Attention Air Passengers: DGCA Bans Use of Power Banks During Flights
x

ಎಐ ಆಧಾರಿತ ಚಿತ್ರ

ವಿಮಾನ ಪ್ರಯಾಣಿಕರ ಗಮನಕ್ಕೆ: ಪವರ್ ಬ್ಯಾಂಕ್ ಬಳಕೆಗೆ ಡಿಜಿಸಿಎ ನಿಷೇಧ

ಪವರ್ ಬ್ಯಾಂಕ್‌ಗಳಲ್ಲಿ ಸಾಮಾನ್ಯವಾಗಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಇವುಗಳು ಅತಿಯಾಗಿ ಬಿಸಿಯಾದಾಗ ಅಥವಾ ತಾಂತ್ರಿಕ ದೋಷವುಂಟಾದಾಗ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.


Click the Play button to hear this message in audio format

ವಿಮಾನ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ನು ಮುಂದೆ ವಿಮಾನದ ಹಾರಾಟದ ಸಮಯದಲ್ಲಿ ಪವರ್ ಬ್ಯಾಂಕ್‌ಗಳನ್ನು ಬಳಸುವುದನ್ನು ಮತ್ತು ಅವುಗಳನ್ನು ಚಾರ್ಜ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಪವರ್ ಬ್ಯಾಂಕ್‌ಗಳಲ್ಲಿ ಸಾಮಾನ್ಯವಾಗಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಇವುಗಳು ಅತಿಯಾಗಿ ಬಿಸಿಯಾದಾಗ ಅಥವಾ ತಾಂತ್ರಿಕ ದೋಷವುಂಟಾದಾಗ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ವಿಮಾನದಂತಹ ಸೀಮಿತ ಸ್ಥಳದಲ್ಲಿ ಇಂತಹ ಅಗ್ನಿ ಅವಘಡಗಳು ಸಂಭವಿಸಿದರೆ, ಅವುಗಳನ್ನು ನಂದಿಸುವುದು ಅತ್ಯಂತ ಕಷ್ಟಕರ. ಈ ಹಿನ್ನೆಲೆಯಲ್ಲಿ, ಪ್ರಯಾಣಿಕರ ಪ್ರಾಣಕ್ಕೆ ಅಪಾಯವಾಗಬಾರದು ಎಂಬ ಉದ್ದೇಶದಿಂದ ಡಿಜಿಸಿಎ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಹಿಂದಿನ ಘಟನೆಗಳ ಎಚ್ಚರಿಕೆ

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತ್ತು. ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡು ವಿಮಾನದ ಒಳಗೆ ಆತಂಕ ಸೃಷ್ಟಿಸಿತ್ತು. ಕ್ಯಾಬಿನ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ತಕ್ಷಣವೇ ಬೆಂಕಿ ನಂದಿಸಿದ್ದರಿಂದ ಅಪಾಯ ತಪ್ಪಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಸಿಎ, ಈಗ ಸಮಗ್ರ ನಿಯಮಗಳನ್ನು ಜಾರಿಗೆ ತಂದಿದೆ.

ಹೊಸ ಮಾರ್ಗಸೂಚಿಯ ಮುಖ್ಯಾಂಶಗಳು

ಬಳಕೆ ಮತ್ತು ಚಾರ್ಜಿಂಗ್ ನಿಷೇಧ: ವಿಮಾನದ ಒಳಗೆ ಪವರ್ ಬ್ಯಾಂಕ್ ಬಳಸಿ ಮೊಬೈಲ್ ಚಾರ್ಜ್ ಮಾಡುವುದು ಅಥವಾ ಸೀಟ್ ಪಕ್ಕದಲ್ಲಿರುವ ಯುಎಸ್‌ಬಿ ಪಾಯಿಂಟ್‌ಗಳ ಮೂಲಕ ಪವರ್ ಬ್ಯಾಂಕ್ ಅನ್ನು ಚಾರ್ಜ್ ಮಾಡುವುದನ್ನು ನಿಷೇಧಿಸಲಾಗಿದೆ.

ಲಗೇಜ್ ನಿಯಮ: ಪವರ್ ಬ್ಯಾಂಕ್‌ಗಳನ್ನು ಕೇವಲ 'ಹ್ಯಾಂಡ್ ಬ್ಯಾಗ್'ಗಳಲ್ಲಿ (ಪ್ರಯಾಣಿಕರ ಜೊತೆ ಇರುವ ಬ್ಯಾಗ್) ಮಾತ್ರ ಕೊಂಡೊಯ್ಯಲು ಅವಕಾಶವಿದೆ. ಇವುಗಳನ್ನು ಚೆಕ್-ಇನ್ ಲಗೇಜ್‌ಗಳಲ್ಲಿ ಇಡುವಂತಿಲ್ಲ.

ಕ್ಯಾಬಿನ್ ಬಾಕ್ಸ್ ನಿರ್ಬಂಧ: ಪವರ್ ಬ್ಯಾಂಕ್‌ಗಳನ್ನು ಸೀಟಿನ ಮೇಲ್ಭಾಗದಲ್ಲಿರುವ ಲಗೇಜ್ ಇಡುವ ಕ್ಯಾಬಿನ್ ಬಾಕ್ಸ್‌ಗಳಲ್ಲಿ ಇರಿಸುವಂತಿಲ್ಲ. ಅವುಗಳು ಯಾವಾಗಲೂ ಪ್ರಯಾಣಿಕರ ಕೈಗೆಟುಕುವಂತೆ ಇರಬೇಕು.

ಬೆಂಕಿ ಕಾಣಿಸಿಕೊಳ್ಳಲು ಕಾರಣಗಳೇನು?

ಅತಿಯಾಗಿ ಚಾರ್ಜ್ ಮಾಡುವುದು, ಕಳಪೆ ಗುಣಮಟ್ಟದ ಅಥವಾ ನಕಲಿ ಪವರ್ ಬ್ಯಾಂಕ್‌ಗಳ ಬಳಕೆ, ಹಳೆಯದಾದ ಬ್ಯಾಟರಿಗಳು ಮತ್ತು ದೈಹಿಕವಾಗಿ ಹಾನಿಗೊಳಗಾದ ಪವರ್ ಬ್ಯಾಂಕ್‌ಗಳಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಳ್ಳುತ್ತದೆ ಎಂದು ಡಿಜಿಸಿಎ ವಿವರಿಸಿದೆ. ಈ ಲಿಥಿಯಂ ಬ್ಯಾಟರಿಗಳಿಂದ ಬರುವ ಬೆಂಕಿಯು ಅತಿ ಹೆಚ್ಚು ಶಾಖವನ್ನು ಹೊಂದಿರುತ್ತದೆ.

ವಿಮಾನಯಾನ ಸಂಸ್ಥೆಗಳಿಗೆ ಸೂಚನೆ

ಪ್ರಯಾಣಿಕರು ಹೊತ್ತೊಯ್ಯುವ ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ತೀವ್ರ ನಿಗಾ ವಹಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ನಿರ್ದೇಶನ ನೀಡಿದೆ. ಸಾಧನಗಳಿಂದ ಹೊಗೆ ಬರುವುದು ಅಥವಾ ಅತಿಯಾಗಿ ಬಿಸಿಯಾಗುವುದನ್ನು ಗುರುತಿಸಲು ಮತ್ತು ತುರ್ತು ಸಂದರ್ಭದಲ್ಲಿ ಬೆಂಕಿ ನಂದಿಸುವ ಉಪಕರಣಗಳನ್ನು ಸರಿಯಾಗಿ ಬಳಸಲು ಸಿಬ್ಬಂದಿಗೆ ವಿಶೇಷ ತರಬೇತಿ ನೀಡುವಂತೆ ಸೂಚಿಸಲಾಗಿದೆ.

Read More
Next Story