
ಉತ್ತರ ಭಾರತದ ತಡೆಗೋಡೆ ʻಅರಾವಳಿ ಬೆಟ್ಟʼಕ್ಕೆ ಗಣಿಗಾರಿಕೆ ಗಂಡಾಂತರ? ಏನಿದು ವಿವಾದ?
ಅರಾವಳಿ ಬೆಟ್ಟಗಳ ವ್ಯಾಖ್ಯಾನ ಬದಲಿಸಿ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಏನಿದು ಅರಾವಳಿ ಬೆಟ್ಟ ವಿವಾದ? ಪರಿಸರವಾದಿಗಳ ಆತಂಕಕ್ಕೆ ಕಾರಣ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಅರಾವಳಿ ಪರ್ವತ ಶ್ರೇಣಿಗಳ ಕುರಿತು ಕೇಂದ್ರ ಸರ್ಕಾರ ಅಕ್ಟೋಬರ್ 13ರಂದು ಪ್ರಸ್ತಾಪಿಸಿದ್ದ ಹೊಸ ವ್ಯಾಖ್ಯಾನವನ್ನು ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. ಆದರೆ, ಈ ಹೊಸ ನಿಯಮವು ಅರಾವಳಿ ಶ್ರೇಣಿಯ ಸುಮಾರು ಶೇ. 90ರಷ್ಟು ಭಾಗವನ್ನು ಗಣಿಗಾರಿಕೆ ಮತ್ತು ಇತರ ಅಭಿವೃದ್ಧಿ ಚಟುವಟಿಕೆಗಳ ಮೇಲಿನ ನಿರ್ಬಂಧದಿಂದ ಹೊರಗಿಡಲಿದೆ ಎಂದು ಫಾರೆಸ್ಟ್ ಸರ್ವೆ ಆಫ್ ಇಂಡಿಯಾದ (FSI) ಆಂತರಿಕ ಮೌಲ್ಯಮಾಪನ ವರದಿ ಆತಂಕ ವ್ಯಕ್ತಪಡಿಸಿದೆ.
ಪರಿಸರವಾದಿಗಳ ಆತಂಕವೇನು?
ಹೊಸ ವ್ಯಾಖ್ಯಾನದ ಪ್ರಕಾರ, ಸ್ಥಳೀಯ ಭೂಪ್ರದೇಶಕ್ಕಿಂತ ಕನಿಷ್ಠ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರ ಇರುವ ಭೂಭಾಗಗಳನ್ನು ಮಾತ್ರ 'ಅರಾವಳಿ' ಪರ್ವತ ಶ್ರೇಣಿ ಎಂದು ಪರಿಗಣಿಸಲಾಗುತ್ತದೆ. . ಆದರೆ, ಫಾರೆಸ್ಟ್ ಸರ್ವೆ ಆಫ್ ಇಂಡಿಯಾ ಅಂಕಿಅಂಶಗಳ ಪ್ರಕಾರ, ಅರಾವಳಿ ಶ್ರೇಣಿಯ ಶೇ. 8.7 ರಷ್ಟು ಭಾಗ ಮಾತ್ರ ಈ ಎತ್ತರವನ್ನು ಹೊಂದಿದೆ. ಈಗಾಗಲೇ ಕ್ಷೀಣಿಸುತ್ತಿರುವ ಅರಾವಳಿ ಶ್ರೇಣಿಗೆ ಈ ನಿಯಮವು ಭಾರಿ ಹೊಡೆತ ನೀಡಲಿದೆ ಎಂದು ವಿಮರ್ಶಕರು ಆತಂಕ ವ್ಯಕ್ತಪಡಿಸಿದ್ದಾರೆ. ಉತ್ತರ ಮತ್ತು ವಾಯುವ್ಯ ಭಾರತಕ್ಕೆ ವಿವಿಧ ಪರಿಸರ ಸೇವೆಗಳನ್ನು ಒದಗಿಸುವ ಈ ಪರ್ವತ ಶ್ರೇಣಿಗಳು, ಹೊಸ ನಿಯಮದಿಂದಾಗಿ ಗಣಿಗಾರಿಕೆ ಮಾಫಿಯಾದ ಪಾಲಾಗುವ ಭೀತಿ ಎದುರಾಗಿದೆ.
ಕೇಂದ್ರದ ಖಡಕ್ ಸೂಚನೆ
ಈ ಬೆಳವಣಿಗೆಗಳ ನಡುವೆ, ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸುವಂತೆ ಕೇಂದ್ರ ಸರ್ಕಾರವು ಬುಧವಾರ ರಾಜ್ಯಗಳಿಗೆ ಪತ್ರ ಬರೆದಿದೆ. ಸುಸ್ಥಿರ ಗಣಿಗಾರಿಕೆಗಾಗಿ ನಿರ್ವಹಣಾ ಯೋಜನೆಯು ಅಂತಿಮಗೊಳ್ಳುವವರೆಗೆ ಅರಾವಳಿ ಶ್ರೇಣಿಯಲ್ಲಿ ಯಾವುದೇ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಉತ್ತರ ಭಾರತದ ಮರಳು ತಡೆಗೋಡೆ ಅರಾವಳಿ
ಅರಾವಳಿ ಶ್ರೇಣಿಯು ಪಶ್ಚಿಮದ ಥಾರ್ ಮರುಭೂಮಿಯ ಮರಳು, ಉತ್ತರ ಭಾರತದ ಫಲವತ್ತಾದ ಬಯಲು ಪ್ರದೇಶಗಳಿಗೆ (ಗಂಗಾ-ಯಮುನಾ ಬಯಲು) ನುಗ್ಗದಂತೆ ತಡೆಯುವ ನೈಸರ್ಗಿಕ ಗೋಡೆಯಂತೆ ಕಾರ್ಯನಿರ್ವಹಿಸುತ್ತದೆ. ಈ ಶ್ರೇಣಿಯು ಇಲ್ಲದಿದ್ದರೆ ದೆಹಲಿ, ಹರಿಯಾಣ ಮತ್ತು ಪಂಜಾಬ್‌ನ ಬಹುಪಾಲು ಭಾಗಗಳು ಮರುಭೂಮಿಯಾಗಿ ಬದಲಾಗುತ್ತಿದ್ದವು.
ಮರುಭೂಮಿಯಿಂದ ಬೀಸುವ ಧೂಳಿನ ಬಿರುಗಾಳಿಯನ್ನು ತಡೆಯುವ ಮೂಲಕ ಇದು ದೆಹಲಿ-ಎನ್‌ಸಿಆರ್ (NCR) ವಲಯದ ವಾಯು ಗುಣಮಟ್ಟವನ್ನು ಕಾಪಾಡುತ್ತದೆ. ಈಗಾಗಲೇ ವಾಯು ಮಾಲಿನ್ಯದಿಂದ ಕಂಗಾಲಾಗಿರುವ ದೆಹಲಿಗೆ ಅರಾವಳಿ ನಾಶವಾದರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ.ಅರಾವಳಿ ಬೆಟ್ಟಗಳು ಮಳೆ ಮೋಡಗಳನ್ನು ತಡೆಯುವ ಮೂಲಕ ಈ ಭಾಗದಲ್ಲಿ ಉತ್ತಮ ಮಳೆಯಾಗಲು ನೆರವಾಗುತ್ತವೆ. ಇದು ಸುತ್ತಮುತ್ತಲಿನ ಕೃಷಿ ಮತ್ತು ಕುಡಿಯುವ ನೀರಿನ ಅಗತ್ಯತೆಗಳಿಗೆ ಪ್ರಮುಖ ಆಧಾರವಾಗಿದೆ.
ಈಗ ಅಲ್ಲಿ ಏನಾಗಿದೆ?
ವಿಪರೀತ ಅರಣ್ಯ ನಾಶ, ಗಣಿಗಾರಿಕೆ ಮತ್ತು ಮಣ್ಣಿನ ಸವೆತದಿಂದಾಗಿ ಅರಾವಳಿ ಶ್ರೇಣಿಯಲ್ಲಿ ಈಗಾಗಲೇ 12 ಪ್ರಮುಖ ಬಿರುಕುಗಳು ಅಥವಾ ಖಾಲಿ ಜಾಗಗಳು ನಿರ್ಮಾಣವಾಗಿವೆ. ಅಜ್ಮೀರ್‌ನ ಮಗ್ರಾ ಬೆಟ್ಟಗಳಿಂದ ಹಿಡಿದು ಹರಿಯಾಣದ ಮಹೇಂದ್ರಗಢದವರೆಗೆ ಈ ಬಿರುಕುಗಳು ವ್ಯಾಪಿಸಿವೆ. ಪರಿಣಾಮ ಈ ಕಿಂಡಿಗಳ ಮೂಲಕ ಮರುಭೂಮಿಯ ಮರಳು ಈಗ ಬಯಲು ಪ್ರದೇಶಗಳಿಗೆ ನುಗ್ಗಲು ಸುಲಭವಾಗುತ್ತಿದೆ, ಇದು ಕೃಷಿ ಭೂಮಿಯನ್ನು ನಾಶಪಡಿಸುತ್ತಿದೆ.
ಅರಾವಳಿ ಪರ್ವತ ಶ್ರೇಣಿಯು ಕೇವಲ ಮರಳು ತಡೆಗೋಡೆಯಲ್ಲ, ಬದಲಿಗೆ ಇದು ಉತ್ತರ ಭಾರತದ ಬೃಹತ್ ಅಂತರ್ಜಲ ಮರುಪೂರಣ (Water Recharge) ಕೇಂದ್ರ ಮತ್ತು ಅಪರೂಪದ ಜೀವವೈವಿಧ್ಯದ ತಾಣವಾಗಿದೆ. ಈ ಬೆಟ್ಟಗಳ ಕಲ್ಲಿನ ರಚನೆಗಳು ಅಂತರ್ಜಲ ಮಟ್ಟವನ್ನು ಕಾಪಾಡುವಲ್ಲಿ ಮತ್ತು ರಾಜಸ್ಥಾನ ಹಾಗೂ ಗುಜರಾತ್‌ನ ಹತ್ತಾರು ನದಿಗಳ ಅಸ್ತಿತ್ವಕ್ಕೆ ಅತ್ಯಗತ್ಯವಾಗಿವೆ.
ಅಂತರ್ಜಲಕ್ಕೆ ಈ ಬೆಟ್ಟವೇ ಆಧಾರ
ಅರಾವಳಿಯ ಶಿಲೆಗಳು ಹೆಚ್ಚು ಬಿರುಕುಗಳಿಂದ ಕೂಡಿದ್ದು, ರಂಧ್ರಮಯವಾಗಿವೆ. ಇದು ಮಳೆ ನೀರು ಭೂಮಿಯ ಆಳಕ್ಕೆ ಇಳಿಯಲು ನೆರವಾಗುತ್ತದೆ. "ಈ ಅದೃಶ್ಯ ಜಲ ಭಂಡಾರವು ಗುರುಗ್ರಾಮ, ಫರಿದಾಬಾದ್ ಮತ್ತು ಸೋಹ್ನಾದಂತಹ ವೇಗವಾಗಿ ಬೆಳೆಯುತ್ತಿರುವ ನಗರಗಳ ನೀರಿನ ಭದ್ರತೆಗೆ ಅಡಿಪಾಯವಾಗಿದೆ. ಗಣಿಗಾರಿಕೆ ಅಥವಾ ಅರಣ್ಯ ನಾಶದಿಂದ ಈ ವ್ಯವಸ್ಥೆಗೆ ಧಕ್ಕೆ ಬಂದರೆ ಇಡೀ ಪ್ರದೇಶವೇ ನೀರಿನ ಅಭಾವ ಎದುರಿಸಬೇಕಾಗುತ್ತದೆ" ಎಂದು ಪರಿಸರ ತಜ್ಞ ವಿಜಯ್ ಧಸ್ಮಾನಾ ಎಚ್ಚರಿಸಿದ್ದಾರೆ.
ಅಲ್ಲದೆ, ಅರಾವಳಿಯು ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರಕ್ಕೆ ಹರಿಯುವ ನದಿಗಳನ್ನು ವಿಭಜಿಸುವ ಪ್ರಮುಖ ಜಲಾನಯನ ಪ್ರದೇಶವಾಗಿದೆ. ಸಾಂಬಾರ್, ಪುಷ್ಕರ್ ಮತ್ತು ಫತೇ ಸಾಗರ್‌ನಂತಹ ಪ್ರಸಿದ್ಧ ಕೆರೆಗಳು ಈ ಶ್ರೇಣಿಯನ್ನೇ ಅವಲಂಬಿಸಿವೆ.
ವನ್ಯಜೀವಿಗಳ ತಾಣ
ಅರಾವಳಿ ಶ್ರೇಣಿಯು 22 ವನ್ಯಜೀವಿ ಅಭಯಾರಣ್ಯಗಳಿಗೆ ಆಶ್ರಯ ನೀಡಿದೆ. ಇದರಲ್ಲಿ ರಣಥಂಬೋರ್, ಸರಿಸ್ಕಾ ಮತ್ತು ಮುಕುಂದ್ರಾ ಎಂಬ ಮೂರು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳು ಸೇರಿವೆ. ಚಿರತೆ, ಸ್ಲಾತ್ ಕರಡಿ, ಸಾಂಬಾರ್ ಜಿಂಕೆ, ಕೃಷ್ಣಮೃಗ ಮತ್ತು ಘಾರಿಯಲ್‌ಗಳಂತಹ ಅಪರೂಪದ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ. ಗಣಿಗಾರಿಕೆಗಾಗಿ ಬೆಟ್ಟಗಳನ್ನು ತೆರವುಗೊಳಿಸಿದರೆ, ವನ್ಯಜೀವಿಗಳ ಸಂಚಾರ ಮಾರ್ಗಗಳು ಕಿರಿದಾಗಲಿವೆ.
ಖನಿಜ ಸಂಪತ್ತು ಮತ್ತು ಸವಾಲುಗಳು
ಒಂದೆಡೆ ಪರಿಸರ ರಕ್ಷಣೆಯ ಕೂಗಿದ್ದರೆ, ಮತ್ತೊಂದೆಡೆ ಅರಾವಳಿಯು ತಾಮ್ರ, ಚಿನ್ನ, ಟಂಗ್‌ಸ್ಟನ್ ಮತ್ತು ಇತ್ತೀಚಿನ ತಂತ್ರಜ್ಞಾನಕ್ಕೆ ಅಗತ್ಯವಾದ ಲಿಥಿಯಂ, ನಿಕಲ್ ಮತ್ತು ಗ್ರಾಫೈಟ್ ನಂತಹ ನಿರ್ಣಾಯಕ ಖನಿಜಗಳ ಭಂಡಾರವಾಗಿದೆ. ಇವು ದೇಶದ ಇಂಧನ ಭದ್ರತೆಗೆ ಅಗತ್ಯವೆಂದು ಸರ್ಕಾರ ಪರಿಗಣಿಸಿದೆ. ಸುಪ್ರೀಂ ಕೋರ್ಟ್ ಹೊಸ ಗಣಿಗಾರಿಕೆಗೆ ತಡೆ ನೀಡಿದ್ದರೂ, ಇಂತಹ ನಿರ್ಣಾಯಕ ಖನಿಜಗಳ ಗಣಿಗಾರಿಕೆಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ.
ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡ
ಅರಾವಳಿ ಬೆಟ್ಟಗಳ ವ್ಯಾಖ್ಯಾನವನ್ನು ಬದಲಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪರಿಸರ ಸಂರಕ್ಷಣಾ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಕಾಂಗ್ರೆಸ್ ಗುರುವಾರ (ಡಿಸೆಂಬರ್ 25) ಕಿಡಿಕಾರಿದೆ. ಸರ್ಕಾರದ ಈ ಹೊಸ ನಡೆಯಿಂದಾಗಿ ಪರಿಸರ ಸೂಕ್ಷ್ಮ ಪ್ರದೇಶಗಳು ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಮಾಫಿಯಾದ ಪಾಲಾಗಲಿವೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.
ಪರಿಸರ ಸಮತೋಲನದ ಮೇಲೆ ದಾಳಿ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದು, ಪ್ರಧಾನಿ ಮೋದಿಯವರ ಜಾಗತಿಕ ಹವಾಮಾನ ಬದಲಾವಣೆಯ ಭರವಸೆಗಳಿಗೂ ಮತ್ತು ದೇಶದ ಪರಿಸರ ನೀತಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಟೀಕಿಸಿದ್ದಾರೆ. ಸರ್ಕಾರದ ಹೊಸ ವ್ಯಾಖ್ಯಾನದ ಪ್ರಕಾರ, ಸುತ್ತಮುತ್ತಲಿನ ಭೂಪ್ರದೇಶಕ್ಕಿಂತ ಕನಿಷ್ಠ 100 ಮೀಟರ್ ಎತ್ತರವಿರುವ ಭೂಭಾಗವನ್ನು ಮಾತ್ರ 'ಅರಾವಳಿ ಬೆಟ್ಟ' ಎಂದು ಪರಿಗಣಿಸಲಾಗುತ್ತದೆ. ಆದರೆ, ಫಾರೆಸ್ಟ್ ಸರ್ವೆ ಆಫ್ ಇಂಡಿಯಾ ಅಂಕಿಅಂಶಗಳ ಪ್ರಕಾರ, ಅರಾವಳಿ ಶ್ರೇಣಿಯ ಶೇ. 8.7 ರಷ್ಟು ಭಾಗ ಮಾತ್ರ ಈ ಎತ್ತರವನ್ನು ಹೊಂದಿದೆ.
ಶೇ. 90 ರಷ್ಟು ಅರಾವಳಿ ಅಸುರಕ್ಷಿತ
"ಹೊಸ ವ್ಯಾಖ್ಯಾನದಿಂದಾಗಿ ಶೇ. 90 ಕ್ಕಿಂತ ಹೆಚ್ಚು ಅರಾವಳಿ ಪ್ರದೇಶವು ರಕ್ಷಣೆಯಿಂದ ವಂಚಿತವಾಗಲಿದೆ. ಇದು ಗಣಿಗಾರಿಕೆ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಮುಕ್ತವಾಗಿ ತೆರೆದುಕೊಳ್ಳಲಿದ್ದು, ಈಗಾಗಲೇ ಹಾನಿಗೊಳಗಾಗಿರುವ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಧ್ವಂಸಗೊಳಿಸಲಿದೆ" ಎಂದು ರಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಂತಹ (NGT) ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ವಿವಾದದ ಬೆನ್ನಲ್ಲೇ ಕೇಂದ್ರ ಸರ್ಕಾರವು ಬುಧವಾರ (ಡಿಸೆಂಬರ್ 24) ಅರಾವಳಿ ಶ್ರೇಣಿಯಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡದಂತೆ ರಾಜ್ಯಗಳಿಗೆ ಸೂಚನೆ ನೀಡಿದೆ. ಅಲ್ಲದೆ, ಹೆಚ್ಚುವರಿ ನಿಷೇಧಿತ ಪ್ರದೇಶಗಳನ್ನು ಗುರುತಿಸುವಂತೆ ಸಂಶೋಧನಾ ಸಂಸ್ಥೆಗಳಿಗೆ ಆದೇಶಿಸಿದೆ.

