
1.1 ಕೋಟಿ ರೂ. ಬಹುಮಾನವಿದ್ದ ನಕ್ಸಲ್ ನಾಯಕ ಗಣೇಶ್ ಉಯಿಕೆ ಹತ್ಯೆ; ಯಾರೀತ?
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚೆಂದೂರ್ ಮಂಡಲದ ಪುಲ್ಲೆಮಲ ಗ್ರಾಮದ ನಿವಾಸಿಯಾಗಿದ್ದ ಈತನನ್ನು ಪಕ್ಕಾ ಹನುಮಂತು, ರಾಜೇಶ್ ತಿವಾರಿ, ಚಮ್ರು ಮತ್ತು ರೂಪಾ ಎಂಬ ಅಡ್ಡಹೆಸರುಗಳಿಂದಲೂ ಕರೆಯಲಾಗುತ್ತಿತ್ತು
ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುರುವಾರ (ಡಿಸೆಂಬರ್ 25) ನಡೆಸಿದ ಭಾರೀ ಎನ್‌ಕೌಂಟರ್‌ನಲ್ಲಿ, ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ ಹಾಗೂ ಉನ್ನತ ನಾಯಕ ಗಣೇಶ್ ಉಯಿಕೆ ಸೇರಿದಂತೆ ನಾಲ್ವರು ಮಾವೋವಾದಿಗಳನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾವೋವಾದಿ ಸಂಘಟನೆಯ ಒಡಿಶಾ ಮುಖ್ಯಸ್ಥನಾಗಿದ್ದ 69 ವರ್ಷದ ಗಣೇಶ್ ಉಯಿಕೆ ತಲೆಗೆ ಬರೋಬ್ಬರಿ 1.1 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚೆಂದೂರ್ ಮಂಡಲದ ಪುಲ್ಲೆಮಲ ಗ್ರಾಮದ ನಿವಾಸಿಯಾಗಿದ್ದ ಈತನನ್ನು ಪಕ್ಕಾ ಹನುಮಂತು, ರಾಜೇಶ್ ತಿವಾರಿ, ಚಮ್ರು ಮತ್ತು ರೂಪಾ ಎಂಬ ಅಡ್ಡಹೆಸರುಗಳಿಂದಲೂ ಕರೆಯಲಾಗುತ್ತಿತ್ತು ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ನಡೆದಿದ್ದು ಹೇಗೆ?
ಗುಪ್ತಚರ ಇಲಾಖೆಯ ನಿರ್ದಿಷ್ಟ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಕಂಧಮಾಲ್ ಜಿಲ್ಲೆಯ ಚಕಪಾಡ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹಾಗೂ ಗಂಜಾಂ ಜಿಲ್ಲೆಯ ಗಡಿಭಾಗದಲ್ಲಿರುವ ರಂಭಾ ಅರಣ್ಯ ವಲಯದಲ್ಲಿ ಶೋಧ ನಡೆಸಲು ವಿಶೇಷ ಕಾರ್ಯಾಚರಣೆ ಪಡೆ , ಸಿಆರ್‌ಪಿಎಫ್ ಮತ್ತು ಗಡಿ ಭದ್ರತಾ ಪಡೆ ಸೇರಿದಂತೆ 20ಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಲಾಗಿತ್ತು.
ಅರಣ್ಯದಲ್ಲಿ ಅಡಗಿದ್ದ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯಿತು. ಅಂತಿಮವಾಗಿ ನಾಲ್ವರು ನಕ್ಸಲರು ಹತ್ಯೆಯಾಗಿದ್ದು, ಅವರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಮೃತರಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳೂ ಸೇರಿದ್ದಾರೆ ಎನ್ನಲಾಗಿದ್ದು, ಉಯಿಕೆ ಹೊರತುಪಡಿಸಿ ಉಳಿದ ಮೂವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಸ್ಥಳದಿಂದ ಎರಡು ಇನ್ಸಾಸ್ ರೈಫಲ್‌ಗಳು ಸೇರಿದಂತೆ ಮೂರು ರೈಫಲ್‌ಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಎಡಪಂಥೀಯ ಉಗ್ರವಾದವನ್ನು ಸೋಲಿಸಲು ಮತ್ತು ಪ್ರಾಂತ್ಯದಲ್ಲಿ ಶಾಂತಿ ಸ್ಥಾಪಿಸಲು ಒಡಿಶಾ ಪೊಲೀಸರು ನಡೆಸುತ್ತಿರುವ ನಿರಂತರ ಪ್ರಯತ್ನಕ್ಕೆ ಈ ಕಾರ್ಯಾಚರಣೆ ಸಾಕ್ಷಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

