
ಎಲ್ಲಾ ತುರ್ತು ಸೇವೆಗಳನ್ನು ಮುಂಚಿತವಾಗಿ ಸಕ್ರಿಯಗೊಳಿಸಲಾಗಿತ್ತು, ಮತ್ತು ಪ್ರಯಾಣಿಕರಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.
ಟೈರ್ ಸ್ಪೋಟ: ಕೊಚ್ಚಿ ವಿಮಾನ ನಿಲ್ದಾಣದಲ್ಲಿ 160 ಪ್ರಯಾಣಿಕರಿದ್ದ ವಿಮಾನ ತುರ್ತು ಭೂಸ್ಪರ್ಶ!
ಸೌದಿ ಅರೇಬಿಯಾದ ಜೆಡ್ಡಾದಿಂದ ಕೇರಳದ ಕೋಝಿಕ್ಕೋಡ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (IX 398) ವಿಮಾನವು ತಾಂತ್ರಿಕ ದೋಷದಿಂದ ಗುರುವಾರ ಬೆಳಿಗ್ಗೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ಸೌದಿ ಅರೇಬಿಯಾದ ಜೆಡ್ಡಾದಿಂದ ಕೇರಳದ ಕೋಝಿಕ್ಕೋಡ್‌ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನವು ತಾಂತ್ರಿಕ ದೋಷದಿಂದಾಗಿ ಗುರುವಾರ ಬೆಳಿಗ್ಗೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ವಿಮಾನದಲ್ಲಿದ್ದ ಎಲ್ಲಾ 160 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೆಡ್ಡಾದಿಂದ ಹೊರಟಿದ್ದ IX 398 ವಿಮಾನವು ಕೋಝಿಕ್ಕೋಡ್‌ಗೆ ತಲುಪಬೇಕಿತ್ತು. ಆದರೆ, ಹಾರಾಟದ ವೇಳೆಯಲ್ಲಿ ವಿಮಾನದ ಬಲ ಬದಿಯ ಲ್ಯಾಂಡಿಂಗ್ ಗೇರ್ (Landing Gear) ಮತ್ತು ಟೈರ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು. ತಕ್ಷಣವೇ ಪೈಲಟ್ ಕೊಚ್ಚಿ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೋರಿದರು. ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ 'ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ' (Full Emergency) ಘೋಷಿಸಲಾಯಿತು.
ಬೆಳಿಗ್ಗೆ 09.07ಕ್ಕೆ ವಿಮಾನವು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಲ್ಯಾಂಡಿಂಗ್ ಬಳಿಕ ಪರಿಶೀಲಿಸಿದಾಗ, ವಿಮಾನದ ಬಲ ಬದಿಯ ಎರಡೂ ಟೈರ್‌ಗಳು ಸ್ಫೋಟಗೊಂಡಿರುವುದು (Tyre Burst) ದೃಢಪಟ್ಟಿದೆ. ಜೆಡ್ಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿದ್ದ ಯಾವುದೋ ವಸ್ತುವಿನಿಂದಾಗಿ ಟೈರ್‌ಗೆ ಹಾನಿಯಾಗಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆಗಳನ್ನು ಮೊದಲೇ ಸನ್ನದ್ಧವಾಗಿ ಇರಿಸಲಾಗಿತ್ತು. ಅದೃಷ್ಟವಶಾತ್, ಯಾರಿಗೂ ಯಾವುದೇ ಗಾಯಗಳಾಗಿಲ್ಲ.
ವಿಮಾನ ಸುರಕ್ಷಿತವಾಗಿ ಇಳಿದ ನಂತರ, ಪ್ರಯಾಣಿಕರನ್ನು ರಸ್ತೆ ಮಾರ್ಗವಾಗಿ ಕೋಝಿಕ್ಕೋಡ್‌ಗೆ ಕಳುಹಿಸಲು ಏರ್ಲೈನ್ಸ್ ವ್ಯವಸ್ಥೆ ಮಾಡಿದೆ. ಘಟನೆಯ ನಂತರ ರನ್‌ವೇಯನ್ನು ಸ್ವಚ್ಛಗೊಳಿಸಿ, ಇತರ ವಿಮಾನಗಳ ಕಾರ್ಯಾಚರಣೆಗೆ ಮುಕ್ತಗೊಳಿಸಲಾಯಿತು. "ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ," ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.

