ಮೊದಲ ಸರ್ಕಾರಿ ಐವಿಎಫ್ ಕೇಂದ್ರ ; ಮಕ್ಕಳಿಲ್ಲದ‌ ದಂಪತಿ ನಗುವಿಗೆ ಎದುರಾಗಿದೆ ವಿಘ್ನ
x

ಮೊದಲ ಸರ್ಕಾರಿ ಐವಿಎಫ್ ಕೇಂದ್ರ ; ಮಕ್ಕಳಿಲ್ಲದ‌ ದಂಪತಿ ನಗುವಿಗೆ ಎದುರಾಗಿದೆ ವಿಘ್ನ

ಹುಬ್ಬಳ್ಳಿ ಕಿಮ್ಸ್ ಮೊದಲ ಸರ್ಕಾರಿ ಐವಿಎಫ್ ಕೇಂದ್ರ ಅರಂಭಿಸಲಿದೆ. ಆದರೆ, ಇದನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಯಾವುದೇ 'ಮಾದರಿ' ಸರ್ಕಾರದ ಮುಂದಿಲ್ಲ. ಸರ್ಕಾರದ ಮಾರ್ಗಸೂಚಿಗಳಿಗಾಗಿ ಕಿಮ್ಸ್‌ ಕಾಯುತ್ತಿದೆ.


Click the Play button to hear this message in audio format

ಮದುವೆಯಾಗಿ ವರ್ಷಗಳು ಕಳೆದರೂ ತೊಟ್ಟಿಲು ತೂಗುವ ಭಾಗ್ಯವಿಲ್ಲದೇ ಪರಿತಪಿಸುವ ದಂಪತಿಗಳ ಪಾಡು ಹೇಳತೀರದಂತಹ ಸಮಯದಲ್ಲಿ ವಿಜ್ಞಾನ ನೀಡಿದ ವರದಾನವೇ ಐವಿಎಫ್ ಅಥವಾ ಕೃತಕ ಗರ್ಭಧಾರಣೆ ಚಿಕಿತ್ಸೆ. ಆದರೆ, ಈ ಚಿಕಿತ್ಸೆ ಈವರೆಗೂ ಶ್ರೀಮಂತರ ಪಾಲಿನ ಸ್ವತ್ತಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದ ಈ ಚಿಕಿತ್ಸೆಯನ್ನು ಭರಿಸಲಾಗದೆ ಬಡ ಮತ್ತು ಮಧ್ಯಮ ವರ್ಗದ ದಂಪತಿಗಳು ಮೌನವಾಗಿ ಕಣ್ಣೀರು ಸುರಿಸುತ್ತಿದ್ದರು. ಇದೀಗ ಈ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಹುಬ್ಬಳ್ಳಿಯ ಪ್ರತಿಷ್ಠಿತ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕಿಮ್ಸ್‌) ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸರ್ಕಾರಿ ಸ್ವಾಮ್ಯದ ಐವಿಎಫ್ ಕೇಂದ್ರವನ್ನು ಆರಂಭಿಸಲು ಕಿಮ್ಸ್ ಮುಂದಾಗಿದ್ದು, ಬಡವರ ಆಶಾಕಿರಣವಾಗಿ ಮೂಡಿಬಂದಿದೆ.

ಬಂಜೆತನ ನಿವಾರಣೆಗೆ ದುಬಾರಿ ವೆಚ್ಚದ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ, ಮೂಲಸೌಕರ್ಯ ಸಿದ್ಧವಿದ್ದರೂ, ಸರ್ಕಾರದ ಸ್ಪಷ್ಟ ಮಾರ್ಗಸೂಚಿಗಳಿಲ್ಲದೆ ಯೋಜನೆಗೆ ಹಿನ್ನಡೆಯಾಗಿದೆ. ಕೇಂದ್ರದ ಕಾಮಗಾರಿ ಮುಗಿದಿದ್ದರೂ, ಕಾರ್ಯಾರಂಭ ಮಾಡಲು ಹಲವಾರು ಅಡೆತಡೆಗಳಿವೆ. ರಾಜ್ಯದ ಮೊದಲ ಸರ್ಕಾರಿ ಐವಿಎಫ್ ಕೇಂದ್ರವಾಗಿರುವುದರಿಂದ, ಇದನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಯಾವುದೇ 'ಮಾದರಿ' ಸರ್ಕಾರದ ಮುಂದಿಲ್ಲ. ಸಂಪೂರ್ಣ ಸರ್ಕಾರಿ ಅನುದಾನದಲ್ಲಿ ನಡೆಸಬೇಕೆ? ಅಥವಾ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಡೆಸಬೇಕೆ? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಸರ್ಕಾರದ ಮಾರ್ಗಸೂಚಿಗಳಿಗಾಗಿ ಕಿಮ್ಸ್‌ ಕಾಯುತ್ತಿದೆ.

ಒಂದು ಹಂತದ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ 2.5 ಲಕ್ಷ ರೂ.ನಿಂದ 3 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ಕೆಲವೊಮ್ಮೆ ಮೊದಲ ಪ್ರಯತ್ನ ವಿಫಲವಾದರೆ, ಮತ್ತೆ ಹಣ ಹೂಡಿಕೆ ಮಾಡಬೇಕಾಗುತ್ತದೆ. ದಿನಗೂಲಿ ನೌಕರರು, ಕೃಷಿಕರು ಹಾಗೂ ಮಧ್ಯಮ ವರ್ಗದ ನೌಕರರಿಗೆ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವುದು ಅಸಾಧ್ಯದ ಮಾತು. "ಮಗು ಬೇಕು" ಎಂಬ ಹಂಬಲವಿದ್ದರೂ, "ಹಣವಿಲ್ಲ" ಎಂಬ ಕಾರಣಕ್ಕೆ ಸಾವಿರಾರು ದಂಪತಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಈ ಅಂತರವನ್ನು ಕಡಿಮೆ ಮಾಡಲು ಕಿಮ್ಸ್ ಆಡಳಿತ ಮಂಡಳಿ ಈ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಕೆಎಂಸಿ-ಆರ್‌ ಆಡಳಿತ ಮಂಡಳಿಯು 2021–22ನೇ ಸಾಲಿನಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸರ್ಕಾರ ತಾತ್ವಿಕ ಅನುಮೋದನೆ ನೀಡಿದರೂ ಅನುದಾನದ ಕೊರತೆ ಎದುರಾಗಿತ್ತು. ಕಿಮ್ಸ್‌ನ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ 2ನೇ ಮಹಡಿಯಲ್ಲಿ ಸುಮಾರು 4,500 ಚದರಡಿ ವಿಸ್ತೀರ್ಣದಲ್ಲಿ ಕೇಂದ್ರವನ್ನು ನಿರ್ಮಿಸಲಾಗಿದೆ. ಸಿವಿಲ್ ಕಾಮಗಾರಿ ಮತ್ತು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಜೋಡಣೆ ಪೂರ್ಣಗೊಂಡಿದೆ. ಸರ್ಕಾರದ ಅನುದಾನಕ್ಕೆ ಕಾಯದೆ, ಹಟ್ಟಿ ಚಿನ್ನದ ಗಣಿ ಮತ್ತು ಕಲಬುರಗಿಯ ಮಾನವೀಯ ಸಂಸ್ಥೆಯೊಂದರ 'ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ' (ಸಿಎಸ್‌ಆರ್‌) ನಿಧಿಯನ್ನು ಬಳಸಿಕೊಂಡಿದೆ ಎಂದು ಮೂಲಗಳು ಹೇಳಿವೆ.

ಇಲ್ಲಿಯವರೆಗೆ ರಾಜ್ಯದ ಯಾವುದೇ ಸರ್ಕಾರಿ ಜಿಲ್ಲಾ ಆಸ್ಪತ್ರೆ ಅಥವಾ ಬೋಧಕ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾದ ಮತ್ತು ಸುಸಜ್ಜಿತವಾದ ಐವಿಎಫ್ ಕೇಂದ್ರವಿರಲಿಲ್ಲ. ಹುಬ್ಬಳ್ಳಿಯ ಕಿಮ್ಸ್ ಉತ್ತರ ಕರ್ನಾಟಕದ ಆರೋಗ್ಯ ಸಂಜೀವಿನಿಯಾಗಿದೆ. ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ನೆರೆಯ ಜಿಲ್ಲೆಗಳ ಬಡ ರೋಗಿಗಳು ಇಲ್ಲಿಗೆ ಬರುತ್ತಾರೆ. ಇದನ್ನು ಮನಗಂಡು ಕಿಮ್ಸ್ ಆವರಣದಲ್ಲಿಯೇ ಈ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಐವಿಎಫ್ ಕೇಂದ್ರವು ಆರೋಗ್ಯ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಕಟ್ಟಡ ಮತ್ತು ಉಪಕರಣಗಳು ಸಿದ್ಧವಿದ್ದರೂ, ಆಡಳಿತಾತ್ಮಕ ನಿರ್ಧಾರಗಳ ವಿಳಂಬದಿಂದಾಗಿ ಜನಸಾಮಾನ್ಯರಿಗೆ ಇದರ ಲಾಭ ಸಿಗುತ್ತಿಲ್ಲ ಎನ್ನಲಾಗಿದೆ.

ಐವಿಎಫ್‌ ಆರ್ಥಿಕ ಹೊರೆಗೆ ಪರಿಹಾರ

ಬದಲಾದ ಜೀವನಶೈಲಿಯಿಂದಾಗಿ ಸಮಾಜದಲ್ಲಿ ಬಂಜೆತನ ಸಮಸ್ಯೆ ಹೆಚ್ಚಾಗುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗದ ಬಡ ದಂಪತಿಗಳಿಗೆ ಈ ಕೇಂದ್ರವು ಆಶಾಕಿರಣವಾಗಲಿದೆ. ಸರ್ಕಾರಿ ವಲಯದಲ್ಲಿ ಇಂತಹ ಸೌಲಭ್ಯ ಸಿಗುವುದರಿಂದ ಖಾಸಗಿ ಆಸ್ಪತ್ರೆಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಪ್ರಾದೇಶಿಕ ಸಮತೋಲನ: ಉತ್ತರ ಕರ್ನಾಟಕದ ಭಾಗದಲ್ಲಿ ಇಂತಹ ಸುಸಜ್ಜಿತ ಸರ್ಕಾರಿ ಕೇಂದ್ರದ ಅವಶ್ಯಕತೆ ಹೆಚ್ಚಿದೆ. ಖಾಸಗಿ ಐವಿಎಫ್ ಕೇಂದ್ರಗಳಲ್ಲಿ 2.5 ಲಕ್ಷ ರೂ.ನಿಂದ 3 ಲಕ್ಷ ರೂ.ವರೆಗೆ ಖರ್ಚು ಬರುತ್ತದೆ. ಬಡ, ಮಧ್ಯಮ ವರ್ಗದವರಿಗೆ ಇದು ಹೊರೆಯಾಗಿದ್ದು, ಹಣ ಸಮಸ್ಯೆಯಿಂದ ಬಹಳಷ್ಟು ಬಳಲುತ್ತಿರುತ್ತಾರೆ. ಕಿಮ್ಸ್‌ ನಡೆಯಿಂದಾಗಿ ಆರ್ಥಿಕ ಹೊರೆಗೆ ಪರಿಹಾರ ಸಿಕ್ಕಂತಾಗಿದೆ.

ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿರುವ ಕಿಮ್ಸ್‌

ಐವಿಎಫ್ ಕೇಂದ್ರಕ್ಕೆ ಸರ್ಕಾರದ ಕಡೆಯಿಂದ ಸದ್ಯಕ್ಕೆ ಯಾವುದೇ 'ವಿಶೇಷ ಅನುದಾನ' ಬಿಡುಗಡೆಯಾಗಿಲ್ಲ. ಅತ್ಯಾಧುನಿಕ ಪ್ರಯೋಗಾಲಯ ಉಪಕರಣಗಳು, ಭ್ರೂಣ ತಜ್ಞರು ಮತ್ತು ದುಬಾರಿ ಹಾರ್ಮೋನ್ ಇಂಜೆಕ್ಷನ್‌ಗಳನ್ನು ನಿರ್ವಹಿಸಲು ದೊಡ್ಡ ಮೊತ್ತದ ಹಣದ ಅವಶ್ಯಕತೆಯಿದೆ. ಸಂಸ್ಥೆಯೇ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಿ, ರೋಗಿಗಳಿಗೆ ಉಚಿತ ಅಥವಾ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಬೇಕೇ? ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರವನ್ನು ನಡೆಸಬೇಕೇ? ಎಂಬ ಗೊಂದಲ ಮೂಡಿದೆ. ಈ ಬಗ್ಗೆ ಇನ್ನೂ ಸೂಕ್ತ ನಿರ್ದೇಶನ ಸಿಕ್ಕಿಲ್ಲ. ಪಿಪಿಪಿ ಮಾದರಿಯಾದರೆ ಮತ್ತೆ ದರ ಏರಿಕೆಯಾಗುವ ಆತಂಕವೂ ಇದೆ.

ಸಾಮಾನ್ಯವಾಗಿ ಬಿಪಿಎಲ್ ಕಾರ್ಡ್ ದಾರರಿಗೆ 'ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ' ಅಥವಾ 'ಕರ್ನಾಟಕ ಸುರಕ್ಷಾ ಆರೋಗ್ಯ' ಯೋಜನೆಯಡಿ ಉಚಿತ ಚಿಕಿತ್ಸೆ ಸಿಗುತ್ತದೆ. ಆದರೆ, ಐವಿಎಫ್ ಚಿಕಿತ್ಸೆಯು ಸದ್ಯಕ್ಕೆ ಈ ಯಾವುದೇ ಸರ್ಕಾರಿ ಆರೋಗ್ಯ ವಿಮಾ ಯೋಜನೆಗಳ ಪ್ಯಾಕೇಜ್ ಪಟ್ಟಿಯಲ್ಲಿ ಇಲ್ಲ. ಹೀಗಾಗಿ, ಬಡ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ವೆಚ್ಚವನ್ನು ಯಾರು ಭರಿಸಬೇಕು? ಎಂಬ ಪ್ರಶ್ನೆ ಎದುರಾಗಿದೆ. ಐವಿಎಫ್ ಚಿಕಿತ್ಸೆಯಲ್ಲಿ ಬಳಸುವ ಔಷಧಗಳು ಮತ್ತು ಇಂಜೆಕ್ಷನ್‌ಗಳು ತುಂಬಾ ದುಬಾರಿ. ಇವುಗಳನ್ನು ಆಸ್ಪತ್ರೆಯ ಸಾಮಾನ್ಯ ಔಷಧ ವಿಭಾಗದ ಮೂಲಕ ಪೂರೈಸಬೇಕೇ? ಅಥವಾ ರೋಗಿಗಳೇ ಭರಿಸಬೇಕೇ? ಅಥವಾ ಇದಕ್ಕಾಗಿಯೇ ಪ್ರತ್ಯೇಕ ನಿಧಿ ಸ್ಥಾಪಿಸಬೇಕೇ? ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಸರ್ಕಾರದಿಂದ ಔಷಧ ಪೂರೈಕೆಗೆ ನಿರ್ದಿಷ್ಟ ಆದೇಶ ಬರುವವರೆಗೂ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ಆರಂಭಿಸುವುದು ಕಷ್ಟಸಾಧ್ಯ. ಚಿಕಿತ್ಸೆ ನೀಡುವಾಗ ಯಾವ ಪ್ರೋಟೋಕಾಲ್ ಪಾಲಿಸಬೇಕು, ಯಾವ ಪರೀಕ್ಷೆಗಳನ್ನು ಕಡ್ಡಾಯಗೊಳಿಸಬೇಕು ಮತ್ತು ಔಷಧೋಪಚಾರದ ವಿಧಾನಗಳೇನು ಎಂಬ ಬಗ್ಗೆ ಸರ್ಕಾರದಿಂದ ಇನ್ನೂ ಅಧಿಕೃತ ಆದೇಶ ಬಂದಿಲ್ಲ. ಐವಿಎಫ್ ಚಿಕಿತ್ಸೆಗೆ ವಿಶೇಷ ತಜ್ಞರು ಮತ್ತು ಭ್ರೂಣಶಾಸ್ತ್ರಜ್ಞರ ಅಗತ್ಯವಿರುತ್ತದೆ. ಹೆಚ್ಚುವರಿ ಸಿಬ್ಬಂದಿ ನೇಮಕಾತಿಗೆ ಅಥವಾ ಇರುವ ಸಿಬ್ಬಂದಿಯ ಬಳಕೆಗೆ ಸರ್ಕಾರದ ಅನುಮತಿ ಬಾಕಿ ಇದೆ ಎಂದು ಮೂಲಗಳು ಹೇಳಿವೆ.

ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು:

ರಾಜ್ಯ ಸರ್ಕಾರವು ಐವಿಎಫ್ ಕೇಂದ್ರ ನಿರ್ವಹಣೆಗೆ ಸ್ಪಷ್ಟ ಮಾರ್ಗಸೂಚಿ ಬಿಡುಗಡೆ ಮಾಡಬೇಕಿದೆ. ಚಿಕಿತ್ಸಾ ದರವನ್ನು ನಿಗದಿಪಡಿಸುವುದು ಅಥವಾ ಆರೋಗ್ಯ ಸುರಕ್ಷಾ ಯೋಜನೆಗಳ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಅಗತ್ಯವಿರುವ ತಜ್ಞ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಅನುಮೋದನೆ ನೀಡಬೇಕಿದೆ ಎಂದು ಹೇಳಲಾಗಿದೆ.

ಪರವಾನಿಗೆ ಅರ್ಜಿ ಸಲ್ಲಿಸಲಾಗಿದೆ.

ಐವಿಎಫ್‌ ಕೇಂದ್ರದ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಕೆಎಂಸಿ-ಆರ್‌ ನಿರ್ದೇಶಕ ಡಾ. ಈಶ್ವರ ಹೊಸಮನಿ. ಕೇಂದ್ರವು ಉದ್ಘಾಟನೆಗೆ ಸಿದ್ಧವಾಗಿದೆ ಮತ್ತು ಪರವಾನಗಿಗೆ ಅರ್ಜಿ ಸಲ್ಲಿಸಲಾಗಿದೆ. 'ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ' ಯೋಜನೆಯಡಿ ಐವಿಎಫ್ ಚಿಕಿತ್ಸೆಯನ್ನು ಸೇರ್ಪಡೆಗೊಳಿಸಿದರೆ, ಬಡ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಚಿಕಿತ್ಸಾ ವೆಚ್ಚ, ಔಷಧೋಪಚಾರ ಮತ್ತು ನಿರ್ವಹಣಾ ವೆಚ್ಚ ಭರಿಸಲು ಸರ್ಕಾರದ ವಿಶೇಷ ಅನುದಾನ ಅಥವಾ ಸ್ಪಷ್ಟ ನೀತಿಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲೇ ಸರ್ಕಾರಿ ಆಸ್ಪತ್ರೆಯಲ್ಲಿ ತೆರೆಯಲಾಗುತ್ತಿರುವ ಪ್ರಥಮ ಐವಿಎಫ್ ಕೇಂದ್ರವಾಗಿದೆ. ಕಳೆದ ಎರಡು ವರ್ಷಗಳಿಂದಲೇ ಕಾರ್ಯರೂಪಕ್ಕೆ ತರಲಾಗಿದ್ದು, ಇಂತಹ ಯೋಜಿತ ಕೇಂದ್ರ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಇಲ್ಲ. ಇದರ ಅವಶ್ಯಕತೆ ಈ ಭಾಗಕ್ಕೆ ಇರುವುದರ ಜತೆಗೆ ಸರ್ಕಾರದ ವಿಶೇಷ ಅನುದಾನದ ಅವಶ್ಯಕತೆ ಇದೆ. ಈಗಾಗಲೇ ದಾನಿಗಳು ನೀಡಿದ ಸಿಎಸ್ಆರ್ ಅನುದಾನದಲ್ಲಿ ಎಲ್ಲಾ ವೈದ್ಯಕೀಯ ಉಪಕರಣ ಖರೀದಿ ಮಾಡಲಾಗಿದೆ. ಅದರ ಜತೆಗೆ 4500 ಚದರಡಿ ಜಾಗದಲ್ಲಿ ಸಿವಿಲ್ ಕಾಮಗಾರಿಯನ್ನು ಪೂರ್ಣ ಮಾಡಲಾಗಿದೆ. ವೈದ್ಯಕೀಯ ಉಪಕರಣ ಜೋಡಣೆಯು ಮುಕ್ತಾಯವಾಗಿದೆ ಎಂದರು.

ಕರ್ನಾಟಕ ಸುರಕ್ಷಾ ಆರೋಗ್ಯದಡಿ ಇದರ ಚಿಕಿತ್ಸೆ ಇಲ್ಲ. ಚಿಕಿತ್ಸೆಯನ್ನು ನೀಡಲು ಔಷಧೋಪಚಾರವನ್ನು ಯಾವುದರಡಿ ನೀಡಬೇಕು ಎಂಬ ನಿರ್ದೇಶನ ಹಾಗೂ ಆದೇಶ ಸರ್ಕಾರದಿಂದ ಇನ್ನೂ ಬಂದಿಲ್ಲ. ಯಾವ ಮಾದರಿಯಲ್ಲಿ ಚಿಕಿತ್ಸೆ ನೀಡಬೇಕು. ಸರ್ಕಾರದ ಅನುದಾನದಡಿ ಮಾಡಬೇಕೋ ಅಥವಾ ಪಿಪಿಪಿ ಮಾದರಿಯಲ್ಲಿ ನೀಡಬೇಕು ಎಂಬ ಸೂಕ್ತವಾದ ನಿರ್ದೇಶನ ಬಂದ ಮೇಲೆ ಪ್ರಾರಂಭ ಮಾಡಲಾಗುವುದು. ಯಾವ ಮಾದರಿಯಲ್ಲಿ ಚಿಕತ್ಸೆ ನೀಡಬೇಕು ಎಂಬ ಸರ್ಕಾರದ ಆದೇಶ ಬಂದರೆ ಆದಷ್ಟು ಬೇಗ ಐವಿಎಫ್‌ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

Read More
Next Story