
ಪರೀಕ್ಷಾರ್ಥ ಹಾರಾಟ ನಡೆಸಿದ ಧ್ರುವ್ ಎನ್‌ಜಿ ಹೆಲಿಕಾಪ್ಟರ್ (ಚಿತ್ರ- ಎಚ್‌ಎಎಲ್ ಎಕ್ಸ್ ಪೋಸ್ಟ್)
ನಾಗರಿಕ ವಿಮಾನ ಯಾನ ಕ್ಷೇತ್ರಕ್ಕೆ ಎಚ್‌ಎಎಲ್ ಲಗ್ಗೆ: 'ಧ್ರುವ್ ಎನ್‌ಜಿ' ನಾಗರಿಕ ಹಾರಾಟ ಯಶಸ್ವಿ
ಎಚ್‌ಎಎಲ್ ಅಭಿವೃದ್ಧಿಪಡಿಸಿದ 'ಧ್ರುವ್ ಎನ್‌ಜಿ' ನಾಗರಿಕ ಹೆಲಿಕಾಪ್ಟರ್‌ನ ಮೊದಲ ಯಶಸ್ವಿ ಹಾರಾಟ ನಡೆದಿದ್ದು, ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ.
ಭಾರತದ ರಕ್ಷಣಾ ಹಾಗೂ ವೈಮಾನಿಕ ಕ್ಷೇತ್ರದ ದೈತ್ಯ ಸಂಸ್ಥೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL), ಮಂಗಳವಾರ ತನ್ನ ಸಾಧನೆಯ ಪುಟಕ್ಕೆ ಮತ್ತೊಂದು ಸುವರ್ಣ ಅಧ್ಯಾಯವನ್ನು ಸೇರಿಸಿದೆ. ತನ್ನ ಬಹುನಿರೀಕ್ಷಿತ 'ಧ್ರುವ್ ನ್ಯೂ ಜನರೇಶನ್' (Dhruv NG) ಹೆಲಿಕಾಪ್ಟರ್‌ನ ಮೊದಲ ನಾಗರಿಕ ಆವೃತ್ತಿಯ ಹಾರಾಟವನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಭಾರತೀಯ ವಿಮಾನಯಾನ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ನಗರದ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ನಡೆದ ಈ ಐತಿಹಾಸಿಕ ಸಮಾರಂಭಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಹಸಿರು ನಿಶಾನೆ ತೋರಿದರು. ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ವಿಶೇಷ ಲಿವರಿಯೊಂದಿಗೆ ಸಜ್ಜಾಗಿದ್ದ 'ಧ್ರುವ್ ಎನ್‌ಜಿ' ಹೆಲಿಕಾಪ್ಟರ್ ಬೆಂಗಳೂರಿನ ಆಕಾಶದಲ್ಲಿ ಹಾರಾಡಿತು. ಈ ದೃಶ್ಯವು ನೆರೆದಿದ್ದ ತಾಂತ್ರಿಕ ವಲಯದ ಗಣ್ಯರು ಹಾಗೂ ಸಾರ್ವಜನಿಕರಲ್ಲಿ ರಾಷ್ಟ್ರೀಯ ಹೆಮ್ಮೆಯನ್ನು ಮೂಡಿಸಿತು.
ಸೈನಿಕ ವಲಯದಿಂದ ನಾಗರಿಕ ಮಾರುಕಟ್ಟೆಗೆ ಎಚ್‌ಎಎಲ್ ಲಗ್ಗೆ
ದಶಕಗಳಿಂದ ಕೇವಲ ಸೈನಿಕ ಬಳಕೆಯ ಯುದ್ಧವಿಮಾನ ಮತ್ತು ಹೆಲಿಕಾಪ್ಟರ್‌ಗಳ ತಯಾರಿಕೆಗೆ ಸೀಮಿತವಾಗಿದ್ದ HAL, ಇದೀಗ ಅಧಿಕೃತವಾಗಿ ನಾಗರಿಕ ವಿಮಾನಯಾನ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಕೆ. ಸುನೀಲ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು, ಜಾಗತಿಕ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತದ ಪಾಲನ್ನು ಹೆಚ್ಚಿಸುವ ದೂರದೃಷ್ಟಿಯನ್ನು ಹೊಂದಿದೆ.
ಸ್ವದೇಶಿ 'ಶಕ್ತಿ' ಎಂಜಿನ್‌ಗೆ ಡಿಜಿಸಿಎ ಮಾನ್ಯತೆ
ಇದೇ ವೇಳೆ ಮತ್ತೊಂದು ತಾಂತ್ರಿಕ ಕ್ರಾಂತಿಗೆ ವೇದಿಕೆ ಸಾಕ್ಷಿಯಾಯಿತು. ಫ್ರಾನ್ಸ್‌ನ ಸಫ್ರಾನ್ ಕಂಪನಿಯ ಸಹಯೋಗದೊಂದಿಗೆ HAL ಅಭಿವೃದ್ಧಿಪಡಿಸಿರುವ 'ಶಕ್ತಿ' ಹೆಲಿಕಾಪ್ಟರ್ ಎಂಜಿನ್‌ಗೆ ಭಾರತದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಅಧಿಕೃತ ಪ್ರಮಾಣಪತ್ರ ನೀಡಿದೆ.
ಇದು ಭಾರತದ ಮೊದಲ ಸ್ವದೇಶಿ ಪ್ರಮಾಣೀಕೃತ ಏರೋ ಎಂಜಿನ್ ಆಗಿದ್ದು, ಇಂಜಿನ್ ತಂತ್ರಜ್ಞಾನಕ್ಕಾಗಿ ವಿದೇಶಗಳ ಮೇಲಿದ್ದ ಅವಲಂಬನೆಯನ್ನು ಇದು ಗಣನೀಯವಾಗಿ ತಗ್ಗಿಸಲಿದೆ.
ಮುಂದಿನ ಯೋಜನೆಗಳೇನು?
ಎಚ್ಎಚಲ್ ಮೂಲಗಳ ಪ್ರಕಾರ, 'ಧ್ರುವ್ ಎನ್‌ಜಿ' ಹೆಲಿಕಾಪ್ಟರ್ ಮುಂದಿನ 3 ರಿಂದ 4 ತಿಂಗಳುಗಳಲ್ಲಿ ಸಂಪೂರ್ಣ ನಾಗರಿಕ ಪ್ರಮಾಣೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ. ತದನಂತರ ಈ ಹೆಲಿಕಾಪ್ಟರ್‌ಗಳನ್ನು ನಾಗರಿಕ ಉದ್ದೇಶಳಿಗೆ ಬಳಸಲಾಗುತ್ತದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಪ್ರಯಾಣಿಕರ ಸಾರಿಗೆ. ಏರ್ ಆಂಬ್ಯುಲೆನ್ಸ್ ಆಗಿ ಪ್ರವಾಹ ಅಥವಾ ಭೂಕುಸಿತದಂತಹ ತುರ್ತು ಪರಿಸ್ಥಿತಿಗಳಲ್ಲಿ ರಕ್ಷಣಾ ಕಾರ್ಯಕ್ಕಾಗಿ ಹೆಲಿಕಾಪ್ಟರ್ ಬಳಸಬಹುದು.
ಆತ್ಮನಿರ್ಭರ ಭಾರತಕ್ಕೆ ಬಲ
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು, "ಧ್ರುವ್ ಎನ್‌ಜಿ ಮತ್ತು ಶಕ್ತಿ ಎಂಜಿನ್ ಯೋಜನೆಗಳು ಪ್ರಧಾನಿ ಮೋದಿಯವರ 'ಆತ್ಮನಿರ್ಭರ ಭಾರತ'ದ ಕನಸಿಗೆ ಸಾಕಾರ ರೂಪ ನೀಡಿವೆ. ಈ ಸಾಧನೆಯು ಭಾರತದ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಿದೆ," ಎಂದು ಶ್ಲಾಘಿಸಿದರು.
ಈಗಾಗಲೇ 'ತೇಜಸ್' ಯುದ್ಧವಿಮಾನ ಮತ್ತು 'ಪ್ರಚಂಡ' ಲೈಟ್ ಕಂಬಾಟ್ ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಎಚ್ಎಎಲ್ಗೆ, ಈ ನಾಗರಿಕ ಹಾರಾಟವು ಭವಿಷ್ಯದ ವಾಣಿಜ್ಯ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳನ್ನು ತೆರೆದಿದೆ

