Consumption processed food adverse effects health MP Tejaswi demands action in Parliament
x

ಸಂಸದ ತೇಜಸ್ವಿ ಸೂರ್ಯ

ಸಂಸ್ಕರಿಸಿದ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ; ಸಂಸತ್‌ನಲ್ಲಿ ಸಂಸದ ತೇಜಸ್ವಿ ಆಗ್ರಹ

ಭಾರತದಲ್ಲಿ ಸಂಸ್ಕರಿಸಿದ ಆಹಾರಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, 2006 ರಿಂದ 2019 ರ ಅವಧಿಯಲ್ಲಿ ಇದರ ಮಾರಾಟವು ಶೇ. 40 ಪಟ್ಟು ಹೆಚ್ಚಾಗಿ 3.42 ಲಕ್ಷ ಕೋಟಿ ರೂ. ಗೆ ತಲುಪಿದೆ.


Click the Play button to hear this message in audio format

ದೇಶದಲ್ಲಿ ಕಡಿಮೆ ಆದಾಯದ ಕುಟುಂಬಗಳಲ್ಲಿ ಹಾಗೂ ವಿಶೇಷವಾಗಿ ಯುವಕರಲ್ಲಿ ಸಂಸ್ಕರಿಸಿದ ಆಹಾರಗಳ (UPF) ಬಳಕೆ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದ್ದು, ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ(ಡಿ.4) ಸಂಸತ್ತಿನ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಇಂತಹ ಆಹಾರಗಳಿಂದ ಯುವಕರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರಲಿದ್ದು, ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶೇ. 40ರಷ್ಟು ಮಾರಾಟ ಹೆಚ್ಚಳ

ಭಾರತದಲ್ಲಿ ಸಂಸ್ಕರಿಸಿದ ಆಹಾರಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, 2006 ರಿಂದ 2019 ರ ಅವಧಿಯಲ್ಲಿ ಇದರ ಮಾರಾಟವು ಶೇ. 40 ಪಟ್ಟು ಹೆಚ್ಚಾಗಿ 3.42 ಲಕ್ಷ ಕೋಟಿ ರೂ. ಗೆ ತಲುಪಿದೆ. ಈ ಆಹಾರಗಳು ಸಾಂಪ್ರದಾಯಿಕ ಮತ್ತು ಆರೋಗ್ಯಕರ ಆಹಾರ ಪದ್ಧತಿಗಳನ್ನು ಬದಿಗೊತ್ತುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

2024 ರಲ್ಲಿ ಬ್ರಿಟಿಷ್ ಮೆಡಿಕಲ್ ಜರ್ನಲ್ (BMJ) ನಲ್ಲಿ ಪ್ರಕಟವಾದ 45 ಅಧ್ಯಯನಗಳ ಮೆಟಾ-ವಿಶ್ಲೇಷಣೆಯನ್ನು ಉಲ್ಲೇಖಿಸಿದ ಅವರು, ಈ ಆಹಾರಗಳ ಸೇವನೆಯು ಹಲವು ಮಾರಣಾಂತಿಕ ರೋಗಗಳಿಗೆ ಕಾರಣವಾಗುತ್ತಿದೆ. ಈ ಅಧ್ಯಯನದ ಪ್ರಕಾರ, ಸಂಸ್ಕರಿಸಿದ ಆಹಾರಗಳನ್ನು ಹೆಚ್ಚು ಸೇವಿಸುವವರಲ್ಲಿ ಸ್ಥೂಲಕಾಯತೆಯ ಅಪಾಯ ಶೇ. 21 ರಿಂದ 50 ರಷ್ಟು ಹೆಚ್ಚಿದೆ. ಅಲ್ಲದೆ, ಟೈಪ್-2 ಡಯಾಬಿಟಿಸ್, ಹೃದ್ರೋಗ ಮತ್ತು ಅಕಾಲಿಕ ಮರಣದ ಅಪಾಯವು ಶೇ. 31 ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಸದನಕ್ಕೆ ಮಾಹಿತಿ ನೀಡಿ ಗಮನ ಸೆಳೆದರು.

ಏನಿದು ಸಂಸ್ಕರಿಸಿದ ಆಹಾರ ?

ಸಂಸ್ಕರಿಸಿದ ಆಹಾರಗಳೆಂದರೆ ಸಂರಕ್ಷಕಗಳು, ಕೃತಕ ಬಣ್ಣಗಳು ಮತ್ತು ಸುವಾಸನೆಗಳು, ಎಮಲ್ಸಿಫೈಯರ್‌ಗಳು ಮತ್ತು ಸಿಹಿಕಾರಕಗಳಂತಹ ಅನೇಕ ಸೇರ್ಪಡೆಗಳನ್ನು ಒಳಗೊಂಡಿರುವ ಕೈಗಾರಿಕಾ ಆಹಾರ ಉತ್ಪನ್ನಗಳಾಗಿವೆ. ಇವುಗಳನ್ನು ಮನೆಯಲ್ಲಿ ತಯಾರಿಸುವುದು ಅಸಾಧ್ಯ. ಹೆಚ್ಚಿನ ಪ್ರಮಾಣದ ಸಕ್ಕರೆ, ಉಪ್ಪು, ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಸಾಮಾನ್ಯವಾಗಿ ಪ್ಯಾಕೇಜ್ ಮಾಡಿದ ತಿಂಡಿಗಳು, ತಂಪು ಪಾನೀಯಗಳು, ಸಿದ್ಧ ಊಟ, ಬಿಸ್ಕತ್ತುಗಳು ಮತ್ತು ಮಿಠಾಯಿಗಳೂ ಸೇರಿವೆ.

ನಿಯಂತ್ರಣಕ್ಕೆ ಸಲಹೆಗಳು

* ಸಂಸ್ಕರಿಸಿದ ಆಹಾರಗಳು ಯಾವುವು ಎಂಬುದರ ಬಗ್ಗೆ ಸ್ಪಷ್ಟವಾದ ಮತ್ತು ಅಧಿಕೃತ ವ್ಯಾಖ್ಯಾನವನ್ನು ಸರ್ಕಾರ ರೂಪಿಸಬೇಕು.

* ಪ್ಯಾಕೇಟ್‌ಗಳ ಮುಂಭಾಗದಲ್ಲಿ ದೊಡ್ಡದಾಗಿ ಮತ್ತು ಸ್ಪಷ್ಟವಾಗಿ ಕಾಣುವ ಎಚ್ಚರಿಕೆ ಲೇಬಲ್‌ಗಳನ್ನು ಕಡ್ಡಾಯಗೊಳಿಸಬೇಕು. ಇದು ಗ್ರಾಹಕರಿಗೆ ತಾವು ಕೊಳ್ಳುತ್ತಿರುವ ಉತ್ಪನ್ನದ ಬಗ್ಗೆ ತಿಳುವಳಿಕೆ ನೀಡುತ್ತದೆ.

* ಈ ಉತ್ಪನ್ನಗಳ ಆಕರ್ಷಕ ಜಾಹೀರಾತುಗಳ ಮೇಲೆ ನಿಯಂತ್ರಣ ಹೇರಬೇಕು ಮತ್ತು ತೆರಿಗೆ ಸುಧಾರಣೆಗಳ ಮೂಲಕ ಇವುಗಳ ಬಳಕೆಯನ್ನು ಕಡಿಮೆ ಮಾಡಲು ಪ್ರೋತ್ಸಾಹಿಸಬೇಕು.

* ಚಿಲಿ ಮತ್ತು ಮೆಕ್ಸಿಕೋ ದೇಶಗಳಲ್ಲಿ ಇಂತಹ ಎಚ್ಚರಿಕೆ ಲೇಬಲ್‌ಗಳನ್ನು ಕಡ್ಡಾಯಗೊಳಿಸಿದ ನಂತರ, ಸಂಸ್ಕರಿಸಿದ ಆಹಾರಗಳ ಖರೀದಿ ಶೇ.10 ರಿಂದ 24 ರಷ್ಟು ಕಡಿಮೆಯಾಗಿದೆ. ಜನರು ಆರೋಗ್ಯಕರ ಆಯ್ಕೆಗಳತ್ತ ಮುಖ ಮಾಡಿದ್ದಾರೆ ಎಂದು ಉದಾಹರಣೆ ನೀಡಿದರು.

Read More
Next Story