನಿಯಲ್ಲಿ ಮಾರಣಹೋಮ ನಡೆಸಿದ್ದ ಶೂಟರ್ ಮೂಲ ಹೈದರಾಬಾದ್!
ಯಹೂದಿಗಳನ್ನು ಗುರಿಯಾಗಿಸಿ ನಡೆದಿದ್ದ ಈ ದಾಳಿಯಲ್ಲಿ ಭಾಗಿಯಾಗಿದ್ದ ಸಾಜಿದ್ ಅಕ್ರಮ್(50) ಮೂಲತಃ ಹೈದರಾಬಾದ್‌ನವನು ಎಂಬ ವಿಚಾರ ಬಯಲಾಗಿದೆ.
ಭಾನುವಾರ ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಗುಂಡಿನ ದಾಳಿ ನಡೆಸಿ ಬರೋಬ್ಬರಿ 15ಜನರನ್ನು ಬಲಿ ಪಡೆದಿದ್ದ ಇಬ್ಬರು ಶೂಟರ್‌ಗಳಲ್ಲಿ ಒಬ್ಬ ಭಾರತ ಮೂಲದವನು ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ.
ಯಹೂದಿಗಳನ್ನು ಗುರಿಯಾಗಿಸಿ ನಡೆದಿದ್ದ ಈ ದಾಳಿಯಲ್ಲಿ ಭಾಗಿಯಾಗಿದ್ದ ಸಾಜಿದ್ ಅಕ್ರಮ್(50) ಮೂಲತಃ ಹೈದರಾಬಾದ್‌ನವನಾಗಿದ್ದು, ಸುಮಾರು ಮೂರು ದಶಕಗಳ ಹಿಂದೆ ಆಸ್ಟ್ರೇಲಿಯಾಕ್ಕೆ ವಲಸೆ ಬಂದಿದ್ದರೂ, ಆತ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದಾನೆ ಎನ್ನಲಾಗಿದೆ. ದಾಳಿ ಸಂದರ್ಭದಲ್ಲಿ ಪೊಲೀಸರ ಗುಂಡೇಟಿಗೆ ಸಾಜಿದ್ ಬಲಿಯಾಗಿದ್ದು, ಆತನಿಗೆ ಸಾಥ್ ಕೊಟ್ಟಿದ್ದ ಆತನ ಮಗ ನವೀದ್ ಅಕ್ರಮ್(24) ಗುಂಡೇಟು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆಸ್ಟ್ರೇಲಿಯಾದ ತನಿಖಾಧಿಕಾರಿಗಳು ಈ ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಪ್ರೇರಿತವಾದ ಭಯೋತ್ಪಾದಕ ಕೃತ್ಯ ಎಂದು ಬಣ್ಣಿಸಿದ್ದಾರೆ.
ಸಾಜಿದ್ ಅಕ್ರಮ್ ಯಾರು?
50 ವರ್ಷ ವಯಸ್ಸಿನ ಸಾಜಿದ್ ಅಕ್ರಮ್ ಹೈದರಾಬಾದ್ ಮೂಲದವನಾಗಿದ್ದು, ನವೆಂಬರ್ 1998 ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಬಂದಿದ್ದ ಎಂದು ತೆಲಂಗಾಣ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಆತ ಉದ್ಯೋಗ ಹುಡುಕಿಕೊಂಡು ಭಾರತವನ್ನು ಬಿಡುವ ಮೊದಲು ಹೈದರಾಬಾದ್‌ನಲ್ಲಿ ವಾಣಿಜ್ಯ ಪದವಿಯನ್ನು ಪೂರ್ಣಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ್ ಸುಮಾರು 27 ವರ್ಷಗಳ ಕಾಲ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದ ಮತ್ತು ಆ ಅವಧಿಯಲ್ಲಿ ಹೈದರಾಬಾದ್‌ನಲ್ಲಿರುವ ಅವರ ಕುಟುಂಬದೊಂದಿಗೆ ಸೀಮಿತ ಸಂಪರ್ಕವನ್ನು ಮಾತ್ರ ಹೊಂದಿದ್ದ. ಆದರೆ ಆತನಿಗೆ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾನೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ
ಅಕ್ರಮ್ ಕೊನೆಯದಾಗಿ 2022 ರಲ್ಲಿ ಹೈದರಾಬಾದ್‌ಗೆ ಭೇಟಿ ನೀಡಿದ್ದ. ಆತನ ಬಳಿ ಭಾರತೀಯ ಪಾಸ್‌ಪೋರ್ಟ್ ಇತ್ತು. ಆದರೆ ಆತನ ಮಗ ಮತ್ತು ಮಗಳು -ಆಸ್ಟ್ರೇಲಿಯಾದಲ್ಲಿ ಜನಿಸಿದರು. ಹೀಗಾಗಿ ಅವರು ಅಲ್ಲಿನ ನಾಗರಿಕರಾಗಿದ್ದಾರೆ.
ಕುಟುಂಬದ ಜೊತೆ ಸಂಪರ್ಕ ಇರಲಿಲ್ಲ
ತನಿಖಾಧಿಕಾರಿಗಳ ಪ್ರಕಾರ, ಹೈದರಾಬಾದ್‌ನಲ್ಲಿರುವ ತನ್ನ ಕೂಡು ಕುಟುಂಬದೊಂದಿಗೆ ಅಕ್ರಮ್ ಸಂಬಂಧ ಹಲವು ವರ್ಷಗಳ ಹಿಂದೆಯೇ ಮುರಿದುಬಿದ್ದಿತ್ತು. ಬಹಳ ವರ್ಷಗಳ ಹಿಂದೆಯೇ ಸಂಬಂಧಿಕರು ಅವರೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದರು ಎಂದು ತಿಳಿದುಬಂದಿದೆ. ಪೊಲೀಸರ ಪ್ರಕಾರ, ಅಕ್ರಮ್ 2017 ರಲ್ಲಿ ತನ್ನ ತಂದೆ ನಿಧನರಾದಾಗ ಅವರ ಅಂತ್ಯಕ್ರಿಯೆಯಲ್ಲೂ ಭಾಗವಹಿಸಿರಲಿಲ್ಲ. ಆಸ್ಟ್ರೇಲಿಯಾಕ್ಕೆ ವಲಸೆ ಬಂದ ನಂತರ, ಅಕ್ರಮ್ ವೆನೆರಾ ಗ್ರೊಸೊ ಎಂಬ ಯುರೋಪಿಯನ್ ಮಹಿಳೆಯನ್ನಯ ಮದುವೆಯಾಗಿದ್ದ.
ಬೋಂಡಿ ದಾಳಿ ಹಿನ್ನೆಲೆ
ಆಸ್ಟ್ರೇಲಿಯಾದ ಅತಿ ದೊಡ್ಡ ಸಾರ್ವಜನಿಕ ಸ್ಥಳಗಳಲ್ಲಿ ಒಂದಾದ ಬೋಂಡಿ ಬೀಚ್‌ನಲ್ಲಿ ಹನುಕ್ಕಾ ಎಂಬ ಯಹೂದಿ ಸಾಂಪ್ರದಾಯಿಕ ಕಾರ್ಯಕ್ರಮ ಆಚರಣೆಯ ಸಂದರ್ಭದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಯಿತ. ಗುಂಡಿನ ಚಕಮಕಿ ನಡೆದಾಗ ಹದಿನೈದು ಜನರು ಸಾವನ್ನಪ್ಪಿದರು. ತಕ್ಷಣ ಪೊಲೀಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಅಕ್ರಮ್‌ನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ನವೀದ್ ಅಕ್ರಮ್ ಮೇಲೂ ಗುಂಡು ಹಾರಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

